ಜಿಲ್ಲೆಯಲ್ಲಿ ಮತ್ತೊಮ್ಮೆ ಕೊರೋನಾ ಸ್ಫೋಟಗೊಂಡಿದೆ. ಭಾನುವಾರ ಒಂದೇ ದಿನ 23 ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಬರೋಬರಿ 76ಕ್ಕೇರಿದೆ.
ಉಡುಪಿ(ಮೇ 25): ಜಿಲ್ಲೆಯಲ್ಲಿ ಮತ್ತೊಮ್ಮೆ ಕೊರೋನಾ ಸ್ಫೋಟಗೊಂಡಿದೆ. ಭಾನುವಾರ ಒಂದೇ ದಿನ 23 ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಬರೋಬರಿ 76ಕ್ಕೇರಿದೆ.
ಜಿಲ್ಲೆಯಲ್ಲಿ ಇದುವರೆಗೆ ಕೇವಲ ಹೊರಗಿನಿಂದ ಬಂದು ಕ್ವಾರಂಟೈನ್‌ನಲ್ಲಿದ್ದವರಿಗೆ ಮಾತ್ರ ಕೊರೋನಾ ಸೋಂಕು ಪತ್ತೆಯಾಗಿತ್ತು. ಇದರಿಂದ ಜಿಲ್ಲೆಯಲ್ಲಿದ್ದವರಿಗೆ ಕೊರೋನಾ ಹರಡಿಲ್ಲ ಎಂಬ ಸಮಾಧಾನ ಇತ್ತು. ಆದರೆ, ಇದೀಗ ಜಿಲ್ಲೆಯಲ್ಲಿಯೂ ಕೊರೋನಾ ಸೋಂಕು ಪತ್ತೆಯಾಗಿದ್ದು, ಸಮುದಾಯಕ್ಕೆ ಹರಡಿರುವ ಭೀತಿ ಎದುರಾಗಿದೆ.
ದಕ್ಷಿಣ ಕನ್ನಡ ಸಂಪೂರ್ಣ ಲಾಕ್‌ಡೌನ್: ಇಲ್ಲಿವೆ ಫೋಟೋಸ್
ಈ 23 ಮಂದಿಯಲ್ಲಿ 16 ಮಂದಿ ಮುಂಬೈಯಿಂದ, ಇಬ್ಬರು ತೆಲಂಗಾಣದಿಂದ ಬಂದವರು ಮತ್ತು 3 ಮಂದಿ ಜಿಲ್ಲೆಯ ಪೊಲೀಸ್ ಸಿಬ್ಬಂದಿಯಾಗಿದ್ದಾರೆ. ಒಬ್ಬರು ದುಬೈಯಿಂದ ಹಿಂದಕ್ಕೆ ಬಂದ ಮಹಿಳೆಯಾಗಿದ್ದಾರೆ. ಇನ್ನೊಬ್ಬರು ಕಾರ್ಕಳದ ಗರ್ಭಿಣಿ ಮಹಿಳೆ, ಅವರಿಗೆ ಕೊರೋನಾ ಹೇಗೆ ಬಂತು ಎಂಬುದು ಪತ್ತೆಯಾಗಿಲ್ಲ. ಈ ಸೋಂಕಿತರಲ್ಲಿ ಒಟ್ಟು 15 ಮಂದಿ ಪುರುಷರು, 8 ಮಂದಿ ಮಹಿಳೆಯರಿದ್ದಾರೆ. ಅವರಲ್ಲಿಯೂ 1 ವರ್ಷ, 2 ವರ್ಷ ಮತ್ತು 4 ವರ್ಷದ ಮೂವರು ಮಕ್ಕಳಿದ್ದಾರೆ.
ಪೊಲೀಸರಿಗೂ ಕೊರೋನಾ:
ಸೋಂಕಿತ 3 ಪೊಲೀಸರು ಬ್ರಹ್ಮಾವರ, ಅಜೆಕಾರು ಮತ್ತು ಕಾರ್ಕಳ ಗ್ರಾಮಾಂತರ ಠಾಣೆಯ ಸಿಬ್ಬಂದಿಯಾಗಿದ್ದಾರೆ. ಅವರಿಗೆ ಕೆಲವು ದಿನಗಳ ಹಿಂದೆ ಹೊರ ಜಿಲ್ಲೆ - ರಾಜ್ಯಗಳಿಂದ ಉಡುಪಿ ಜಿಲ್ಲೆಗೆ ಬರುವವರನ್ನು ತಪಾಸಣೆ ಮಾಡುವ ಚೆಕ್ ಪೋಸ್ವ್‌ಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಅಲ್ಲಿ ಅವರಿಗೆ ಕೊರೋನಾ ತಗಲಿದೆ ಎಂದು ಅಂದಾಜಿಸಲಾಗಿದೆ.
ಆದರೆ, ಅವರು ನಂತರ ತಂತಮ್ಮ ಠಾಣೆಯಲ್ಲಿ ಮತ್ತು ಇತರ ಕಡೆಗಳಲ್ಲಿ ಕರ್ತವ್ಯ ಸಲ್ಲಿಸಿದ್ದರು. ಇದರಿಂದ ಅವರ ಮನೆಯವರಿಗೆ ಮತ್ತು ಅವರಿಗೆ ನೇಕ ಸಂಪರ್ಕಕ್ಕೆ ಬಂದ ನೂರಾರು ಮಂದಿಗೆ ಕೊರೋನಾ ಹರಡುವ ಸಾಧ್ಯತೆ ಇದೆ. ಇದು ಆತಂಕಕ್ಕೆ ಕಾರಣವಾಗಿದೆ.
2 ದಿನಗಳ ಕಾಲ ಸ್ಟೇಷನ್ ಬಂದ್
ಕೊರೋನಾ ಸೋಂಕಿತರಾದ ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿರುವ ಬ್ರಹ್ಮಾವರ, ಅಜೆಕಾರು ಮತ್ತು ಕಾರ್ಕಳದ ನಗರ - ಗ್ರಾಮಂತರ ಠಾಣೆಯ ಎಲ್ಲಾ ಪೊಲೀಸ್ ಅಧಿಕಾರಿ - ಸಿಬ್ಬಂದಿಯನ್ನು ಕ್ವಾರಂಟೈನ್‌ಗೊಳಪಡಿಸಲಾಗಿದೆ. ಈ ನಾಲ್ಕೂ ಠಾಣೆಗಳಲ್ಲಿ ಸಂಪೂರ್ಣ ಸ್ಯಾನಿಟೈಸರ್ ಸಿಂಪಡಣೆ ಮಾಡಲು ನಿರ್ಧರಿಸಲಾಗಿದ್ದು, ಎರಡು ದಿನ ಠಾಣೆಗಳನ್ನು ಮುಚ್ಚಲಾಗುವುದು. ಈ ಸೋಂಕಿತ ಸಿಬ್ಬಂದಿಯ ನೇರ ಸಂಪರ್ಕಿತರ ಪಟ್ಟಿತಯಾರಿಸುತ್ತಿದ್ದು, ಅವರೆಲ್ಲರನ್ನೂ ಕೋವಿಡ್ ಪರೀಕ್ಷೆಗೊಳಪಡಿಸಲಾಗುತ್ತದೆ ಎಂದು ಉಡುಪಿ ಎಸ್ಪಿ ವಿಷ್ಣುವರ್ಧನ್ ತಿಳಿಸಿದ್ದಾರೆ.
ಗರ್ಭಿಣಿಗೆ ಹೇಗೆ ಬಂತು ಗೊತ್ತಿಲ್ಲ
ಕಾರ್ಕಳ ತಾಲೂಕಿನ 22 ವರ್ಷ ವಯಸ್ಸಿನ 9 ತಿಂಗಳ ತುಂಬು ಗರ್ಭಿಣಿಗೆ ಸೋಂಕು ಪತ್ತೆಯಾಗಿರುವ ಸಾರ್ವಜನಿಕರಲ್ಲಿ ತಲ್ಲಣಕ್ಕೆ ಕಾರಣವಾಗಿದೆ. ಮನೆಯಲ್ಲಿಯೇ ಇದ್ದ ಈಕೆಗೆ ಈ ಸೋಂಕು ಹೇಗೆ ತಗಲಿತು, ಯಾರಿಂದ ತಗಲಿತು ಎಂಬುದೇ ಪತ್ತೆಯಾಗಿಲ್ಲ. ಇನ್ನು 10 - 12 ದಿನಗಳಲ್ಲಿ ಆಕೆಗೆ ಹೆರಿಗೆಯಾಗುವ ಸಾಧ್ಯತೆ ಇದೆ. ಆಕೆಯನ್ನು ಉಡುಪಿಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗರ್ಭಿಣಿಯಾಗಿರುವುದರಿಂದ ಹೆಚ್ಚಿನ ನಿಗಾದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಆಕೆಯ ಮನೆಯವರನ್ನು ಮತ್ತು ಸಂಪರ್ಕದಲ್ಲಿದ್ದವರನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.
ಕೊರೋನಾ ಆತಂಕದಲ್ಲಿ ಪೊಲೀಸರು
ಜಿಲ್ಲೆಯಲ್ಲಿ ಹೊರ ಜಿಲ್ಲೆ - ರಾಜ್ಯಗಳಿಂದ ಬರುವವರನ್ನು ತಡೆದು ತಪಾಸಣೆ ಮಾಡುವುದಕ್ಕಾಗಿ ಸುಮಾರು 11 ಕಡೆಗಳಲ್ಲಿ ಚೆಕ್ ಪೋಸ್ವ್‌ಗಳನ್ನು ಮಾಡಿ, ಅಲ್ಲಿ 200 ಮಂದಿ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಅವರನ್ನು ಕೋವೀಡ್ ಪರೀಕ್ಷೆಗೊಳಪಡಿಸಿದಾಗ 3 ಮಂದಿಗೆ ಕೊರೋನಾ ಪತ್ತೆಯಾಗಿದೆ. ಅವರಿಂದ ಸಮುದಾಯಕ್ಕೆ ಸೋಂಕು ಹರಡುವ ಭೀತಿ ಈಗ ಎದುರಾಗಿದೆ. ಅವರು ಪೊಲೀಸ್ ವಸತಿಗೃಹಗಳಲ್ಲಿ ವಾಸಿಸುತ್ತಿದ್ದ, ಅವರ ಮನೆಯವರಿಗೆ, ಠಾಣೆಗಳಲ್ಲಿರುವ ಸಹೋದ್ಯೋಗಿಗಳಿಗೆ ಮತ್ತು ಹೊರಗೆ ಬಂದೋಬಸ್ತ್ ಸಂದರ್ಭದಲ್ಲಿ ಅವರೊಂದಿಗೆ ನೇರ ಸಂಪರ್ಕಕ್ಕೆ ಬಂದ ಸಾರ್ವಜನಿಕರಿಗೂ ಸೋಂಕು ಹರಡುವ ಸಾಧ್ಯತೆ ಇದೆ.
ಅಕ್ರಮ ಮರಳು ಸಾಗಣೆ: ಇಂಜಿನ್ ಟ್ರೇಲರ್ ಮಧ್ಯೆ ಸಿಲುಕಿ ಚಾಲಕನ ದುರ್ಮರಣ
ಆದ್ದರಿಂದ ಈ ಸೋಂಕಿತ ಪೊಲೀಸರ ವಸತಿಗೃಹಗಳಲ್ಲಿ ವಾಸಿಸುತ್ತಿರುವವರನ್ನು ಕ್ವಾರಂಟೈನ್ ಗೊಳಪಡಿಸಲಾಗಿದೆ ಮತ್ತು ಈ ವಸತಿಗೃಹಗಳನ್ನು ಮತ್ತು ಆ ಪ್ರದೇಶವನ್ನು ನಿರ್ಬಂಧಿತ ಪ್ರದೇಶ ಎಂದು ಘೋಷಿಸಲಾಗಿದೆ.