ಕಾಫಿನಾಡು ಚಿಕ್ಕಮಗಳೂರಿನಲ್ಲಿ ಬುಧವಾರ(ಜೂ.30)ದಂದು ಹೊಸದಾಗಿ 10 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಒಟ್ಟು 78 ಮಂದಿ ಸೋಂಕಿತರು ಪತ್ತೆಯಾಗಿದ್ದು, ಇವರಲ್ಲಿ 34 ಜನರು ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗಳಿಗೆ ತೆರಳಿದ್ದಾರೆ ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಚಿಕ್ಕಮಗಳೂರು(ಜು.01): ಜಿಲ್ಲೆಯಲ್ಲಿ ದಿನೇದಿನೇ ಕೊರೋನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಮಂಗಳವಾರ ಒಂದೇ ದಿನ 10 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇವುಗಳಲ್ಲಿ ತರೀಕೆರೆ ತಾಲೂಕಿನಲ್ಲಿ 6, ಚಿಕ್ಕಮಗಳೂರು ತಾಲೂಕಲ್ಲಿ 3, ಮೂಡಿಗೆರೆ ಪಟ್ಟಣದಲ್ಲಿ 1 ಪ್ರಕರಣ ಬೆಳಕಿಗೆ ಬಂದಿದೆ.
ತರೀಕೆರೆ ತಾಲೂಕಿನ 6 ಪ್ರಕರಣಗಳಲ್ಲಿ 4 ಮಂದಿ ಶಿವನಿ ಹಾಗೂ ಲಕ್ಕವಳ್ಳಿಯ ಸೋಂಕಿತರ ಸಂಪರ್ಕದಲ್ಲಿದ್ದವರು. ಒಬ್ಬರು ಮತ್ತೊಬ್ಬರ ಸಂಪರ್ಕದಲ್ಲಿ, ಇನ್ನೋರ್ವರು ತರೀಕೆರೆ ಪಟ್ಟಣದಲ್ಲಿ ಹೊಸದಾಗಿ ಪತ್ತೆಯಾಗಿದ್ದಾರೆ. ಚಿಕ್ಕಮಗಳೂರು ತಾಲೂಕಿನಲ್ಲಿ ಮಂಗಳವಾರ ಪತ್ತೆಯಾಗಿರುವ 3 ಮಂದಿ ಮಧುರೈನಿಂದ ಬಂದವರು. ಮೂಡಿಗೆರೆ ಪಟ್ಟಣದಲ್ಲಿ ಪತ್ತೆಯಾದವರು ವಿದೇಶದಿಂದ ಬಂದವರಾಗಿದ್ದಾರೆ.
ಕಳೆದ ಮೇ 19ರಿಂದ ಜೂ.30 ರವರೆಗೆ ಜಿಲ್ಲೆಯಲ್ಲಿ ಒಟ್ಟು 78 ಮಂದಿ ಸೋಂಕಿತರು ಪತ್ತೆಯಾಗಿದ್ದು, ಇವರಲ್ಲಿ 34 ಜನರು ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗಳಿಗೆ ತೆರಳಿದ್ದಾರೆ. ಮಂಗಳವಾರವೂ ಒಬ್ಬರು ಮನೆಗೆ ತೆರಳಿದರು. ಜಿಲ್ಲೆಯಲ್ಲಿ ಮಂಗಳವಾರ 533 ಮಂದಿಯ ಗಂಟಲ ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿದೆ. ಈವರೆಗೆ ಈ ಸಂಖ್ಯೆ 7241ಕ್ಕೆ ಏರಿದೆ. ಇವರಲ್ಲಿ 6363 ಮಂದಿಯ ವರದಿ ನೆಗೆಟಿವ್ ಬಂದಿದೆ. ಅಂದರೆ, ಪಾಸಿಟಿವ್‌ಗಿಂತ ನೆಗೆಟಿವ್ ವರದಿಗಳೇ ಹೆಚ್ಚು.
ಕೊರೋನಾ ಭೀತಿ: ತೀರ್ಥಹಳ್ಳಿ ಮೀನು ಮಾರುಕಟ್ಟೆ ಸೀಲ್‌ಡೌನ್
ಕೊರೋನಾ ನಿಯಂತ್ರಣ ಹಿನ್ನೆಲೆಯಲ್ಲಿ ಜು.1 ರಿಂದ ಅನ್ವಯ ಆಗುವಂತೆ ರಾತ್ರಿ 8 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಜಾರಿಗೊಳಿಸಲಾಗಿದೆ. ಆದರೆ, ಮಂಗಳವಾರ ಜಿಲ್ಲೆ ಕೇಂದ್ರದಲ್ಲಿ ಪ್ರಮುಖ ರಸ್ತೆಗಳ ಅಂಗಡಿಗಳು ಸಂಜೆ 7.30ಕ್ಕೆ ಬಂದ್ ಆಗಿದ್ದವು.