ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯಬೇಕಿದ್ದ ಮಹತ್ವದ ಕೆಡಿಪಿ ಸಭೆ 13 ತಿಂಗಳಾದರೂ ಇಂದಿಗೂ ನಡೆದಿಲ್ಲ| ಮುಂದುವರಿದಿದೆ ಜಿಲ್ಲಾ ಪ್ರಗತಿ ಪರಿಶೀಲನೆಗೆ ಗ್ರಹಣ| ಜಿಲ್ಲಾ ಉಸ್ತುವಾರಿಯಾಗಿ ತಿಂಗಳ ನಂತರ ಕಲಬುರಗಿಗೆ ಬಂದಿದ್ದ ಗೋವಿಂದ ಕಾರಜೋಳ ವರ್ಷದಿಂದ ನಡೆಯದ ಕೆಡಿಪಿ ಸಭೆ ನಡೆಸೋರಿದ್ರು ನಡೆಸಲಾಗಲಿಲ್ಲ| ಕಲಬುರಗಿ ಜನರ ದೌರ್ಭಾಗ್ಯ| ಅ.17ರಂದೇ ಕಲಬುರಗಿಗೆ ಸಿಎಂ ಬಂದ್ರು, ಕೊನೆ ಕ್ಷಣದಲ್ಲಿ ಕೆಡಿಪಿ ಸಭೆಯೇ ರದ್ದಾಯ್ತು|
ಶೇಷಮೂರ್ತಿ ಅವಧಾನಿ
ಕಲಬುರಗಿ(ಅ.18): ಕಲಬುರಗಿ ಕೆಡಿಪಿ ಸಭೆಗೆ ಕೊನೆಗೂ ಮುಹೂರ್ತ ಕೂಡಿ ಬರಲಿಲ್ಲ. 3 ತಿಂಗಳಿಗೊಮ್ಮೆ ನಡೆಯಬೇಕಿದ್ದ ಕರ್ನಾಟಕ ಪ್ರಗತಿ ಯೋಜನೆಗಳ ಪರಿಶೀಲನೆಯ ಈ ಸಭೆ ಆಡಳಿತ ಚುರುಕಿಗೆ ತುಂಬಾ ಮಹತ್ವದ್ದು. ಆದರೇನು ಮಾಡುವುದು ಕಲಬುರಗಿ ಮಂದಿ ದೌರ್ಭಾಗ್ಯ, ಬರೋಬ್ಬರಿ ವರ್ಷದ ನಂತರ ಕೆಡಿಪಿ ಸಭೆಗೆ ನಿಗದಿಯಾಗಿದ್ದ ದಿನಾಂಕವೂ ರದ್ದಾಗಿದ್ದರಿಂದ ಈ ಸಭೆ ಅನಿರ್ದಿಷ್ಟಾವಧಿವರೆಗೂ ಮುಂದೂಡಲ್ಪಟ್ಟಿದೆ.
undefined
ಹಿಂದಿನ ಸರ್ಕಾರದಲ್ಲಿ ಪ್ರಿಯಾಂಕ್ ಖರ್ಗೆ ಜಿಲ್ಲಾ ಸಚಿವರಾಗಿದ್ದಾಗ 2018ರ ಸೆ.12ರಂದು ನಡೆದ ಕೆಡಿಪಿ ಸಭೆಯೇ ಕೊನೆಯ ಸಭೆ. ಅಂದಿನಿಂದ ಇಂದಿನವರೆಗೂ ಬರೋಬ್ಬರಿ ಒಂದು ವರ್ಷ 1 ತಿಂಗಳಾದರೂ ಈ ಮಹತ್ವದ ಸಭೆ ನಡೆದಿಲ್ಲ. ಹೀಗಾಗಿ ಜಿಲ್ಲೆಯ ಆಡಳಿತ ಎಲ್ಲಾ ಹಂತಗಳಲ್ಲಿ ತೆವಳುತ್ತಿದೆ. ಸಾರ್ವಜನಿಕರ ಕೆಲಸ ಕಾರ್ಯಗಳು ಪಂಚಾಯ್ತಿಯಿಂದ ಹಿಡಿದು ಜಿಲ್ಲಾ ಪಂಚಾಯ್ತಿ, ಜಿಲ್ಲಾಡಳಿತದವರೆಗೂ ಕುಂಟುತ್ತಲೇ ಸಾಗುತ್ತಿವೆ. ಹೇಳೋರು- ಕೇಳೋರು ಇಲ್ಲದಂತಾಗಿದೆ.
ರಾಜಕೀಯ ಅನಿಶ್ಚಿತತೆಯಿಂದ ಕೆಡಿಪಿ ಸಭೆಗಳಾಗುತ್ತಿಲ್ಲ ಎಂದು ಮುಂಚೆ ಜನ ತಿಳಿದು ಸುಮ್ಮನಿದ್ದರು. ಇದೀಗ ಬಿಜೆಪಿ ಸರ್ಕಾರ ಬಂದು 3 ತಿಂಗಳಾಯ್ತು. ಜಿಲ್ಲಾ ಸಚಿವರ ನೇಮಕವಾಗಿ 1 ತಿಂಗಳಾಯ್ತು, ಆದಾಗ್ಯೂ ಸುದೀರ್ಘ ಕಾಲ ನಡೆಯದ ಕೆಡಿಪೆ ಸಭೆ ನಡೆಸಲು ಯಾರ ಅಡ್ಡಿ? ಎಂಬುದೇ ಉತ್ತರ ಸಿಗದ ಪ್ರಶ್ನೆಯಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡು ಬರೋಬ್ಬರಿ ತಿಂಗಳ ನಂತರ ಗೋವಿಂದ ಕಾರಜೋಳ ಕಲಬುರಗಿಗೆ ಬಂದಿದ್ದರು. ಅ.17ರ ಬೆಳಗ್ಗೆಯೇ ಕಲಬುರಗಿಗೆ ಬಂದಿರುವ ಸಚಿವರು ಅಂದು ಮಧ್ಯಾಹ್ನ ಕೆಡಿಪಿ ಸಭೆ ನಡೆಸುವ ಮೂಲಕ ಜಿಲ್ಲಾಡಳಿತಕ್ಕೆ ಚುರುಕು ಮುಟ್ಟಿಸಲಿದ್ದಾರೆಂಬ ನಿರೀಕ್ಷೆ ಇತ್ತು. ಅದರಂತೆಯೇ ಸಚಿವರ ಪ್ರವಾಸ ಪಟ್ಟಿಯಲ್ಲಿ ಕೆಡಿಪಿ ಸಭೆಗೆ ಸಮಯ ನಿಗದಿಯೂ ಆಗಿತ್ತು. ಜಿಪಂ ಸಿಇಒ ಡಾ.ರಾಜಾ ಅಧಿಕಾರಿಗಳಿಗೆ ಸುತ್ತೋಲೆ ಸಹ ಹೊರಡಿಸಿದ್ದರು.
ಆದರೆ, ಸಿಎಂ ಬಿಎಸ್‌ವೈ ಪ್ರವಾಸ, ಗಾಣಗಾಪುರದಲ್ಲಿ ದತ್ತ ದೇವರ ಪೂಜೆಯ ಸಂದರ್ಭ ನಿಗದಿಯಾಗಿದ್ದರಿಂದ ಕೆಡೆಪಿ ಸಭೆ ನಡೆಸಲು ಮುಂದಾಗಿದ್ದ ಜಿಲ್ಲಾ ಸಚಿವರು ಪೇಚಿಗೆ ಸಿಲುಕಿದರು. ಸಿಎಂ ಜಿಲ್ಲೆಯಲ್ಲೇ ಇರುವಾಗ ಡಿಸಿಎಂ ಆದವರು ಅವರನ್ನ ಬಿಟ್ಟು ಹೇಗೆ ಕೆಡಿಪಿ ನಡೆಸಲು ಸಾಧ್ಯ. ಇಂತಹ ಫಜೀತಿಗೆ ಸಿಲುಕಿದ ತಕ್ಷಣವೇ ಕೆಡಿಪಿ ಸಭೆ ರದ್ದಾಯ್ತು ಎಂಬ ಅಧಿಕೃತ ಸೂಚನೆಯನ್ನು ಜಿಪಂ ಸಿಇಒ ಪ್ರಕಟಿಸಿದ್ದಾರೆ.
ಬೆಂಗಳೂರಲ್ಲಿ ಸಭೆ ನಡೆಸಿದ್ರೆ ಹ್ಯಾಂಗ್ರಿ ಕಾರಜೋಳ ಸಾಹೇಬರೆ:
ಕಾರಜೋಳ ಸಾಹೇಬರು ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಕಲಬುರಗಿಗೆ ಇನ್ನೆಲ್ಲಿಂದ ಬರೋದು ಎಂದ ಬೆಂಗಳೂರಲ್ಲೇ ಇಲ್ಲಿನ ಶಾಸಕರನ್ನು ಕರೆದು ಸಭೆ ನಡೆಸಿದ್ದಾರಂತೆ. ಹೀಗೊಂದು ಸುದ್ದಿ ಆ ಪಕ್ಷದ ಶಾಸಕರುಗಳೇ ಖಚಿತಪಡಿಸಿದ್ದಾರೆ. ಕಾರಜೋಳ ಅವರಿಗೆ ಬಾಗಲಕೋಟೆ ಜಿಲ್ಲೆಯ ಉಸ್ತುವಾರಿ ಜೊತೆಗೆ ಕಲಬುರಗಿ ಹೆಚ್ಚವರಿ ಹೊಣೆಗಾರಿಕೆ ನೀಡಲಾಗಿದೆ. ಹೀಗಾಗಿ ಕಾರಜೋಳ ಡಿಸಿಎಂ ಬೇರೆ, ಹೀಗಾಗಿ ಏಕಕಾಲಕ್ಕೆ ಇವೆಲ್ಲ ಜವಾಬ್ದಾರಿ ನಿಭಾಯಿಸುವಲ್ಲಿ ಸಮಯವೇ ಸಿಗುತ್ತಿಲ್ಲ ಎಂದು ಬಿಜೆಪಿಯವರೇ ಕಾರಜೋಳ ಯಾಕೆ ಜಿಲ್ಲೆಗೆ ಬರುತ್ತಿಲ್ಲ ಎಂಬುದಕ್ಕೆ ಸಬೂಬು ಹೇಳುತ್ತ ಹೊರಟಿದ್ದಾರೆ.