ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಹುಡ್ಕೋ ಗೇಟ್ ಬಳಿ ರಸ್ತೆ ಉಬ್ಬು ನಿರ್ಮಿಸಲು ಆಗ್ರಹ
ಮುದ್ದೇಬಿಹಾಳ(ಮೇ.27): ಪಟ್ಟಣದ ವಿಜಯಪುರ ರಸ್ತೆಯ ಹುಡ್ಕೋ ಗೇಟ್ ಬಳಿ ಟ್ರಕ್ ಮತ್ತು ಬೈಕ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ, ಸರ್ಕಾರಿ ನೌಕರ ರಾಮು ಅಲಿಯಾಸ್ ಪರಶುರಾಮ ಉಪ್ಪಾರ (27) ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.
ಸಾಸನೂರು ಗ್ರಾಮದ ನಿವಾಸಿಯಾಗಿದ್ದ ರಾಮು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ. ದ್ವಿತೀಯ ಪಿಯು ಪೂರಕ ಪರೀಕ್ಷೆಗೆ ಸಂಬಂಧಿಸಿದಂತೆ ಕರ್ತವ್ಯದ ಮೇರೆಗೆ ಪಟ್ಟಣಕ್ಕೆ ಆಗಮಿಸಿ, ಪರೀಕ್ಷೆಯ ನಂತರ ಮನೆಗೆ ಮರಳುವಾಗ ಈ ದುರ್ಘಟನೆ ಸಂಭವಿಸಿದೆ.
ಸೀರೆಯಿಂದ ಬೇವಿನ ಮರಕ್ಕೆ ನೇಣು ಹಾಕಿಕೊಂಡು ಬಾಲಕಿ ಆತ್ಮ ಹತ್ಯೆ!
ಘಟನೆ ಬಳಿಕ ಗಾಯಾಳುವಿಗೆ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆಂದು ಬಾಗಲಕೋಟೆಗೆ ರವಾನಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ರಾಮು ಸಾವಿಗೀಡಾಗಿದ್ದಾನೆ ಎಂದು ತಿಳಿದುಬಂದಿದೆ. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಡ್ಕೋ ಗೇಟ್ ಅಪಘಾತ ವಲಯವಾಗಿದ್ದು, ಇದೇ ಸ್ಥಳದಲ್ಲಿ ಹತ್ತಾರು ಅಪಘಾತಗಳಾಗಿವೆ. ಇಷ್ಟಾದರೂ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಲೇ ಇದ್ದಾರೆ. ಈ ಸ್ಥಳದಲ್ಲಿ ರಸ್ತೆ ಉಬ್ಬು ಅಳವಡಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಜತೆಗೆ ಈ ಕುರಿತು ಅಧಿಕಾರಿಗಳು ಕೂಡ ಯಾವುದೇ ಕ್ರಮವನ್ನೂ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೂಡ ಕೇಳಿಬಂದಿದೆ. ಕೆಲವೇ ದಿನಗಳ ಹಿಂದೆ ನಿವೃತ್ತ ಪಿಎಸ್‌ಐ ಒಬ್ಬರು ಇದೇ ಸ್ಥಳದಲ್ಲಿ ಅಪಘಾತಕ್ಕೆ ಒಳಗಾಗಿ ಸಾವಿಗೀಡಾದ ಘಟನೆ ಇನ್ನೂ ಮಾಸುವ ಮುನ್ನವೇ ಮತ್ತೊಂದು ಅಪಘಾತ ಘಟಿಸಿ, ವ್ಯಕ್ತಿಯೊಬ್ಬ ಮೃತಪಟ್ಟಿದ್ದಾರೆ. ಇದರಿಂದ ಪಟ್ಟಣದ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಈ ಸ್ಥಳದಲ್ಲಿ ರಸ್ತೆ ಉಬ್ಬ ಅಳವಡಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಜನರು ಎಚ್ಚರಿಕೆ ನೀಡಿದ್ದಾರೆ.