
ಬೆಂಗಳೂರು(ಸೆ.08): ಸಿಗ್ನಲ್ ಜಂಪ್ ಸೇರಿದಂತೆ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಸಾರಿಗೆ ಇಲಾಖೆ ಅಧಿಕಾರಿಗಳು ಬಿಎಂಟಿಸಿಯ ಬಸ್‌ವೊಂದಕ್ಕೆ ಬರೋಬ್ಬರಿ 12,200 ರು. ದಂಡ ವಿಧಿಸಿದ್ದಾರೆ...!
ಏಳು ವರ್ಷದ ಹಿಂದೆ ಕೆಎ-01-ಎಫ್-8999 ನೋಂದಣಿ ಸಂಖೆಯ ಬಸ್ಸಿಗೆ ವಿಧಿಸಿರುವ ಈ ದಂಡದ ಮೊತ್ತವನ್ನು ಈಗ ಸಂಬಂಧಪಟ್ಟ ನಿರ್ವಾಹಕನಿಂದ ವಸೂಲಿ ಮಾಡಲು ಬಿಎಂಟಿಸಿ ಅಧಿಕಾರಿಗಳು ಮುಂದಾಗಿದ್ದಾರೆ.
ಸದರಿ ಬಸ್ ಪ್ರಸ್ತುತ ಘಟಕ 45ರಲ್ಲಿದೆ. 2021ರ ಜೂ.30ರಂದು ಸದರಿ ಬಸ್ ವಾರ್ಷಿಕ ನವೀಕರಣಕ್ಕೆ ಹೋದಾಗ ಆರ್‌ಟಿಒ ಅಧಿಕಾರಿಗಳು, ಸಂಚಾರ ನಿಯಮ ಉಲ್ಲಂಘನೆಯ ದಂಡದ ಮೊತ್ತ ಬಾಕಿಯಿರುವುದರಿಂದ ವಾರ್ಷಿಕ ನವೀಕರಣ ಮಾಡುವುದಿಲ್ಲ ಎಂದು ವಾಪಸ್ ಕಳುಹಿಸಿದ್ದಾರೆ. ಹೀಗಾಗಿ ಈ ಸಂಚಾರ ನಿಯಮ ಉಲ್ಲಂಘನೆಗೆ ಕಾರಣರಾದ ಚಾಲನಾ ಸಿಬ್ಬಂದಿಯಿಂದ ದಂಡದ ಮೊತ್ತವನ್ನು ವಸೂಲಿ ಮಾಡುವಂತೆ ಉತ್ತರ ವಲಯ ವಿಭಾಗೀಯ ನಿಯಂತ್ರಾಣಾಧಿಕಾರಿ ಆದೇಶಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಬಿಎಂಟಿಸಿಯಿಂದ ಗುಡ್ ನ್ಯೂಸ್
ಏನಿದು ಪ್ರಕರಣ?
ಸದರಿ ಬಸ್ 2018ರ ಮಾ.16ರಂದು ಘಟಕ 26ರಿಂದ ಘಟಕ 45ಕ್ಕೆ ವರ್ಗಾವಣೆಯಾಗಿದೆ. 2014ರ ಸೆ.23ರಂದು ಸದರಿ ಬಸ್ಸನ್ನು ತಪಾಸಣೆ ಮಾಡಿದ್ದ ಜಯನಗರ ಆರ್‌ಟಿಒ ಅಧಿಕಾರಿಗಳು, ಹೊಗೆ ತಪಾಸಣೆ ಪ್ರಮಾಣ ಪತ್ರ ಅವಧಿ ಮುಕ್ತಾಯ, ಸಿಗ್ನಲ್ ಜಂಪ್ ಸೇರಿದಂತೆ ಸಂಚಾರ ನಿಯಮ ಉಲ್ಲಂಘನೆಯಡಿ 12,200 ರು. ದಂಡ ವಿಧಿಸಿದ್ದರು. ಆ ದಿನ ಈ ಬಸ್ಸನ್ನು ಚಾಲಕ ವೆಂಕಟಪ್ಪ ಚಾಲನೆ ಮಾಡುತ್ತಿದ್ದರು. ಆದರೆ, ಇದೀಗ ಚಾಲಕ ವೆಂಕಟಪ್ಪ ಮೃತರಾಗಿದ್ದಾರೆ. ಹೀಗಾಗಿ ಆ ದಿನ ಚಾಲಕನೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದ ನಿರ್ವಾಹಕ ಲಕ್ಷ್ಮಣ ಅವರಿಂದ ದಂಡದ ಮೊತ್ತ ವಸೂಲಿಗೆ ಸೂಚಿಸಲಾಗಿದೆ.
ಅಂದು ನಿರ್ವಾಹಕ ಲಕ್ಷ್ಮಣ ಅವರು ನಿಗದಿತ ಸ್ಥಳದಲ್ಲಿ ಬಸ್ಸನ್ನು ನಿಲ್ಲಿಸಲು ಚಾಲಕನಿಗೆ ಸೂಚಿಸಬೇಕಿತ್ತು. ಸೂಚಿಸದಿದ್ದ ಕಾರಣ ಆರ್‌ಟಿಒ ಅಧಿಕಾರಿಗಳು ದಂಡ ವಿಧಿಸಿದ್ದಾರೆ. ಹಾಗಾಗಿ ಲಕ್ಷ್ಮಣ ಅವರೇ ದಂಡದ ಮೊತ್ತವನ್ನು ಪಾವತಿಸಬೇಕು. ಸಂಬಂಧಪಟ್ಟಅಧಿಕಾರಿಗಳು ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಪ್ರಸ್ತುತ ನಿರ್ವಾಹಕ ಲಕ್ಷ್ಮಣ ಅವರು ಘಟಕ 32ರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅಧಿಕಾರಿಗಳ ನಡೆಗೆ ಆಕ್ರೋಶ:
ಏಳು ವರ್ಷದ ಬಳಿಕ ನಿರ್ವಾಹನಿಂದ ದಂಡ ವಸೂಲಿಗೆ ಮುಂದಾಗಿರುವುದು ಸರಿಯಲ್ಲ. ಪ್ರಕರಣಕ್ಕೆ ಸಂಬಂಧಿಸಿದ ಚಾಲಕನೇ ಮೃತಪಟ್ಟಿದ್ದಾರೆ. ಆದರೂ ನಿಗಮದ ಅಧಿಕಾರಿಗಳು ನಿರ್ವಾಹಕ ಲಕ್ಷ್ಮಣ ಅವರ ಬೆನ್ನು ಬಿದ್ದಿದ್ದಾರೆ. ಸಕಾಲಕ್ಕೆ ವೇತನ ಸಿಗದೇ ಚಾಲನಾ ಸಿಬ್ಬಂದಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಏಳು ವರ್ಷದ ಹಿಂದಿನ ಪ್ರಕರಣವನ್ನು ಈಗ ಕೆದಕಿ ದಂಡ ವಸೂಲಿಗೆ ಮುಂದಾಗಿರುವುದು ಖಂಡನೀಯ ಎಂದು ಬಿಎಂಟಿಸಿಯ ನೌಕರರ ಮುಖಂಡ ಯೋಗೇಶ್ ನಿಗಮದ ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.