ದಾವಣಗೆರೆ: ಮಾಯಕೊಂಡ ಬಳಿ 5 ತಾಸು ನಿಂತಲ್ಲೇ ನಿಂತಿದ್ದ ವಂದೇ ಭಾರತ್‌ ಸೇರಿ 4 ರೈಲು! ಆಗಿದ್ದೇನು?

Kannadaprabha News   | Kannada Prabha
Published : Oct 08, 2026, 06:55 AM IST
15 minutes halt at davanagere turns into six hours delay for vande bharat

ಸಾರಾಂಶ

ದಾವಣಗೆರೆ-ಚಿತ್ರದುರ್ಗ ಹೊಸ ಮಾರ್ಗದಲ್ಲಿ ಅಂಡರ್ ಬ್ರಿಡ್ಜ್ ಕಾಮಗಾರಿ ಹಿನ್ನೆಲೆಯಲ್ಲಿ ವಂದೇ ಭಾರತ್ ಸೇರಿದಂತೆ ನಾಲ್ಕು ರೈಲುಗಳು ಐದು ಗಂಟೆಗೂ ಹೆಚ್ಚು ಕಾಲ ನಿಂತಲ್ಲೇ ನಿಂತಿದ್ದವು. ಮಾಯಕೊಂಡ, ಕೊಡಗನೂರು, ಸಾಸಲು ಹಾಗೂ ಶಿವನಿ ನಿಲ್ದಾಣಗಳಲ್ಲಿ ರೈಲುಗಳು ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ತೀವ್ರ ಪರದಾಟ.

ದಾವಣಗೆರೆ (ಅ.8): ದಾವಣಗೆರೆ-ಚಿತ್ರದುರ್ಗ ನೇರ ರೈಲ್ವೆ ಮಾರ್ಗವಾಗಿ ಬೆಂಗಳೂರು ಹೊಸ ಮಾರ್ಗದಲ್ಲಿ ಅಂಡರ್ ಬ್ರಿಡ್ಜ್ ಕಾಮಗಾರಿ ಹಿನ್ನೆಲೆಯಲ್ಲಿ ವಂದೇ ಭಾರತ್ ಸೇರಿದಂತೆ ನಾಲ್ಕು ರೈಲುಗಳು ಒಂದೇ ಕಡೆ ನಿಂತಲ್ಲೇ ಐದು ಗಂಟೆಗೂ ಹೆಚ್ಚು ಕಾಲ ನಿಂತ ಘಟನೆ ಮಂಗಳವಾರ ನಡೆದಿದ್ದು, ತಾಲೂಕಿನ ಮಾಯಕೊಂಡ, ಕೊಡಗನೂರು, ಸಾಸಲು ಹಾಗೂ ಚಿಕ್ಕಮಗಳೂರು ಜಿಲ್ಲೆ ಶಿವನಿ ನಿಲ್ದಾಣದಲ್ಲಿ ಒಂದೊಂದು ರೈಲುಗಳು ನಿಂತಿದ್ದವು. ಇದರಿಂದ ಪ್ರಯಾಣಿಕರು ತೀವ್ರ ಪರದಾಡಬೇಕಾಯಿತು.

ಮಾಯಕೊಂಡ ಬಳಿ ಐದು ತಾಸು ನಿಂತಲ್ಲೇ ನಿಂತ ವಂದೇ ಭಾರತ್

ಬೆಂಗಳೂರಿನಿಂದ ಬೆಳಗಾವಿಗೆ ಹೋಗುತ್ತಿದ್ದ ಮಾಯಕೊಂಡ ಗ್ರಾಮದ ರೈಲ್ವೆ ನಿಲ್ದಾಣದಲ್ಲಿ ವಂದೇ ಭಾರತ್ ರೈಲು 5 ಗಂಟೆಗೂ ಹೆಚ್ಚು ಕಾಲ ಒಂದೇ ಸ್ಥಳದಲ್ಲಿ ನಿಲ್ಲಬೇಕಾಯಿತು. ಅಲ್ಲದೇ, ಬೆಂಗಳೂರು ಕಡೆಯಿಂದ ದಾವಣಗೆರೆ ಕಡೆಗೆ ಬರುತ್ತಿದ್ದ ಬೇರೆ ಬೇರೆ ರೈಲುಗಳು ಕೊಡಗನೂರು, ಸಾಸಲು ಹಾಗೂ ಶಿವನಿ ನಿಲ್ದಾಣಗಳಲ್ಲಿ ಸತತ 4 ತಾಸು ನಿಲ್ಲಬೇಕಾಯಿತು. ರೈಲು ಸೇವೆಯಲ್ಲಿ ವ್ಯತ್ಯಯದಿಂದಾಗಿ ಕೆಲ ಪ್ರಯಾಣಿಕರು ತಮಗಾದ ತೊಂದರೆ ಬಗ್ಗೆ ಸೆಲ್ಫೀ ವೀಡಿಯೋ ಮಾಡಿ ಸೋಷಿಯಲ್ ಮೀಡಿಯಾಗಳಿಗೆ ಹರಿಯಬಿಟ್ಟರೆ, ಮತ್ತೆ ಕೆಲವರು ರೈಲ್ವೆ ಇಲಾಖೆ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಂದೇ ಭಾರತ್ ರೈಲು ಸಂಜೆ 5.30ಕ್ಕೆ ಮಾಯಕೊಂಡ ರೈಲ್ವೆ ನಿಲ್ದಾಣಕ್ಕೆ ಬಂದಿದ್ದು, ಮಾರ್ಗ ಮುಕ್ತವಾದ ಬಗ್ಗೆ ಸೂಚನೆ ಸಿಗದ ಹಿನ್ನೆಲೆ ರೈಲ್ವೆ ಅಧಿಕಾರಿಗಳು ರೈಲು ಸಾಗಲು ಹಸಿರು ನಿಶಾನೆ ತೋರಲಿಲ್ಲ. ಇದರಿಂದಾಗಿ ಮುಂದಿನ ಊರಿಗೆ ಹೋಗುವವರು, ದೂರದ ಊರುಗಳಿಗೆ ಪ್ರಯಾಣಿಸಬೇಕಾದ ಪ್ರಯಾಣಿಕರ ಗೋಳು ಹೇಳತೀರದಾಗಿತ್ತು. ಯಾರೋ ತಮ್ಮ ಕುಟುಂಬ ಸದಸ್ಯರ ಅನಾರೋಗ್ಯದ ಹಿನ್ನೆಲೆ, ಮತ್ತೆ ಯಾರೋ ಅಂತ್ಯಕ್ರಿಯೆಗೆ, ಮತ್ತೆ ಯಾರೋ ಶುಭ ಕಾರ್ಯಕ್ಕೆ ಹೋಗಬೇಕಾಗಿದ್ದವರು ತಾವು ಕುಳಿತ ರೈಲಿನ ಸೀಟುಗಳಲ್ಲೇ ಚಡಪಡಿಸುವಂತಾಗಿತ್ತು. ರಾತ್ರಿ 11.18ಕ್ಕೆ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದರಿಂದ ನಾಲ್ಕೈದು ಗಂಟೆ ತಡವಾಗಿ ರೈಲುಗಳ ಸಂಚಾರ ಮುಂದುವರಿಯಿತು. ರಾತ್ರಿ 10.30ಕ್ಕೆ ಬೆಳಗಾವಿ ತಲುಬೇಕಿದ್ದ ವಂದೇ ಭಾರತ್‌ ರೈಲು ಮಧ್ಯರಾತ್ರಿ ಬೆಳ ಗಾವಿ ತಲುಪಬೇಕಾಯಿತು. ಉಳಿದ ಮೂರು ರೈಲುಗಳ ಸ್ಥಿತಿಯೂ ಇದೇ ಆಗಿತ್ತು

PREV
Read more Articles on
click me!

Recommended Stories

ಅಂಜನಾದ್ರಿ ದೇಗುಲ ವಿಚಾರದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು; ಸರ್ಕಾರದ ನೋಟಿಫಿಕೇಷನ್ ರದ್ದು! ಆಳಿತಾಧಿಕಾರಿ ನೇಮಕಕ್ಕೂ ಬ್ರೇಕ್
ದೀಪ್ಕೆ ಸೇರಿ ಜಂತರ್‌ಮಂತರ್‌ ದಂಡೇ ಇಂದು ಬೆಂಗಳೂರಿಗೆ! ಇದೇ ಮೊದಲ ಬಾರಿಗೆ ಯುಟ್ಯೂಬರ್‌ ಧ್ರುವ್‌ ರಾಠಿ ಭಾಗಿ!