ಕೇಂದ್ರ, ರಾಜ್ಯದ ನಡುವೆ ತಪ್ಪಿದ ತಾಳಮೇಳ, ಕೇಂದ್ರದ ವಿರುದ್ಧ ಧ್ವನಿ ಎತ್ತದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದ ಡಾ.ಮಲ್ಲಿಕಾರ್ಜುನ ಖರ್ಗೆ| ಯಡಿಯೂರಪ್ಪಗೆ ರಾಜ್ಯದಲ್ಲಿ ಸ್ಥಳೀಯವಾಗಿ ಬೆಂಬಲ ಸಿಕ್ತಿಲ್ಲ| ಕೇಂದ್ರದಿಂದಲೂ ಬೆಂಬಲ ದೊರಕುತ್ತಿಲ್ಲ| ಅಭಿವೃದ್ಧಿ ಕೆಲಸಗಳಿಗೆ ಗರ ಹಿಡಿಯುತ್ತಿದೆ| ಚಂದ್ರಯಾನಕ್ಕೆಂದು ಬೆಂಗಳೂರಿಗೆ ಬಂದು ಹೋದ ಪ್ರಧಾನಿ ಮೋದಿ ಅದೇ ಹೊತ್ತಿಗೆ ನೆರೆ ಪೀಡಿ ಪ್ರದೇಶಗಳ ವೈಮಾನಿಕ ಸಮೀಕ್ಷೆ ಮಾಡಬಹುದಿತ್ತು ಎಂದ ಖರ್ಗೆ|
ಕಲಬುರಗಿ(ಅ.10): ರಾಜ್ಯ ಹಾಗೂ ಕೇಂದ್ರ ಸರಕಾರದ ಮಧ್ಯೆ ತಾಳಮೇಳ ತಪ್ಪಿದೆ. ರಾಜ್ಯದ ಅಭಿವೃದ್ಧಿ ಕೆಲಸಗಳಿಗೆ ಇದರಿಂದ ಗರ ಬಡಿದಂತಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯದ ಯಾವ ಬೇಡಿಕೆಗಳನ್ನೂ ಪುರಸ್ಕರಿಸುತ್ತಿಲ್ಲ, ಸಂಸತ್ತಿನಲ್ಲಾಗಲಿ, ಸ್ಥಳೀಯ ಮಟ್ಟದಲ್ಲಾಗಲಿ ಕೇಂದ್ರದ ವಿರುದ್ಧ ಧ್ವನಿ ಎತ್ತಿ ಮಾತನಾಡುವವರು ಯಾರೂ ಇಲ್ಲದಂತಾಗಿದೆ. ಕೇಂದ್ರಕ್ಕೆ ಪ್ರಶ್ನಿಸುವ ಧೈರ್ಯ ಯಾರ ಬಳಿಯೂ ಇಲ್ಲದಂತಾಗಿದೆ. ಜನಪರವಾಗಿ ಧ್ವನಿ ಎತ್ತಿರುವಂತಹ ಬಿಜೆಪಿ ಶಾಸಕನಿಗೆ ಶೋಕಾಸ್ ನೋಟಿಸ್ ಬರುತ್ತಿವೆ. ಇದರಿಂದಾಗಿ ಕೇಂದ್ರದ ವಿರುದ್ಧ ಯಾರೂ ಮಾತನಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.
ಯಡಿಯೂರಪ್ಪಗೆ ಕೇಂದ್ರ ಸರ್ಕಾರದಿಂದ ಸಹಕಾರ ಸಿಗ್ತಿಲ್ಲ
ಸರ್ಕಾರ ತನ್ನ ನಿರ್ಣಯವನ್ನ ತೆಗೆದುಕೊಳ್ಳೊಕೆ ತೊಂದ್ರೆ ಆಗ್ತಿದೆ. ರಾಜ್ಯ ಸರ್ಕಾರ ಸ್ವತಂತ್ರವಾಗಿ ಕೆಲಸ ಮಾಡಲು ಆಗುತ್ತಿಲ್ಲ, ಯಡಿಯೂರಪ್ಪಗೆ ಕೇಂದ್ರ ಸರ್ಕಾರದಿಂದ ಸಹಕಾರ ಸಿಗ್ತಿಲ್ಲ, ಸ್ಥಳಿಯ ಮಟ್ಟದಲ್ಲು ಕೂಡ ಬಿಜೆಪಿಯಲ್ಲಿ ಸಾಕಷ್ಟುಭಿನ್ನಾಭಿಪ್ರಯಾಗಳಿವೆ, ಬಿಜೆಪಿಯವರು ಬೋರ್ಡ್‌ಗಳ ಚೇರ್‌ಮೇನ್ ಮಾಡೋದಕ್ಕೆ ಒಂದೊಂದು ವರ್ಷ ತೆಗೆದುಕೊಂಡ್ರೆ ಹೇಗೆ? ಇದರಿಂದ ಪ್ರಗತಿ ಆದೀತೆ? ಎಂದು ಪ್ರಶ್ನಿಸಿದರು.
ಬಿಜೆಪಿಯವರದ್ದು ಯಾವಾಗಲೂ ಇಬ್ಬಗೆ ನೀತಿ:
ಪ್ರಧಾನಿ ನರೇಂದ್ರ ಮೋದಿ ಚಂದ್ರಯಾನ ಸಲುವಾಗಿ ಬೆಂಗಳೂರಿಗೆ ಬಂದು ಹೋಗಿದ್ದಾರೆ, ಹಾಗೆ ಬಂದು ಹೋಗುವಾಗ ನೆರೆ ಪೀಡಿತ ಉತ್ತರ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿನ ಜನರನ್ನು ಕಾಡಿದ್ದ ಪ್ರವಾಹ- ನೆರೆ ಸಂತ್ರಸ್ತ ಪ್ರದೇಶಗಳ ವಿಮಾನ ಪರಿವೀಕ್ಷಣೆಯನ್ನಾದರೂ ಮಾಡಬಹುದಾಗಿತ್ತು. ಹೋಗುವಾಗ ಏರಿಯಲ್ ಸರ್ವೇ ಆದ್ರು ಮಾಡಬಹುದಿತ್ತು, ಅದಕ್ಕೂ ಆಸಕ್ತಿ ತೋರಿಸಲಿಲ್ಲ ಮೋದಿ ಎಂದು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿ, ಬಿಜೆಪಿಯವರದ್ದು ಯಾವಾಗಲೂ ಇದೇ ರೀತಿಯ ಧೋರಣೆ. ಇವರು ಚುನಾವಣೆ ಸಮಯದಲ್ಲಿ ಒಂದು ಚುನಾವಣೆ ಮುಗಿದ ಮೇಲೆ ಒಂದು ರೀತಿಯ ವರ್ತನೆ ತೋರುತ್ತಾರೆ ಎಂದರು.
ಚುನಾವಣೆ ಸಂದರ್ಭದಲ್ಲಿ ಬಂದು ಜನರನ್ನೇ ಮರಳು ಮಾಡುತ್ತಾರೆ
ಚುನಾವಣೆ ಸಂದರ್ಭದಲ್ಲಿ ಬಂದು ಜನರನ್ನೇ ಮರಳು ಮಾಡುತ್ತಾರೆ, ನಂತರ ಜನರನ್ನೇ ಮರೆತು ಬಿಡುತ್ತಾರೆ. ಈಗಂತೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಮಧ್ಯೆ ತಾಳಮೇಳ ಇಲ್ಲದಂತಾಗಿ ಅಭಿವೃದ್ಧಿ ಕೆಲಸ ಆಗ್ತಿಲ್ಲ, ರೈಲ್ವೇ ಇಲಾಖೆಯಲ್ಲಿ ನೇಮಕಾತಿ ಆಗ್ತಿಲ್ಲ, ಇದಷ್ಟೇ ಅಲ್ಲ, ಎಲ್ಲಾಕಡೆ ಇದೀ ರೀತಿಯ ಧೋರಣೆ ಸಾಗಿದರೆ ಹೇಗೆ? ಹೀಗಾದ್ರೆ ಅಭಿವೃದ್ಧಿ ಕೆಲಸಗಳು ಹೇಗೆ ಆಗುತ್ತವೆ ಎಂದು ಖಡಕ್ಕಾಗಿ ಪ್ರಶ್ನಿಸಿದರು.
ಕಾಂಗ್ರೆಸ್‌ನಲ್ಲಿ ಮೂಲ, ವಲಸಿಗ ಇಲ್ರಿ:
ಕಾಂಗ್ರೆಸ್ ಸೇರಿದ ಮೇಲೆ ಎಲ್ಲರೂ ಕಾಂಗ್ರೆಸ್‌ನವರೆ. ಇಲ್ಲಿ ಮೂಲ, ವಲಸಿಗ ಸಂಬಂಧ ಇಲ್ಲ, ಕಾಂಗ್ರೆಸ್ ದೊಡ್ಡ ಸಮುದ್ರ, ಎಲ್ಲ ನದಿಗಳು ಸಮುದ್ರ ಸೇರುವಂತೆ ಪಕ್ಷದ ಒಳಗಡೆ ಮುನಿಸುಗಳ ಬಗ್ಗೆ ಮಾತಾಡಿಕೊಳ್ಳಲಿ. ಆದ್ರೆ ಅದನ್ನ ಬಹಿರಂಗ ಪಡಿಸಬಾರದು ಎಂದು ಪಕ್ಷದಲ್ಲಿನ ಸಂಗಾತಿಗಳಿಗೆ ಕಿವಿಮಾತು ಹೇಳಿದರು.
ವಿರೋಧ ಪಕ್ಷದ ನಾಯಕರನ್ನ ಆಯ್ಕೆ ಮಾಡ್ತಾರೆ, ಮೊದಲು ಎರಡು ಪ್ರಪೋಸಲ್ ಇತ್ತು. ಅಧಿವೇಶನದ ಸಲುವಾಗಿ ಆಯ್ಕೆ ಮಾಡಬೇಕಿತ್ತು, ಆದ್ರೆ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಿದ್ರೆ ರಾಜ್ಯವಾಪಿ ಪ್ರವಾಸ ಮಾಡಿ ಬರ ಪರಿಸ್ಥಿತಿ ಅಧ್ಯಯನ ಮಾಡಬಹುದು ಎಂದು ಡಾ. ಖರ್ಗೆ ಪಕ್ಷದಲ್ಲಿ ವಿಪಕ್ಷ ನಾಯಕ ಸ್ಥಾನಕ್ಕಾಗಿ ಕಿತ್ತಾಟ ಯಾವುದೂ ಇಲ್ಲ ಎಂಬಂತೆ ಮಾತನಾಡಿದರು.
ಚಾರಾಣೆ ಮುರ್ಗಿ ಕೋ ಬಾರಾಣೆ ಮಸಾಲಾ
ಕಾಂಗ್ರೆಸ್ ಪಕ್ಷದಲ್ಲಿನ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಸಾಗಿರುವ ಸ್ಪರ್ಧೆ, ಪರಸ್ಪರ ಭಿನ್ನಮತಗಳ ಕುರಿತಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಕಾಂಗ್ರೆಸ್‌ನಲ್ಲಿ ಯಾವ ಗುಂಪುಗಾರಿಕೆ ಇಲ್ಲ, ಭಿನ್ನ ಅಭಿಪ್ರಾಯಗಳೂ ಇಲ್ಲ, ಕೆಲವು ಹಂತದಲ್ಲಿ ಭಿನ್ನಮತ ಇದ್ದರೂ ಅದನ್ನು ಬಗೆಹರಿಸಿಕೊಳ್ಳಲಾಗುತ್ತದೆ. ಸಣ್ಣಪುಟ್ಟಅಭಿಪ್ರಾಯ ಬೇದ ಇರ್ತವೆ, ಅದನ್ನೇ ನೀವು (ಪೇಪರ್- ಟೀವಿ) ಚಾರಾಣೆ ಮುರ್ಗಿ ಕೋ ಬಾರಾಣೆ ಮಸಾಲಾ... ಅನ್ನೋ ತರಹಾ ಅರೆದು ಹಾಗೇ ಬಿತ್ತರಿಸ್ತೀರಿ ಎಂದು ಲೇವಡಿ ಮಾಡಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮಾಧ್ಯಮದವರು ಸುದ್ದಿಗಳನ್ನು ಹುಟ್ಟುಹಾಕಿ ಹೇಳಬಾರದು, ಬಿತ್ತರಿಸಬಾರದು ಎಂದು ಕಿವಿಮಾತು ಹೇಳಿದರು. ‘ಮಾಧ್ಯಮದಲ್ಲಿ ಸುದ್ದಿಯನ್ನು ಸೃಷ್ಟಿಮಾಡಿಕೊಂಡು ಹೇಳಬಾರದು, ಜನ ನಿಮ್ಮ ಮೇಲೆ ತುಂಬಾ ನಂಬಿಕೆ ಇಟ್ಟಿದ್ದಾರೆ, ಮುಂದೆ ಅದು ಸುಳ್ಳು ಅಂದಾಗ ನಿಮ್ಮ ಮೇಲಿನ ಗೌರವ ಹೊಗುತ್ತೆ’ ಎಂದು ಮಾಧ್ಯಮ ರಂಗದ ಸುದ್ದಿ ವರಸೆಯ ಬಗ್ಗೆ ಡಾ. ಖರ್ಗೆ ತಮ್ಮ ಮನದಾಳದ ಮಾತು ಹೇಳಿದರು.