ಅಲ್ಯೂಮಿನಿಯಂ ಏಣಿಗೆ ಮೂರು ವರ್ಷಗಳಲ್ಲಿ 17 ಕಾರ್ಮಿಕರು ಸಾವು: ಕೊಡಗು ಚೆಸ್ಕಾಂ ಕಾರ್ಯಪಾಲಕ ಹೇಳಿದ್ದೇನು?

Published : Feb 21, 2025, 07:08 PM ISTUpdated : Feb 21, 2025, 07:13 PM IST
ಅಲ್ಯೂಮಿನಿಯಂ ಏಣಿಗೆ ಮೂರು ವರ್ಷಗಳಲ್ಲಿ 17 ಕಾರ್ಮಿಕರು ಸಾವು: ಕೊಡಗು ಚೆಸ್ಕಾಂ ಕಾರ್ಯಪಾಲಕ ಹೇಳಿದ್ದೇನು?

ಸಾರಾಂಶ

ಒಂದೆಡೆ ಕಾಡಿನಿಂದ ತೋಟಗಳಿಗೆ ಬಂದು ಬೀಡುಬಿಟ್ಟಿರುವ ಆನೆಗಳ ದಾಳಿಗೆ ಕಾರ್ಮಿಕರು ಬಲಿಯಾಗುತ್ತಿದ್ದರೆ, ಮತ್ತೊಂದೆಡೆ ತೋಟಗಳ ನಡುವೆ ಹಾದು ಹೋಗಿರುವ ವಿದ್ಯುತ್ ಲೈನ್ಗಳಿಗೂ ಕಾರ್ಮಿಕರು ಬಲಿಯಾಗುವುದು ಸರ್ವೇ ಸಾಮಾನ್ಯ ಎನ್ನುವಂತೆ ಆಗಿದೆ.

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಫೆ.21): ಕೊಡಗು ಜಿಲ್ಲೆಯ ಕಾಫಿ ತೋಟಗಳಲ್ಲಿ ಕಾರ್ಮಿಕರು ಒಂದಲ್ಲಾ ಒಂದು ಕಾರಣಗಳಿಂದ ಸಾವಿನ ಮನೆ ಸೇರುತ್ತಿದ್ದಾರೆ. ಒಂದೆಡೆ ಕಾಡಿನಿಂದ ತೋಟಗಳಿಗೆ ಬಂದು ಬೀಡುಬಿಟ್ಟಿರುವ ಆನೆಗಳ ದಾಳಿಗೆ ಕಾರ್ಮಿಕರು ಬಲಿಯಾಗುತ್ತಿದ್ದರೆ, ಮತ್ತೊಂದೆಡೆ ತೋಟಗಳ ನಡುವೆ ಹಾದು ಹೋಗಿರುವ ವಿದ್ಯುತ್ ಲೈನ್ಗಳಿಗೂ ಕಾರ್ಮಿಕರು ಬಲಿಯಾಗುವುದು ಸರ್ವೇ ಸಾಮಾನ್ಯ ಎನ್ನುವಂತೆ ಆಗಿದೆ. ಹೌದು! ಕೊಡಗು ಜಿಲ್ಲೆಯ ಕಾಫಿ ತೋಟಗಳಲ್ಲಿ ವಿವಿಧ ಕೆಲಸಗಳಿಗೆ ಬಳಕೆ ಮಾಡುವ ಅಲ್ಯೂಮಿನಿಯಂ ಏಣಿಗಳು ಕಾರ್ಮಿಕರಿಗೆ ಸಾವಿನ ದಾರಿ ತೋರಿಸುತ್ತಿವೆ. ಹೀಗೆ ಅಲ್ಯೂಮಿನಿಯಂ ಏಣಿಗಳ ಬಳಕೆ ಮಾಡಲು ಹೋಗಿ ಅವುಗಳು ವಿದ್ಯುತ್ ಲೈನ್ಗಳಿಗೆ ತಗುಲಿ ಕಳೆದ ಮೂರು ವರ್ಷಗಳಲ್ಲಿ 17 ಅಮಾಯಕ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆಗಳು ನಡೆದಿವೆ. 

ಕೊಡಗು ಜಿಲ್ಲೆಯ ಕಾಫಿ ತೋಟಗಳಲ್ಲಿ ಈಗಾಗಲೇ ಕಾಫಿ ಹಣ್ಣುಗಳ ಕೊಯ್ಲಿನ ಕೆಲಸ ಈಗಾಗಲೇ ಬಹುತೇಕ ಮುಗಿದಿದೆ. ಆದರೆ ಆ ತೋಟಗಳಲ್ಲಿ ಕಾಳುಮೆಣಸುಗಳನ್ನು ಕೊಯ್ಲು ಮಾಡುವ ಕೆಲಸ ಆರಂಭವಾಗಿದೆ. ಕಾಫಿ ತೋಟಗಳ ನಡುವೆ ಇರುವ ದೊಡ್ಡ ದೊಡ್ಡ ಮರಗಳಿಗೆ ಹಬ್ಬಿರುವ ಕಾಳುಮೆಣಸು ಕೊಯ್ಲಿಗೆ ಏಣಿಗಳು ಬೇಕೇ ಬೇಕು. ಇದಕ್ಕಾಗಿ ಕೊಡಗಿನಲ್ಲಿ ಬೆಳೆಗಾರರು ಸಹಜವಾಗಿಯೇ ಬಹುದಿನಗಳು ಬಾಳಿಕೆ ಬರುತ್ತವೆ ಎನ್ನುವ ದೃಷ್ಟಿಯಿಂದ ಅಲ್ಯೂಮಿನಿಯಂ ಏಣಿಯನ್ನು ಬಳಕೆ ಮಾಡುತ್ತಾರೆ. ಇವುಗಳು ತುಂಬಾ ವರ್ಷಗಳ ಕಾಲದವರೆಗೆ ಬಾಳಿಕೆ ಬರುತ್ತವೆ ಎನ್ನುವುದೇನೋ ನಿಜವಾದರೂ ಇವುಗಳು ಕಾರ್ಮಿಕರ ಪ್ರಾಣಕ್ಕೆ ಕುತ್ತು ತಂದೊಡ್ಡುತ್ತವೆ ಎನ್ನುವುದನ್ನು ಮಾತ್ರ ಗಂಭೀರವಾಗಿ ಪರಿಗಣಿಸುತ್ತಿಲ್ಲ. 

ರಣ ಬಿಸಿಲಿಗೆ ಕೊಡಗು ತತ್ತರ: ಫೆಬ್ರವರಿ ಮಧ್ಯಭಾಗದಲ್ಲೇ 32 ರಿಂದ 33 ಡಿಗ್ರಿ ಸೆಲ್ಸಿಯಸ್ ತಲುಪಿದ ತಾಪಮಾನ

ಕಾಫಿ ತೋಟದೊಳಗೆ 11 ಕಿಲೋ ವ್ಯಾಟ್ ಪ್ರಮಾಣದ ವಿದ್ಯುತ್ ಲೈನ್ಗಳು ಹಾದು ಹೋಗಿದ್ದು, ಒಂದು ಮರದಲ್ಲಿ ಮೆಣಸು ಕೊಯ್ಲು ಆದ ತಕ್ಷಣ ಮತ್ತೊಂದು ಮರಕ್ಕೆ ಏಣಿಯನ್ನು ಬದಲಾಯಿಸುವ ವೇಳೆ ವಿದ್ಯುತ್ ಲೈನ್ಗಳಿಗೆ ಏಣಿ ಸ್ಪರ್ಶಿಸಿ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪುತ್ತಿದ್ದಾರೆ. ಕಳೆದ 3 ವರ್ಷಗಳಲ್ಲಿ ಹೀಗೆ ಹೀನಾಯವಾಗಿ ಸಾವನ್ನಪ್ಪಿದವರ ಸಂಖ್ಯೆ 17. ಕೊಡಗಿನ ಭೂ ಪ್ರದೇಶ ಬೆಟ್ಟಗುಡ್ಡಗಳಿಂದಲೇ ಕೂಡಿದ್ದು, ಒಂದೆಡೆ ಎತ್ತರದ ಪ್ರದೇಶವಿದ್ದರೆ ಮತ್ತೊಂದೆಡೆ ತಗ್ಗು ಪ್ರದೇಶಗಳಿವೆ. ಎತ್ತರದ ಪ್ರದೇಶದಲ್ಲಿ ವಿದ್ಯುತ್ ಲೈನ್ಗಳು ಎತ್ತರದಲ್ಲೇ ಇದ್ದರೆ, ತಗ್ಗು ಪ್ರದೇಶಗಳಲ್ಲಿ ಅದೇ ವಿದ್ಯುತ್ ಲೈನ್ ಕೈಗೆ ಎಟಕುವಷ್ಟು ಕೆಳಗೇ ಹಾದು ಹೋಗಿರುತ್ತವೆ. 

ಇದರಿಂದ ಒಂದು ಮರದಿಂದ ಮತ್ತೊಂದು ಮರಕ್ಕೆ ಏಣಿ ಬದಲಾಯಿಸುವ ವೇಳೆ ವಿದ್ಯುತ್ ಲೈನ್ಗಳಿಗೆ ಅಲ್ಯೂಮಿನಿಯಂ ಏಣಿ ಸ್ಪರ್ಶಿಸಿ ಎಷ್ಟೋ ಜನರು ಸ್ಥಳದಲ್ಲಿಯೇ ಬಹುತೇಕ ಸುಟ್ಟು ಕರಕಲಾಗಿ ಹೋಗಿದ್ದಾರೆ. ಹೀಗಾಗಿಯೇ ಚೆಸ್ಕಾ ಇಲಾಖೆ ಕರಿಮೆಣಸು ಕೊಯ್ಲು ಆರಂಭದ ಹಂತದಲ್ಲಿಯೇ ಎಚ್ಚರಿಕೆಯ ಸೂಚನೆಯನ್ನು ನೀಡಿದೆ. ಅಲ್ಯೂಮಿನಿಯಂ ಏಣಿಗಳನ್ನು ಬಳಸುವ ಬದಲು ಬಿದಿರಿನ ಅಥವಾ ಫೈಬರ್ ಏಣಿಗಳನ್ನು ಬಳಕೆ ಮಾಡಿ ಕಾರ್ಮಿಕರ ಜೀವಗಳನ್ನು ಕಾಪಾಡಿ ಎಂದು ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ. 

ಬ್ರಿಟಿಷರ ವಿರುದ್ಧ ಸಾಹಿತ್ಯ ರಚಿಸಿದ್ದ ಪಂಜೆ ಮಗೇಶರಾಯರು: ಸಾಹಿತಿ ಅರವಿಂದ ಚೊಕ್ಕಾಡಿ ಅಭಿಮತ

ಈ ಕುರಿತು ಮಾತನಾಡಿರುವ ಕೊಡಗು ಚೆಸ್ಕಾಂ ಕಾರ್ಯಪಾಲಕ ಅಭಿಯಂತರ ರಾಮಚಂದ್ರ ಅವರು ಕಾಫಿ ತೋಟಗಳ ಒಳಗೆ ವಿದ್ಯುತ್ ಲೈನ್ ಎಷ್ಟೋ ಕಡೆಗಳಲ್ಲಿ ಕೆಳಭಾಗಗಳಲ್ಲೇ ಹಾದು ಹೋಗಿವೆ. ಇದರಿಂದ ವಿದ್ಯುತ್ ಲೈನ್ಗಳಿಗೆ ತಗುಲಿ ಕಾರ್ಮಿಕರು ಸಾವನ್ನಪ್ಪುವ ಸಾಧ್ಯತೆ ಇದೆ. ಹೀಗಾಗಿ ಅಲ್ಯೂಮಿನಿಯಂ ಏಣಿಗಳನ್ನು ಬಳಸುವುದನ್ನು ಬಿಡಿ. ಬದಲಾಗಿ ಮರದ ಅಥವಾ ಫೈಬರ್ ಏಣಿಗಳನ್ನು ಬಳಸಿ ಎಂದು ಎಚ್ಚರಿಸಿದ್ದಾರೆ. ಒಟ್ಟಿನಲ್ಲಿ ಕೊಡಗಿನಲ್ಲಿ ಕಾಳು ಮೆಣಸು ಕೊಯ್ಲು ಆರಂಭವಾಗಿದ್ದು, ಬೆಳೆಗಾರರು ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ತೀವ್ರ ತೊಂದರೆಗೆ ಸಿಲುಕಬೇಕಾಗುತ್ತದೆ ಎನ್ನುವುದು ಸುಳ್ಳಲ್ಲ.

PREV
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ