ಕುಡಿಗನೂರ್ ಗ್ರಾಮಕ್ಕೆ ಕೊನೆಗೂ ಸರ್ಕಾರಿ ಬಸ್ ಬಂತು| ಊರಿಗೆ ಬಸ್ ಬಂದಾಗ ಹಿರಿಹಿರಿ ಹಿಗ್ಗಿದ ಜನತೆ| ಪೂಜೆ ಮಾಡಿ ಸಿಹಿ ಹಂಚಿ ಸಂಭ್ರಮ| ಮೊದಲು ಶಾಲಾ ಕಾಲೇಜು ವಿದ್ಯಾರ್ಥಿಗಳು ಸಾರ್ವಜನಿಕರು ಐದಾರು ಕಿ.ಮೀ.ವರಗೆ ನಡೆದುಕೊಂಡೆ ಹೋಗಬೇಕಾಗಿತ್ತು|
ಅಫಜಲ್ಪುರ/ಕರಜಗಿ(ನ.14): ತಾಲೂಕಿನ ಭೀಮಾ ತೀರದಲ್ಲಿರುವ ಕುಡಿಗನೂರ್ ಗ್ರಾಮಕ್ಕೆ ಕೊನೆಗೂ ಕೆಂಪು ಬಸು ಬಂತು..! ಸ್ವಾತಂತ್ರ್ಯ ಸಿಕ್ಕು 7 ದಶಕ ಕಳೆದರೂ ಬಸ್ಸಿನ ಮುಖ ನೋಡದ ಈ ಊರ ಮಂದಿ ಏಕಾಏಕಿ ಊರಿಗೆ ಬಸ್ ಬಂದಾಗ ಹಿರಿಹಿರಿ ಹಿಗ್ಗಿದರು. ಪೂಜೆ ಮಾಡಿ ಸಿಹಿ ಹಂಚಿ ಸಂಭ್ರಮಿಸಿದರು.
ತಾಲೂಕಿನ ಕೇಂದ್ರದಿಂದ 30 ಕಿ.ಮೀ. ದೂರ ಅಷ್ಟೆ ಇದ್ರು ಆ ಗ್ರಾಮದ ಜನರು ನಿತ್ಯ ಖಾಸಗಿ ವಾಹನಗಳಾದ ಕ್ರೂಸರ್, ಜೀಪ್, ಟಂಟಂ ಟೆಂಪೋ ದ್ವಿಚಕ್ರ ವಾಹನಗಳ ಮೂಲಕ ಇಲ್ಲವೆ ನಡೆದುಕೊಂಡೆ ಹೋಗಬೇಕಿತ್ತು. ಸ್ವಾತಂತ್ರ್ಯ ಸಿಕ್ಕು 7 ದಶಕಗಳು ಕಳೆದರೂ ಈ ಗ್ರಾಮಕ್ಕೆ ಸರ್ಕಾರಿ ಬಸ್ಸಿನ ವ್ಯವಸ್ಥೆ ಇರಲಿಲ್ಲ. ಇಲ್ಲಿನ ಶಾಲಾ ಕಾಲೇಜು ವಿದ್ಯಾರ್ಥಿಗಳು ಸಾರ್ವಜನಿಕರು ಐದಾರು ಕಿ.ಮೀ.ವರಗೆ ನಡೆದುಕೊಂಡೆ ಹೋಗಬೇಕಾಗಿತ್ತು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈಗ ಗ್ರಾಮಕ್ಕೆ ಸರ್ಕಾರಿ ಬಸ ಸಂಚಾರ ಆರಂಭವಾಗಿದ್ದು ಗ್ರಾಮದಲ್ಲಿ ಹಬ್ಬದ ವಾತಾವಣ ನಿರ್ಮಾಣವಾಗಿದೆ. ಅಫಜಲ್ಪುರ ತಾಲೂಕಿನ ಕುಡಿಗನೂರ ಒಂದು ಪುಟ್ಟಗ್ರಾಮ ಸುಮಾರು ಎರಡೂ ಸಾವಿರಕ್ಕೂ ಹೆಚ್ಚು ಜನಸಂಖ್ಯೆವಿದ್ದು ಈ ಗ್ರಾಮಕ್ಕೆ ಯಾವುದೇ ಮೂಲ ಸೌಕರ್ಯಗಳಿಲ್ಲ. ಕಳೆದ ಐವತ್ತು ವರ್ಷಗಳಿಂದ ಗ್ರಾಮಸ್ಥರು ಬಸ್ಸು ಬಿಡುವಂತೆ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಪತ್ರ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಈ ಕುರಿತು ಕನ್ನಡಪ್ರಭ ಪತ್ರಿಕೆಯಲ್ಲಿ ಅಕ್ಟೋಬರ್ 10 ರಂದು ಪತ್ರಿಕೆಯಲ್ಲಿ ‘ಇಂದಿಗೂ ಬಸ್ ಕಂಡಿಲ್ಲರಿ ಕುಡಿಗನೂರ ಗ್ರಾಮ’ ಎಂಬ ಶೀರ್ಷಿಕೆಯಲ್ಲಿ ವರದಿ ಮಾಡಿತ್ತು ಈ ವರದಿ ಸ್ಪಂದಿಸಿದ ಸಾರಿಗೆ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಬಸ್ ಸೇವೆ ಆರಂಭಿಸಿದ್ದಾರೆ. ಹೀಗಾಗಿ ಇಂದು ಗ್ರಾಮಕ್ಕೆ ಆಗಮಿಸಿದ ಬಸ್‌ಗೆ ಗ್ರಾಮಸ್ಥರು ಖುಷಿಯಿಂದ ಹೂವಿನ ಅಲಂಕಾರ ಮಾಡಿ ಸ್ವಾಗತಿಸಿ ಚಾಲಕ ಹಾಗೂ ನಿರ್ವಾಹಕರನ್ನು ಸನ್ಮಾನಿಸಿದರು.
ಗ್ರಾಮಕ್ಕೆ ಸುಮಾರು 73 ವರ್ಷಗಳಿಂದ ಸಾರಿಗೆ ವ್ಯವಸ್ಥೆಯಿಲ್ಲದೆ ಗ್ರಾಮಸ್ಥರು ದೂರದ ಶಿವೂರ ಕ್ರಾಸ್ ಮಣ್ಣೂರ ಶಿವೂರ ಕರಜಗಿ ಗ್ರಾಮಗಳಿಗೆ ದ್ವಿಚಕ್ರ ವಾಹನಗಳ ಮೂಲಕ ಹೋಗಬೇಕಾದ ಪರಸ್ಥಿಯಿತ್ತು. ’ಕನ್ನಡಪ್ರಭ’ ವರದಿಗೆ ಸ್ಪಂದಿಸಿದ ಸಾರಿಗೆ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಬಸ್ ಸೌಲಭ್ಯ ಅವಕಾಶ ಕಲ್ಪಿಸಿದ್ದಕ್ಕಾಗಿ ಅಧಿಕಾರಿಗಳಿಗೆ ಅಭಿನಂದಿಸಿದ್ದಾರೆ. ಬಸ್ ಸೇವೆ ಆರಂಭವಾಗಿರುವುದರಿಂದ ಬೆಳಿಗ್ಗೆ ಶಾಲಾ ಕಾಲೇಜಗೆ ತೆರಳುವ ಸುಮಾರು 50 ವಿದ್ಯಾರ್ಥಿಗಳಿಗೆ ಸಹಕಾರವಾಗಿದೆ. ಅನಾರೋಗ್ಯದಿಂದ ಬಳಲುತ್ತಿರುವವರಿಗೆ ವೃದ್ದರಿಗೆ ರೋಗಿಗಳಿಗೆ ಗರ್ಭಿಣಿಯರಿಗೆ ಇದರಿಂದ ತುಂಬಾ ಅನಕೂಲವಾಗಿದೆ.ಬಸ್
ವೇಳಾಪಟ್ಟಿ
ಈ ಬಸ್ಸು ಅಫಜಲ್ಪುರದಿಂದ ಬೆಳಗ್ಗೆ 7.30 ಕ್ಕೆ ಹೊರಟು ಕರಜಗಿ ಮಾರ್ಗವಾಗಿ ಶಿವೂರ ಗ್ರಾಮಕ್ಕೆ ತಲುಪಿ ಅಲ್ಲಿಂದ 9.30ಕ್ಕೆ ಕುಡಿಗನೂರ ಗ್ರಾಮಕ್ಕೆ ಬಂದು ಕರಜಗಿ ಮಾರ್ಗವಾಗಿ ಅಫಜಲ್ಪುರಕ್ಕೆ ತಲುಪಲಿದೆ. ಪುನ: ಮದ್ಯಾಹ್ನ 2 ಗಂಟೆಗೆ ಅಫಜಲ್ಪುರದಿಂದ ಹೊರಟು 3 ಗಂಟೆಗೆ ಕುಡಿಗನೂರ ಗ್ರಾಮಕ್ಕೆ ಬರುತ್ತದೆ ಎಂದು ಅಫಜಲ್ಪುರ ಘಟಕ ವ್ಯವಸ್ಥಾಪಕ ಜಿ.ಆರ್.ಕುಲಕರ್ಣಿ ಮಾಹಿತಿ ನೀಡಿದರು.
ಈ ಸಂರ್ಭದಲ್ಲಿ ಗ್ರಾಮದ ಮುಖಂಡರಾದ ಶಂಕರಗೌಡ ಪಾಟೀಲ ಸಂಜೀವ ಸಾತಲಗಾಂವ ಕಲ್ಯಾಣಿ ಕೋನಳ್ಳಿ ಸೇರಿದಂತೆ ಗ್ರಾಮಸ್ಥರಿದ್ದರು.