ಉರುಳು ಹಾಕಿ ಜಿಂಕೆ ಬೇಟೆಯಾಡಿ ಅದನ್ನು ಕಾಡಿನಲ್ಲೇ ಬೇಯಿಸಿ ತಿಂದ ಇಬ್ಬರು ಬೇಟೆಗಾರರನ್ನು ಅರಣ್ಯಾಧಿಕಾರಿಗಳು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ ನೋಡಿ.
ತರೀಕೆರೆ(ಮೇ.09): ಇಲ್ಲಿಗೆ ಸಮೀಪದ ಬಳ್ಳಾವರದ ಕಾಡಿನಲ್ಲಿ ಜಿಂಕೆ ಕೊಂದು ಅದರ ಮಾಂಸವನ್ನು ತಿಂದ ಅರೋಪದ ಮೇಲೆ ಅರಣ್ಯಾಧಿಕಾರಿಗಳು ಮೋಟಾರ್ ಬೈಕ್ ಸಹಿತ ಇಬ್ಬರನ್ನು ಬಂಧಿಸಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ಬಳ್ಳಾವರದ ತೀರ್ಥಪ್ಪ (44) ಹಾಗೂ ಕೃಷ್ಣಾಪುರದ ಸುರೇಶ್ (22) ಬಂಧಿತ ಆರೋಪಿಗಳು. ಅರಣ್ಯದಲ್ಲಿ ಜಿಂಕೆಯನ್ನು ಉರುಳು ಹಾಕಿ ಹಿಡಿದು, ಕೊಂದು ಅದರ ಮಾಂಸವನ್ನು ಆರೋಪಿಗಳು ಬೇಯಿಸಿದ ಖಚಿತ ಮಾಹಿತಿ ದೊರೆಯಿತು. ಈ ಹಿನ್ನೆಲೆಯಲ್ಲಿ ವಲಯ ಅರಣ್ಯಾಧಿಕಾರಿ ಕೆ.ಆರ್.ರಾಜೇಶ್, ಡೆಪ್ಯುಟಿ ಆರ್.ಎಫ್.ಒ. ಶ್ರೀನಿವಾಸ್, ಅರಣ್ಯ ಸಿಬ್ಬಂದಿ ಮುನಾವರ್ ಪಾಷ, ಮಂಜುನಾಥ್, ಸಂತೋಷ್ ತಳವಾರ್, ಕೆ.ಮಂಜುನಾಥ್, ಎ.ಆರ್.ಕೃಷ್ಣಮೂರ್ತಿ ಮತ್ತು ದೇವಪ್ಪ ಅವರು ಗುರುವಾರ ರಾತ್ರಿ ಕಾರ್ಯಾಚರಣೆ ನಡೆಸಿ, ಬಂಧಿತ ಆರೋಪಿಗಳಿಂದ ಮಚ್ಚು, ಮಾಂಸ, ಕುಕ್ಕರ್ ಹಾಗೂ ಬೈಕ್ ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ತರೀಕೆರೆ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ.
ಬಾಗಲಕೋಟೆಯಲ್ಲಿ ಕೊರೋನಾ ಅಟ್ಟಹಾಸ: ಕೊಪ್ಪಳದಲ್ಲೂ ಟೆನ್ಶನ್..!
ನಾಯಿ ದಾಳಿಯಿಂದ ಜಿಂಕೆ ಸಾವು
ಹೊನ್ನಾವರ: ತಾಲೂಕಿನ ಚಂದಾವರ ಬಳಿ ಗುರುವಾರ ಕಾಡಿನಿಂದ ನಾಡಿಗೆ ಬಂದ ಜಿಂಕೆ ಮರಿ ನಾಯಿ ದಾಳಿಗೆ ಮೃತಪಟ್ಟಿದೆ. ಚಂದಾವರ ಹನುಮಂತ ದೇವಾಲಯದ ಬಳಿ ತೇಬ್ರಿ ಹೊಳೆಗೆ ಜಿಂಕೆ ನೀರು ಕುಡಿಯಲು ಬಂದಾಗ ನಾಯಿ ದಾಳಿ ನಡೆಸಿದೆ. ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.