ನಕಲಿ ದಾಖಲೆ ನೀಡಿ 24 ವರ್ಷ ಸರ್ಕಾರಿ ಉದ್ಯೋಗದಲ್ಲಿ ಮಹಿಳಾ ಅಧಿಕಾರಿ

By Web DeskFirst Published May 17, 2019, 8:30 AM IST
Highlights

ಸರ್ಕಾರಿ ಉದ್ಯೋಗ ಪಡೆದುಕೊಳ್ಳಲು ಮಹಿಳೆಯೋರ್ವರು ನಕಲಿ ದಾಖಲಾತಿಗಳನ್ನು ನೀಡಿರುವುದು ಬರೋಬ್ಬರಿ 24 ವರ್ಷಗಳ ಬಳಿಕ ಬೆಳಕಿಗೆ ಬಂದಿದೆ. 

ಬೆಂಗಳೂರು:  ಮಹಿಳಾ ಅಧಿಕಾರಿಯೊಬ್ಬರು ನಕಲಿ ದಾಖಲೆ ನೀಡಿ ಸರ್ಕಾರಿ ಹುದ್ದೆಗೆ ಸೇರಿದ್ದರು ಎಂಬ ವಿಷಯ ಅವರು 24 ವರ್ಷಗಳ ಕಾಲ ಸೇವೆ ಪೂರೈಸಿದ ನಂತರ ಇದೀಗ ಬೆಳಕಿಗೆ ಬಂದಿದೆ.

ಕಂದಾಯ ಇಲಾಖೆಯಲ್ಲಿನ ಭೂ ದಾಖಲಾತಿಗಳ ಜಂಟಿ ನಿರ್ದೇಶಕಿ ಯಶೋಧ ಅವರು ನಕಲಿ ಅಂಕಪಟ್ಟಿ ನೀಡಿ ಕೆಲಸ ಪಡೆದ ಆರೋಪ ಹೊತ್ತಿದ್ದಾರೆ. ಈ ಸಂಬಂಧ ಕಂದಾಯ ಇಲಾಖೆ ಆಯುಕ್ತ ಮನೀಶ್‌ ಮೌದ್ಗಿಲ್‌ ಅವರು ಹಲಸೂರು ಗೇಟ್‌ ಠಾಣೆಗೆ ದೂರು ನೀಡಿದ್ದು, ಆರೋಪಿ ಮಹಿಳೆ ಬಂಧನಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ವಿದ್ಯಾರಣ್ಯಪುರ ನಿವಾಸಿಯಾಗಿರುವ ಯಶೋಧಮ್ಮ ಅವರು 24 ವರ್ಷಗಳ ಹಿಂದೆ ಕಂದಾಯ ಇಲಾಖೆಯಲ್ಲಿ ಭೂ ಮಾಪಕರಾಗಿ ಸರ್ಕಾರಿ ಹುದ್ದೆ ಪಡೆದಿದ್ದರು. ಮಹಿಳೆ 24 ವರ್ಷದಲ್ಲಿ ಹಂತ-ಹಂತವಾಗಿ ಬಡ್ತಿ ಪಡೆದು ಪ್ರಸ್ತುತ ಭೂ ದಾಖಲಾತಿಗಳ ಜಂಟಿ ನಿದೇರ್ಶಕಿಯಾಗಿದ್ದಾರೆ.

ಪಿಯು ಬೋರ್ಡ್‌ನಲ್ಲಿ ಸತ್ಯ ಬಯಲು:

ಯಶೋಧ ಅವರು ಕೆಲಸಕ್ಕೆ ಸೇರುವಾಗ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದಾಗಿ ಅಂಕಪಟ್ಟಿಸಲ್ಲಿಸಿದ್ದರು. ವಕೀಲ ರಾಮಕೃಷ್ಣ ಎಂಬುವರು ಯಶೋಧ ಅವರು ನಕಲಿ ಅಂಕಪಟ್ಟಿನೀಡಿ ಕೆಲಸ ಪಡೆದಿರುವುದಾಗಿ ಆರೋಪಿಸಿ ಇತ್ತೀಚೆಗೆ ಕಂದಾಯ ಇಲಾಖೆಗೆ ದೂರು ನೀಡಿದ್ದರು. ಯಶೋಧ ಅವರ ವಿರಯ್ಧ ಇಲಾಖೆ ಆಂತರಿಕ ತನಿಖೆಗೆ ಒಳಪಡಿಸಿತ್ತು. ಯಶೋಧಮ್ಮ ಅವರು ನೀಡಿದ್ದ ಅಂಕಪಟ್ಟಿಯನ್ನು ಪರಿಶೀಲನೆಗಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಕಳುಹಿಸಿಕೊಡಲಾಗಿತ್ತು.

ಅಂಕಪಟ್ಟಿಪರಿಶೀಲನೆ ನಡೆಸಿದ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು, ಯಶೋಧಮ್ಮ ಅವರು ನಕಲಿ ಅಂಕಪಟ್ಟಿನೀಡಿ ಕೆಲಸ ಪಡೆದಿದ್ದಾರೆ. ಸರ್ಕಾರಿ ನೌಕರಿ ಪಡೆಯಲು ಅವರು ಅನರ್ಹರು. ತಮ್ಮದೇ ಹೆಸರಿನ ಬೇರೆಯವರ ಅಂಕಪಟ್ಟಿಯನ್ನು ನೀಡಿ ಕೆಲಸ ಪಡೆದು ವಂಚಿಸಿದ್ದಾರೆ ಎಂದು ಕಂದಾಯ ಇಲಾಖೆ ಆಯುಕ್ತರಿಗೆ ಶಿಕ್ಷಣ ಇಲಾಖೆ ನಿರ್ದೇಶಕರು ವರದಿ ನೀಡಿದ್ದರು.

ವಂಚನೆ ದೂರು:

ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಕಂದಾಯ ಇಲಾಖೆ ಆಯುಕ್ತ ಮನೀಶ್‌ ಮೌದ್ಗಿಲ್‌ ಅವರು ಹಲಸೂರು ಗೇಟ್‌ ಠಾಣೆಗೆ ಭೂ ದಾಖಲಾತಿಗಳ ಜಂಟಿ ನಿರ್ದೇಶಕಿ ಯಶೋಧ ಅವರ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಜಂಟಿ ನಿರ್ದೇಶಕಿ ಯಶೋಧ ಅವರ ಬಂಧನಕ್ಕೆ ಕ್ರಮಕೈಗೊಂಡಿದ್ದಾರೆ. ಮಹಿಳೆ ಯಾರಿಂದ ನಕಲಿ ಅಂಕಪಟ್ಟಿಪಡೆದು, ಬೇರೆಯವರು ಇದೇ ರೀತಿ ಅಂಕಪಟ್ಟಿನೀಡಿ ಕೆಲಸ ಪಡೆದಿದ್ದಾರೆಯೇ ಎಂಬುದು ತನಿಖೆ ನಂತರ ಬೆಳಕಿಗೆ ಬರಲಿದೆ ಎಂದು ತನಿಖಾಧಿಕಾರಿಗಳು ತಿಳಿಸಿದರು.

ಮಹಿಳೆಯೊಬ್ಬರು ನಕಲಿ ಅಂಕಪಟ್ಟಿಸರ್ಕಾರಿ ಹುದ್ದೆಪಡೆದು 24 ವರ್ಷ ಸೇವೆ ಸಲ್ಲಿಸಿದ್ದಾರೆ ಎಂದು ಕಂದಾಯ ಇಲಾಖೆ ಆಯುಕ್ತರಾದ ಮನೀಷ್‌ ಮೌದ್ಗಿಲ್‌ ಅವರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಅಧಿಕಾರಿ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ.

-ದೇವರಾಜ್‌, ಕೇಂದ್ರ ವಿಭಾಗದ ಡಿಸಿಪಿ.

click me!