ಕೇಂದ್ರದ ಪಾಲಿಗೆ ಕರ್ನಾಟಕ ಅಂದ್ರೆ ತೆರಿಗೆ ಸಂಗ್ರಹಕ್ಕಷ್ಟೆ ಸೀಮಿತ ರಾಜ್ಯವೆ ಎಂದ ಪ್ರಿಯಾಂಕ್ ಖರ್ಗೆ| 100 ವರ್ಷಗಳಲ್ಲೇ ಕಾಣದ ಭೀಕರ ನೆರೆ| ರಾಜ್ಯವನ್ನು ಈ ಬಾರಿ ಸಂಕಷ್ಟಕ್ಕೆ ದೂಡಿದೆ| ರಾಜ್ಯಕ್ಕೆ ಸಾವಿರಾರು ಕೋಟಿ ನಷ್ಟ ವಾಗಿದ್ದರೂ ಈ ಕುರಿತು ಕೇಂದ್ರಕ್ಕೆ ನಮ್ಮ ಸಂಕಷ್ಟ ಕಾಣಲೇ ಇಲ್ಲ| ಕೇಂದ್ರದ ಮೋದಿ ಸರ್ಕಾರ ಈವರೆಗೂ ಅಗತ್ಯ ನೆರೆ ಪರಿಹಾರ ಅನುದಾನ ಒದಗಿಸಲು ಹಿಂದೆ ಮುಂದೆ ನೋಡುತ್ತಿದೆ|
ಕಲಬುರಗಿ(ಅ.27): ಕರುನಾಡಿನ ಪಾಲಿಗೆ ಕೇಂದ್ರ ಸರಕಾರವೇ ಇಲ್ಲದಂತಿದೆ ಎಂದು ಅವಕಾಶ ಸಿಕ್ಕಾಗೆಲ್ಲಾ ಬಿಜೆಪಿ ನೇತೃತ್ವದ ಕೇಂದ್ರದ ವಿರುದ್ಧ ಸದಾಕಾಲ ಗುಡುಗುವ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಕೇಂದ್ರದ ಪಾಲಿಗೆ ಕರ್ನಾಟಕ ಕೇವಲ ತೆರಿಗೆ ವಸೂಲಾತಿಗಷ್ಟೇ ಸೀಮಿತವಾಗಿದೆ ಎಂದು ತಿವಿದಿದ್ದಾರೆ.
ಇದುವರೆಗೂ ಟ್ವಿಟರ್ ಬಳಸಿ ಟೀಕಿಸುತ್ತಿದ್ದ ಖರ್ಗೆ ಈ ಬಾರಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಈ ಬಗ್ಗೆ ವಿವರವಾಗಿ ಬರೆದುಕೊಂಡು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸರ್ವ ಶಿಕ್ಷಣ ಅಭಿಯಾನದ ಭಾಗವಾಗಿ ರಾಜ್ಯದ ಸರ್ಕಾರಿ ಶಾಲೆಗಳ ಮಕ್ಕಳಿಗೆ 2ನೇ ಜೊತೆ ಸಮವಸ್ತ್ರ ನೀಡಬೇಕಿದ್ದ ಕೇಂದ್ರ ನಿರ್ಲಕ್ಷ್ಯತೆ ವಹಿಸಿ ತನಗೂ ಅದಕ್ಕೂ ಸಂಬಂಧವೇ ಇಲ್ಲದಂತೆ ಕುಳಿತಿದೆ. ಈ ಕುರಿತು ಕೊಪ್ಪಳದ 8 ವರ್ಷದ ಬಾಲಕ ಮಂಜುನಾಥ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿದ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿ ಸಾರ್ವಜನಿಕವಾಗಿ ಒತ್ತಡ ಹೇರಿತ್ತು ಎಂಬ ಪ್ರಸಂಗ ಸಹ ವಿವರಿಸಿದ್ದಾರೆ.
ಕೇಂದ್ರದಿಂದಾಗಿರುವ ಮೋಸವನ್ನು ಮರೆಮಾಚಲು ಈಗ ರಾಜ್ಯವೇ ಹೈಕೋರ್ಟ್ ಮುಂದೆ ತನ್ನ ಬೊಕ್ಕಸದಿಂದ 2ನೇ ಜೊತೆ ಸಮವಸ್ತ್ರವನ್ನು ಮಕ್ಕಳಿಗೆ ನೀಡುವುದಾಗಿ ತಿಳಿಸಿದೆ. ಇದೆಂತಹ ಸರಕಾರ ಎಂದು ಖರ್ಗೆ ಮಾತಿನಲ್ಲಿ ತಿವಿದಿದ್ದಾರೆ.
ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಫೇಸ್‌ಬುಕ್ನಲ್ಲಿ ಪ್ರಸ್ತಾಪಿಸಿದ ಸಂಗತಿಗಳು ಹೀಗಿವೆ:
ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯಡಿ ನೀಡಬೇಕಿದ್ದ ಸಾವಿರಾರು ಕೋಟಿ ರೂಪಾಯಿ ಹಣವನ್ನು 2 ವರ್ಷಗಳಿಂದ ಈವರೆಗೂ ನೀಡಿಲ್ಲ. ಜನರಿಗೆ ಸಹಾಯವಾಗುವಂತೆ ಈ ಹಣವನ್ನು ಹಿಂದಿನ ನಮ್ಮ ರಾಜ್ಯ ಸರ್ಕಾರವೇ ಬೊಕ್ಕಸದಿಂದ ಭರಿಸಿತ್ತು.
100 ವರ್ಷಗಳಲ್ಲೇ ಕಾಣದ ಭೀಕರ ನೆರೆ:
ರಾಜ್ಯವನ್ನು ಈ ಬಾರಿ ಸಂಕಷ್ಟಕ್ಕೆ ದೂಡಿದೆ. ರಾಜ್ಯಕ್ಕೆ ಸಾವಿರಾರು ಕೋಟಿ ನಷ್ಟ ವಾಗಿದ್ದರೂ ಈ ಕುರಿತು ಕೇಂದ್ರಕ್ಕೆ ನಮ್ಮ ಸಂಕಷ್ಟ ಕಾಣಲೇ ಇಲ್ಲ. ಕೇಂದ್ರದ ಮೋದಿ ಸರ್ಕಾರ ಈವರೆಗೂ ಅಗತ್ಯ ನೆರೆ ಪರಿಹಾರ ಅನುದಾನ ಒದಗಿಸಲು ಹಿಂದೆ ಮುಂದೆ ನೋಡುತ್ತಿದೆ.
ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಸಂಕಷ್ಟಕ್ಕೆ ಜೊತೆಯಾಗಿ ನಿಂತು ಪರಿಹಾರ ನೀಡಬೇಕಿದ್ದ ಕೇಂದ್ರ ಸರ್ಕಾರ ಕೈಕಟ್ಟಿ ಕುಳಿತಿದೆ. ತನ್ನ ಹಾಗೂ ರಾಜ್ಯಗಳ ನಡುವೆ ಸೌಹಾರ್ದಯುತ ಅನುಬಂಧ ಕಾಪಾಡಿ ಕೊಳ್ಳುವುದು ಕೇಂದ್ರದ ಸಾಂವಿಧಾನಿಕ ಜವಾಬ್ದಾರಿ. ಆದರೆ ಕರ್ನಾಟಕ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಈ ಸಂಬಂಧ ಮುರಿದು ಬಿದ್ದಿದೆ.
ರಾಷ್ಟ್ರೀಯ ಯೋಜನೆಗಳಿಗಿಲ್ಲ ಕೇಂದ್ರದ ಪಾಲು:
ಕೇಂದ್ರದಿಂದ ನೆರವನ್ನೇ ನೀಡದೇ, ರಾಷ್ಟ್ರೀಯ ಯೋಜನೆಗಳಿಗೆ ತನ್ನ ಪಾಲನ್ನು ಕಟ್ಟದೇ ಸತಾಯಿಸುವುದು ಒಕ್ಕೂಟ ವ್ಯವಸ್ಥೆಯಾ? ಎಲ್ಲಿಯವರೆಗೂ ನಾವು ನಮ್ಮ ಪಾಲಿನ ತೆರಿಗೆ ನೀಡುತ್ತಾ ಕೇಂದ್ರದಿಂದ ನಿರ್ಲಕ್ಷತೆಗೆ ಒಳಗಾಗುತ್ತಿರಬೇಕು? ಕೇಂದ್ರ ಸರ್ಕಾರ ರಾಜ್ಯಕ್ಕೆ ತನ್ನ ಪಾಲಿನ ಸಂಪನ್ಮೂಲ ಒದಗಿಸಲು ತಿರಸ್ಕಾರ ಮಾಡುತ್ತಿರುವುದನ್ನು ನಾವು ನೋಡುತ್ತಾ ಕೂರಬೇಕು?