ಹಾಲುಣಿಸುವಾಗಲೇ ಹಸುಗೂಸಿನ ಜೊತೆ ತಾಯಿ ಸಾವು!

By Suvarna News  |  First Published Mar 6, 2020, 8:43 AM IST

ತಾಯಿ ತನ್ನ ಕಂದಮ್ಮನಿಗೆ ಎದೆಹಾಲುಣಿಸುತ್ತಿದ್ದಳು. ಇನ್ನೇನು ಒಂದು ತಿಂಗಳಲ್ಲಿ ಮದುವೆಯಾಗಬೇಕಿದ್ದ ಸಂದೀಪನೆಂಬ ಯುವಕ ತನ್ನ ಭಾವೀ ವಧುವಿನೊಂದಿಗೆ ಮದುವೆ ಬಗ್ಗೆ ಮಾತನಾಡುತ್ತಿದ್ದ. ನಾಳೆ ನನ್ನ ಬರ್ತ್‌ ಡೇ ಎಂದು ಪುಟ್ಟ ಹೆಣ್ಣು ಮಗು ಸಂಭ್ರಿಸುತ್ತಿತ್ತು. ಇವರೆಲ್ಲರನ್ನು ಹೊತ್ತು ಸಾಗುತ್ತಿದ್ದ ಕಾರು ಹಠಾತ್ತನೆ ಡಿವೈಡರ್‌ಗೆ ಡಿಕ್ಕಿ ಹೊಡೆದಿತ್ತು. ಕನಸು ಕಾಣುತ್ತಿದ್ದ ಜೀವಗಳೆಲ್ಲ ನಿಮಿಷಗಳಲ್ಲಿ ನಿರ್ಜೀವ ದೇಹಗಳಾಗಿ ಬಿದ್ದಿದ್ದರು..!


ತುಮಕೂರು(ಮಾ.07): ಧರ್ಮಸ್ಥಳ ಶ್ರೀ ಮಂಜುನಾಥನ ದರ್ಶನ ಪಡೆದು ವಾಪಸ್ಸಾಗುತ್ತಿದ್ದ ಕುಟುಂಬವಿದ್ದ ವಾಹನ ಮತ್ತು ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕಾರಿನ ನಡುವೆ ಕುಣಿಗಲ್‌ನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುರುವಾರ ಮಧ್ಯರಾತ್ರಿ 1.30ಗೆ ನಡೆದ ಭೀಕರ ಅಪಘಾತದಲ್ಲಿ 13 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ನಾಲ್ಕು ಮಂದಿ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಗೆಳೆಯನ ಮಂಚಕ್ಕೆ ದೂಡಿದ ಪತಿ, ಗೃಹಿಣಿ ಆತ್ಮಹತ್ಯೆ

Latest Videos

ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಬ್ರೀಜಾ ಕಾರು ಕುಣಿಗಲ್‌ ತಾಲೂಕಿನ ಬ್ಯಾಲದಕೆರೆ ಗೇಟ್‌ ಬಳಿ ಕಾರು ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದು ರಸ್ತೆಯ ಮತ್ತೊಂದು ಭಾಗದಲ್ಲಿ ಬೆಂಗಳೂರಿನ ಕಡೆ ಬರುತ್ತಿದ್ದ ತವೇರಾ ವಾಹನಕ್ಕೆ ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ. ಈ ವೇಳೆ ತವೇರಾದಲ್ಲಿದ್ದ 13 ಪ್ರಯಾಣಿಕರಲ್ಲಿ ಒಂದೇ ಕುಟುಂಬದ 8 ಮಂದಿ ಸೇರಿ ಒಟ್ಟು 10 ಮಂದಿ ಹಾಗೂ ಬ್ರೀಜಾ ಕಾರಿನಲ್ಲಿದ್ದ ನಾಲ್ವರ ಪೈಕಿ 3 ಮಂದಿ ಸಾವಿಗೀಡಾಗಿದ್ದಾರೆ.

"

ತಮಿಳುನಾಡಿನ ಕೃಷ್ಣಗಿರಿಯ ಸುಲೆಗಿರಿಯವರಾದ ಮಂಜುನಾಥ್‌(35), ಗೌರಮ್ಮ(60), ರತ್ನಮ್ಮ (52), ಸುಂದರ್‌ರಾಜ್‌(48), ರಾಜೇಂದ್ರ(27), ತನುಜಾ(25), ಸರಳಾ(32), ಪ್ರಶಸ್ಯಾ(14), ಮಾಲಾಶ್ರೀ (4), 9 ತಿಂಗಳ ಮಗು ಮತ್ತು ಬ್ರೀಜಾ ಕಾರಿನಲ್ಲಿದ್ದ ಬೆಂಗಳೂರಿನ ಕುಂಬಳಗೋಡು ಮೂಲದ ಮಧು(28), ಲಕ್ಷ್ಮೀಕಾಂತ್‌(24), ಸಂದೀಪ್‌(36) ಮೃತರು. ಘಟನೆಯಲ್ಲಿ ಗಾಯಗೊಂಡಿರುವ ಶ್ವೇತಾ, ಗಂಗೋತ್ರಿ, ಹರ್ಷಿತಾ, ಪ್ರಕಾಶ್‌ ಎಂಬವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಘಟನೆ ಹಿನ್ನೆಲೆ:

ತಮಿಳುನಾಡಿನ ಹೊಸೂರು ಗ್ರಾಮದ ಮಂಜುನಾಥ್‌ ಕುಟುಂಬದವರು ಧರ್ಮಸ್ಥಳದಲ್ಲಿ ತಮ್ಮ 9 ತಿಂಗಳ ಮಗುವಿನ ಮುಡಿ ತೆಗೆಸಿ ನಾಮಕರಣ ಮಾಡಲೆಂದು ತವೇರಾ ಕಾರಿನಲ್ಲಿ ಬೆಂಗಳೂರಿಗೆ ವಾಪಸಾಗುತ್ತಿದ್ದರು. ಇನ್ನು ಬೆಂಗಳೂರಿನಿಂದ ಸ್ನೇಹಿತರಾದ ಪ್ರಕಾಶ್‌, ಸಂದೀಪ್‌, ಮಧು, ಲಕ್ಷ್ಮೀಕಾಂತ್‌ ಧರ್ಮಸ್ಥಳಕ್ಕೆ ರಾತ್ರಿ 10.30ರಲ್ಲಿ ಬ್ರೀಜಾ ಕಾರಿನಲ್ಲಿ ಹೊರಟಿದ್ದರು. ರಾತ್ರಿ 1.30ಗಂಟೆ ಸುಮಾರಿಗೆ ಕುಣಿಗಲ್‌ ತಾಲೂಕಿನ ಬ್ಯಾಲದಕೆರೆ ಗೇಟ್‌ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ಇನ್ನೊಂದು ಬದಿಯ ರಸ್ತೆಗೆ ನುಗ್ಗಿ ಅಲ್ಲಿ ಬೆಂಗಳೂರಿನ ಕಡೆ ವೇಗವಾಗಿ ಬರುತ್ತಿದ್ದ ತವೇರಾಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಎರಡೂ ಕಾರುಗಳು ಸಂಪೂರ್ಣ ನಜ್ಜುಗುಜ್ಜಾಗಿವೆ. ಈ ಸಂಬಂಧ ಕುಣಿಗಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಖರಣ ದಾಖಲಾಗಿದೆ.

ಮದ್ಯ ಸೇವನೆಯಿಂದ ಅಪಘಾತ?:

ಧರ್ಮಸ್ಥಳಕ್ಕೆ ತೆರಳುತ್ತಿದ್ದ ಬ್ರೀಜಾ ಕಾರಿನಲ್ಲಿದ್ದವರು ಮದ್ಯ ಸೇವಿಸಿದ್ದರು ಎಂದು ಹೇಳಲಾಗುತ್ತಿದೆ. ಕಾರಿನಲ್ಲಿ ಬಿಯರ್‌ ಬಾಟಲ್‌ಗಳಿದ್ದು ಅಪಘಾತದ ವೇಳೆ ಅವು ಪುಡಿಯಾಗಿವೆ. ಜೊತೆಗೆ ಮಿಕ್ಸರ್‌, ಚಿಪ್ಸ್ ಪೊಟ್ಟಣಗಳೂ ಕಾರಿನಲ್ಲಿ ಪತ್ತೆಯಾಗಿವೆ. ಮರಣೋತ್ತರ ಪರೀಕ್ಷೆ ಬಳಿಕ ಮದ್ಯ ಸೇವನೆಯಿಂದ ಈ ಘಟನೆ ನಡೆದಿದೆಯೇ ಎನ್ನುವುದು ಖಚಿತವಾಗಲಿದೆ.

ಹಾಲುಣಿಸುವಾಗಲೇ ಹಸುಗೂಸಿನ ಜೊತೆ ತಾಯಿ ಸಾವು!

ಧರ್ಮಸ್ಥಳದಲ್ಲಿ 9 ತಿಂಗಳ ಗಂಡು ಮಗುವಿಗೆ ಮುಡಿ ಕೊಟ್ಟು ರಾತ್ರಿ ಕ್ಷೇತ್ರದಲ್ಲೇ ಊಟ ಮುಗಿಸಿ ಮಂಜುನಾಥ್‌ ಕುಟುಂಬ ತವೇರಾ ವಾಹನದಲ್ಲಿ ತಮಿಳುನಾಡಿನ ಹೊಸೂರಿಗೆ ಹೊರಟಿತ್ತು. ಕಾರು ಕುಣಿಗಲ್‌ ದಾಟಿ ಸಾಗುತ್ತಿದ್ದಾಗ ಹಸುಗೂಸು ಅಳಲಾರಂಭಿಸಿತು. ಆಗ ತನುಜಾ ತನ್ನ ಮಗುವಿಗೆ ಹಾಲುಣಿಸುತ್ತಿದ್ದರು. ಅಷ್ಟರಲ್ಲೇ ಬೆಂಗಳೂರಿನಿಂದ ಧರ್ಮಸ್ಥಳದ ಕಡೆಗೆ ವೇಗವಾಗಿ ಸಾಗುತ್ತಿದ್ದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಯಮದೂತನಂತೆ ರಸ್ತೆಯ ಇನ್ನೊಂದು ಕಡೆಗೆ ನುಗ್ಗಿದೆ. ಈ ವೇಳೆ ಟವೇರಾ ಮತ್ತು ಆ ಕಾರಿನ ನಡುವೆ ಸಂಭವಿಸಿದ ಮುಖಾಮುಖಿ ಅಪಘಾತದಲ್ಲಿ ತಾಯಿ-ಮಗು ಹಾಲುಣಿಸುವ ಸ್ಥಿತಿಯಲ್ಲೇ ಮೃತಪಟ್ಟಿದ್ದಾರೆ.

ಬದುಕುಳಿದ ಬಾಲೆಗೆ ಹುಟ್ಟು ಹಬ್ಬ

ಅಪಘಾತದಲ್ಲಿ ಪವಾಡದ ರೀತಿಯಲ್ಲಿ ಬದುಕುಳಿದಿರುವ ಬಾಲಕಿ ಹರ್ಷಿತಾಗೆ ಶುಕ್ರವಾರ ಹುಟ್ಟು ಹಬ್ಬ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಹರ್ಷಿತಾಳ ಹುಟ್ಟುಹಬ್ಬಕ್ಕೆ ಅವರ ಅಪ್ಪ ಅಕ್ಕಪಕ್ಕದವರನ್ನು ಮನೆಗೆ ಕರೆಸಿ ಕೇಕ್‌ ಕಟ್‌ ಮಾಡಿ ಮಗಳ ಹುಟ್ಟುಹಬ್ಬ ಆಚರಿಸಬೇಕೆಂದು ನಿಶ್ಚಯಿಸಿದ್ದರು. ಆದರೆ ಅಪಘಾತದಲ್ಲಿ ಅಪ್ಪ ಮೃತಪಟ್ಟರೆ, ಪುತ್ರಿ ಹರ್ಷಿತಾ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಹುಟ್ಟುಹಬ್ಬದ ದಿನವೇ ಅಕ್ಕ ಮತ್ತು ಕುಟುಂಬಸ್ಥರನ್ನು ಕಳೆದುಕೊಂಡ ನೋವು ತಡೆಯಲಾಗದೆ ಕಣ್ಣೀರು ಹಾಕುತ್ತಿದ್ದಾರೆ. ಹರ್ಷಿತಾಳ ಎರಡೂ ಭುಜದ ಮೂಳೆ ಮುರಿದಿದ್ದು ಚಿಕಿತ್ಸೆ ಮುಂದುವರೆದಿದೆ. ಈಕೆ ಪಕ್ಕದಲ್ಲೇ ಈಕೆ ತಾಯಿ ಶ್ವೇತಾ ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಿಕ್ಕುತ್ತಿದ್ದರು ಮಹಿಳಾ ಪೊಲೀಸರು

ಕುಣಿಗಲ್‌ ಬಳಿಯ ಬ್ಯಾಲದಕೆರೆ ಬಳಿ ಭೀಕರ ಅಪಘಾತದಲ್ಲಿ ಮೃತಪಟ್ಟವರನ್ನು ನೋಡಿದ ಮಹಿಳಾ ಪೊಲೀಸರಲ್ಲಿ ಒಬ್ಬಾಕೆ ತಾಯಿ-ಮಗುವಿನ ಸಾವು ನೋಡಿ ಬಿಕ್ಕಿ ಬಿಕ್ಕಿ ಅತ್ತ ಘಟನೆ ಕೂಡ ನಡೆಯಿತು. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಪರಿಹಾರ ಕಾರ್ಯಕ್ಕಾಗಿ ಪೊಲೀಸರಿಗೆ ತುರ್ತು ಬುಲಾವ್‌ ಹೋಯಿತು. ಹೀಗಾಗಿ ಮಹಿಳಾ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಆದರೆ ಅದರಲ್ಲಿ ಒಬ್ಬಾಕೆ ಅಪಘಾತದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಶವಗಳು, ತಾಯಿ-ಮಗು ದಾರುಣ ರೀತಿಯಲ್ಲಿ ಮೃತಪಟ್ಟಿರುವುದನ್ನು ನೋಡಿ ಭಾವುಕರಾಗಿ ಕಣ್ಣೀರಿಟ್ಟರು.

ಮೃತ ಯುವಕನಿಗೆ ನಿಶ್ಚಿತಾರ್ಥವಾಗಿತ್ತು!

ಬ್ರಿಜಾ ಕಾರಿನಲ್ಲಿದ್ದ ಮೃತ ಸಂದೀಪನಿಗೆ ಮದುವೆ ನಿಶ್ಚಯವಾಗಿತ್ತು. ಇನ್ನೊಂದು ತಿಂಗಳಲ್ಲಿ ಆತ ಗೃಹಸ್ಥಾಶ್ರಮಕ್ಕೆ ಕಾಲಿಡಬೇಕಾಗಿತ್ತು. ಬೆಂಗಳೂರಿನಿಂದ ತನ್ನ ಮನೆಯಿಂದ ಹೊರಡುವಾಗ ತನ್ನ ಭಾವಿ ಪತ್ನಿಗೆ ಕರೆ ಮಾಡಿ ಮಾತನಾಡಿದ್ದ. ಕಾರಿನಲ್ಲೂ ಭಾವಿ ಪತ್ನಿಯ ಜತೆ ಮದುವೆ ಸಿದ್ಧತೆಗಳ ಕುರಿತು ಮಾತನಾಡುತ್ತಿದ್ದನಂತೆ. ಮದುವೆಗೂ ಮುನ್ನ ಧರ್ಮಸ್ಥಳಕ್ಕೆ ಹೋಗಿ ದೇವರ ದರ್ಶನ ಮಾಡಿಕೊಂಡು ಬರಲು ಹೊರಟಿದ್ದನಂತೆ. ಆದರೆ ವಿಧಿ ಆತನ ಮದುವೆ ಕನಸನ್ನೇ ನುಚ್ಚು ನೂರು ಮಾಡಿದೆ.

ಅಪಘಾತ ವಲಯ ಎಂದು ಗುರುತಿಸಿದ ಪೊಲೀಸರು:

ಅಪಘಾತ ನಡೆದ ಸ್ಥಳವನ್ನು ಅಪಘಾತ ವಲಯ ಎಂದು ಪೊಲೀಸರು ಗುರುತಿಸಿದ್ದಾರೆ.  ಬ್ಯಾಲಕೆರೆ ಬಳಿ ಒಂದೇ ತಿಂಗಳ ಅವಧಿಯಲ್ಲಿ 5ಕ್ಕೂ ಹೆಚ್ಚು ಅಪಘಾತ ನಡೆದು 17 ಜನ ಸಾವನಪ್ಪಿದ್ದಾರೆ. ರಸ್ತೆಯಲ್ಲಿ ಅತಿವೇಗವಾಗಿ ವಾಹನ ಚಲಾಯಿಸುತ್ತಾರೆ.  ಬ್ಯಾಲಕೆರೆ ಗೇಟ್ ನ 1 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಪದೇ ಪದೇ ಅಪಘಾತ ನಡೆಯುತ್ತಿರುತ್ತವೆ.‌ ರಸ್ತೆ ದಾಟುವುದಕ್ಕೆ ಭಯವಾಗುತ್ತದೆ.  ಬೆಳಗ್ಗೆಯಿಂದ ರಾತ್ರಿವರೆಗೂ ಸದಾ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿರುತ್ತೆ ಎನ್ನಲಾಗಿದೆ.

click me!