ಕೊಡಗಿಗೆ ಪ್ರಥಮ ಹಂತದಲ್ಲಿ 100 ಕೋಟಿ ಪ್ಯಾಕೇಜ್‌

By Kannadaprabha News  |  First Published Aug 30, 2019, 10:45 AM IST

ಪ್ರವಾಹ ಪೀಡಿತ ಕೊಡಗು ಜಿಲ್ಲೆಗೆ ಶೀಘ್ರದಲ್ಲೇ 100 ಕೋಟಿ ರು. ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. 


ಕುಶಾಲನಗರ (ಆ.30) : ಕೊಡಗು ಜಿಲ್ಲೆಯ ಪ್ರವಾಹ ಸಂತ್ರಸ್ತ ಪ್ರದೇಶಗಳ ನೆರವಿಗೆ ಪ್ರಥಮ ಹಂತದಲ್ಲಿ ತಕ್ಷಣ 100 ಕೋಟಿ ರು. ವಿಶೇಷ ಪ್ಯಾಕೆಜ್‌ ಬಿಡುಗಡೆಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆಗೆ ಗುರುವಾರ ಆಗಮಿಸಿದ ಸಂದರ್ಭ ಕೂಡಿಗೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ನಂತರ ಮಾತನಾಡಿದರು. ಜಿಲ್ಲಾಡಳಿತದ ಖಾತೆಯಲ್ಲಿರುವ ಹಣವನ್ನು ತಕ್ಷಣ ಪರಿಹಾರ ಕಾರ್ಯಗಳಿಗೆ ಬಳಸಿಕೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ ಮುಖ್ಯಮಂತ್ರಿ, ಭೂಕುಸಿತದಿಂದ ನಾಪತ್ತೆಯಾದವರ ಕುಟುಂಬಕ್ಕೆ ತಕ್ಷಣ ಒಂದು ಲಕ್ಷ ರು. ಹಾಗೂ ಮೃತಪಟ್ಟವ್ಯಕ್ತಿಗಳ ಕುಟುಂಬಕ್ಕೆ 5 ಲಕ್ಷ ರು. ಪರಿಹಾರ ಒದಗಿಸುವಂತೆ ನಿರ್ದೇಶನ ನೀಡಿದರು.

Tap to resize

Latest Videos

ಅಧಿಕ ಮೊತ್ತ ಬಿಡುಗಡೆ: ಕೊಡಗು ಜಿಲ್ಲೆಯಲ್ಲಿ ಉಂಟಾದ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗೆ ಒಟ್ಟು 536 ಕೋಟಿ ರು.ಗಳ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಲಾಗಿದೆ. ಕೇಂದ್ರದಿಂದ ಆಗಮಿಸಿದ ನೆರೆ ಅಧ್ಯಯನ ಅಧಿಕಾರಿಗಳ ತಂಡದ ವರದಿಗಳ ಆಧಾರದ ಮೇರೆಗೆ ಕೇಂದ್ರದಿಂದ ಇನ್ನೂ ಅಧಿಕ ಮೊತ್ತದ ಪರಿಹಾರ ಬಿಡುಗಡೆಗೊಳ್ಳಲಿದೆ. ಈ ಬಗ್ಗೆ ಪ್ರಧಾನಿ ಮೋದಿಯವರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.

ಅರಣ್ಯ ಇಲಾಖೆ ಅಸಹಕಾರ: ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಪ್ರಕೃತಿ ವಿಕೋಪದ ಸಂದರ್ಭ ಅರಣ್ಯ ಇಲಾಖೆಯನ್ನು ಹೊರತುಪಡಿಸಿ ಉಳಿದೆಲ್ಲಾ ಇಲಾಖೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿವೆ ಎಂದು ಆರೋಪಿಸಿದರಲ್ಲದೆ, ಕಾಫಿ ತೋಟ, ಗದ್ದೆಗಳಲ್ಲಿ ಉರುಳಿ ಬಿದ್ದ ಮರವನ್ನು ಸಾಗಿಸಿ ಮಾರಾಟ ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳು ಅನುಮತಿ ಕಲ್ಪಿಸುತ್ತಿಲ್ಲ. ಜಮೀನಿನಲ್ಲಿ ತುಂಬಿರುವ ಮರಳನ್ನು ಕೂಡ ಮಾರಾಟ ಮಾಡಲು ರೈತರಿಗೆ ತಡೆಯೊಡ್ಡದಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಈ ಬಗ್ಗೆ ಡಿಎಫ್‌ಓ ಮತ್ತು ಸೆಸ್ಕ್‌ ಅಧಿಕಾರಿಗಳಿಂದ ವಿವರ ಬಯಸಿದ ಮುಖ್ಯಮಂತ್ರಿ ಡಿಎಫ್‌ಒ ಪ್ರಭಾಕರ್‌ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಜನತೆ ಸಂಕಷ್ಟದಲ್ಲಿರುವ ಸಂದರ್ಭ ಇಲಾಖಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಅವಶ್ಯಕತೆಯಿಲ್ಲ. ಕಾನೂನಾತ್ಮಕವಾಗಿ ಶಾಶ್ವತ ವ್ಯವಸ್ಥೆ ಕಲ್ಪಿಸುವವರೆಗೆ ಪರ್ಯಾಯ ವ್ಯವಸ್ಥೆಗೆ ಅವಕಾಶ ಕಲ್ಪಿಸಬೇಕು. ಕೂಡಲೆ ವಿದ್ಯುತ್‌ ಸಂಪರ್ಕ ಕಲ್ಪಿಸಿ ಮುಂದಿನ 15 ದಿನಗಳ ಒಳಗಾಗಿ ಶಾಶ್ವತ ಕ್ರಮ ಕೈಗೊಳ್ಳದಿದ್ದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

click me!