ಹುಬ್ಬಳ್ಳಿ-ಧಾರವಾಡದಲ್ಲಿ 25 ಸಾವಿರ ಕೋಟಿ ಬಂಡವಾಳ ಹೂಡಿಕೆ: ಶೆಟ್ಟರ್‌

By Kannadaprabha News  |  First Published Jul 1, 2021, 11:00 AM IST

* 10 ಸಾವಿರ ಉದ್ಯೋಗ ಸೃಷ್ಟಿ
* ತಾಂತ್ರಿಕ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶ
* ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕೆ ಸ್ಥಾಪನೆಗೆ ಒತ್ತು 


ಹುಬ್ಬಳ್ಳಿ(ಜು.01):  ಹುಬ್ಬಳ್ಳಿ- ಧಾರವಾಡ ಮಹಾನಗರದಲ್ಲಿ ನಗರದಲ್ಲಿ ಏಕಸ್‌, ಯುಫ್ಲೆಕ್ಸ್‌, ರಾಜೇಶ್‌ ಎಕ್ಸೋ ಸೇರಿದಂತೆ ಪ್ರತಿಷ್ಠಿತ ಕಂಪನಿಗಳು ಸುಮಾರು 25 ಸಾವಿರ ಕೋಟಿ ಹೂಡಿಕೆ ಮಾಡಲಿವೆ. ಇದರಿಂದ ಸ್ಥಳೀಯವಾಗಿ 10 ಸಾವಿರ ಜನರಿಗೆ ಉದ್ಯೋಗ ಲಭಿಸಲಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಹೇಳಿದ್ದಾರೆ. 

ಇಲ್ಲಿನ ಮಹಿಳಾ ವಿದ್ಯಾಪೀಠದ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್‌ ವಿತರಿಸಿ ಮಾತನಾಡಿದರು. ತಾಂತ್ರಿಕ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಅರಸಿ ಬೆಂಗಳೂರು, ಪುಣೆ, ಮುಂಬೈಗಳಿಗೆ ವಲಸೆ ಹೋಗುವುದು ತಪ್ಪಲಿದೆ. ಸ್ಥಳೀಯವಾಗಿ ವಿಫುಲ ಉದ್ಯೋಗ ಅವಕಾಶಗಳು ದೊರೆಯಲಿವೆ. ಬೆಂಗಳೂರಿಗೆ ಸೀಮಿತವಾಗಿದ್ದ ಕೈಗಾರಿಕೆಗಳಲ್ಲಿನ ಬಂಡವಾಳ ಹೂಡಿಕೆಯನ್ನು ರಾಜ್ಯದ ಎರಡು ಹಾಗೂ ಮೂರನೇ ಹಂತದ ನಗರಗಳಲ್ಲಿ ತರಲು ಸರ್ಕಾರ ಪ್ರಯತ್ನಿಸುತ್ತಿದೆ. ಭಾಗದಲ್ಲಿ ಕೈಗಾರಿಕೆ ಸ್ಥಾಪನೆಗೆ ಒತ್ತು ನೀಡಲಾಗಿದೆ ಎಂದರು.

Latest Videos

undefined

ಸರ್ಕಾರದ ಶ್ವಾಸಕೋಶ ಗಟ್ಟಿಯಾಗಿದೆ, ಸಹಜವಾಗಿ ಉಸಿರಾಡುತ್ತಿದೆ: ಜೋಶಿ

ಸರ್ಕಾರ ಪದವಿ ಹಾಗೂ ತಾಂತ್ರಿಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ಲೆಟ್‌ ವಿತರಣೆ ಮಾಡುತ್ತಿದೆ. ಇದರಿಂದ ವಿದ್ಯಾಭ್ಯಾಸಕ್ಕೆ ಪರೀಕ್ಷೆಗಳಿಗೆ ಹೆಚ್ಚಿನ ಜ್ಞಾನ ಪಡೆಯಲು ಅವಕಾಶವಾಗಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಮೆರಿಟ್‌ಗೆ ಹೆಚ್ಚಿನ ಅವಕಾಶವಿದೆ. ವಿದ್ಯಾರ್ಥಿಗಳು ಕೀಳರಿಮೆ ಬೆಳೆಸಿಕೊಳ್ಳದೆ ಅಧ್ಯಯನ ನಡೆಸಬೇಕು. ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚಿನ ಉದ್ಯೋಗ ಅವಕಾಶಗಳು ಲಭಿಸುವವು ಎಂದರು.

ಇದೇ ಸಂದರ್ಭದಲ್ಲಿ ಮಹಿಳಾ ವಿದ್ಯಾಪೀಠದ ಪ್ರಾಚಾರ್ಯೆ ಗೀತಾ ಎಂ. ಅವರ ಮನವಿ ಸ್ಪಂದಿಸಿ, ವಿವಿಧ ಕಂಪನಿಗಳ ಸಿ.ಎಸ್‌.ಆರ್‌ ನಿಧಿಯಡಿ ಕಾಲೇಜಿಗೆ ಅಗತ್ಯ ಇರುವ ಕಂಪ್ಯೂಟರ್‌ಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸರ್ಕಾರಿ ಪಾಲಿಟೆಕ್ನಿಕ್‌ನ 440 ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್‌ ನೀಡಲಾಯಿತು. ಕಾಲೇಜಿನ ಪ್ರಾಚಾರ್ಯ ಆನಂದ ಖಾನಾಪುರ, ಹುಡಾ ಅಧ್ಯಕ್ಷ ನಾಗೇಶ್‌ ಕಲಬುರ್ಗಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
 

click me!