ದತ್ತಪೀಠದ ಮಾರ್ಗದಲ್ಲಿ 21 ಅಡಿ ಆಂಜನೇಯನ ಮೂರ್ತಿ/ ಕವಿಕಲ್ ಗಂಡಿ ಎಂಬ ಸ್ಥಳದಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಬಿಜೆಪಿ ಸಿದ್ಧತೆ /21 ಅಡಿಯ ಏಕಶಿಲಾ ಮೂರ್ತಿ ನಿರ್ಮಾಣ
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು, (ಆಗಸ್ಟ್.25) :ಕರ್ನಾಟಕದ ಅತ್ಯಂತ ಎತ್ತರದ ಪ್ರದೇಶ ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ 21 ಅಡಿಯ ಬೃಹತ್ ಪರ್ವತಾಂಜನೇಯ ಮೂರ್ತಿ ನಿರ್ಮಾಣಗೊಳ್ಳಲಿದೆ. ಪಶ್ಚಿಮಘಟ್ಟಗಳ ಸಾಲಿನ ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿರುವ ತಾಲೂಕಿನ ದತ್ತಪೀಠ ಮಾರ್ಗದ ಕವಿಕಲ್ಗಂಡಿ ಎಂಬ ಸ್ಥಳದಲ್ಲಿರುವ ಆಂಜನೇಯನ ಗುಡಿ ಬಳಿಯೇ ಈ 21 ಅಡಿ ಎತ್ತರದ ಆಂಜನೇಯ ನೆಲೆ ನಿಲ್ಲಲಿದ್ದಾನೆ.
ದತ್ತಪೀಠದ ಮಾರ್ಗದಲ್ಲಿ 21 ಅಡಿ ಆಂಜನೇಯನ ಮೂರ್ತಿ
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗರ ಗಮನ ಸೆಳೆದಿರುವ ಮುಳ್ಳಯ್ಯನಗಿರಿ ಪರ್ವತ ಶ್ರೇಣಿಯ ಬೆಟ್ಟದ ಸಾಲಿನಲ್ಲಿ 21 ಅಡಿ ಎತ್ತರದ ಆಂಜನೇಯ ಮೂರ್ತಿಯನ್ನು ಪ್ರತಿಷ್ಠಾಪಿಸಲು ಸರ್ವ ಸಿದ್ದತೆಯಾಗಿದ್ದು, ಈಗಾಗಲೇ 150 ಟನ್ ತೂಕದ ಏಕಶಿಲಾ ಬಂಡೆ ಚಿಕ್ಕಮಗಳೂರು ನಗರಕ್ಕಾಗಮಿಸಿದೆ.
undefined
ವಿಶ್ವದ ಎತ್ತರದ ಪಂಚಮುಖಿ ಆಂಜನೇಯ ಮೂರ್ತಿ ಲೋಕಾರ್ಪಣೆ
ಪ್ರವಾಸಿಗರನ್ನು ಸೆಳೆಯಲು ಪ್ರವಾಸೋಧ್ಯಮ ಕ್ಷೇತ್ರ ಅಭಿವೃದ್ದಿ ಪಡಿಸುವ ದೃಷ್ಟಿಯಿಂದ ಶಾಸಕ ಸಿ.ಟಿ.ರವಿ ಸಚಿವರಾಗಿದ್ದ ಸಂದರ್ಭ ಪ್ರವಾಸೋಧ್ಯಮ ಇಲಾಖೆಯಲ್ಲಿ 50 ಲಕ್ಷ ಮೀಸಲಿಟ್ಟಿದ್ದ ಅನುದಾನದಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಸಕಲ ತಯಾರಿ ನಡೆದಿದೆ.ದತ್ತಪೀಠ ಪೀಠಕ್ಕೆ ಸಾಗುವ ಕವಿಕಲ್ಗಂಡಿ ವ್ಯೂ ಪಾಯಿಂಟ್ನಲ್ಲಿ 21 ಅಡಿ ಎತ್ತರದ ರಾಮಧೂತನ ವಿಗ್ರಹ ಪ್ರತಿಷ್ಠಾಪನೆಯಾಗಿಲಿದ್ದು, ಅಚ್ಚ ಹಸಿರಿನ ಬೆಟ್ಟಗುಡ್ಡಗಳ ನಡುವೆ ಪ್ರಕೃತಿಯನ್ನು ಕಣ್ತುಂಬಿಕೊಂಡು ಆಸ್ವಾದಿಸಲು ಗಿರಿಶ್ರೇಣಿಗೆ ಆಗಮಿಸುವ ಪ್ರವಾಸಿಗರಿಗೆ ಸಧ್ಯದಲ್ಲೆ ಬಜರಂಗಿ ಮೂರ್ತಿ ಆಕರ್ಷಣೆಯ ಕೇಂದ್ರ ವಾಗಲಿದೆ.
ದತ್ತಜಯಂತಿ ವೇಳೆಗೆ ಪ್ರತಿಷ್ಠಾಪನೆ ಸಾಧ್ಯತೆ
ರಾಜ್ಯದ ಅತ್ಯಂತ ಎತ್ತರದ ಬೆಟ್ಟಗುಡ್ಡಗಳ ಸಾಲಿನಲ್ಲಿ 21 ಅಡಿ ಎತ್ತರದ ಏಕಶಿಲಾ ಮೂರ್ತಿ ಪ್ರತಿಷ್ಠಾಪನೆಗೆ ಸಜ್ಜಾಗುತ್ತಿರುವುದು ಪ್ರವಾಸಿತಾಣಗಳಲ್ಲಿ ಇದೇ ಮೊದಲ ಮೂರ್ತಿ ಎನ್ನಲಾಗುತ್ತಿದ್ದು ಅಂಜನಿಪುತ್ರನ ವಿಗ್ರಹ ಕೆತ್ತನೆಗೆ ಕಲ್ಲು ನಗರಕ್ಕಾಗಮಿಸಿದೆ.ಈ ವಿಗ್ರಹ ಪ್ರತಿಷ್ಠಾಪನೆಗೆ ಕಳೆದ ಎರಡು ವರ್ಷದಿಂದಲೆ ಪೂರ್ವ ತಯಾರಿ ನಡೆದಿದ್ದು ಸಿ.ಟಿ.ರವಿ ಪ್ರವಾಸೋಧ್ಯಮ ಸಚಿವರಾಗಿದ್ದ ಸಂದರ್ಭ ಅಧಿಕಾರಿಗಳೊಂದಿಗೆ ಕವಿಕಲ್ ಗಂಡಿ ಸ್ಥಳ ಪರಿಶೀಲಿಸಿ ಆಂಜನೇಯ ಮೂರ್ತಿಯನ್ನು ಪ್ರತಿಷ್ಠಾಪಿಸಲು ಕನಸು ಹೊತ್ತು ಹೊಸದುರ್ಗ ಶ್ರೀರಾಮ್ಪುರ ಬಳಿ ಕಳೆದ ಒಂದು ವರ್ಷದಿಂದ ಬಂಡೆಯನ್ನು ತೆರವುಗೊಳಿಸಿ ತರಲಾಗಿದೆ.
ಸಿಡಿಎ ಅಧ್ಯಕ್ಷ ಸಿ.ಆನಂದ್, ನಗರಸಭೆ ಅಧ್ಯಕ್ಷ ವರಸಿದ್ದಿವೇಣುಗೋಪಾಲ್, ಲೋಕೋಪಯೋಗಿ ಇಲಾಖೆ, ಅರಣ್ಯ ಇಲಾಖೆ ಅಽಕಾರಿಗಳು ಸೇರಿದಂತೆ ಟ್ರಕ್ ಚಾಲಕನೊಂದಿಗೆ ಇಂದು ಗಿರಿಶ್ರೇಣಿ ರಸ್ತೆ ಪರಿಶೀಲಿಸಿದ್ದು ಕವಿಕಲ್ ಗಂಡಿ ಸ್ಥಳಕ್ಕೆ ವಾಹನ ತೆರಳಲು ಎರಡು ಇಂಜಿನ್ ಬೇಕಾಗುತ್ತದೆ ಎಂಬ ಸಲಹೆ ನೀಡಿದ್ದಾರೆ. ಸುಭದ್ರವಾದ ಕಾಂಕ್ರೀಟ್ ಬೆಡ್ಡಿಂಗ್ ಹಾಕಿ ಮೂರ್ತಿಯನ್ನು ನಿಲ್ಲಿಸಲು ಯೋಜನೆ ರೂಪಿಸಲಾಗಿದೆ.
ಈ ಮೂರ್ತಿ ಕವಿಕಲ್ಗಂಡಿ ಬಳಿ ನೆಲೆ ನಿಂತರೇ ಸುತ್ತಮುತ್ತಲಿನ ಸುಮಾರು 25-30 ಕಿ.ಮೀ. ದೂರಕ್ಕೂ ಈ ಮೂರ್ತಿ ಕಾಣುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈಗಾಗಲೇ ಸಾವಿರಾರು ಭಕ್ತರು ದತ್ತಪೀಠಕ್ಕೆ ಬಂದು ಪ್ರಕೃತಿ ಮಧ್ಯೆ ನೆಲೆಸಿರುವ ದತ್ತಾತ್ತೇಯರ ದರ್ಶನ ಮಾಡುತ್ತಿದ್ದಾರೆ. ಈ ಮೂರ್ತಿ ನೆಲೆ ನಿಂತರೇ ಕಾಫಿನಾಡು ದೇಶದ ಅತ್ಯಂತ ಹೆಸರಾಂತ ಪ್ರವಾಸಿ ತಾಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ದೇಶಾದ್ಯಂತ ಇರೋ ಲಕ್ಷಾಂತರ ಆಂಜನೇಯ ಭಕ್ತರು ಕಾಫಿನಾಡ ಪ್ರಕೃತಿ ಸೌಂದರ್ಯದ ಆಂಜನೇಯ ದರ್ಶನವನ್ನೂ ಪಡೆಯಲಿದ್ದಾರೆ.
ಆಂಜನೇಯ ಸಂಜೀವಿನಿಗಾಗಿ ಪರ್ವತವನ್ನ ಹೊತ್ತೊಯ್ಯುವಾಗ ತುಂಡಾಗಿ ಬಿದ್ದ ಭಾಗವೇ ಚಂದ್ರದ್ರೋಣ ಪರ್ವತಗಳ ಸಾಲು ಎಂಬ ನಂಬಿಕೆ ಭಕ್ತರಲ್ಲಿದೆ. ಇದೇ ಡಿಸೆಂಬರ್ ಎರಡನೇ ವಾರದಲ್ಲಿ ತಾಲೂಕಿನ ದತ್ತಪೀಠದಲ್ಲಿ ಮೂರು ದಿನಗಳ ಕಾಲ ದತ್ತಜಯಂತಿ ಕಾರ್ಯಕ್ರಮ ನಡೆಯಲಿದೆ. ಈ ವೇಳೆಗೆ 21 ಅಡಿಯ ಬೃಹತ್ ಪರ್ವತಾಂಜನೇಯನ ಮೂರ್ತಿ ಕರ್ನಾಟಕದ ಅತ್ಯಂತ ಎತ್ತರದ ಪ್ರದೇಶ, ಮುಗಿಲೆತ್ತರದ ಬೆಟ್ಟಗುಡ್ಡಗಳ ನಡುವಿನ ಸುಂದರ ಪ್ರಕೃತಿಯ ಮಡಿಲಲ್ಲಿ ನೆಲೆ ನಿಲ್ಲುವ ಸಾಧ್ಯತೆ ಇದೆ.
ಗಿರಿಶ್ರೇಣಿಗೆ ಹೊಸ ಮೆರಗು
ಐಟಿ, ಬಿಟಿ ಉದ್ಯೋಗಿಗಳು ಸೇರಿದಂತೆ ಕೆಲಸದ ಒತ್ತಡದಿಂದ ಹೊರಬರಲು ಜಿಲ್ಲೆ, ರಾಜ್ಯ, ದೇಶ ವಿದೇಶಗಳಿಂದ ನಿತ್ಯ ಗಿರಿಶ್ರೇಣಿಗೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಪ್ರವಾಸಿಗರಿಂದ ವಿಕೇಂಡ್ ಬಂತೆಂದರೆ ಗಿರಿಶ್ರೇಣಿಗೆ ಎಲ್ಲಿಲ್ಲದ ಬೇಡಿಕೆ. ಬೆಟ್ಟಗುಡ್ಡ, ಮಂಜು ಮುಸುಕಿನ ವಾತಾವರಣಗಳನ್ನು ಕಣ್ತುಂಬಿಕೊಂಡು ಕುಟುಂಬದೊಂದಿಗೆ ಸಂಭ್ರಮಿಸುವವರಿಗೆ ರಾಮಧೂತನ ವಿಗ್ರಹ ಆಕರ್ಷಣೆಯಾಗುವುದಂತೂ ಸುಳ್ಳಲ್ಲ.
ಭಕ್ತರಿಂದ ವಿಶೇಷ ಪೂಜೆ
ನಗರದ ಪವಿತ್ರವನ ಕಣಿವೆ ರುದ್ರೇಶ್ವರ ದೇವಾಲಯದ ಬಳಿ ಟ್ರಕ್ನಲ್ಲಿದ್ದ ಏಕಶಿಲೆಗೆ ಇಂದು ಭಕ್ತರು ವಿಶೇಷ ಪೂಜೆ ಸಲ್ಲಿಸಿದ್ದು ಮತ್ತೊಂದು ಇಂಜಿನ್ ಬಂದ ನಂತರ ಗಿರಿಶ್ರೇಣಿಗೆ ಸಾಗಿ ಕೆತ್ತನೆ ಕೆಲಸ ಆರಂಭವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.