ಕಳೆದ ಒಂದು ವರ್ಷದ ಹಿಂದೆ ಕೋಟ್ಯಂತರ ರುಪಾಯಿಗಳಲ್ಲಿ ನಿರ್ಮಿಸಿದ ಡಾಂಬರೀಕರಣ ರಸ್ತೆ ಇದೀಗ ತುಂಬಾ ಹದಗೆಟ್ಟಿದೆ| ರಸ್ತೆ ತುಂಬೆಲ್ಲ ಅಲ್ಲಲ್ಲಿ ಭಾರಿ ತಗ್ಗುಗಳು ಬಿದ್ದಿವೆ| ವಾಹನಗಳ ಸಂಚಾರಕ್ಕೆ ಅಡ್ಡಿ| ಕನಕಪೂರ ಗ್ರಾಮದ ಬಳಿ ನಿರ್ಮಿಸಿದ ಸಣ್ಣ ಸೇತುವೆ ಒಂದು ಭಾಗ ಮಳೆಯಿಂದ ಕುಸಿದು ಹೋಗಿದೆ| ಚೆನ್ನೂರ, ರಾಣಾಪೂರ ಮತ್ತು ಐನಾಪೂರ ಗ್ರಾಮದ ಹತ್ತಿರ ರಸ್ತೆಯಲ್ಲಿ ಭಾರಿ ತೆಗ್ಗುಗಳು ಬಿದ್ದಿವೆ|
ಚಿಂಚೋಳಿ(ಅ.18):ತಾಲೂಕಿನ ಭಾಲ್ಕಿ-ಹುಮನಾಬಾದ ರಾಜ್ಯ ಹೆದ್ದಾರಿ 75ರಲ್ಲಿ ಬರುವ ಗ್ರಾಮಗಳಿಗೆ ಉತ್ತಮ ರಸ್ತೆ ಸಂಪರ್ಕಕ್ಕಾಗಿ ಕಳೆದ ಒಂದು ವರ್ಷದ ಹಿಂದೆ ಕೋಟ್ಯಂತರ ರುಪಾಯಿಗಳಲ್ಲಿ ನಿರ್ಮಿಸಿದ ಡಾಂಬರೀಕರಣ ರಸ್ತೆ ಇದೀಗ ತುಂಬಾ ಹದಗೆಟ್ಟಿದೆ.
ರಸ್ತೆ ತುಂಬೆಲ್ಲ ಅಲ್ಲಲ್ಲಿ ಭಾರಿ ತಗ್ಗುಗಳು ಬಿದ್ದಿವೆ. ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂದು ಐನಾಪೂರ ಗ್ರಾಮದ ರಮೇಶ ಪಡಶೆಟ್ಟಿ ಮತ್ತು ಸುರೇಶಕುಮಾರ ಗುತ್ತೆದಾರ ದೂರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ಚಿಮ್ಮಾ ಇದಲಾಯಿ ಕ್ರಾಸ್‌ನಿಂದ ಚಿಟಗುಪ್ಪಾ ಗಡಿದವರೆಗೆ ಒಟ್ಟು 40 ಕಿಮಿ ರಸ್ತೆ ಡಾಂಬರೀಕರಣಕ್ಕಾಗಿ 25 ಕೋಟಿ ರು. ಅಂದಿನ ಬೀದರ್ ಸಂಸದ ಎನ್.ಧರ್ಮಸಿಂಗ್ ಹಾಗೂ ಚಿಂಚೋಳಿ ಮಾಜಿ ಶಾಸಕ ಡಾ. ಉಮೇಶ ಜಾಧವ್ ಮಂಜೂರು ಗೊಳಿಸಿದ್ದರು. ಆದರೆ ಕಾಮಗಾರಿಯನ್ನು ಪಡೆದುಕೊಂಡಿರುವ ಬೀದರ್ ಮೂಲದ ಕೊಟ್ರಕಿ ಕನಷ್ಟ್ರಕ್ಷನ್ ಪ್ರಾ. ಕಂಪನಿ ರಸ್ತೆ ನಿರ್ಮಾಣದ ಟೆಂಡರ್ ಪಡೆದುಕೊಂಡು ಕೆಲಸ ಪ್ರಾರಂಭಿಸಿತ್ತು. ಆದರೆ ಗುತ್ತಿಗೆದಾರರನು ಕಳಪೆ ಮಟ್ಟದ ರಸ್ತೆ ನಿರ್ಮಾಣ ಮಾಡಿದ್ದರಿಂದ ಚಿಮ್ಮಾಇದಲಾಯಿ, ಗಾರಂಪಳ್ಳಿ, ಕನಕಪೂರ, ತಾಜಲಾಪೂರ, ಚಿಮ್ಮನಚೋಡ, ನರನಾಳ, ರಾಣಾಪೂರ ಕ್ರಾಸ್, ಚೆನ್ನೂರ ಪುರ್ನವಸತಿ ಕೇಂದ್ರ, ಗಡಿಲಿಂಗೆದಳ್ಳಿ ಐನಾಪೂರದವರೆಗೆ ನಿರ್ಮಿಸಿದ ರಸ್ತೆ ಡಾಂಬರೀಕರಣ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ದೂರಿದರು.
ಕನಕಪೂರ ಗ್ರಾಮದ ಬಳಿ ನಿರ್ಮಿಸಿದ ಸಣ್ಣ ಸೇತುವೆ ಒಂದು ಭಾಗ ಮಳೆಯಿಂದ ಕುಸಿದು ಹೋಗಿದೆ. ಚೆನ್ನೂರ, ರಾಣಾಪೂರ ಮತ್ತು ಐನಾಪೂರ ಗ್ರಾಮದ ಹತ್ತಿರ ರಸ್ತೆಯಲ್ಲಿ ಭಾರಿ ತೆಗ್ಗುಗಳು ಬಿದ್ದಿವೆ. ಹದಗೆಟ್ಟಿರುವ ಈ ರಸ್ತೆಯಲ್ಲಿ ವಾಹನ ಸವಾರರು ತೊಂದರೆ ಪಡುತ್ತಿದ್ದಾರೆ. ಕೂಡಲೇ ನೂತನ ಶಾಸಕರು ಇದರ ಬಗ್ಗೆ ಗಮನ ಹರಿಸಬೇಕೆಂದು ಅಗ್ರಹಿಸಿದ್ದಾರೆ.