
ವರದಿ-ಪ್ರಹ್ಲಾದರೆಡ್ಡಿ ಮಾದಿನಾಳ
ಕೊಪ್ಪಳ (ಸೆ.28): 13ನೇ ಶತಮಾನದ ವಿಜಯನಗರ ಸಾಮ್ರಾಜ್ಯಕ್ಕೆ ಸೇರಿದ ವೀರಗಲ್ಲೊಂದು ತಾಲೂಕಿನ ವಡಕಿ ಗ್ರಾಮದ ಹಳೇ ಊರಿನಲ್ಲಿ ಪತ್ತೆಯಾಗಿದೆ. ವಡಕಿ ಗ್ರಾಮದ ಹಳೆಯ ಊರಿನ ಪ್ರದೇಶದಲ್ಲಿ ಪುರಾತನ ಕಾಲದ ಅವಶೇಷಗಳಿದ್ದು, ಆಯಾತಾಕಾರದ ಏಕಶಿಲಾ ವೀರಗಲ್ಲು ಗ್ರಾಮದ ಲಕ್ಷಪತಿ ಪಾಟೀಲ್ ಅವರಿಗೆ ಸೇರಿದ ಜಮೀನಿನಲ್ಲಿ ಪತ್ತೆಯಾಗಿದೆ. ಮುಳ್ಳುಗಿಡಗಳಲ್ಲಿ ಮುಚ್ಚಿ ಹೋಗಿದ್ದರಿಂದ ಈ ವೀರಗಲ್ಲನ್ನು ಯಾರೂ ಗುರುತಿಸಿರಲಿಲ್ಲ. ತೀವ್ರ ಬರಗಾಲ ಹಿನ್ನೆಲೆಯಲ್ಲಿ ಕುರಿಗಾಹಿಗಳು ಕುರಿಗಳೊಂದಿಗೆ ಮುಳ್ಳಿನ ಕಂಠಿಯಲ್ಲಿ ತಪ್ಪಲು ಕೊಯ್ಯುವಾಗ ಈ ವೀರಗಲ್ಲನ್ನು ನೋಡಿದ್ದಾರೆ. ಮಾಹಿತಿ ತಿಳಿದ ಸಂಶೋಧಕ ಡಾ. ಯಮನೂರಪ್ಪ ನಾಯಕ ಅವರು ವಡಕಿ ಸ್ಥಳಕ್ಕೆ ಭೇಟಿ ನೀಡಿ, ವೀರಗಲ್ಲನ್ನು ಪತ್ತೆ ಹಚ್ಚಿದ್ದಾರೆ.
ಈ ವೀರಗಲ್ಲು 6.5 ಅಡಿ ಉದ್ದ ಹಾಗೂ 2.5 ಅಡಿ ಅಗಲ ವಿಸ್ತೀರ್ಣ ಹೊಂದಿದೆ. ಆಯತಾಕಾರದ ಏಕಶಿಲಾ ಪಟ್ಟಿಕೆ 10 ಇಂಚು ಎತ್ತರ, ಮಧ್ಯದ ಪಟ್ಟಿಕೆ 10 ಇಂಚು ಎತ್ತರ ಹಾಗೂ ಕೆಳಭಾಗದ ಪಟ್ಟಿಕೆ 23 ಇಂಚು ಎತ್ತರವಾಗಿದೆ. ಬಲಭಾಗದ ಕೆಳಗೆ ಅಲ್ಪ ಪ್ರಮಾಣದಲ್ಲಿ ಭಿನ್ನವಾಗಿದೆ. ಕಪ್ಪುಶಿಲೆಯಲ್ಲಿ ಇದನ್ನು ಕೆತ್ತಲಾಗಿದೆ.
ಕೆಳಭಾಗ: ವೀರನು ಹಾಗೂ ಇಬ್ಬರು ಶತ್ರುಗಳು ಕುದುರೆ ಸವಾರರೊಂದಿಗೆ ಬಿಲ್ಲು, ಬಾಣಗಳಿಂದ ಯುದ್ಧ ಮಾಡಿದ ಸನ್ನಿವೇಶ ಹಾಗೂ ವೀರನ ಹಿಂದೆ ಇಬ್ಬರು ಅಪ್ಸರೆಯರನ್ನು ಕೆತ್ತಲಾಗಿದೆ.
ಮಧ್ಯಭಾಗ: ವೀರನು ರಣರಂಗದಲ್ಲಿ ಯುದ್ಧ ಮಾಡಿ ವೀರಮರಣ ಅಪ್ಪಿದ ನಂತರ ಅಪ್ಸರೆಯರು ಆತನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಸ್ವರ್ಗಕ್ಕೆ ಕರೆದೊಯ್ಯುವ ದೃಶ್ಯವಿದೆ.
ಮೇಲ್ಭಾಗ: ವೀರನು ತನ್ನ ಇಷ್ಟ ದೈವವಾದ ಶಿವಲಿಂಗದ ಮುಂದೆ ಕೈ ಮುಗಿದು ಆರಾಧಿಸುತ್ತಿರುವುದು ಮತ್ತು ಶಿವನ ಕೈಯಲ್ಲಿ ಢಮರುಗದ ಚಿತ್ರಣವನ್ನು ಕೆತ್ತಲಾಗಿದೆ. ವೀರನ ಮೈಮೇಲೆ ಕೈಗಡಗ, ತೋಳ್ಬಂದಿ, ಕಾಲ್ಗಡಗ, ಕುತ್ತಿಗೆಯಲ್ಲಿ ಹಾರ, ಕಿವಿಯ ಓಲೆಗಳಂತಹ ಆಭರಣಗಳ ಜತೆಗೆ ಮೇಲ್ಭಾಗದಲ್ಲಿ ಸೂರ್ಯ, ಚಂದ್ರರನ್ನು ಕೆತ್ತಲಾಗಿದೆ. ಇಲ್ಲಿ ಯಾವುದೇ ಪ್ರತ್ಯೇಕ ಲಿಖಿತ ರೂಪದ ಶಾಸನ ದೊರೆತಿಲ್ಲ.
'ಆಯತಾಕಾರದಲ್ಲಿರುವ ಈ ವೀರಗಲ್ಲನ್ನು ಕಪ್ಪುಶಿಲೆಯಲ್ಲಿ ಕೆತ್ತನೆ ಮಾಡಲಾಗಿದೆ. ಶಿಲೆ ಮತ್ತು ಕೆತ್ತನೆಯ ರೂಪವನ್ನು ಗಮನಿಸಿದಾಗ ಇದು ವಿಜಯನಗರ ಸಾಮ್ರಾಜ್ಯಕ್ಕೆ ಸಂಬಂಧಿಸಿದ್ದಾಗಿದೆ. 13ನೇ ಶತಮಾನದ ಹಿಂದೆ ಈ ಪ್ರದೇಶದಲ್ಲಿ ಜನ ವಾಸಿಸುತ್ತಿದ್ದರು ಎನ್ನುವುದಕ್ಕೆ ಸಾಕ್ಷಿಯಾಗಿ ಇಲ್ಲಿ ಮಡಿಕೆ ಚೂರುಗಳು ದೊರೆತಿವೆ' ಎಂದು ಸಂಶೋಧಕ ಡಾ. ಯಮನೂರಪ್ಪ ನಾಯಕ ತಿಳಿಸಿದ್ದಾರೆ.
ಈ ಸಂಶೋಧನಾ ಕಾರ್ಯದಲ್ಲಿ ಅತಿಥಿ ಶಿಕ್ಷಕ ಕೆಂಚಪ್ಪ ನಾಯಕ, ಗ್ರಾಮದ ಹಿರಿಯರಾದ ದ್ಯಾಮಣ್ಣ ಬೈರಾಪುರ, ದುರುಗೇಶ, ಲಕ್ಷ್ಮೀಕಾಂತ ನಡದಾಳ ಅವರು ಸಹಕರಿಸಿದ್ದಾರೆ.