110 ದೇಗುಲಗಳಲ್ಲಿ ಸಾಮೂಹಿಕ ವಿವಾಹ : ಚಿನ್ನ, ಸೀರೆ ಉಡುಗೊರೆ

By Kannadaprabha NewsFirst Published Jan 12, 2020, 10:28 AM IST
Highlights

ಕರ್ನಾಟಕದ ಒಟ್ಟು 110 ದೇವಾಲಯಗಳಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ. ಸಾಮೂಹಿಕ ವಿವಾಹ ನಡೆಸುವವರಿಗೆ ಚಿನ್ನ, ಹಾಗೂ ಬಟ್ಟೆ ನೀಡಲಾಗುತ್ತದೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. 

ಶಿವಮೊಗ್ಗ [ಜ.12]:  ಮುಜರಾಯಿ ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹ ನಡೆಸಲು ಸರ್ಕಾರ ತೀರ್ಮಾನಿಸಿದ್ದು, ರಾಜ್ಯದ ಸುಮಾರು 110 ದೇವಸ್ಥಾನಗಳಲ್ಲಿ ಏ. 26 ರಂದು ವಿವಾಹ ನಡೆ​ಸ​ಲಾ​ಗು​ವು​ದು ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಸಮೀಪದ ಊರಗಡೂರು ಗ್ರಾಮದ ಗುಡ್ಡೇಮರಡಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ತಾಲೂಕು ದೇವಸ್ಥಾನ ಸಮಿತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಸಚಿವರು, ವಧುವರರಿಗೆ ಸುಮಾರು 40 ಸಾವಿರ ರು. ಚಿನ್ನ, 10 ಸಾವಿರ ರು. ಧಾರೆ ಸೀರೆ ನೀಡಲಾಗುವುದು. ಇದಕ್ಕಾಗಿ ದೇವಸ್ಥಾನ ಸಮಿತಿ ಸಹಕರಿಸಬೇಕು ಎಂದರು.

ಸಾರ್ವಜನಿಕರ ಹಣ ಸಾಮಾಜಿಕವಾಗಿ ವಿನಿಯೋಗವಾಗಲು ಇದು ಅನುಕೂಲವಾಗುತ್ತದೆ. ಸಾಮೂಹಿಕ ವಿವಾಹ ಏರ್ಪಡಿಸುವುದರಿಂದ ಬಡವರಿಗೆ ವರದಾನವಾಗುತ್ತದೆ. ಈ ಹಿನ್ನೆಲೆಯಲ್ಲಿ ಇಂತಹ ಉತ್ತಮ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ ಎಂದು ಹೇಳಿದರು.

ದೇವಸ್ಥಾನ ಜೀರ್ಣೋದ್ಧಾರಕ್ಕೆ ಸರ್ಕಾರದಿಂದ ನೆರವು ನೀಡಲಾಗುವುದು. ಅನೇಕ ದೇವಸ್ಥಾನ ಅನುದಾನವಿಲ್ಲದೆ ನಡೆಯುತ್ತವೆ. ಇಂತಹ ದೇವಾಲಯಗಳಲ್ಲೂ ಸಮಾಜಮುಖಿ ಕೆಲಸ ಸದಾ ನಡೆಯುತ್ತಲೇ ಇರುತ್ತವೆ. ಇವುಗಳ ಜೀರ್ಣೋದ್ಧಾರ ಆಗಬೇಕು. ದೇವಸ್ಥಾನ ಸಮಿತಿಯವರು ಮುಂದೆ ಬಂದರೆ ಅಭಿವೃದ್ಧಿಗೆ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ ಸುಮಾರು 35 ಸಾವಿರ ದೇವಸ್ಥಾನಗಳಿವೆ. ಅದರಲ್ಲಿ 190 ಎ-ದರ್ಜೆ, 100 ಬಿ-ದರ್ಜೆ, 150 ಸಿ-ದರ್ಜೆ, ಉಳಿದವು ಡಿ-ದರ್ಜೆಯ ದೇವಸ್ಥಾನಗಳಾಗಿವೆ. ಆರ್ಥಿಕ ವರಮಾನದ ಹಿನ್ನೆಲೆಯಲ್ಲಿ ಇವುಗಳನ್ನು ವಿಂಗಡಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ದೇವಸ್ಥಾನಗಳ ಅಭಿವೃದ್ಧಿಗೆ ಮತ್ತಷ್ಟುಕ್ರಮ ಕೈಗೊಳ್ಳಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ವಿಧಾನ ಪರಿಷತ್‌ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್‌, ನಗರ ಪಾಲಿಕೆ ಉಪಮೇಯರ್‌ ಎಸ್‌.ಎನ್‌.ಚನ್ನಬಸಪ್ಪ, ವಿರೂಪಾಕ್ಷಪ್ಪ, ಹೇಮಾವತಿ, ಶಿವನಂಜಪ್ಪ ಸೇರಿದಂತೆ ಹಲವರಿದ್ದರು.

ಜಿಲ್ಲಾ ಧಾರ್ಮಿಕ ಪರಿಷತ್‌ ರಚಿಸುವಂತೆ ಈಗಾಗಲೇ ಆಗ್ರಹ ಕೇಳಿಬಂದಿದೆ. ದೇವಸ್ಥಾನಗಳಲ್ಲಿನ ಸಮಸ್ಯೆಗಳ ಕುರಿತು ಚರ್ಚಿಸಲು ಮತ್ತು ಅಭಿವೃದ್ಧಿಗೊಳಿಸಲು ಸಹಾಯಕವಾಗುವಂತೆ 15 ದಿನದಲ್ಲಿ ಧಾರ್ಮಿಕ ದತ್ತಿ ಸಮಿತಿ ರಚಿಸಲಾಗುವುದು. ಇಲಾಖೆಯಿಂದ ವಾರ್ಷಿಕ 48 ಸಾವಿರ ರು. ಗೌರವ ಧನ ನೀಡಲಾಗುತ್ತಿದೆ. ಒಂದುವೇಳೆ ಗೌರವಧನ ಸಿಗದೆ ಇದ್ದವರು ತಿಳಿಸಿದರೆ ಅಥವಾ ಶಾಸಕರ ಮೂಲಕ ಪ್ರಸ್ತಾವನೆ ಸಲ್ಲಿಸಿದರೆ ಕ್ರಮ ಕೈಗೊಳ್ಳಲಾಗುವುದು.

ಕೋಟಾ ಶ್ರೀನಿವಾಸ ಪೂಜಾರಿ, ಮುಜರಾಯಿ ಸಚಿವ

ಅನೇಕ ದೇವಾಲಯಗಳು ಆರ್ಥಿಕ ಸಂಕಷ್ಟದಲ್ಲಿವೆ. ಇದಕ್ಕೆ ವಾರ್ಷಿಕ ಅನುದಾನ ಬೇಕಾಗುತ್ತದೆ ಎಂದು ಸಚಿವರಲ್ಲಿ ಮನವಿ ಮಾಡಿದರು. ಇದರ ಜೊತೆಗೆ ಗ್ರಾಮಾಂತರ ಪ್ರದೇಶದ ಹಲವು ಕಡೆಗಳಲ್ಲಿ ಕೃಷಿ ಹೊಂಡ ನಿರ್ಮಿಸಿ ಮೀನು ಕೃಷಿ ಮಾಡುತ್ತಿದ್ದಾರೆ. ಇದಕ್ಕೆ ಸಮರ್ಪಕ ರೀತಿಯ ಸಹಕಾರ ಬೇಕಾಗಿದೆ.

- ಕೆ.ಬಿ.ಅಶೋಕ್‌ ನಾಯ್ಕ, ಶಾಸಕ

click me!