ಅಮೆರಿಕದಲ್ಲಿ ಶೂಟೌಟ್‌: ಮೈಸೂರು ವಿದ್ಯಾರ್ಥಿ ಬಲಿ

By Web DeskFirst Published Nov 30, 2019, 8:34 AM IST
Highlights

ಅಮೆರಿಕದಲ್ಲಿ ಶೂಟೌಟ್‌: ಮೈಸೂರು ವಿದ್ಯಾರ್ಥಿ ಬಲಿ| ಎಂಎಸ್‌ ವ್ಯಾಸಂಗಕ್ಕೆ ತೆರಳಿದ್ದ ಅಭಿಷೇಕ್‌ ಮೇಲೆ ಅಪರಿಚಿತನಿಂದ ಗುಂಡಿನ ದಾಳಿ| ಒಂದೂವರೆ ವರ್ಷದಿಂದ ಕ್ಯಾಲಿಫೋರ್ನಿಯಾ ವಿವಿಯಲ್ಲಿ ಅಧ್ಯಯನ

ಮೈಸೂರು[ನ.30]: ಎಂಎಸ್‌ ವ್ಯಾಸಂಗಕ್ಕೆಂದು ಅಮೆರಿಕಾದ ಕ್ಯಾಲಿಫೋರ್ನಿಯಾಗೆ ತೆರಳಿದ್ದ ಮೈಸೂರಿನ ವಿದ್ಯಾರ್ಥಿಯೋರ್ವ ಅಪರಿಚಿತನ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ.

ಕುವೆಂಪುನಗರದ ಪಿ ಆ್ಯಂಡ್‌ ಎಫ್‌ ಬ್ಲಾಕ್‌ ಮನುಜಪಥ ರಸ್ತೆಯಲ್ಲಿನ ಸುದೇಶ್‌ ಚಂದ್‌ ಹಾಗೂ ನಂದಿನಿ ಐತಾಳ್ ಎಂಬುವರ ಮೊದಲ ಪುತ್ರ ಅಭಿಷೇಕ್‌ ಸುದೇಶ್ ಭಟ್ (25) ಮೃತ ದುರ್ದೈವಿ. ಇವರು ಖ್ಯಾತ ಲೇಖಕ ಶ್ರೀ ಶಿವರಾಮ್ ಐತಾಳ್‌ರವರ ಮೊಮ್ಮಗ ಎಂಬುವುದು ಉಲ್ಲೇಖನೀಯ. 

ಮೈಸೂರಿನ ವಿದ್ಯಾವಿಕಾಸ ಕಾಲೇಜಿನಲ್ಲಿ ಕಂಪ್ಯೂಟರ್‌ ಸೈನ್ಸ್‌ ಎಂಜಿನಿಯರಿಂಗ್‌ ಮುಗಿಸಿದ ಬಳಿಕ ಎಂಎಸ್‌ ಮಾಡಲು ಒಂದೂವರೆ ವರ್ಷದ ಹಿಂದೆ ಅಮೆರಿಕಾಕ್ಕೆ ತೆರಳಿದ್ದರು. ಅಲ್ಲಿನ ಸ್ಯಾನ್‌ ಬರ್ನಾಡಿಯೋದಲ್ಲಿನ ಕ್ಯಾಲಿಫೋರ್ನಿಯಾ ವಿವಿಯಲ್ಲಿ ಎಂಎಸ್‌ ವ್ಯಾಸಂಗ ಮಾಡುತ್ತಿದ್ದರು. 

"

ವ್ಯಾಸಂಗದ ಬಿಡುವಿನ ವೇಳೆಯಲ್ಲಿ ಹೊಟೇಲ್‌ನಲ್ಲಿ ಕೆಲಸ ಮಾಡಿಕೊಂಡು ಅಭಿಷೇಕ್‌ ರೆಸಿಡೆಂಟ್‌ ಒಂದರಲ್ಲಿದ್ದರು. ಈ ನಡುವೆ ಗುರುವಾರ ಕ್ಯಾಲಿಫೋರ್ನಿಯಾದಲ್ಲಿ ಅಪರಿಚಿತ ವ್ಯಕ್ತಿಯ ಗುಂಡೇಟಿಗೆ ಅಭಿಷೇಕ್‌ ಬಲಿಯಾಗಿದ್ದಾರೆ. ಇತ್ತ ಅಭಿಷೇಕ್‌ನ ಪೋಷಕರು ಅಮೆರಿಕಾಕ್ಕೆ ತೆರಳಿದ್ದು, ಅಲ್ಲಿಯೇ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಿರುವುದಾಗಿ ಕುಟುಂಬದ ಮೂಲಗಳು ಖಚಿತಪಡಿಸಿವೆ.

ಯಾವುದೇ ಮಾಹಿತಿ ಲಭ್ಯವಿಲ್ಲ:

ಅಮೆರಿಕಾದಲ್ಲಿ ಥ್ಯಾಂಕ್ಸ್‌ ಗಿವಿಂಗ್‌ ಡೇ ನಡೆಯುತ್ತಿರುವುದರಿಂದ ಅಲ್ಲಿನ ಪೊಲೀಸ್‌, ಆಸ್ಪತ್ರೆ, ಮಾಹಿತಿ ವಿನಿಮಯ ಕೇಂದ್ರಗಳು ಪೂರ್ಣ ಪ್ರಮಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಇದರಿಂದಾಗಿ ಅಭಿಷೇಕ್‌ ಸಾವಿನ ಕುರಿತಾದ ನಿಖರ ಮಾಹಿತಿ ಲಭ್ಯವಾಗಿಲ್ಲ. ಗುರುವಾರ (ಭಾರತೀಯ ಕಾಲಮಾನದಂತೆ) ಬೆಳಗ್ಗೆ 11.30 ರಿಂದ ಮಧ್ಯಾಹ್ನ 12.15ರ ವೇಳೆಗೆ ಈ ಘಟನೆ ನಡೆದಿದ್ದರೂ, ನಮಗೆ ಅಭಿಷೇಕ್‌ ಸಾವಿನ ಖಚಿತ ಮಾಹಿತಿ ಲಭ್ಯವಾಗಿದ್ದು ಶುಕ್ರವಾರ ಬೆಳಗಿನ ಜಾವ 5 ಗಂಟೆಗೆ ಎನ್ನುತ್ತಾರೆ ಅವರ ಚಿಕ್ಕಪ್ಪ ಹಾಗೂ ರಂಗಾಯಣ ಕಲಾವಿದ ರಾಮನಾಥ್‌.

ಸಾವಿನ ಹಿಂದಿನ ದಿನವಷ್ಟೇ ತಂದೆಗೆ ಕರೆ ಮಾಡಿದ್ದ ಅಭಿಷೇಕ್ ಕೊನೆಯದಾಗಿ ಮಾತನಾಡಿದ್ದ. ಅಲ್ಲದೇ ಗುರುವಾರ 11.15ಕ್ಕೆ ಸಂದೇಶವನ್ನೂ ಕಳುಹಿಸಿದ್ದ. ಆದರೆ ಇದಾದ 15 ನಿಮಿಷದಲ್ಲೇ ಮನೆಯವರಿಗೆ ಆತ ಸಾವನ್ನಪ್ಪಿರುವ ಮಾಹಿತಿ ಲಭಿಸಿದೆ. ಅಭಿಷೇಕ್ ಶಿಕ್ಷಣ ಮುಗಿಸಿದ ಬಳಿಕ ಎರಡು ವರ್ಷ ಅಲ್ಲೇ ಉದ್ಯೋಗ ಮಾಡಿ ಮೈಸೂರಿಗೆ ಮರಳಿ ಬರಲು ಯೋಚಿಸಿದ್ದ. 

ಇನ್ನು ಅಮೆರಿಕದಲ್ಲಿನ ಭಾರತೀಯರು ನಮಗೆ ಎಲ್ಲಾ ರೀತಿಯ ನೆರವು ನೀಡುತ್ತಿದ್ದಾರೆ. ಅಲ್ಲದೇ ಹವಾಮಾನ ವೈಪರೀತ್ಯದಿಂದಾಗಿ ಮೃತದೇಹ ತರಲು ಕಷ್ಟವಾಗುತ್ತಿದೆ ಹೀಗಾಗಿದ ಅಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲು ತೀರ್ಮಾನಿಸಲಾಗಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಅಭಿಷೇಕ್ ಮೇಲೆ ಗುಂಡಿನ ದಾಳಿ ನಡೆದಿದ್ದೇಕೆ ಎಂಬ ಕಾರಣ ತಿಳಿದು ಬಂದಿಲ್ಲ. ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

click me!