ಡಿಕೆ ಸುರೇಶ್ ಹಾಗೂ ಡಿಕೆ ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. ನೂರಾರು ಕುಟುಂಬಗಳನ್ನು ಮತಾಂತರ ಮಾಡುತ್ತಿದ್ದಾರೆಂದಯ ಆರೋಪಿಸಲಾಗಿದೆ.
ರಾಮನಗರ [ಜ.12]: ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್ ಅವರು ಭೂಮಿ ಆಸೆ ತೋರಿಸಿ ನಲ್ಲಹಳ್ಳಿಯಲ್ಲಿನ ನೂರಾರು ಹಿಂದು ಕುಟುಂಬಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಿದ್ದಾರೆ ಎಂದು ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥ್ ನಾರಾಯಣಗೌಡ ಆರೋಪ ಮಾಡಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಕುಟುಂಬಗಳಿಗೆ ಭೂಮಿ ಮಂಜೂರಾಗಿರುವ ದಾಖಲೆಗಳನ್ನು ಬಿಡುಗಡೆಗೊಳಿಸಿದ ಅವರು, ಏಸುಕ್ರಿಸ್ತನ ಪ್ರತಿಮೆ ಸ್ಥಾಪಿಸಲು ಉದ್ದೇಶಿಸಿರುವ ಕಪಾಲ ಬೆಟ್ಟಕನಕಪುರ ತಾಲೂಕು ಉಯ್ಯಂಬಳ್ಳಿ ಹೋಬಳಿ ನಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ಈ ಭಾಗದಲ್ಲಿ ಮತಾಂತರ ನಿರಂತರವಾಗಿ ನಡೆಯುತ್ತಿದೆ ಎಂದರು.
ದಶಕಗಳಿಂದ ಬಗರ್‌ಹುಕುಂ ಹಕ್ಕುಪತ್ರಕ್ಕಾಗಿ ಹೋರಾಟ ನಡೆಸಿದವರಿಗೆ ಭೂಮಿ ಮಂಜೂರು ಆಗಿಲ್ಲ. ಆದರೆ , ನಲ್ಲಹಳ್ಳಿಯಲ್ಲಿ ಕ್ರಿಶ್ಚಯನ್ನರಾಗಿ ಮತಾಂತರಗೊಂಡ ನೂರಾರು ಕುಟುಂಬಗಳಿಗೆ ಎಕರೆಗಟ್ಟಲೆ ಭೂಮಿ ಹೇಗೆ ಮಂಜೂರಾಯಿತು ಎಂದು ಪ್ರಶ್ನಿಸಿದರು.
ಮತಾಂತರವಾಗಿರುವ ಕುಟುಂಬಕ್ಕೆ ಭೂಮಿಯನ್ನು ಪರಭಾರೆ ಮಾಡಿರುವ ತಮ್ಮ ಆರೋಪ ಸಮರ್ಥಿಸಿಕೊಳ್ಳಲು ಅಶ್ವತ್‌್ಥ ನಾರಾಯಣಗೌಡರು, ವಿಕ್ಟೋರಿಯಾ ರಾಣಿ ಡಾಟರ್ ಆಫ್ ಪುಟ್ಟಸ್ವಾಮಾಚಾರ್ ಉದಾಹರಣೆ ನೀಡಿದರು. ಇದು ಮತಾಂತರಗೊಂಡಿರುವ ಕುಟುಂಬ ಎಂಬುದು ಸ್ಪಷ್ಟವಾಗಿದೆ. ಇಂತಹ ಅನೇಕ ಉದಾಹರಣೆಗಳಿವೆ ಎಂದು ಆರ್‌ಟಿಸಿ ಪತ್ರಗಳನ್ನು ಪ್ರದರ್ಶಿಸಿದರು.
ಹಾರೋಬೆಲೆ ಗ್ರಾಮದ ಸುತ್ತಮುತ್ತ ನೂರಾರು ಎಕರೆ ಗೋಮಾಳವಿದೆ. ಆ ಗ್ರಾಮಗಳಲ್ಲಿ ವಾಸಿಸುವ ಹಿಂದುಳಿದ ವರ್ಗಗಳು, ಒಕ್ಕಲಿಗ ಕುಟುಂಬಗಳಿಗೂ ಭೂಮಿ ಕೊಡಿಸದೆ, ಕೇವಲ ಒಂದು ಧರ್ಮೀಯರಿಗೆ ಮಾತ್ರ ಭೂಮಿ ಮಂಜೂರು ಮಾಡಿರುವುದು ಎಷ್ಟುಸರಿ ಎಂದು ಪ್ರಶ್ನಿಸಿದರು.
ನಲ್ಲಹಳ್ಳಿ ಗ್ರಾಮದಲ್ಲಿ ಕ್ರಿಶ್ಚಿಯನ್ ಮತಕ್ಕೆ ಮತಾಂತರಗೊಂಡ ಕುಟುಂಬಗಳೇ ಹೆಚ್ಚಾಗಿ ವಾಸಿಸುತ್ತಿವೆ. ಈ ಕುಟುಂಬಗಳಿಗೆ ಭೂಮಿ ಮಂಜೂರಾಗಿದೆ. ಮತಾಂತರಗೊಂಡರೆ ಭೂಮಿ ಮಂಜೂರಾಗುತ್ತದೆ ಎಂಬ ಆಮೀಷವನ್ನು ಒಡ್ಡಲಾಗಿದೆ. ಈಗಾಗಲೇ ಅಲ್ಲಿ ಒಕ್ಕಲಿಗರು ಸೇರಿದಂತೆ ಹಿಂದುಳಿದ ವರ್ಗಗಳಿಗೆ ಸೇರಿದ ಅನೇಕ ಕುಟುಂಬಗಳಿವೆ. ಈ ಎಲ್ಲಾ ವಿಚಾರಗಳು ತಿಳಿದಿದ್ದರೂ ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಅವರು ಮತಾಂತರಕ್ಕೆ ಕಾರಣರಾಗಿದ್ದಾರೆ ಎಂದು ಟೀಕಿಸಿದರು.
ಡಿಕೆಶಿಗೆ ಪ್ರಭಾವಿ ನಾಯಕ ಅಡ್ಡಗಾಲು: KPCC ಅಧ್ಯಕ್ಷ ಹುದ್ದೆ 3ನೇ ವ್ಯಕ್ತಿ ಪಾಲು..?.
ಮುನೇಶ್ವರ ಬೆಟ್ಟದಲ್ಲಿ (ಕಪಾಲ ಬೆಟ್ಟ) ಹಾರೋಬೆಲೆ ಕಪಾಲ ಬೆಟ್ಟಅಭಿವೃದ್ದಿ ಟ್ರಸ್ಟ್‌ಗೆ ಒಂದು ಎಕರೆಗೆ ಕೇವಲ 10 ಲಕ್ಷ ರುಪಾಯಿಗೆ ಕೊಡಲಾಗಿದೆ. ಇದರ ಮಾರುಕಟ್ಟೆಬೆಲೆ ಇನ್ನು ಹೆಚ್ಚಾಗಿದೆ. ಆದರೂ ಅತಿ ಕಡಿಮೆ ಬೆಲೆಗೆ ಟ್ರಸ್ಟ್‌ಗೆ ಕೊಡಲಾಗಿದೆ. ತಾವು 10 ಗುಂಟೆಗೆ 10 ಲಕ್ಷ ರು. ಕೊಡಲು ಸಿದ್ದ, ಕೊಡಿಸಿ ಎಂದು ಅವರು ಡಿಕೆ ಸಹೋದರರಿಗೆ ಸವಾಲು ಹಾಕಿದರು.
ಸದರಿ ಭೂಮಿಗೆ ಎಚ್‌ಡಿಎಫ್‌ಸಿ ಬ್ಯಾಂಕು ಭೂಮಿ ಅಡ ಇಟ್ಟುಕೊಂಡು 7 ಲಕ್ಷ ರುಪಾಯಿ ಸಾಲ ಮಂಜೂರು ಮಾಡಿದೆ. ಎಲ್ಲಾ ಬ್ಯಾಂಕುಗಳು ಮಾರುಕಟ್ಟೆಬೆಲೆಯ ಕಾಲು ಭಾಗ ಮಾತ್ರ ಸಾಲ ನೀಡುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅಂದರೆ, ಇಲ್ಲಿನ ಭೂಮಿಯ ಬೆಲೆ ಎಷ್ಟಿರಬಹುದು ಎಂಬುದನ್ನು ಬ್ಯಾಂಕ್‌ನ ದಾಖಲೆಗಳೆ ಸ್ಪಷ್ಟಪಡಿಸುತ್ತಿವೆ ಎಂದರು.
ಪೊಲೀಸರು ಕಿಸ್ ಕೊಡಬೇಕಿತ್ತೆ:
ಮಂಗಳೂರಿನಲ್ಲಿ ನಡೆದ ಗಲಭೆಗಳ ವಿಚಾರದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಸಿಡಿಯ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಸಿನಿಮಾ ನಿರ್ಮಾಪಕರು, ಮೊದಲ ಚಲನಚಿತ್ರಗಳನ್ನು ಬಿಡುಗಡೆ ಮಾಡುತ್ತಿದ್ದರು. ಈಗ ಸಿಡಿ ಬಿಡುಗಡೆ ಮಾಡಿದ್ದಾರೆ. ಸಮಾಜಘಾತುಕ ಶಕ್ತಿಗಳ ಮೇಲೆ ಗೋಲಿಬಾರ್ ಮಾಡದೆ ಅವರನ್ನು ಕರೆದು ಪೊಲೀಸರು ಕಿಸ್ ಕೊಡಬೇಕಿತ್ತೆ ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಮದ್ದೂರಿನಲ್ಲಿ ಜೆಡಿಎಸ್ ಕಾರ್ಯಕರ್ತರೊಬ್ಬರನ್ನು ಕೊಲೆ ಮಾಡಿದ ಆರೋಪಿಯನ್ನು ಎನ್‌ಕೌಂಟರ್ ಮಾಡಿ ಮುಗಿಸಿ ಎಂದು ಪೊಲೀಸರಿಗೆ ಸೂಚನೆ ಕೊಟ್ಟಿದ್ದು ಏಕೆ? ಕುಮಾರಸ್ವಾಮಿ ಅವರು ಬೇಜವಾಬ್ದಾರಿ ಹೇಳಿಕೆಗಳನ್ನು ಕೊಡುವುದನ್ನು ನಿಲ್ಲಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಎಸ್.ಆರ್. ನಾಗರಾಜ್, ಜಿ.ವಿ. ಪದ್ಮನಾಭ, ಪ್ರವೀಣ್ ಗೌಡ, ಮಂಜು, ಕುಮಾರ್, ರುದ್ರದೇವರು ಇದ್ದರು.