ಸಂಕ್ರಮಣದ ಕರಿಗೆ ಹೋಗುವಾಗ ಭೀಕರ ಅಪಘಾತ: ಸ್ಥಳದಲ್ಲೇ 12 ಮಂದಿ ದುರ್ಮರಣ

By Suvarna NewsFirst Published Jan 15, 2021, 12:21 PM IST
Highlights

ದಾವಣಗೆರೆಯಿಂದ ಬೆಳಗಾವಿ ಕಡೆಗೆ‌ ಹೊರಟ್ಟಿದ್ದ ಟೆಂಪೋ| ಧಾರವಾಡ ಗ್ರಾಮೀಣ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ| ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಧಾರವಾಡ ಎಸ್ಪಿ ಕೃಷ್ಣಕಾಂತ| 

ಧಾರವಾಡ(ಜ.15):ಟೆಂಪೊ‌ ಟ್ಯಾವಲರ್‌ ಮತ್ತು ಟಿಪ್ಪರ್‌ ನಡುವೆ ಡಿಕ್ಕಿ ಸಂಭವಿಸಿದ‌ ಪರಿಣಾಮ 12 ಜನ ಮೃತಪಟ್ಟು, 6 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಇಟಿಗಟ್ಟಿ ಗ್ರಾಮದ ಬೈಪಾಸ್‌ನಲ್ಲಿ ಇಂದು(ಶುಕ್ರವಾರ) ನಡೆದಿದೆ. 

ಮೃತರಲ್ಲಿ ಬಹುತೇಕರು ದಾವಣಗೆರೆ ಮೂಲದವರಾಗಿದ್ದಾರೆ. ನಗರದ ವಿದ್ಯಾನಗರ, ಎಂಸಿಸಿ ಎ ಬ್ಲಾಕ್ ಮತ್ತು ಎಂಸಿಸಿ ಬಿ ಬ್ಲಾಕ್ ನಿವಾಸಿಗಳಾಗಿದ್ದಾರೆ. ಇವರೆಲ್ಲ ದಾವಣಗೆರೆ ನಗರದ ಸೇಂಟ್ ಪೌಲ್ಸ್ ಕಾನ್ವೆಂಟ್ ಶಾಲೆಯ ಹಳೆ ವಿದ್ಯಾರ್ಥಿಗಳಾಗಿದ್ದಾರೆ. 

"

ಇಂದು ಎಲ್ಲರೂ ಸೇರಿ ಗೋವಾಗೆ ಪ್ರವಾಸಕ್ಕೆ ಹೊರಟಿದ್ದರು. ಮಧ್ಯರಾತ್ರಿ 2.30 ಕ್ಕೆ ದಾವಣಗೆರೆ ಬಿಟ್ಟಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ದುರ್ಘಟನೆಯಲ್ಲಿ ಮಾಜಿ ಶಾಸಕ ಬಿಜೆಪಿ ಮುಖಂಡ ಗುರುಸಿದ್ದನಗೌಡರ ಸೊಸೆ ಆರೈಕೆ ಆಸ್ಪತ್ರೆ ಡಾ.ರವಿಕುಮಾರ ಪತ್ನಿ ಪ್ರೀತಿ ರವಿಕುಮಾರ ಸಾವನ್ನಪ್ಪಿದ್ದಾರೆ. ಸ್ತ್ರೀ ರೋಗ ತಜ್ಞ ಡಾ.ವೀಣಾ ಪ್ರಕಾಶ ಅಪಘಾತದಲ್ಲಿ ಮೃತಪಟ್ಟಿದ್ದಾರೆ. 

ಮಠದ ಆಸ್ತಿ ಮರ​ಳಿ​ಸ​ದಿ​ದ್ದರೆ ಕಾವಿ ಬಟ್ಟೆ ತೊರೆ​ಯು​ವೆ: ದಿಂಗಾ​ಲೇ​ಶ್ವರ ಶ್ರೀ

ದಾವಣಗೆರೆಯಿಂದ ಬೆಳಗಾವಿ ಕಡೆಗೆ‌ ಟೆಂಪೋ ಹೊರಟಿತ್ತು ಎಂದು ತಿಳಿದು ಬಂದಿದೆ.  ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ್‌ಗೆ ರವಾನೆ ಮಾಡಲಾಗಿದೆ. ಟೆಂಪೋದಲ್ಲಿದ್ದ 18 ಜನಗಳ ಪೈಕಿ 11 ಸಾವನ್ನಪ್ಪಿದ್ದಾರೆ. ಲಾರಿಯೊಳಗಿದ್ದ ಇಬ್ಬರ ಪೈಕಿ ಓರ್ವ ಮೃತಪಟ್ಟಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. 

ಸ್ಥಳಕ್ಕೆ ಧಾರವಾಡ ಎಸ್ಪಿ ಕೃಷ್ಣಕಾಂತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದಲ್ಲಿ ಮೃತರಾದವರು ದಾವಣಗೆರೆ ಮೂಲದವರಾಗಿದ್ದಾರೆ ಎಂದು ತಿಳಿದು ಬಂದಿದೆ. 
 

click me!