Koppal: ಹುಲಿಗಿಯಲ್ಲಿ ಭಕ್ತಸಾಗರ: 3 ಲಕ್ಷ ಭಕ್ತರಿಂದ ಅಮ್ಮನವರ ದರ್ಶನ

By Kannadaprabha NewsFirst Published Feb 17, 2022, 12:00 PM IST
Highlights

*   ಕೊಪ್ಪಳ ಜಿಲ್ಲೆಯಲ್ಲಿರುವ ಧಾರ್ಮಿಕ ಪುಣ್ಯ ಕ್ಷೇತ್ರ ಹುಲಿಗೆಮ್ಮ ದೇವಾಲಯ
*   ಭಾರತ ಹುಣ್ಣಿಮೆ ಪ್ರಯುಕ್ತ ಹುಲಿಗಿಗೆ ಹರಿದುಬಂದ ಭಕ್ತಸಾಗರ
*   ಭಕ್ತರ ಪ್ರವಾಹ ನಿಯಂತ್ರಿಸಲು ಪೊಲೀಸರ ಹರಸಾಹಸ

ಮುನಿರಾಬಾದ(ಫೆ.17):  ಇಲ್ಲಿಗೆ ಸಮೀಪದ ಸುಪ್ರಸಿದ್ಧ ಧಾರ್ಮಿಕ ಪುಣ್ಯ ಕ್ಷೇತ್ರ ಹುಲಿಗೆಮ್ಮ ದೇವಾಲಯಕ್ಕೆ(Huligemma Temple) ಭಾರತ ಹುಣ್ಣಿಮೆಯ ಪ್ರಯುಕ್ತ ಬುಧವಾರ 3 ಲಕ್ಷಕ್ಕೂ ಹೆಚ್ಚು ಭಕ್ತರು(Devotees) ಆಗಮಿಸಿದ್ದರು. ದೇವಾಲಯದ ಪ್ರಾಂಗಣ, ಆವರಣ ಹಾಗೂ ತುಂಗಭದ್ರಾ ನದಿ(Tungabhadra River) ದಂಡೇ ಭಕ್ತರಿಂದ ತುಂಬಿತ್ತು.

ಲಕ್ಷಾಂತರ ಭಕ್ತರು ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ಭಾರತ ಹುಣ್ಣಿಗೆ ಅತ್ಯಂತ ಪವಿತ್ರವಾಗಿದ್ದು ರಾಜ್ಯ ಮಾತ್ರವಲ್ಲದೇ ಮಹಾರಾಷ್ಟ್ರ(Maharashtra), ಆಂಧ್ರಪ್ರದೇಶ(Andhra Pradesh), ತೆಲಂಗಾಣ(Telangana) ಮತ್ತಿತರ ಪ್ರದೇಶಗಳಿಂದಲೂ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು. ಕೋವಿಡ್‌(Covid-19) ಹಿನ್ನೆಲೆಯಲ್ಲಿ ಕಳೆದ ತಿಂಗಳ ಕೊನೆಯಲ್ಲಿ ದೇವಿಯ ದರ್ಶನ, ಪೂಜೆಗೆ ಜಿಲ್ಲಾಡಳಿತ ಅವಕಾಶ ನೀಡಿತ್ತು. ಇಂದು ಪೂರ್ಣ ಪ್ರಮಾಣದಲ್ಲಿ ಭಕ್ತರ ಆಗಮನ ನಿರೀಕ್ಷಿಸಲಾಗಿತ್ತಾದರೂ ಇಷ್ಟೊಂದು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆಂಬ ಅಂದಾಜಿರಲಿಲ್ಲ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

ಗಾಳಿಗೆ ತೂರಿದ ಕೋವಿಡ್‌ ನಿಯಮಾವಳಿ: ಹುಲಿಗೆಮ್ಮ ದೇವಿ ದರ್ಶನಕ್ಕೆ ಲಕ್ಷಾಂತರ ಭಕ್ತರು..!

ಪ್ರತಿವರ್ಷ ಭಾರತ ಹುಣ್ಣಿಮೆಗೆ 1ರಿಂದ 1.50 ಲಕ್ಷ ಭಕ್ತರು ಅಗಮಿಸಿ ಅಮ್ಮನವರ ದರ್ಶನವನ್ನು ಪಡೆಯುತ್ತಿದ್ದರು. ಈ ಬಾರಿ ಭಾರತ ಹುಣ್ಣಿಮೆಗೆ 3 ಲಕ್ಷಕ್ಕೂ ಅಧಿಕ ಭಕ್ತರು ಅಮ್ಮನವರ ದರ್ಶನ ಪಡೆದಿದ್ದು ದೇವಸ್ಥಾನದ ಇತಿಹಾಸದಲ್ಲಿ ದಾಖಲೆಯಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಸುತಗಟ್ಟಿ ಅವರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಕಳೆದ ತಿಂಗಳು ಹುಣ್ಣಿಮೆಯಂದು ದೇವಾಲಯಕ್ಕೆ(Temple) ಭಕ್ತರ ಪ್ರವೇಶಕ್ಕೆ ನಿರ್ಬಂಧವಿದ್ದರೂ ಸಹ ಸುಮಾರು 1 ಲಕ್ಷ ಭಕ್ತರು ಆಗಮಿಸಿ ಹುಲಿಗೆಮ್ಮ ದೇವಿಯ ದರ್ಶನಕ್ಕೆ ಯತ್ನಿಸಿದರು. ಆದರೆ ದೇವಾಲಯದ ಬಾಗಿಲು ಮತ್ತು ಪ್ರಾಂಗಣಗಳಿಗೆ ಬೀಗ ಹಾಕಿದ್ದರಿಂದ ಸುತ್ತಮುತ್ತಲಿನ ಬಯಲು ಪ್ರದೇಶದಲ್ಲಿಯೇ ಹಣ್ಣು ಕಾಯಿ ಒಡೆದು ಪ್ರಾರ್ಥನೆ ಸಲ್ಲಿಸಿ ತೆರಳಿದ್ದರು.

ರೈಲು, ಬಸ್ಸುಗಳಲ್ಲದೇ ಖಾಸಗಿ ವಾಹನಗಳಲ್ಲಿಯೂ ಭಕ್ತರು ಆಗಮಿಸಿದ್ದರು. ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯಗಳ ಕೆಲ ಭಕ್ತರು ಮಂಗಳವಾರ ರಾತ್ರಿಯಿಂದಲೇ ಆಗಮಿಸಿ ಇಲ್ಲಿಯೇ ವಾಸ್ತವ್ಯ ಹೂಡಿದ್ದರು. ಹುಲಗಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಟ್ರಾಫಿಕ್‌ ಜಾಮ್‌(Traffic Jam) ಉಂಟಾಯಿತು. ಸುಮಾರು 150 ಕ್ಕೂ ಹಚ್ಚು ಪೊಲೀಸರನ್ನು(Police) ನಿಯೋಜಿಸಿದ್ದರೂ ಸಹ ಭಕ್ತರ ಪ್ರವಾಹ ನಿಯಂತ್ರಿಸಲು, ಸರದಿ ಸಾಲನ್ನು ಸುಗಮಗೊಳಿಸಲು ಹರಸಾಹಸ ಪಡಬೇಕಾಯಿತು

ನಾಲ್ಕು ಕಡೆ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿತ್ತು. ಗಂಗಾವತಿ ರಾಯಚೂರು ಕಡೆಯಿಂದ ಆಗಮಿಸುವ ಭಕ್ತರಿಗೆ ಶಿವಪುರ ರಸ್ತೆಯಲ್ಲಿ, ಕೊಪ್ಪಳದಿಂದ(Koppal) ಆಗಮಿಸುವ ಭಕ್ತರಿಗೆ ನಂದಿ ವೃತ್ತದಲ್ಲಿ, ಹೊಸಪೇಟೆ ಮತ್ತು ಬಳ್ಳಾರಿ ಕಡೆಯಿಂದ ಅಗಮಿಸುವವರಿಗೆ ರೈಲ್ವೆ ಹಳಿ ಪಕ್ಕದಲ್ಲಿ ಬಸ್‌ ನಿಲ್ದಾಣ ಹಾಗೂ ಕೋರಮಂಡಲ ಫ್ಯಾಕ್ಟರಿಯ ಎದುರುಗಡೆ ಖಾಲಿ ಮೈದಾನದಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು. ಭಕ್ತರಿಗೆ ಅಲ್ಲಲ್ಲಿ ಪ್ರಸಾದ, ತಂಪು ಪಾನೀಯದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಮುಜರಾಯಿ ದೇವಸ್ಥಾನದಲ್ಲಿಯೇ ಮೌಢ್ಯಾ : ಅಗ್ನಿಕುಂಡ ಹಾಯುವಾಗ ಕೋಳಿ ತೂರಿದ ಪೂಜಾರಿ

ಭಾರತ ಹುಣ್ಣಿಮೆಗೆ ಉತ್ತರ ಕರ್ನಾಟಕ(North Karnataka) ಭಾಗದಲ್ಲಿ ವಿಶೇಷ ಪ್ರಾಶಸ್ತ್ಯವಿದ್ದು, ಭಕ್ತರು ಶಕ್ತಿ ದೇವತೆಗಳ ದೇವಾಲಯಗಳಿಗೆ ಹೆಚ್ಚಾಗಿ ಹೋಗುತ್ತಾರೆ. ಅಂತೆಯೇ ಹುಲಗಿ ಹುಲಿಗೆಮ್ಮ ದೇವಾಲಯ, ಸವದತ್ತಿ ಯಲ್ಲಮ್ಮ ದೇವಾಲಯ, ಚಿಂಚಲಿ ಮಾಯಕ್ಕ ದೇವಾಲಯಗಳಿಗೆ ಭಾರೀ ಪ್ರಮಾಣದಲ್ಲಿ ಭಕ್ತರು ತೆರಳುತ್ತಾರೆ. ಬಹುತೇಕ ಎಲ್ಲ ನಗರಗಳಿಂದ ಹೆಚ್ಚುವರಿ ಬಸ್‌ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ.

ಹುಲಿಗೆಮ್ಮ ದೇವಸ್ಥಾನಕ್ಕೆ ಹರಿದು ಬಂದ ಭಕ್ತ ಸಾಗರ..!

ಕಳೆದ ವರ್ಷದ ಜೂ.24 ರಂದು ಹುಲಿಗೆಮ್ಮ ದೇವಸ್ಥಾನ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಸೆಕ್ಷನ್‌ 144 ಜಾರಿಗೊಳಿಸಿದ್ದರೂ ಲೆಕ್ಕಿಸದೆ ಕಾರ ಹುಣ್ಣಿಮೆ ದಿನದಂದು ಅಮ್ಮನವರ ದರ್ಶನಕ್ಕೆ ಒಂದು ಲಕ್ಷಕ್ಕೂ ಅಧಿಕ ಭಕ್ತರು ಹುಲಿಗಿ ಗ್ರಾಮದತ್ತ ಬಂದಿದ್ದರು. ಆದರೆ ಪೊಲೀಸರು ಚೆಕ್‌ಪೋಸ್ಟ್‌ಗಳಲ್ಲೇ ಭಕ್ತರನ್ನು ತಡೆದು ವಾಪಸ್‌ ಕಳುಹಿಸಿದ್ದರು.

ಕೋವಿಡ್‌ನಿಂದ ಎಲ್ಲ ದೇವಸ್ಥಾನಗಳಲ್ಲಿ ಭಕ್ತರಿಗೆ ದರ್ಶನ ನಿಷೇಧಿಸಲಾಗಿತ್ತು. ಹೀಗಾಗಿ ದೇವಸ್ಥಾನದ ಕಡೆಗೆ ಈಗ ಭಕ್ತರು ಬರುತ್ತಿಲ್ಲ. ಆದರೆ ಹುಲಿಗೆಮ್ಮ ದೇವಸ್ಥಾನದ 2ಕಿ.ಮೀ. ವಾಪ್ತಿಯಲ್ಲಿ ಸೆಕ್ಷನ್‌ 144 ಜಾರಿ ಮಾಡಿದರೂ ಸಹ ಲಕ್ಷಾಂತರ ಭಕ್ತರು ಆಗಮಿಸಿದ್ದಾರೆ. ರಾಜ್ಯದ ನಾನಾ ಕಡೆಗಳಿಂದ ದೇವಿಯ ದರ್ಶನಕ್ಕೆ ಭಕ್ತರು ಬಂದಿದ್ದರು. ಕಳೆದ ತಿಂಗಳು ಹುಣ್ಣಿಮೆಯಂದು ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಬಂದಿದ್ದರು. ಆಗಲೂ ಪೊಲೀಸರು ಚೆಕ್‌ಪೋಸ್ಟ್‌ಗಳಲ್ಲಿ ತಡೆದು ವಾಪಸ್‌ ಕಳುಹಿಸಿದ್ದರು.
 

click me!