ಅಡಕಿಮೋಕ ತಾಂಡಾಕ್ಕೆ ಟ್ರ್ಯಾಕ್ಟರ್ ಹತ್ತಿ ಭೇಟಿ ನೀಡಿದ ಡಾ.ಉಮೇಶ ಜಾಧವ್| ಅಡಕಿ ಮೋಕಾ ತಾಂಡಾಕ್ಕ ಗಾಡಿ-ಗೋಡಾ ಹೋಗುವಂಗ ದಾರಾರಯಗ ರಸ್ತಾನೇ ಇಲ್ಲಾರಿ| 2 ಬಾರಿ ಚಿಂಚೋಳಿ ಪ್ರತಿನಿಧಿಸಿದ್ರು ಡಾ.ಜಾಧವ್, ಈಗ ಡಾ.ಅವಿನಾಶ ಎಂಎಲ್‌ಎ| ಹೀಗಿದ್ದರೂ ಅಡಕಿ ಮೋಕಾ ತಾಂಡಾ ಇಂದಿಗೂ ಸಂಪರ್ಕ ರಸ್ತೆ ವಂಚಿತವಾಗಿದೆ|
ಕಲಬುರಗಿ/ಚಿಂಚೋಳಿ[ಅ.30]: ಅದು ಚಿಂಚೋಳಿ ತಾಲೂಕಿನ ಅಡಕಿ ಮೋಕಾ ತಾಂಡಾ, 70 ರಿಂದ 80 ಕುಟುಂಬಗಳು ವಾಸವಾಗಿರೋ ಪುಟ್ಟ ತಾಂಡಾ. ಆದ್ರೂ ಇನ್ನೂ ಪಕ್ಕಾ ರಸ್ತಾ ಈ ತಾಂಡಾಕ್ಕೆ ಸಂಪರ್ಕಕ್ಕ ಬಂದಿಲ್ಲ! ಅಷ್ಟೇ ಯಾಕ್ರಿ, ಚೆಂಗಟಾ ಪಂಚಾಯ್ತಿ ಕೇಂದ್ರದಿದಂಲೂ ಈ ತಾಂಡಾಕ್ಕ ಹೋಗ್ಲಾಕ್ಕ ರಸ್ತಾ ಸರಿಯಾಗಿಲ್ಲ. ಹೀಂಗಾಗಿ ತಾಂಡಾ ಮಂದಿ ತಮ್ಮೂರಿಗೆ ಹೋಗ್ಲಿಕ್ಕಿ ಕಚ್ಚಾ ದಾರಿನೇ ಹಿಡಿಬೇಕು.
ಇಂತಿಪ್ಪ ತಾಂಡಾಕ್ಕೆ ಭೇಟಿ ಕೊಡ್ಲಾಕ ನಮ್ಮ ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಹೋದಾಗ ಅವರು ಪಯಣಿಸುತ್ತಿದ್ದ ಕಾರು ಕೆಸರಾಗ ಸಿಕ್ಕಿಬಿದ್ದು ಪರೇಶಾನ್. ಅವ್ರು ಕೆಸರಾಗ ಕಾರ್ ಸಿಗಿಬಿದ್ದಾಗ ಅನಿವಾರ್ಯವಾಗಿ ಕೆಳಗಿಳಿದ್ರು. ಮರುಕ್ಷಣನೇ ತಾಂಡಾ ಮಂದಿ ತಮ್ಮೂರಿಗೆ ಸಂಸದರು ಬರಾಕತ್ತಾರಲ್ಲ ಎಂದು ಖುಷಿಯಲ್ಲಿ ಟ್ರಾಕ್ಟರ್ ತಂದ್ರು. ಅದರಾಗ ಸಂಸದರನ್ನ ಹತ್ತಿಸಿಕೊಂಡು ತಾಂಡಾಕ್ಕ ಹೋದ್ರು!
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಘಟನೆ ನಡೆದದ್ದು ಸೋಮವಾರ ಸಂಜೆ ಹೊತ್ತು. ದೀಪಾವಳಿ ಅಮಾವಾಸ್ಯೆ ದಿನ. ಈ ತಾಂಡಾದ ಜನರ ಬೇಡಿಕೆಗಳನ್ನು ಈಡೇರಿಸಲು ಸಂಸದ ಡಾ. ಜಾಧವ್ ಅಲ್ಲಿಗೆ ಭೇಟಿ ನೀಡುವ ಉದ್ದೇಶದಿಂದ ಹೋದಾಗ ಈ ಪರಿ ಪಡಬಾರದ ಪಾಡು ಪಟ್ಟರು. ಕೆಸರಲ್ಲೇ ಕಾರು ಸಿಕ್ಕಿಬಿದ್ದಾಗ ಟ್ರಾಕ್ಟರ್ ಹತ್ತಿ 10 ಕಿಮೀ ಹೋಗಿಬರುವ ಮೂಲಕ ಅಡಕಿ ಮೋಕಾ ತಾಂಡಾದ ಜನರ ಅಹವಾಲ ಆಲಿಸಿದ್ರು.
ನದಿಗೆ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣಕ್ಕೆ ಭರವಸೆ:
ತಾಲೂಕಿನ ಚೇಂಗಟಾ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಅಡಕಿ ಮೋಕ ತಾಂಡಾಕ್ಕೆ ಕಲಬುರಗಿ ಸಂಸದ ಡಾ. ಉಮೇಶ ಜಾಧವ್ ಟ್ರ್ಯಾಕ್ಟರ್ ಮೂಲಕ ತೆರಳಿ ಭೇಟಿ ನೀಡಿದ್ದು ಇದೀಗ ದೊಡ್ಡ ಸುದ್ದಿಯಾಗಿದೆ. ಅಡಕಿಮೋಕ ತಾಂಡಾದ ಬಳಿ ಹರಿಯುವ ಮುಲ್ಲಾಮಾರಿ ನದಿಗೆ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣ ಮಾಡಿಕೊಡುವುದಕ್ಕಾಗಿ ತಾಂಡಾದ ಜನರೊಂದಿವೆ ನದಿಗೆ ಟ್ರ್ಯಾಕ್ಟರ್ ಮೂಲಕ ಸ್ಥಳ ಪರಿಶೀಲನೆ ನಡೆಸಿದರು. ಬಹುದಿನಗಳಿಂದ ಅಲ್ಲಿನ ರೈತರ ಬ್ರಿಡ್ಜ್ ಕಮ್ ಬ್ಯಾರೇಜ ನಿರ್ಮಾಣ ಮಾಡುವಂತೆ ತಾಂಡಾದ ಜನರ ಬೇಡಿಕೆ ಆಗಿತ್ತು. ಸಂಸದರು ರವಿವಾರ ಭೇಟಿ ನೀಡಿ ಪರಿಶೀಲಿಸಿದರು.
ಮುಲ್ಲಾಮಾರಿ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಮ್ ಬ್ಯಾರೇಜ ನಿರ್ಮಿಸಿದರೆ ಚೆಂಗಟಾ, ಕೊಟಗಾ, ಖಾನಾಪೂರ ಗ್ರಾಮಗಳ ರೈತರಿಗೆ ಮತ್ತು ಸುತ್ತಲಿನ ಜನರಿಗೆ ಅನುಕೂಲಕವಾಗಲಿದೆ ಇದರ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಬೇಗನೆ ಬ್ಯಾರೇಜ್ ನಿರ್ಮಿಸಿ ಕೊಡುತ್ತೇನೆ ಎಂದು ಸಂಸದರು ಭರವಸೆ ನೀಡಿದ್ದಾರೆ ಎಂದು ಚೇಂಗಟಾ ಅಶೋಕ ಜಾಜಿ ತಿಳಿಸಿದ್ದಾರೆ.
ಅಮರೇಶ ಕೋಡ್ಲಿ, ಮಹೇಶ ದೇಸಾಯಿ, ಶರಣು ಕೋಡ್ಲಿ, ನಿಜಯ ಪ್ರಭು, ಲೋಕೇಶ ಚವ್ಹಾಣ, ಮಹೇಶ ಕಿರಣಿ, ರಾಜು,ಚೆನ್ನು ನಾಟಿಕಾರ, ಗೇಮು ನಾಯಿಕ,ಸೂರು ನಾಯಕ, ತೇಜು ರಾಠೋಡ, ಗುಂಡುರಾವ ಜಾಧವ್, ರಾಮಶೆಟ್ಟಿ ಇನ್ನಿತರರಿದ್ದರು.
ಅಡಕಿ ಮೋಕಾ ತಾಂಡಾಕ್ಕ ರಸ್ತೆ ಯಾವಾಗ್ರಿ?
ಅಡಕಿ ಮೋಕಾ ಪುಟ್ಟ ತಾಂಡಾ ಆದರೂ ಇಂದಿಗೂ ಪಂಚಾಯ್ತಿ ಕೇಂದ್ರ ಚೆಂಗಟಾಕ್ಕೂ ಹೋಗಿ ಬರಲು ರಸ್ತೆ ಇರದೆ ತೊಂದರೆಯಲ್ಲಿದೆ. ಇಲ್ಲಿನ ಜನ ಯಾವುದೇ ಕೆಲಸಕ್ಕೂ ಟೆಂಗಟಾಕ್ಕೆ ಹೋಗಿ ಬರಬೇಕು. ಆದರೆ ಕಚ್ಚಾ ರಸ್ತೆಯೇ ಇವರಿಗೆ ಗತಿ. ಅನೇಕ ಬಾರಿ ಈ ರಸ್ತೆಯಲ್ಲಿ ಹಾವು-ಚೇಳು ಕಾಟ, ಕಾಡು ಪ್ರಾಣಿಗಳ ಕಾಟ ಎದುರಿಸುತ್ತದ್ದಾರೆ. ಚಿಂಚೋಳಿಯಿಂದ 45 ಕಿಮೀ ದೂರದಲ್ಲಿದೆ ಅಡಕಿ ಮೋಕಾ. ಆದರೂ ಇಂದಿಗೂ ರಸ್ತೆ ಹೊಂದುವ ಯೋಗ ಇದಕ್ಕೆ ಕೂಡಿ ಬಂದಿಲ್ಲ. ಹೀಗಾಗಿ ಈ ತಾಂಡಾ ಮಂದಿ ಇಂದಿಗೂ ಬಸ್ ಕಂಡಿಲ್ಲ!. ತಾಂಡಾಕ್ಕೆ ಹೋಗಲು ಬೈಕ್ ಇರಬೇಕು, ಇಲ್ಲಾ ಕಾಲ್ನಡಿಗಿಯೇ ಗತಿ ಇವರಿಗೆ. ಅಡಕಿ ಮೋಕಾ ತಾಂಡಾ ಜನರ ದಿನದ ಬವಣೆ ದೇವರೇ ಬಲ್ಲ!
2 ಬಾರಿ ಡಾ.ಜಾಧವ್ ಶಾಸಕರಾಗಿದ್ರು, ಈಗ ಅವರ ಪುತ್ರ ಶಾಸಕರು
ಚಿಂಚೋಳಿಯನ್ನು ಸದನದಲ್ಲಿ 2 ಬಾರಿ ಡಾ. ಜಾಧವ್ ಶಾಸಕರಾಗಿ ಪ್ರತಿನಿಧಿಸಿದವರು. ಇದೀಗ ಅವರ ಪುತ್ರ ಡಾ. ಅವಿನಾಶ ಶಾಸಕರು. ಈಗ ಜಾಧವ್ ಸಂಸದರು. 2 ಬಾರಿ ಶಾಸಕಾರಗ್ದಿದಾಗ ಈ ತಾಂಡಾಕ್ಕೆ ಸಂಪರ್ಕ ರಸ್ತೆ ಕಲ್ಪಿಸಬಹುದಿತ್ತು. ಅದ್ಯಾಕೋ ಆಗಿಲ್ಲ ಎಂದು ವಿರೋಧಿಗಳು ಡಾ. ಜಾಧವ್‌ರಿಗೆ ಲೇವಡಿ ಮಾಡುವಂತಾಗಿದೆ. ಇನ್ನು ಡಾ. ಅವಿನಾಶ ಅವರೇ ಇದೀಗ ಶಾಸಕರು. ಹೀಗಾಗಿ ಇಂದಿಗೂ ತಾಂಡಾಕ್ಕೆ ರಸ್ತೆ ಇಲ್ಲ, ಜನರ ಗೋಳು ಕೇಳೋರಿಲ್ಲ ಎಂಬಂತಾದರೆ ಮುಂದಿನ ಗತಿ? ಎಂದು ಚಿಂಚೋಳಿ ಜನ ಪರೇಶಾನಿಯಲ್ಲಿದ್ದಾರೆ.