ಒಂದೂವರೆ ತಿಂಗಳಲ್ಲಿ 13.54 ಲಕ್ಷ ಮಂದಿ ಪ್ರಯಾಣ| ಕೊರೋನಾ ಮುನ್ನ ನಿತ್ಯ 4 ಲಕ್ಷ ಜನ ಸಂಚಾರ| ಕೋವಿಡ್ ಭೀತಿಯಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುತ್ತಿಲ್ಲ| ಕೆಲವು ಸಂದರ್ಭದಲ್ಲಿ ದಿನಕ್ಕೆ 50 ಸಾವಿರಕ್ಕೂ ಹೆಚ್ಚು ಪ್ರಯಾಣಿಕರ ಸಂಚಾರ|
ಬೆಂಗಳೂರು(ಅ.17): ಕೋವಿಡ್-19 ಲಾಕ್‌ಡೌನ್ ಸಡಿಲಿಕೆ ಬಳಿಕ ಮೆಟ್ರೋ ಆರಂಭಗೊಂಡು 40 ದಿನಗಳು ಪೂರ್ಣಗೊಂಡಿದ್ದರೂ ಪ್ರಯಾಣಿಕರ ಹೆಚ್ಚಳ ಮಂದಗತಿಯಲ್ಲಿ ಸಾಗಿದೆ. ಸೆ.7ರಿಂದ ಈವರೆಗೆ ಹಸಿರು ಮತ್ತು ನೇರಳೆ ಮಾರ್ಗದಲ್ಲಿ ಸಂಚರಿಸಿರುವ ಪ್ರಯಾಣಿಕರ ಸಂಖ್ಯೆ ಕೇವಲ 13.54 ಲಕ್ಷ ಮಾತ್ರ!
ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿಎಲ್) ನೀಡಿರುವ ಮಾಹಿತಿಯಂತೆ ಸೆ.7ರಿಂದ 30ರವರೆಗೆ 7,29,968 ಪ್ರಯಾಣಿಕರು ಮತ್ತು ಅ.1ರಿಂದ 15ರವರೆಗೆ 6,24,159 ಪ್ರಯಾಣಿಕರು ಸಂಚಾರಿಸಿದ್ದಾರೆ. ಹೀಗೆ ಹಸಿರು ಮತ್ತು ನೇರಳೆ ಮಾರ್ಗದಲ್ಲಿ 40 ದಿನದಲ್ಲಿ ಒಟ್ಟು 13,54,127 ಪ್ರಯಾಣಿಕರು ಮಾತ್ರ ಪ್ರಯಾಣಿಸಿದ್ದಾರೆ. ಈ ಹಿಂದೆ ದಿನಕ್ಕೆ ಅಂದಾಜು 4 ಲಕ್ಷದಂತೆ ಒಂದು ತಿಂಗಳಿಗೆ ಬರೋಬ್ಬರಿ 1.20 ಕೋಟಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಒಂದೇ ದಿನ 4.80 ಲಕ್ಷಕ್ಕೂ ಅಧಿಕ ಮಂದಿ ಪ್ರಯಾಣಿಕರು ಸಂಚರಿಸಿದ ದಾಖಲೆಯೂ ಮೆಟ್ರೋಗೆ ಇದೆ.
undefined
ಬೈಯಪ್ಪನಹಳ್ಳಿ- ಮೈಸೂರು ರಸ್ತೆ (ನೇರಳೆ ಮಾರ್ಗ) ಮೆಟ್ರೋ ನಿಲ್ದಾಣಗಳ ನಡುವೆ ಸೆ.7ರಂದು ಮತ್ತು ನಾಗಸಂದ್ರ- ಯಲಚೇನಹಳ್ಳಿ(ಹಸಿರು ಮಾರ್ಗ) ಮೆಟ್ರೋ ನಿಲ್ದಾಣಗಳ ನಡುವೆ ಸೆ.9ರಿಂದ ಮೆಟ್ರೋ ರೈಲು ಸಂಚಾರ ಆರಂಭಿಸಲಾಗಿತ್ತು. ಪ್ರಾರಂಭದ ಕೆಲದ ದಿನ ಬೆಳಗ್ಗೆ 9ರಿಂದ 11 ಮತ್ತು ಸಂಜೆ 4.30ರಿಂದ 7.30ರವರೆಗೆ ಮಾತ್ರ ಮೆಟ್ರೋ ರೈಲು ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ನಂತರ ಪ್ರತಿ ದಿನ ನೆರಳೆ ಮಾರ್ಗದಲ್ಲಿ 21 ಮತ್ತು ಹಸಿರು ಮಾರ್ಗದಲ್ಲಿ 25 ಮೆಟ್ರೋ ರೈಲುಗಳು 271 ಸುತ್ತಿನ ಸಂಚಾರ ನಡೆಸುತ್ತಿವೆ. ಲಾಕ್‌ಡೌನ್‌ಗೂ ಮೊದಲು ಒಟ್ಟು 284 ಸುತ್ತಿನ ಸಂಚಾರವನ್ನು ಮೆಟ್ರೋ ರೈಲು ಈ ಮಾರ್ಗದಲ್ಲಿ ನಡೆಸುತ್ತಿದ್ದವು.
ಯಲಚೇನಹಳ್ಳಿ- ಅಂಜನಾಪುರ ಮೆಟ್ರೋ ರೈಲು ಸೇವೆಗೆ ಸಿದ್ಧತೆ
ಪ್ರಯಾಣಿಕರ ಸಂಖ್ಯೆ ಕುಸಿತ
ಕೊರೋನಾ ಭೀತಿ ಇನ್ನೂ ಜನರಿಂದ ದೂರವಾಗಿಲ್ಲ. ಇದರಿಂದಾಗಿ ಹೆಚ್ಚಾಗಿ ಸ್ವಂತ ವಾಹನಗಳನ್ನು ಜನರು ಬಳಸಲು ಆದ್ಯತೆ ನೀಡಿದ್ದಾರೆ. ಜತೆಗೆ ಮೆಟ್ರೋ ರೈಲನ್ನು ಹೆಚ್ಚಾಗಿ ಆವಲಂಬಿಸಿದ ಐಟಿಬಿಟಿ ಉದ್ಯೋಗಿಗಳಿಗೆ ಕಂಪನಿಗಳು ಡಿಸೆಂಬರ್ ಅಂತ್ಯದವರೆಗೂ ವರ್ಕ್ ಫ್ರಂ ಹೋಮ್ ಸೌಲಭ್ಯ ಕಲ್ಪಿಸಿರುವುದರಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತವಾಗಿದೆ. ಹಾಗೆಯೇ ಶಾಲಾ-ಕಾಲೇಜುಗಳಿಗೆ ಓಡಾಡುವ ವಿದ್ಯಾರ್ಥಿಗಳಿಗೂ ರಜೆ ಇದೆ. ಸಿನಿಮಾ ಮಂದಿರಗಳು ಗುರುವಾರದವರೆಗೂ ಮುಚ್ಚಿದ್ದು ಜನರ ಓಡಾಟವೂ ಕೂಡ ಕಡಿಮೆ ಇತ್ತು. ಇದು ಮೆಟ್ರೋ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಲು ಕಾರಣವೆನ್ನಲಾಗಿದೆ.
ಟೋಕನ್ ವ್ಯವಸ್ಥೆ ಇಲ್ಲ
ಮುಖ್ಯವಾಗಿ ಕೊರೋನಾ ಸೋಂಕು ಹರಡದಂತೆ ನಮ್ಮ ಮೆಟ್ರೋ ನಿಗಮ ಕ್ರಮಕೈಗೊಂಡಿದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆದ್ಯತೆ ನೀಡಿದೆ. ಈ ಪರಿಣಾಮ ಮೆಟ್ರೋ ಸ್ಮಾರ್ಟ್‌ಕಾರ್ಡ್ ಹೊಂದಿರುವವರಿಗೆ ಮಾತ್ರ ನಿಲ್ದಾಣಗಳಿಗೆ ಪ್ರವೇಶ ಕಲ್ಪಿಸಲಾಗುತ್ತಿದೆ. ಮೆಟ್ರೋದಲ್ಲಿ ಪ್ರಯಾಣಿಸಲು ಸ್ಮಾರ್ಟ್ ಕಾರ್ಡ್ ಖರೀದಿಸಬೇಕೆಂಬ ನಿಯಮದಿಂದ ಶೇ.15ರಿಂದ 20 ರಷ್ಟು ಟೋಕನ್ ಪಡೆದು ಪ್ರಯಾಣಿಸುವ ಪ್ರಯಾಣಿಕರು ಮೆಟ್ರೋ ನಿಲ್ದಾಣಗಳತ್ತ ಧಾವಿಸುತ್ತಿಲ್ಲ.
ಕೋವಿಡ್ ಭೀತಿಯಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುತ್ತಿಲ್ಲ ನಿಜ. ಆದರೆ ಕೆಲವು ಸಂದರ್ಭದಲ್ಲಿ ದಿನಕ್ಕೆ 50 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸಿದ್ದಾರೆ. ಉದಾಹರಣೆ ಅ.12ರಂದು 2 ಮಾರ್ಗದಿಂದ 56 ಸಾವಿರ ಪ್ರಯಾಣಿಕರು ಸಂಚರಿಸಿದ್ದರು. ಹೀಗೆ ಹಂತ ಹಂತವಾಗಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲಿದೆ. ಈ ಹಿಂದಿನ ದಿನಗಳಿಗೂ ಈಗಿನ ದಿನಕ್ಕೂ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿ ಯಶವಂತ್ ಚೌವ್ಹಾಣ್ ತಿಳಿಸಿದ್ದಾರೆ.