ಚಿಕ್ಕಲ್ಲೂರು ಜಾತ್ರೆಯಲ್ಲಿ ಮಾರಾಟ ಮಾಡುವ ಉದ್ದೇಶದೊಂದಿಗೆ ಬೆಳೆಯಲಾಗಿದ್ದ 101 ಕೆಜಿ ಗಾಂಜಾವನ್ನು ಪೊಲೀಸರು ಬುಧವಾರ ವಶಪಡಿಸಿಕೊಂಡಿದ್ದಾರೆ. ಬರೋಬ್ಬರಿ 89 ಕೆಜಿ ಹಸಿ ಗಾಂಜಾ ಹಾಗೂ ಮಾರಾಟಕ್ಕೆ ಸಿದ್ಧಮಾಡಿಟ್ಟುಕೊಂಡಿದ್ದ 12 ಕೆಜಿ ಒಣ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಚಾಮರಾಜನಗರ(ಜ.09): ಹನೂರು ತಾಲೂಕಿನ ದೊಮ್ಮನಗದ್ದೆಯಲ್ಲಿ ಚಿಕ್ಕಲ್ಲೂರು ಜಾತ್ರೆಯಲ್ಲಿ ಮಾರಾಟ ಮಾಡುವ ಉದ್ದೇಶದೊಂದಿಗೆ ಬೆಳೆಯಲಾಗಿದ್ದ 101 ಕೆಜಿ ಗಾಂಜಾವನ್ನು ಪೊಲೀಸರು ಬುಧವಾರ ವಶಪಡಿಸಿಕೊಂಡಿದ್ದಾರೆ.
ದೊಮ್ಮನಗದ್ದೆ ಗ್ರಾಮದ ರಂಗುನಾಯ್ಕ ಹಾಗೂ ಸರಸಿಬಾಯಿ ದಂಪತಿ ಜಮೀನಿನ ಬದನೆಕಾಯಿ ಬೆಳೆಯೊಂದಿಗೆ ಮಿಶ್ರಬೆಳೆಯಾಗಿ ಗಾಂಜಾ ಬೆಳೆದಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ರಾಮಾಪುರ ಪಿಎಸ್‌ಐ ಮನೋಜ್ ಕುಮಾರ್, ಪೊಲೀಸ್ ಸಿಬ್ಬಂದಿ ಜೊತೆ ದಾಳಿ ನಡೆಸಿ ಬರೋಬ್ಬರಿ 89 ಕೆಜಿ ಹಸಿ ಗಾಂಜಾ ಹಾಗೂ ಮಾರಾಟಕ್ಕೆ ಸಿದ್ಧಮಾಡಿಟ್ಟುಕೊಂಡಿದ್ದ 12 ಕೆಜಿ ಒಣ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಬೈಕ್ ಸವಾರರೇ ಎಚ್ಚರ: ಈ ವಿಡಿಯೋ ನೋಡಿದ್ರೆ ಎದೆ ಝಲ್ ಅನ್ನುತ್ತೆ!
ಜ.10 ರಿಂದ ಚಿಕ್ಕಲ್ಲೂರು ಜಾತ್ರೆ ಆರಂಭವಾಗಲಿದೆ. ಭಂಗಿ ಸೇವೆಯಲ್ಲಿ ಮಾಂಸಕ್ಕೆ ಗಾಂಜಾ ಸೊಪ್ಪನ್ನು ಕೆಲವರು ಬೆರೆಸುವ ರೂಢಿ ಇರುವುದರಿಂದ ಗಾಂಜಾವನ್ನು ಶೇಖರಿಸಿಟ್ಟುಕೊಂಡಿದ್ದರು ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಸರಸಿಬಾಯಿಯನ್ನು ಬಂಧಿಸಲಾಗಿದ್ದು, ಪತಿ ರಂಗುನಾಯ್ಕ ಪರಾರಿಯಾಗಿದ್ದಾನೆ.
ಡಿವೈಎಸ್‌ಪಿ ಭೇಟಿ:
ಅಪಾರ ಪ್ರಮಾಣದ ಗಾಂಜಾ ಗಿಡಗಳು ಮತ್ತು ಮಾರಾಟಕ್ಕೆ ಶೇಖರಣೆ ಮಾಡಲಾಗಿದ್ದ ಒಣ ಗಾಂಜಾವನ್ನು ವಶಕ್ಕೆ ಪಡೆದ ಮಾಹಿತಿ ಪಡೆದ ಕೊಳ್ಳೇಗಾಲ
ಉಪವಿಭಾಗದ ಡಿವೈಎಸ್‌ಪಿ ನವೀನ್‌ಕುಮಾರ್ ದೊಮ್ಮನಗದ್ದೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕಲ್ಲೂರು ಜಾತ್ರೆ ಹಿನ್ನೆಲೆಯಲ್ಲಿ ಪತ್ತೆಯಾಗಿರುವ ಈ ಗಾಂಜಾ ಪ್ರಕರಣವನ್ನು ರಾಮಾಪುರ ಪೊಲೀಸರು ಪತ್ತೆ ಹಚ್ಚಿರುವುದನ್ನು ಘಿಸಿ ಮುಂದೆ ಠಾಣಾ ಸರಹದ್ದಿನ ಇತರೆಡೆ ಸಹ ಗಮನಹರಿಸುವಂತೆ ಸೂಚನೆ ನೀಡಿದ್ದಾರೆ.
ಕಾರ್ಯಾಚರಣೆಯಲ್ಲಿ ಎಎಸ್‌ಐ ರಾಮು, ಮುಖ್ಯಪೇದೆಗಳಾದ ನಂಜುಂಡ, ಲಿಂಗರಾಜು, ಶಿವರಾಜು, ನಾಗೇಂದ್ರ, ಮಾದೇಶ್, ಮಲ್ಲಿಕಾರ್ಜುನ, ಗೋವಿಂದರಾಜು,
ತಕೀವುಲ್ಲಾ, ಪೇದೆಗಳಾದ ಅಣ್ಣಾದೊರೈ, ರಘು, ರವಿಪ್ರಸಾದ್, ಬೊಮ್ಮೇ ಗೌಡ, ಮಂಜು, ಮನೋಹರ್, ಹೇಮಾವತಿ, ರೇಣುಕಾ, ಚಾಲಕರಾದ ನಾಗರಾಜು, ಶ್ರೀನಿವಾಸ್
ಭಾಗವಹಿಸಿದ್ದರು.