ಕೇಂದ್ರ ಸರ್ಕಾರದ ಅನುದಾನ ದುರ್ಬಳಕೆ: 9 ಐಎಎಸ್‌ ಅಧಿಕಾರಿಗಳ ವಿರುದ್ಧ ಇ.ಡಿ.ಗೆ ಬಿಜೆಪಿ ದೂರು

By Kannadaprabha News  |  First Published Oct 24, 2024, 7:21 AM IST

ತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದ ₹2067 ಕೋಟಿ ಅನುದಾನ ದುರ್ಬಳಕೆ ಆರೋಪ ತುಷಾ‌ರ್ ಗಿರಿನಾಥ್ ಸೇರಿದಂತೆ 9 ಹಾಲಿ, ಮಾಜಿ ಅಧಿಕಾರಿಗಳ ವಿರುದ್ಧ 1295 ಪುಟಗಳ ದೂರು ಸಲ್ಲಿಸಿದ ಬಿಜೆಪಿ ಮುಖಂಡ ಎನ್.ಆರ್. ರಮೇಶ್‌
 


ಬೆಂಗಳೂರು(ಅ.24):  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತ್ಯಾಜ್ಯ ವಿಲೇವಾರಿ ಸಮಸ್ಯೆಗಳ ಪರಿಹಾರ ಸಂಬಂಧ ಕೇಂದ್ರ ಸರ್ಕಾರ 14 ಮತ್ತು 15ನೇ ಹಣಕಾಸು ಆಯೋಗದಿಂದ ಬಿಡುಗಡೆ ಮಾಡಿರುವ 2,067 ಕೋಟಿ ಅನುದಾನ ಬಳಕೆಯಲ್ಲಿ ಬೃಹತ್ ಹಗರಣ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಎನ್. ಆರ್.ರಮೇಶ್ ಅವರು ಮಾಜಿ ಮತ್ತು ಹಾಲಿ 9 ಮಂದಿ ಐಎಎಸ್ ಅಧಿಕಾರಿಗಳ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ.) ದೂರು ನೀಡಿದ್ದಾರೆ. 

ಈ ಹಿಂದೆ ಬಿಬಿಎಂಪಿಯ ಹಾಲಿ ಆಯುಕ್ತ ತುಷಾ‌ರ್ ಗಿರಿನಾಥ್ ಸೇರಿದಂತೆ ಹಿಂದಿನ ಆಯುಕ್ತ/ ಮುಖ್ಯ ಆಯುಕ್ತರಾಗಿದ್ದ ಮಾಜಿ ಐಎಎಸ್ ಅಧಿಕಾರಿಗಳಾದ ಲಕ್ಷ್ಮಿ ನಾರಾಯಣ, ಜಿ.ಕುಮಾರ ನಾಯಕ್, ಬಿ.ಎಚ್.ಅನಿಲ್ ಕುಮಾರ್, ಮಾಜಿ ಆಡಳಿತಾಧಿಕಾರಿ ವಿಜಯ ಭಾಸ್ಕರ್, ರಾಕೇಶ್ ಸಿಂಗ್, ಗೌರವ್ ಗುಪ್ತಾ, ಮಂಜುನಾಥ ಪ್ರಸಾದ್ ಹಾಗೂ ಉಮಾಶಂಕರ್ ಸೇರಿ 2013-14ರಿಂದ 2024-25ರ ಅವಧಿಯಲ್ಲಿ ಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ವಿಭಾಗದಲ್ಲಿ ಕಾರ್ಯ ನಿರ್ವಹಿಸಿರುವ ಎಲ್ಲಾ ಅಧಿಕಾರಿಗಳು ಈ 2,067 ಕೋಟಿ ಅನುದಾನದ ಪೈಕಿ ಶೇ.90ರಷ್ಟು ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಿರುವ ಎನ್.ಆರ್.ರಮೇಶ್, ಈ ಹಗರಣ ಸಂಬಂಧ 1,295 ಪುಟಗಳ ದಾಖಲೆಗಳ ಸಹಿತ ಇ.ಡಿ.ಗೆ ದೂರು ನೀಡಿದ್ದಾರೆ. 

Latest Videos

undefined

ಮುಡಾ ಕಚೇರಿಯ ಮೇಲೆ ಇಡಿ ದಾಳಿ ನಿರೀಕ್ಷಿತ: ಇಂತಹ ಬೆದರಿಕೆಯ ತಂತ್ರಕ್ಕೆ ಹೆದರುವುದಿಲ್ಲ ಎಂದ ಮಧು ಬಂಗಾರಪ್ಪ

ದಾಖಲೆಗಳಷ್ಟೇ ವೆಚ್ಚ: 

ಈ 2,067 ಕೋಟಿ ರು. ಅನುದಾನವನ್ನು ಮೆಕ್ಯಾನಿಕಲ್ ಸ್ವೀಪಿಂಗ್ ಮಷಿನ್ಸ್ ಮತ್ತು ಕಾಂಪ್ಯಾಕ್ಟರ್‌ಗಳ ಖರೀದಿ, ವೈಜ್ಞಾನಿಕ ಸಂಸ್ಕರಣಾ ಘಟಕಗಳ ನಿರ್ಮಾಣ, ಕೆಸಿಡಿಸಿ ಘಟಕದ ಉನ್ನತೀಕರಣ, ಭೂಭರ್ತಿ ಕೇಂದ್ರಗಳ ಅಭಿವೃದ್ಧಿ, ಸಂಸ್ಕರಣಾ ಘಟಕಗಳು ಮತ್ತು ಭೂಭರ್ತಿ ಕೇಂದ್ರಗಳ ಸುತ್ತಮುತ್ತಲಿನ ಗ್ರಾಮಗಳ/ ಪ್ರದೇಶಗಳ ಅಭಿವೃದ್ಧಿ, ಸುಧಾರಿತ ಉಪಕರಣಗಳ ಖರೀದಿ ಸೇರಿ ಹಲವು ಹೆಸರುಗಳಲ್ಲಿ ವೆಚ್ಚ ಮಾಡಲಾಗಿದೆ ಎಂದು ದಾಖಲೆಗಳಲ್ಲಿ ತೋರಿಸಲಾಗಿದೆ.

ದುಬಾರಿ ಮೊತ್ತ ನೀಡಿ ಲೂಟಿ: 

ಈ ಅನುದಾನದ ಮೂಲಕ 2016-17ನೇ ಸಾಲಿನಲ್ಲಿ ಬಿಬಿಎಂಪಿ 60ಕ್ಕೂ ಹೆಚ್ಚು ಮೆಕ್ಯಾನಿಕಲ್ ಸ್ವೀಪರ್ ಮಷಿನ್‌ಗಳು ಹಾಗೂ ಕಾಂಪ್ಯಾಕ್ಟರ್‌ಗಳನ್ನು ಖರೀದಿಸಿದ್ದು, ಈ ಪೈಕಿ ಈಗ ಕೇವಲ ಮೂರ್ನಾಲ್ಕು ವಾಹನಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ತಲಾ 47 ಲಕ್ಷ ರು. ಮೌಲ್ಯದ ಮೆಕ್ಯಾನಿಕಲ್ ಸ್ವೀಪರ್ ಮಷಿನ್ ಗಳಿಗೆ ತಲಾ 1.3 ಕೋಟಿ ರು. ನಮೂದಿಸಿ ಹತ್ತಾರು ಕೋಟಿ ರು. ಲೂಟಿ ಹೊಡೆದಿದ್ದಾರೆ. 

ಮೂರು ತ್ಯಾಜ್ಯ ಸಂಸ್ಕರಣಾ ಘಟಕಗಳು ಸ್ಥಗಿತ:

ಸುಮಾರು 430 ಕೋಟಿ ರು. ವೆಚ್ಚದಲ್ಲಿ 2016 ರಲ್ಲಿ ಸುಬ್ಬರಾಯನ ಪಾಳ್ಯ, ಚಿಕ್ಕನಾಗಮಂಗಲ, ಸೀಗೇಹಳ್ಳಿ, ಕನ್ನಹಳ್ಳಿ, ಲಿಂಗಧೀರನಹಳ್ಳಿ ಮತ್ತು ದೊಡ್ಡ ಬಿದರಕಲ್ಲು ಗ್ರಾಮಗಳಲ್ಲಿ ನಿರ್ಮಿಸಿದ್ದ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣಾ ಘಟಕಗಳ ಪೈಕಿ ಮೂರು ಘಟಕಗಳು ಸಂಪೂರ್ಣ ಸ್ಥಗಿತಗೊಂಡಿವೆ. ಒಂದು ಘಟಕ ಕುಂಟುತ್ತಾ ಸಾಗಿದರೆ, ಚಿಕ್ಕನಾಗಮಂಗಲ ಮತ್ತು ದೊಡ್ಡ ಬಿದರಕಲ್ಲು ಘಟಕಗಳು ಮಾತ್ರ ಸ್ವಲ್ಪ ಮಟ್ಟಿಗೆ ಕಾರ್ಯ ನಿರ್ವಹಿಸುತ್ತಿವೆ. 

ಮುಡಾದಲ್ಲಿ 5000 ಕೋಟಿ ಹಗರಣ: ನೈತಿಕ ಹೊಣೆ ಹೊತ್ತು ಸಿದ್ದು ರಾಜೀನಾಮೆ ನೀಡಲಿ, ಯದುವೀರ್‌

ನಿರ್ವಹಣೆ ಹೆಸರಿನಲ್ಲಿ ನೂರಾರು ಕೋಟಿ ಲೂಟಿ: 

ಬಾಗಲೂರು, ಮಿಟ್ಟಗಾನಹಳ್ಳಿ ಮತ್ತು ಬೈಯಪ್ಪನ ಹಳ್ಳಿಯಲ್ಲಿರುವ ಭೂಭರ್ತಿ ಕೇಂದ್ರ ಗಳನ್ನು ಅತ್ಯಂತ ಅವೈಜ್ಞಾನಿಕವಾಗಿ ನಿರ್ವಹಣೆ ಮಾಡಲಾಗುತ್ತಿದೆ. ವೈಜ್ಞಾನಿಕ ನಿರ್ವಹಣೆ ಹೆಸರಲ್ಲಿ ಪ್ರತಿ ಭೂಭರ್ತಿ ಕೇಂದ್ರಕ್ಕೆ ನೂರಾರು ಕೋಟಿ ರು. ಅನುದಾನ ಬಿಡುಗಡೆ ಮಾಡಿದ್ದು, ಈ ಪೈಕಿ ಶೇ.90ರಷ್ಟು ಲೂಟಿ ಮಾಡಲಾಗಿದೆ. ಕಸಿಡಿಸಿ ಘಟಕದ ಉನ್ನತೀಕರಣದ ಹೆಸರಿನಲ್ಲಿ ಹತ್ತಾರು ಕೋಟಿ ರು. ಲೂಟಿ ನಡೆದಿದೆ.

'ಮಂಜೂರಾದ ಅನುದಾನದಲ್ಲಿ 90% ದುರ್ಬಳಕೆ' 

ಏಳು ಸಂಸ್ಕರಣಾ ಘಟಕಗಳು ಮತ್ತು ಮೂರು ಭೂಭರ್ತಿ ಕೇಂದ್ರಗಳ ಸುತ್ತಮುತ್ತಲ ಗ್ರಾಮಗಳ/ ಪ್ರದೇಶಗಳ ಅಭಿವೃದ್ಧಿ, ಮೂಲಸೌಕರ್ಯ ಕಲ್ಪಿಸುವ ಹೆಸರಿನಲ್ಲಿ ನೂರಾರು ಕೋಟಿ ರು. ಲೂಟಿ ಮಾಡಲಾಗಿದೆ. ಹೀಗೆ ತಾವೇ ನಿರ್ಧರಿಸಿದ ಬೆರಳೆಣಿಕೆ ಗುತ್ತಿಗೆದಾರರ ಮೂಲಕ ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣೆ ವಿಭಾಗದ ಭ್ರಷ್ಟ ಅಧಿಕಾರಿಗಳು ಈ 2,067 ಕೋಟಿ ರು. ಅನುದಾನದ ಪೈಕಿ ಶೇ.90ರಷ್ಟು ಅನುದಾನ ಲೂಟಿ ಹೊಡೆದಿದ್ದಾರೆ. ಈ ಸಂಬಂಧ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ರಮೇಶ್ ದೂರಿನಲ್ಲಿ ಕೋರಿದ್ದಾರೆ.

click me!