ಸುಮ್‌ ಸುಮ್ನೆ ರಸ್ತೆ ಅಗೆದರೆ ಬೀಳುತ್ತೆ 25 ಲಕ್ಷ ದಂಡ..!

By Kannadaprabha NewsFirst Published Oct 17, 2020, 10:46 AM IST
Highlights

ಅನುಮತಿ ಪಡೆಯದೆ ರಸ್ತೆ ಅಗೆದರೆ 25 ಲಕ್ಷ ದಂಡ, ಸಾರ್ವಜನಿಕರಿಗೆ 10 ಲಕ್ಷ: ಬಿಬಿಎಂಪಿ ಆಯುಕ್ತರಿಂದ ಆದೇಶ| ಸಾರ್ವಜನಿಕರ ಹಿತದೃಷ್ಟಿಯಿಂದ ರಸ್ತೆ ಅಗೆಯುವ ಸಂದರ್ಭದಲ್ಲಿ ರಾತ್ರಿ ವೇಳೆ ಎಲ್‌ಇಡಿ ಲೈಟ್‌, ರಸ್ತೆ ಬದಿ ಹೂಳು ತೆರವು ಹಾಗೂ ಬ್ಯಾರಿಕೇಡ್‌ ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು| 

ಬೆಂಗಳೂರು(ಅ.17): ಅನುಮತಿ ಪಡೆಯದೆ ಪಾಲಿಕೆ ವ್ಯಾಪ್ತಿಯ ರಸ್ತೆಗಳನ್ನು ಅಗೆದರೆ ಖಾಸಗಿ ಅಥವಾ ಸರ್ಕಾರಿ ಸ್ವಾಮ್ಯದ ಸಂಸ್ಥೆಗೆ (ಪ್ರತಿ ಪ್ರಕರಣ) 25 ಲಕ್ಷ ಹಾಗೂ ಸಾರ್ವಜನಿಕರಿಗೆ 10 ಲಕ್ಷ ದಂಡ ವಿಧಿಸುವ ಆದೇಶವನ್ನು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಹೊರಡಿಸಿದ್ದಾರೆ.

ರಾಜ್ಯ ಸರ್ಕಾರ ಸರ್ಕಾರದ ಸೂಚನೆ ಅನುಸಾರ ಈ ಕ್ರಮ ಕೈಗೊಳ್ಳಲಾಗಿದೆ. ಇದರನ್ವಯ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಸ್ಟ್ಯಾಂಡರ್ಡ್‌ ಆಪರೇಟಿಂಗ್‌ ಪ್ರೊಸಿಜರ್‌) ಪಾಲಿಸದಿದ್ದರೆ ಅಥವಾ ಉಲ್ಲಂಘಿಸಿದರೆ ಖಾಸಗಿ ಅಥವಾ ಸರ್ಕಾರಿ ಸ್ವಾಮ್ಯದ ಸಂಸ್ಥೆ ಮತ್ತು ಸಾರ್ವಜನಿಕರಿಗೆ ನಿಗದಿತ ದಂಡ ವಿಧಿಸುವ ಅಧಿಕಾರವನ್ನು ವಾರ್ಡ್‌ (ಪ್ರಾಂತೀಯ) ಎಂಜಿನಿಯರ್‌ಗಳಿಗೆ ನೀಡಿದ್ದು, ಕಡ್ಡಾಯವಾಗಿ ಈ ಆದೇಶ ಪಾಲಿಸುವಂತೆ ಸೂಚಿಸಿದ್ದಾರೆ.

ಬೆಂಗಳೂರಿಗರೇ ಎಚ್ಚರ...! ರಸ್ತೆ ಅಗೆದರೆ ಬೀಳುತ್ತೆ ಭಾರೀ ದಂಡ!

ನಗರದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸುವ ಉದ್ದೇಶದಿಂದ ಜಲಮಂಡಳಿ, ಬೆಸ್ಕಾಂ, ಗೇಲ್‌ ಸಂಸ್ಥೆ ಹಾಗೂ ಓಎಫ್‌ಸಿ ಸಂಸ್ಥೆ ಸೇರಿದಂತೆ ಹಲವು ಸಂಸ್ಥೆಗಳಿಗೆ ರಸ್ತೆ ಕತ್ತರಿಸಲು ಎಂಎಆರ್‌ಸಿಎಸ್‌ ತಂತ್ರಾಂಶದ ಮೂಲಕ ಅನುಮತಿ ನೀಡಲಾಗುತ್ತಿದೆ. ಈ ರೀತಿ ಅನುಮತಿ ಪಡೆದ ಸಂಸ್ಥೆಗಳೂ ಕಡ್ಡಾಯವಾಗಿ ನಿಯಮ ಪಾಲನೆ ಮಾಡಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ರಸ್ತೆ ಅಗೆಯುವ ಸಂದರ್ಭದಲ್ಲಿ ರಾತ್ರಿ ವೇಳೆ ಎಲ್‌ಇಡಿ ಲೈಟ್‌, ರಸ್ತೆ ಬದಿ ಹೂಳು ತೆರವು ಹಾಗೂ ಬ್ಯಾರಿಕೇಡ್‌ ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಈ ಎಲ್ಲ ವಿಚಾರಗಳ ಮೇಲೂ ವಾರ್ಡ್‌ ಎಂಜಿನಿಯರ್‌ ನಿಗಾ ವಹಿಸಬೇಕು ಎಂದು ಆಯುಕ್ತರು ನಿರ್ದೇಶನ ನೀಡಿದ್ದಾರೆ.
 

click me!