* ಡೀಸೆಲ್ ದರ ಏರಿದರೂ ಬಸ್ ದರ ಏರಿಸಿಲ್ಲ: ಸಂಸ್ಥೆ ಅಧ್ಯಕ್ಷ ಪಾಟೀಲ
* 1100 ಕೋಟಿ ಅನುದಾನ ಮಂಜೂರಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ
* ಶಾಲಾ- ಕಾಲೇಜುಗಳು ಆರಂಭವಾದ ಬಳಿಕ ಗ್ರಾಮೀಣ ಸಾರಿಗೆ ಸಂಚಾರ ಆರಂಭ
ಶಿರಸಿ(ಜು.18): ಸಾರ್ವಜನಿಕರಿಗೆ ಸೌಲಭ್ಯ ಕಲ್ಪಿಸುವ ಸಲುವಾಗಿ ಬಸ್ ಸಂಚಾರ ಆರಂಭಿಸಿದ್ದೇವೆ. ಪ್ರತಿ ದಿನ 1.5 ಕೋಟಿ ಹಾನಿಯನ್ನು ಸಂಸ್ಥೆ ಅನುಭವಿಸುತ್ತಿದೆ ಎಂದು ವಾಯುವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್. ಪಾಟೀಲ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡೀಸೆಲ್ ದರ ಏರಿಕೆ ಕಂಡರೂ ಬಸ್ ದರ ಏರಿಕೆ ಮಾಡದ ಕಾರಣ ಸಂಸ್ಥೆ ಸಾಕಷ್ಟು ನಷ್ಟದಲ್ಲಿದೆ. ಇದರಿಂದ ಸರ್ಕಾರಕ್ಕೆ 1100 ಕೋಟಿ ಅನುದಾನ ಮಂಜೂರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದರಲ್ಲಿ ನಿವೃತ್ತರಾದ ಸಿಬ್ಬಂದಿಗಳ ಪಿಂಚಣಿ ಹಣವನ್ನೂ ನೀಡಬೇಕಾಗಿದೆ ಎಂದರು.
ಶಾಲಾ- ಕಾಲೇಜುಗಳು ಅಧಿಕೃತವಾಗಿ ಆರಂಭವಾದ ನಂತರದಲ್ಲಿ ಎಲ್ಲ ಗ್ರಾಮೀಣ ಭಾಗದಲ್ಲೂ ಆರಂಭಿಸಲಾಗುವುದು. ಬೇಡಿಕೆಯಿಲ್ಲದ ಕಾರಣ ಗ್ರಾಮೀಣ ಭಾಗದಲ್ಲಿ ಬಸ್‌ಗಳ ಓಡಾಟ ನಡೆಸಿಲ್ಲ. ಆದರೆ ಕಾಲೇಜುಗಳು ಆರಂಭವಾದ ನಂತರ ಪಾಸುಗಳನ್ನು ನೀಡಿ ಗ್ರಾಮೀಣ ಭಾಗಕ್ಕೆ ಸಾರಿಗೆ ಸಂಚಾರ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಸಾರಿಗೆ ಸಂಸ್ಥೆ ಸಿಬ್ಬಂದಿಗೆ ಬರೀ ಅರ್ಧ ಸಂಬಳ..!
ಕೊರೋನಾ ಪೂರ್ವದಲ್ಲಿ ಸಂಸ್ಥೆಯಿಂದ 4600 ಬಸ್ ಕಾರ್ಯಾಚರಣೆ ನಡೆಸಿ 17 ಲಕ್ಷ ಕಿಮೀ ಪ್ರತಿ ದಿನ ಓಡುತ್ತಿದ್ದವು. 22 ಲಕ್ಷ ಪ್ರಯಾಣಿಕರು ಸಂಚಾರ ಕೈಗೊಳ್ಳುತ್ತಿದ್ದರು. ಆದರೆ ಈಗ 3800 ಬಸ್‌ಗಳು ಕಾರ್ಯಾಚರಣೆ ಮಾಡುತ್ತಿದ್ದು 12 ಲಕ್ಷ ಕಿಮೀ ಓಡಾಟ ನಡೆಸಿದ್ದು 10 ಲಕ್ಷ ಜನರು ಪ್ರಯಾಣಿಸುತ್ತಿದ್ದಾರೆ. ಇದರಿಂದ ಶಾಲೆಗಳು ಆರಂಭಗೊಂಡ ನಂತರ ಬಸ್‌ಗಳ ಸಂಚಾರ ಹೆಚ್ಚಿಸಿ, ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದರು.
ಶಿರಸಿ ಹಳೆ ಬಸ್ ನಿಲ್ದಾಣ ಮರು ಕಟ್ಟಡ ಯೋಜನೆಗೆ 7 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲಿ ಅನುಮೋದನೆ ದೊರೆಯುವ ನಿರೀಕ್ಷೆಯಿದೆ. ನಂತರ ಮುಖ್ಯಮಂತ್ರಿಗಳನ್ನು ಕರೆತಂದು ಸಭಾಧ್ಯಕ್ಷರ ಸಮ್ಮುಖದಲ್ಲಿ ಶಂಕುಸ್ಥಾಪನೆ ಮಾಡಲಾಗುವುದು. ತಾತ್ಕಾಲಿಕವಾಗಿ ನಿಲ್ದಾಣ ಸುಧಾರಿಸಲು ವಿಭಾಗೀಯ ನಿಯಂಯ್ರಣಾಧಿಕಾರಿ ಬಳಿ ಮಾತನಾಡಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.