Corona Crisis: ಬೆಂಗಳೂರಿನಲ್ಲಿ ಮತ್ತೆ ಏರಿದ ಕೊರೋನಾ ಸಂಖ್ಯೆ

By Govindaraj SFirst Published Jul 21, 2022, 7:23 AM IST
Highlights

ಸಿಲಿಕಾನ್ ಸಿಟಿಯಲ್ಲಿ ಬುಧವಾರ 1,251 ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.6.18ಕ್ಕೆ ಏರಿಕೆಯಾಗಿದೆ. 1,088 ಮಂದಿ ಗುಣಮುಖರಾಗಿದ್ದಾರೆ. ಸೋಂಕಿನಿಂದ ಮೃತಪಟ್ಟ ವರದಿಯಾಗಿಲ್ಲ.

ಬೆಂಗಳೂರು (ಜು.21): ಸಿಲಿಕಾನ್ ಸಿಟಿಯಲ್ಲಿ ಬುಧವಾರ 1,251 ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.6.18ಕ್ಕೆ ಏರಿಕೆಯಾಗಿದೆ. 1,088 ಮಂದಿ ಗುಣಮುಖರಾಗಿದ್ದಾರೆ. ಸೋಂಕಿನಿಂದ ಮೃತಪಟ್ಟ ವರದಿಯಾಗಿಲ್ಲ. ನಗರದಲ್ಲಿ ಸದ್ಯ 7064 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಈ ಪೈಕಿ 17 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 4 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 17,123 ಮಂದಿ ಕೋವಿಡ್‌ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 

717 ಮಂದಿ ಮೊದಲ ಡೋಸ್‌, 5403 ಮಂದಿ ಎರಡನೇ ಡೋಸ್‌ ಮತ್ತು 11,003 ಮಂದಿ ಮೂರನೇ ಡೋಸ್‌ ಲಸಿಕೆ ಪಡೆದಿದ್ದಾರೆ. ನಗರದಲ್ಲಿ 17,552 ಮಂದಿಗೆ ಕೊರೋನಾ ಸೋಂಕು ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 14,009 ಆರ್‌ಟಿಪಿಸಿಆರ್‌ ಹಾಗೂ 3,543 ಮಂದಿಗೆ ರಾರ‍ಯಪಿಡ್‌ ಆ್ಯಂಟಿಜನ್‌ ಪರೀಕ್ಷೆ ನಡೆಸಲಾಗಿದೆ. ಬುಧವಾರ ನಗರದ ಯಲಹಂಕ ವಲಯದಲ್ಲಿ ಒಂದು ಹೊಸದಾಗಿ ಕಂಟೈನ್ಮೆಂಟ್‌ ಪ್ರದೇಶ ಸೃಷ್ಟಿಯಾಗಿದೆ. ಮಹದೇವಪುರ ವಲಯದಲ್ಲಿ ಮೂರು ಪ್ರದೇಶಗಳು ಕಂಟೈನ್ಮೆಂಟ್‌ನಿಂದ ಮುಕ್ತವಾಗಿವೆ. ನಗರದಲ್ಲಿ ಒಟ್ಟು 10 ಸಕ್ರಿಯ ಕಂಟೈನ್ಮೆಂಟ್‌ ಪ್ರದೇಶಗಳಿವೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

ಕರ್ನಾಟಕದಲ್ಲಿ 1478 ಕೋವಿಡ್‌ ಕೇಸ್‌: 152 ದಿನಗಳಲ್ಲೇ ಗರಿಷ್ಠ..!

8 ಜಿಲ್ಲೆಯಲ್ಲಿ ಎರಡಂಕಿ: ಹೊಸ ಸೋಂಕಿತರು ಬೆಂಗಳೂರು ನಗರದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಪತ್ತೆ ಆಗುತ್ತಿದ್ದರೂ ಅನ್ಯ ಜಿಲ್ಲೆಗಳಲ್ಲಿಯೂ ಹೊಸ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರುತ್ತಿದೆ. ಕೆಲ ದಿನಗಳ ಹಿಂದೆ ಬೆಂಗಳೂರು ನಗರ ಹೊರತು ಪಡಿಸಿ ಎರಡ್ಮೂರು ಜಿಲ್ಲೆಯಲ್ಲಿ ಮಾತ್ರ ಎರಡಂಕಿಯಲ್ಲಿ ಪ್ರಕರಣ ವರದಿ ಆಗುತ್ತಿತ್ತು. ಆದರೆ ಬುಧವಾರ ರಾಜ್ಯದ ಉತ್ತರ, ದಕ್ಷಿಣ ಮತ್ತು ಕರಾವಳಿ ಹೀಗೆ ಎಲ್ಲ ವಲಯದ 8 ಜಿಲ್ಲೆಯಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಎರಡಂಕಿ ದಾಟಿದೆ.

ಬೆಂಗಳೂರು ನಗರದಲ್ಲಿ 1,251 ಮಂದಿಯಲ್ಲಿ ಕೊರೋನಾ ಕಾಣಿಸಿಕೊಂಡಿದೆ. ಉಳಿದಂತೆ ಬೆಂಗಳೂರು ಗ್ರಾಮಾಂತರ 32, ಮೈಸೂರು 24, ಧಾರವಾಡ 18, ಬೆಳಗಾವಿ ಮತ್ತು ಬಾಗಲಕೋಟೆ ತಲಾ 15, ಕೋಲಾರ 13, ಬಳ್ಳಾರಿ 12, ಉತ್ತರ ಕನ್ನಡ ಜಿಲ್ಲೆಯಲ್ಲಿ 10 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 39.90 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು 39.42 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 40,089 ಮಂದಿ ಮರಣವನ್ನಪ್ಪಿದ್ದಾರೆ.

Corona Crisis: ಕರ್ನಾಟಕದಲ್ಲಿ ಸತತ 2ನೇ ದಿನವೂ 1000+ ಕೋವಿಡ್ ಕೇಸ್‌

ಲಸಿಕೆ ಅಭಿಯಾನ: ರಾಜ್ಯದಲ್ಲಿ ಬುಧವಾರ 3.01 ಲಕ್ಷ ಮಂದಿ ಕೋವಿಡ್‌ ಲಸಿಕೆ ಪಡೆದಿದ್ದಾರೆ. ಮೂರನೇ ಡೋಸ್‌ ಅನ್ನು ಉಚಿತ ಮಾಡಿರುವ ಹಿನ್ನೆಲೆಯಲ್ಲಿ ಲಸಿಕೆ ಪಡೆಯಲು ಹೆಚ್ಚಿನ ಉತ್ಸಾಹ ಕಂಡು ಬಂದಿದ್ದು 2.47 ಲಕ್ಷ ಮೂರನೇ ಡೋಸ್‌ ಪ್ರದಾನ ಮಾಡಲಾಗಿದೆ. ಉಳಿದಂತೆ 11,680 ಮಂದಿ ಮೊದಲ ಡೋಸ್‌ ಮತ್ತು 41,689 ಮಂದಿ ಎರಡನೇ ಡೋಸ್‌ ಪಡೆದಿದ್ದಾರೆ. ಈವರೆಗೆ ಒಟ್ಟು 11.44 ಕೋಟಿ ಡೋಸ್‌ ಲಸಿಕೆ ಪ್ರದಾನ ಮಾಡಲಾಗಿದೆ.

click me!