ಘೋಷಿಸಿದ್ದು 20000 ಕೋಟಿ, ನೀಡಿದ್ದು 10000 ಕೋಟಿ| 5 ವರ್ಷದಲ್ಲಿ ಅರ್ಧ ದುಡ್ಡು ಮಾತ್ರ ನೀಡಿದ ಸರ್ಕಾರ| ಬಜೆಟ್ ಭರವಸೆಯ 10,172 ಕೋಟಿ ರು. ಇನ್ನೂ ಬಾಕಿ|
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು(ಮಾ.08): ಉದ್ಯಾನ ನಗರಿ ಬೆಂಗಳೂರಿನ ಅಭಿವೃದ್ಧಿಗೆ ಕಳೆದ ಐದು ವರ್ಷದಲ್ಲಿ ರಾಜ್ಯ ಸರ್ಕಾರ ಬಿಬಿಎಂಪಿಗೆ ಬರೋಬ್ಬರಿ 20 ಸಾವಿರ ಕೋಟಿ ರು. ಮೊತ್ತದ ವಿವಿಧ ಯೋಜನೆ ಘೋಷಿಸಿ ಅನುಮೋದನೆ ನೀಡಿದ್ದರೂ ಈ ಪೈಕಿ ಬಿಡುಗಡೆಯಾಗಿದ್ದು ಮಾತ್ರ ಕೇವಲ 10 ಸಾವಿರ ಕೋಟಿ ರುಪಾಯಿ.
ಅಧಿಕಾರಕ್ಕೆ ಬಂದ ಎಲ್ಲ ಪಕ್ಷಗಳು ತಮ್ಮ ಆಯವ್ಯಯದಲ್ಲಿ ರಾಜಧಾನಿ ಬೆಂಗಳೂರಿಗೆ ಭಾರೀ ಪ್ರಮಾಣ ಯೋಜನೆ ಘೋಷಿಸಿ, ಭರಪೂರ ಅನುದಾನ ಬಿಡುಗಡೆ ಭರವಸೆ ನೀಡಿವೆ. 2016-17 ಸಾಲಿನಿಂದ 2020-21ರ ಅವಧಿಯ ಐದು ವರ್ಷದಲ್ಲಿ ಬಿಬಿಎಂಪಿಯ ವಿವಿಧ ಕಾಮಗಾರಿಗೆ ರಾಜ್ಯ ಸರ್ಕಾರ ಬರೋಬ್ಬರಿ 20,332 ಕೋಟಿ ರು. ಮೊತ್ತ ಘೋಷಿಸಿದೆ. ಜತೆಗೆ ಅನುಮೋದನೆಯನ್ನೂ ನೀಡಿದೆ. ಆದರೆ, ಈವರೆಗೆ ಕೇವಲ ಅರ್ಧದಷ್ಟುಅಂದರೆ 10,160 ಕೋಟಿ ರು. ಮಾತ್ರ ಬಿಡುಗಡೆ ಮಾಡಿದ್ದು, ಇನ್ನೂ 10,172 ಕೋಟಿ ರು. ಬಾಕಿ ಉಳಿಸಿಕೊಂಡಿದೆ.
ರಾಜ್ಯ ಸರ್ಕಾರದ ಪ್ರತಿ ಬಜೆಟ್ ಬಳಿಕ ಘೋಷಣೆ ಮೊತ್ತ ಹೆಚ್ಚಾಗುತ್ತಿದೆ. ಆದರೆ, ನಿರೀಕ್ಷಿತ ಮಟ್ಟದ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಮತ್ತೊಂದು ಕಡೆ ರಾಜ್ಯ ಸರ್ಕಾರ ಅನುದಾನ ನೀಡುವುದಕ್ಕೆ ಮುಂದಾದರೂ ಸಹ ಬಿಬಿಎಂಪಿ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ವಿಫಲವಾಗುತ್ತಿದೆ.
ಐ ಪ್ಯಾಡ್ ವಾಪಸ್ ನೀಡಲು ಬಿಬಿಎಂಪಿ ಮಾಜಿ ಸದಸ್ಯರ ಮೀನಮೇಷ
ಕಳೆದ ಐದು ವರ್ಷದಲ್ಲಿ ರಾಜ್ಯ ಸರ್ಕಾರ ಬಿಬಿಎಂಪಿಗೆ ವಿಶೇಷ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿಯೇ ಅತಿ ಹೆಚ್ಚು ಒಟ್ಟು 8,075 ಕೋಟಿ ರು. ಬಿಡುಗಡೆ ಮಾಡಿದೆ. ಉಳಿದಂತೆ ನಗರದ 210 ಕೆರೆ ಅಭಿವೃದ್ಧಿಗೆ 105 ಕೋಟಿ ರು. ಹಾಗೂ ನಗರೋತ್ಥಾನ ಯೋಜನೆ ಅನುಷ್ಠಾನಕ್ಕೆ 1,970 ಕೋಟಿ ರು.ಬಿಡುಗಡೆ ಮಾಡಿದೆ.
ಕಳೆದ ವರ್ಷ 1,250 ಕೋಟಿ ರು. ಬಿಡುಗಡೆ:
ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಗರಕ್ಕೆ ಭಾರೀ ಮೊತ್ತದ ಹೊಸ ಯೋಜನೆ ಘೋಷಣೆ ಮಾಡಿಲ್ಲ. ಈ ಹಿಂದಿನ ಸರ್ಕಾರಗಳು ಘೋಷಿಸಿದ ‘ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆ’ ಮುಂದುವರೆಸಿ 8,334 ಕೋಟಿ ರು. ಅನುದಾನವನ್ನು ಹಂತ ಹಂತವಾಗಿ ಬಿಡುಗಡೆ ಮಾಡುವ ಕ್ರಮಕೊಂಡಿದೆ. 2020-21ನೇ ಸಾಲಿನಲ್ಲಿ 2 ಸಾವಿರ ಕೋಟಿ ರು. ಬಿಡುಗಡೆ ಮಾಡಬೇಕಿತ್ತು. ಆದರೆ, 1,250 ಕೋಟಿ ರು. ಮಾತ್ರ ಬಿಡುಗಡೆ ಮಾಡಿದೆ. ಬಾಕಿ 750 ಕೋಟಿ ರು. ಅನುದಾನ ಬಿಡುಗಡೆ ಬಿಬಿಎಂಪಿ ಆಯುಕ್ತರು ಮನವಿ ಮಾಡಿದ್ದು, ಶೀಘ್ರದಲ್ಲಿ ಬಿಡುಗಡೆ ಮಾಡುವುದಾಗಿ ನಗರಾಭಿವೃದ್ಧಿ ಇಲಾಖೆ ಭರವಸೆ ನೀಡಿದೆ.
2020-21ನೇ ಸಾಲಿನ ಆಯವ್ಯಯದಲ್ಲಿ ರಾಜ್ಯ ಸರ್ಕಾರ ‘ಶುಭ್ರ ಬೆಂಗಳೂರು ಯೋಜನೆ’ಯಡಿ ನಗರದ ಸ್ವಚ್ಛತೆ ಹಾಗೂ ಕೆರೆ ಸಂರಕ್ಷಣೆಗೆ 1,099 ಕೋಟಿ ರು. ಘೋಷಣೆ ಮಾಡಿತ್ತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಯೋಜನೆ ಅನುಷ್ಠಾನಗೊಂಡಿಲ್ಲ.
ರಾಜ್ಯ ಸರ್ಕಾರ ಘೋಷಣೆ -ಬಿಡುಗಡೆ ವಿವರ (ಕೋಟಿ ರು.)
ವರ್ಷ ಘೋಷಣೆ ಬಿಡುಗಡೆ
2016-17 7,300 2,129
2017-18 2,561 2,946
2018-19 10,471 2,400
2019-20 -- 1,435
2020-21 -- 1,250
ಒಟ್ಟು 20,332 10,160
5000 ಕೋಟಿ ಘೋಷಣೆಗೆ ಮನವಿ
ಬಿಬಿಎಂಪಿ ವ್ಯಾಪ್ತಿ ವ್ಯಾಪ್ತಿಯಲ್ಲಿ ರಸ್ತೆ, ರಾಜಕಾಲುವೆ ಅಭಿವೃದ್ಧಿ, ಘನತ್ಯಾಜ್ಯ ಹಾಗೂ ಕೆರೆ ನಿರ್ವಹಣೆ ಸೇರಿದಂತೆ ಅನೇಕ ತುರ್ತು ಕಾಮಗಾರಿಗಳನ್ನು ಬಿಬಿಎಂಪಿ ಕೈಗೊಂಡಿದ್ದು, ಹಲವಾರು ಕಾಮಗಾರಿಗಳು ಪ್ರಗತಿಯಲ್ಲಿವೆ. ಹೀಗಾಗಿ, ಪ್ರಸ್ತುತ 2021-22 ನೇ ಸಾಲಿನ ರಾಜ್ಯ ಸರ್ಕಾರದ ಆಯವ್ಯದಲ್ಲಿ ಐದು ಸಾವಿರ ಕೋಟಿ ರು. ಮೊತ್ತದ ಪ್ರಗತಿಯಲ್ಲಿರುವ ಕಾಮಗಾರಿಗೆ ಅನುದಾನ ನೀಡುವಂತೆ ಮನವಿ ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಬಿಬಿಎಂಪಿಗೆ 57 ಆರೋಗ್ಯ ಕೇಂದ್ರ?
ಬಿಬಿಎಂಪಿ ವ್ಯಾಪ್ತಿಯಲ್ಲಿ 141 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ರಾಜ್ಯ ಸರ್ಕಾರ 2021-22 ಸಾಲಿನ ಆಯವ್ಯಯದಲ್ಲಿ ಹೊಸದಾಗಿ 57 ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ ಘೋಷಣೆ ಸಾಧ್ಯತೆ ಇದೆ. ಬಿಬಿಎಂಪಿಗೆ 2006-07ರಲ್ಲಿ ಸೇರ್ಪಡೆಗೊಂಡ ಪ್ರದೇಶದ ವಾರ್ಡ್‌ಗಳಲ್ಲಿ ನಿರ್ಮಾಣ.