Cracker Injury: ಪಟಾಕಿ ಅವಾಂತರದಿಂದ ಸಿಲಿಕಾನ್ ಸಿಟಿಯ ಇಬ್ಬರ ಕಣ್ಣಿಗೆ ಗಾಯ

By Govindaraj SFirst Published Oct 23, 2022, 10:20 AM IST
Highlights

ಬೆಳಕಿನ ಹಬ್ಬ ದೀಪಾವಳಿ ವೇಳೆ ಪ್ರತಿವರ್ಷವೂ ಅಲ್ಲಲ್ಲಿ ಅನಾಹುತಗಳಾಗುತ್ತಲೇ ಇವೆ. ಈ ಬಾರಿ ದೀಪಾವಳಿಗೆ ಇನ್ನೂ ಕೆಲವು ದಿನಗಳಿರುವಾಗಲೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪಟಾಕಿ ಗಾಯದ ಪ್ರಕರಣ ವರದಿಯಾಗಿದೆ. 

ಬೆಂಗಳೂರು (ಅ.23): ಬೆಳಕಿನ ಹಬ್ಬ ದೀಪಾವಳಿ ವೇಳೆ ಪ್ರತಿವರ್ಷವೂ ಅಲ್ಲಲ್ಲಿ ಅನಾಹುತಗಳಾಗುತ್ತಲೇ ಇವೆ. ಈ ಬಾರಿ ದೀಪಾವಳಿಗೆ ಇನ್ನೂ ಕೆಲವು ದಿನಗಳಿರುವಾಗಲೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪಟಾಕಿ ಗಾಯದ ಪ್ರಕರಣ ವರದಿಯಾಗಿದೆ. ಹೌದು! ಕಲಾಸಿಪಾಳ್ಯದ ಸುರೇಶ್(35), ಜೆ.ಪಿ.ನಗರದ ಮನೋಜ್ (10) ಕಣ್ಣಿಗೆ ಗಾಯಗಳಾಗಿವೆ. ಬಿಜಿಲಿ ಕ್ರಾಕರ್ ಸಿಡಿಸಲು ಹೋಗಿ ಸುರೇಶ್ ಕಣ್ಣಿಗೆ ಗಾಯ ಮಾಡಿಕೊಂಡರೆ, ರಾಕೆಟ್ ಕ್ರಾಕರ್ ಸಿಡಿಸಲು ಹೋಗಿ 10 ವರ್ಷದ ಮನೋಜ್ ಕಣ್ಣಿಗೆ ಗಾಯ ಮಾಡಿಕೊಂಡಿದ್ದಾರೆ. ಸದ್ಯ ಮನೋಜ್ ವಿಕ್ಟೊರಿಯಾ ಆಸ್ಪತ್ರೆಗೆ ಇಬ್ಬರನ್ನು ದಾಖಲು ಮಾಡಲಾಗಿದೆ.

ಕಣ್ಣಿನ ಹಾನಿ ಚಿಕಿತ್ಸೆಗೆ ಮಿಂಟೋ ಆಸ್ಪತ್ರೆ ಸಜ್ಜು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿತದಿಂದ ಉಂಟಾಗುವ ಕಣ್ಣಿನ ಹಾನಿಗಳಿಗೆ 24/7 ತುರ್ತು ಚಿಕಿತ್ಸೆ ನೀಡಲು ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್‌, ಹೆಚ್ಚುವರಿ ಸಿಬ್ಬಂದಿ ಜತೆಗೆ ತುರ್ತು ಸಹಾಯವಾಣಿಗಳನ್ನು ಆರಂಭಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಮಿಂಟೋ ಆಸ್ಪತ್ರೆ ನಿರ್ದೇಶಕಿ ಡಾ.ಸುಜಾತಾ ರಾಥೋಡ್‌ ಮಾತನಾಡಿ, ಬೆಳಕಿನ ಹಬ್ಬ ದೀಪವಾಳಿ ಬಂತೆಂದರೆ ಪ್ರತಿ ವರ್ಷ ಪಟ್ಟಾಕಿ ಸಿಡಿತದಿಂದ ಗಾಯಗೊಂಡ 50ಕ್ಕೂ ಹೆಚ್ಚು ಮಂದಿ ಮಿಂಟೋ ಆಸ್ಪತ್ರೆಗೆ ದಾಖಲಾಗುತ್ತಾರೆ. 

Firecrackers: ನಿಷೇಧದ ನಡುವೆ ಬೆಂಗಳೂರಿನಲ್ಲಿ ಹಳೆ ಪಟಾಕಿ ಮಾರಾಟ?

ಈ ವರ್ಷವು ತುರ್ತು ಸೇವೆ ಒದಗಿಸಲು ವೈದ್ಯರು, ಶುಶ್ರೂಷಕರು, ಪ್ಯಾರಾ ಮೆಡಿಕಲ್‌ ಸಿಬ್ಬಂದಿ ಸೇರಿದಂತೆ ಆಸ್ಪತ್ರೆಯಲ್ಲಿ ಒಂದು ಪಾಳಿಯಲ್ಲಿ 18ರಿಂದ 20 ಎಲ್ಲ ವೈದ್ಯ ಹಾಗೂ ವೈದ್ಯೇತರ ಸಿಬ್ಬಂದಿ ಪೂರ್ಣ ಪ್ರಮಾಣದಲ್ಲಿ ಕೆಲಸ ನಿರ್ವಹಿಸಲಿದ್ದಾರೆ. ಜತೆಗೆ ಚಿಕಿತ್ಸೆಗೆ ಅಗತ್ಯವಾದ ಔಷಧಿ ಸಾಮಗ್ರಿಗಳ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿದ್ದು, ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಕೊಠಡಿಗಳನ್ನು ಮೀಸಲಿಡಲಾಗಿದೆ. ಒಂದು ವಾರ ಯಾವುದೇ ಸಿಬ್ಬಂದಿಗೆ ರಜೆ ನೀಡುತ್ತಿಲ್ಲ ಎಂದು ತಿಳಿಸಿದರು.

ಕಳೆದ ವರ್ಷ ಕೂಡ ಪಟಾಕಿಯಿಂದ ಸುಮಾರು 34 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಲ್ಲಿ ಒಬ್ಬರು ಶಾಶ್ವತವಾಗಿ ದೃಷ್ಟಿಕಳೆದುಕೊಂಡರು. ಪಟಾಕಿ ಸಿಡಿಸುವ ವೇಳೆ ಎಚ್ಚರಿಕೆ ಕ್ರಮಗಳನ್ನು ಅನುಸರಿಸದ ಕಾರಣ ರಸ್ತೆಯಲ್ಲಿ ಹೋಗುವ ಅಮಾಯಕರ ಕಣ್ಣಿಗೆ ಹಾನಿಯಾಗಿರುವ ಬಹಳಷ್ಟುಪ್ರಕರಣಗಳು ಇವೆ. ಪಟಾಕಿ ಸಿಡಿತದಿಂದ ಗಾಯಗೊಳ್ಳುವವರ ಪೈಕಿ ಶೇ.40ರಷ್ಟು14 ವಯೋಮಿತಿಯ ಮಕ್ಕಳಾಗಿದ್ದು, ಮೂರು ಪಟ್ಟು ಗಂಡು ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಹೀಗಾಗಿ ಪಟಾಕಿ ಸಿಡಿಸುವ ವೇಳೆ ಅಗತ್ಯ ಎಚ್ಚರಿಕೆ ಕ್ರಮಗಳನ್ನು ಅನುಸರಿಸಿ ಎಂದು ಸಲಹೆ ನೀಡಿದರು.

ಮಿಂಟೋ ಕಣ್ಣಿನ ಆಸ್ಪತ್ರೆ ಸಹಾಯವಾಣಿ: ತುರ್ತು ಚಿಕಿತ್ಸೆಗಾಗಿ ಸಂಪರ್ಕಿಸಬೇಕಾದ ಮೊಬೈಲ್‌ ನಂಬರ್‌ಗಳು - 94817 40137, 94808 32430

ಪಟಾಕಿ ಕಣ್ಣಿಗೆ ಸಿಡಿದರೆ ತಕ್ಷಣ ಹೀಗೆ ಮಾಡಿ: ಪಟಾಕಿ ಕಣ್ಣಿಗೆ ಸಿಡಿದರೆ ಕಣ್ಣು ಉಜ್ಜಬಾರದು. ಕಣ್ಣಿನ ಸೂಕ್ಷ್ಮ ಭಾಗಕ್ಕೆ ಪಟಾಕಿ ರಾಸಾಯನಿಕಗಳು ಹಾನಿ ಉಂಟು ಮಾಡಬಹುದು. ಹೀಗಾಗಿ, ಶುದ್ಧ ನೀರಿನಿಂದ ಮೊದಲು ಕಣ್ಣುಗಳನ್ನು ತೊಳೆದು ಹತ್ತಿಬಟ್ಟೆಯನ್ನು ಕಣ್ಣಿನ ಮೇಲಿಟ್ಟು ಆಸ್ಪತ್ರೆಗೆ ಕರೆತರಬೇಕು ಎಂದು ವೈದ್ಯರು ತಿಳಿಸಿದ್ದಾರೆ.

ಬೆಂಗ್ಳೂರಿನ 200 ಕಡೆಗಳಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ

ಈ ಮುಂಜಾಗ್ರತಾ ಕ್ರಮಗಳಿರಲಿ
* ಐದು ವರ್ಷದ ಒಳಗಿನ ಮಕ್ಕಳ ಕೈಗೆ ಪಟಾಕಿ ನೀಡಬಾರದು.
* ಹಸಿರು ಪಟಾಕಿಯಾದರೂ ಮುಂಜಾಗ್ರತೆ ಇರಲಿ.
* ಮಕ್ಕಳು ದೊಡ್ಡವರ ಸಮ್ಮುಖದಲ್ಲಿ ಪಟಾಕಿ ಹಚ್ಚಬೇಕು. ಕನ್ನಡಕ ಇಲ್ಲವೇ ಹೆಲ್ಮೆಟ್‌ ಧರಿಸಿ ಪಟಾಕಿ ಸಿಡಿಸಿ.
* ಪಟಾಕಿ ಸಿಡಿಸುವಾಗ ಕಾಟನ್‌ ಬಟ್ಟೆಗಳನ್ನು ಧರಿಸಿ.
* ಪಟಾಕಿ ಸುಡಲು ಗಾಜಿನ ಬಾಟಲಿ, ಡಬ್ಬಗಳನ್ನು ಬಳಸಬೇಡಿ.
* ರಸ್ತೆಯಲ್ಲಿ ಪಟಾಕಿ ಹಚ್ಚಬೇಡಿ, ಸಮೀಪದ ಖಾಲಿ ಜಾಗ, ಮೈದಾನ, ಮನೆ ಮುಂಭಾಗದ ಜಾಗ ಬಳಸಿ.
* ಸುಟ್ಟಅಥವಾ ಅರೆ ಸುಟ್ಟ ಪಟಾಕಿಗಳನ್ನು ಮತ್ತೆ ಬಳಕೆ ಮಾಡಬಾರದು.

click me!