ಆನೆ ಮೈತೊಳೆಯುವ ಸಮಯದಲ್ಲಿ ಗಾಬರಿಗೊಂಡ ಆನೆ ಕೆರೆಯ ಒಳಭಾಗಕ್ಕೆ ಇಳಿದಿದೆ. ಈಜು ಬಾರದೆ ಆಳದ ನೀರಿನಲ್ಲಿ ಗೋಪಾಲ್ ಮುಳುಗುತ್ತಿರುವುದನ್ನು ಗಮನಿಸಿದ ಅಣ್ಣ ಕೃಷ್ಣಕುಮಾರ್, ಮಾವುತ ಸಂಜೇಶ್ ರಕ್ಷಿಸಲು ಹರಸಾಹಸ ಪಟ್ಟರೂ ಕ್ಷಣಮಾತ್ರದಲ್ಲಿ ಗೋಪಾಲ್ ನೀರು ಪಾಲಾಗಿದ್ದಾನೆ.
ಬೆಂಗಳೂರು ದಕ್ಷಿಣ(ಅ.24): ಆನೆ ಮೇಲೆ ಕುಳಿತು ಮೈತೊಳೆಯುವ ಸಂದರ್ಭದಲ್ಲಿ ಏಕಾಏಕಿ ಆನೆ ಆಳದ ನೀರಿನೊಳಗೆ ಇಳಿದ ಕಾರಣ ಮೇಲೆ ಕುಳಿತಿದ್ದ ಯುವಕ ಈಜು ಬಾರದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಬನ್ನೇರುಘಟ್ಟ ಜೈವಿಕ ಉದ್ಯಾನದ ಸಫಾರಿ ಮಾರ್ಗದ ಸೀಗೆಕಟ್ಟೆ ಕೆರೆಯಲ್ಲಿ ನಡೆದಿದೆ.
ಜೇನುಕುರುಬ ಸಮುದಾಯಕ್ಕೆ ಸೇರಿದ ಮೈಸೂರು ಜಿಲ್ಲೆಯ ಹುಣ ಸೂರು ಮೂಲದ ಗೋಪಾಲ್ (20) ನೀರಿನಲ್ಲಿ ಮುಳುಗಿ ಮೃತಪಟ್ಟ ಕಾವಾಡಿಗ. 10 ವರ್ಷದ ಸಂಪತ್ ಹೆಸರಿನ ಆನೆಯನ್ನು 2 ವರ್ಷದಿಂದ ಗೋಪಾಲ್ ನೋಡಿಕೊಳ್ಳುತ್ತಿದ್ದ.
ಬೆಂಗಳೂರು: ಬನ್ನೇರುಘಟ್ಟ ಬಳಿ ಕಾಡಾನೆ ದಾಳಿಗೆ ಅರಣ್ಯ ರಕ್ಷಕ ಬಲಿ..!
ಬುಧವಾರ ಬೆಳಗ್ಗೆ 10.30ರ ಸುಮಾರಿಗೆ ಆನೆ ಮೈತೊಳೆಯುವ ಸಮಯದಲ್ಲಿ ಗಾಬರಿಗೊಂಡ ಆನೆ ಕೆರೆಯ ಒಳಭಾಗಕ್ಕೆ ಇಳಿದಿದೆ. ಈಜು ಬಾರದೆ ಆಳದ ನೀರಿನಲ್ಲಿ ಗೋಪಾಲ್ ಮುಳುಗುತ್ತಿರುವುದನ್ನು ಗಮನಿಸಿದ ಅಣ್ಣ ಕೃಷ್ಣಕುಮಾರ್, ಮಾವುತ ಸಂಜೇಶ್ ರಕ್ಷಿಸಲು ಹರಸಾಹಸ ಪಟ್ಟರೂ ಕ್ಷಣಮಾತ್ರದಲ್ಲಿ ಗೋಪಾಲ್ ನೀರು ಪಾಲಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯಪಾಲಕ ನಿರ್ದೇಶಕ ವಿಶಾಲ್ ಸೂರ್ಯಸೇನ್ ಬನ್ನೇರುಘಟ್ಟ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಮುಳುಗು ತಜ್ಞರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಬೋಟ್ ಮೂಲಕ 3 ಘಂಟೆ ಕಾರ್ಯಾಚರಣೆ ನಡೆಸಿ ಯುವಕನ ಮೃತದೇಹವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ರವಾನಿಸಿದರು. ಆಸ್ಪತ್ರೆಗೆ ಕೆರೆಯಲ್ಲಿ 2 ಮೊಸಳೆಗಳಿದ್ದರೂ ಮೃತ ದೇಹಕ್ಕೆ ಹಾನಿ ಮಾಡಿಲ್ಲ. ಬನ್ನೇರಘಟ್ಟ ಜೈವಿಕ ಉದ್ಯಾನದ ಕಾರ್ಯಪಾಲಕ ನಿರ್ದೇಶಕ ವಿಶಾಲ್ ಸೂರ್ಯ ಸೇನ್ ಮಾತನಾಡಿ, ಕೆಲಸದ ಸಂದರ್ಭದಲ್ಲಿನಡೆದ ಆಕಸ್ಮಿಕ ಅವಘಡ ಎಂದು ಪರಿಗಣಿಸಿ ಮೃತನ ಕುಟುಂಬಕ್ಕೆ 25 ಲಕ್ಷ ಪರಿಹಾರ ಒದಗಿಸಲು ಶ್ರಮವಹಿಸಲಾಗುವುದು ಎಂದರು. ಇನ್ಮುಂದೆ ಇಂತಹ ಘಟನೆಗಳು ನಡೆಯದಂತೆ ತೊಟ್ಟಿಗಳನ್ನು ನಿರ್ಮಾಣ ಮಾಡಿ ಅಲ್ಲಿಯೇ ಆನೆಗಳ ಮೈ ತೊಳೆಯಲು ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ.