ಡಿಸಿಎಂ ಲಕ್ಷ್ಮಣ ಸವದಿ ಭವಿಷ್ಯ ನಾನ್ಯಾಕೆ ನಿರ್ಧಾರ ಮಾಡ್ಲಿ?

By Web Desk  |  First Published Oct 31, 2019, 8:53 AM IST

ವಿಧಾನಸಭೆಗೆ ಸ್ಪರ್ಧಿಸಬೇಕೋ? ವಿಧಾನಪರಿಷತ್ತಿಗೆ ಆಯ್ಕೆ ಮಾಡಬೇಕೋ?| 6 ತಿಂಗಳೊಳಗೆ ಶಾಸನಸಭೆಯ ಸದಸ್ಯರಾಗುವ ಅನಿವಾರ್ಯತೆ ಡಿಸಿಎಂ ಲಕ್ಷ್ಮಣ ಸವದಿಗೆ| ಡಿಸಿಎಂ ಮಾಡಿದ ಹೈಕಮಾಂಡೇ ನಿರ್ಧಾರ ಕೈಗೊಳ್ಳಲಿ ಎಂದ ಬಿಎಸ್‌ವೈ| ಅಥಣಿಯಲ್ಲಿ ಸ್ಪರ್ಧಿಸಲು ಅನರ್ಹ ಶಾಸಕ ಮಹೇಶ್‌ ಕುಮಟಳ್ಳಿ ಅಡ್ಡಿ|


ಬೆಂಗಳೂರು[ಅ.30]: ವಿಧಾನಸಭೆ ಅಥವಾ ವಿಧಾನ ಪರಿಷತ್ತಿನ ಪೈಕಿ ಯಾವುದೇ ಒಂದರ ಸದಸ್ಯರೂ ಆಗಿರದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ರಾಜಕೀಯ ಭವಿಷ್ಯ ನಿರ್ಧರಿಸುವ ಹೊಣೆಯನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಪಕ್ಷದ ಹೈಕಮಾಂಡ್‌ ಹೆಗಲಿಗೆ ಹಾಕಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಸೋಲುಂಡಿದ್ದ ಲಕ್ಷ್ಮಣ ಸವದಿ ಅವರನ್ನು ಬಿಜೆಪಿ ವರಿಷ್ಠರು ಅನಿರೀಕ್ಷಿತ ಎಂಬಂತೆ ಉಪಮುಖ್ಯಮಂತ್ರಿ ಮಾಡುವ ನಿರ್ಧಾರ ಕೈಗೊಂಡು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಂದೇಶ ರವಾನಿಸಿದ್ದರು. ಸಚಿವರಾಗಿ ನೇಮಕಗೊಂಡ ಆರು ತಿಂಗಳಲ್ಲಿ ವಿಧಾನಮಂಡಲದ ಉಭಯ ಸದನಗಳ ಪೈಕಿ ಒಂದರ ಸದಸ್ಯರಾಗಿ ಆಯ್ಕೆಯಾಗುವ ಅನಿವಾರ್ಯತೆ ಸವದಿಗೆ ಎದುರಾಗಿದೆ.

Tap to resize

Latest Videos

ಸವದಿ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡುವ ಅಚ್ಚರಿಯ ನಿರ್ಧಾರ ಕೈಗೊಂಡಿದ್ದು ಹೈಕಮಾಂಡ್‌. ಹೀಗಾಗಿ, ಅವರನ್ನು ವಿಧಾನಸಭೆ ಅಥವಾ ವಿಧಾನಪರಿಷತ್‌ ಪೈಕಿ ಯಾವುದರಿಂದ ಆಯ್ಕೆ ಮಾಡಬೇಕು? ಪರಿಷತ್ತಿನಿಂದ ಮಾಡುವುದಾದರೆ ಹೇಗೆ ಎಂಬಿತ್ಯಾದಿ ನಿರ್ಣಯವನ್ನು ಪಕ್ಷದ ವರಿಷ್ಠರೇ ಕೈಗೊಳ್ಳಲಿ ಎಂಬ ಮಾತನ್ನು ಯಡಿಯೂರಪ್ಪ ಅವರು ತಮ್ಮ ಆಪ್ತರ ಬಳಿ ಪ್ರಸ್ತಾಪಿಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಆರಂಭದಲ್ಲಿ ಸವದಿ ಅವರು ಕಳೆದ ಬಾರಿ ಸೋತಿದ್ದ ಅಥಣಿ ಕ್ಷೇತ್ರದಿಂದಲೇ ಮತ್ತೆ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಪ್ರಸ್ತಾಪವಾಗಿತ್ತು. ಕಾಂಗ್ರೆಸ್‌ನ ಅನರ್ಹ ಶಾಸಕ ಮಹೇಶ್‌ ಕುಮಟಳ್ಳಿ ಅವರು ಉಪಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಅವರ ಬದಲಾಗಿ ಲಕ್ಷ್ಮಣ ಸವದಿ ಅವರೇ ಕಣಕ್ಕಿಳಿಯಲಿದ್ದಾರೆ ಎಂಬ ಮಾತು ದಟ್ಟವಾಗಿ ಕೇಳಿಬಂದಿತ್ತು. ಆ ಬಗ್ಗೆ ಮಹೇಶ್‌ ಕುಮಟಳ್ಳಿ ಅವರು ಬಹಿರಂಗವಾಗಿ ಯಾವುದೇ ನಿರ್ಧಾರ ಪ್ರಕಟಿಸದೇ ಇದ್ದರೂ ತೆರೆಮರೆಯಲ್ಲಿ ಪ್ರಾಥಮಿಕ ಹಂತದ ಚರ್ಚೆಯೂ ನಡೆದಿತ್ತು. ವಿಧಾನ ಪರಿಷತ್‌ ಪ್ರವೇಶಿಸುವ ಅಥವಾ ಶಾಸಕರಾಗದೆ ಪ್ರಮುಖ ನಿಗಮ ಮಂಡಳಿ ಅಧ್ಯಕ್ಷಗಿರಿ ಪಡೆದುಕೊಳ್ಳುವ ಇಂಗಿತವನ್ನೂ ಬಿಜೆಪಿ ನಾಯಕರ ಬಳಿ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಆದರೆ, ನಂತರದ ದಿನಗಳಲ್ಲಿ ಲಕ್ಷ್ಮಣ ಸವದಿ ಅವರು ದೂರವಾಣಿಯಲ್ಲಿ ಬೇರೊಬ್ಬರ ಜೊತೆ ಮಾತನಾಡುವ ವೇಳೆ ಕುಮಟಳ್ಳಿ ಬಗ್ಗೆ ಕೀಳಾಗಿ ಮಾತನಾಡಿದ್ದರು ಎಂಬ ವೀಡಿಯೋ ವೈರಲ್‌ ಆಗುತ್ತಿದ್ದಂತೆಯೇ ಮಹೇಶ್‌ ಕುಮಟಳ್ಳಿ ಅವರು ಆಕ್ರೋಶಗೊಂಡು ತಾವೇ ಸ್ಪರ್ಧಿಸುವ ನಿರ್ಧಾರಕ್ಕೆ ಬಂದರು ಎಂದು ತಿಳಿದು ಬಂದಿದೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೊದಲೇ ಬಿಜೆಪಿಯಿಂದ ಎಲ್ಲರಿಗೂ ಟಿಕೆಟ್‌ ನೀಡುವ ಭರವಸೆಯನ್ನು ನೀಡಲಾಗಿತ್ತು. ಒಬ್ಬರಿಗೆ ಟಿಕೆಟ್‌ ನಿರಾಕರಿಸಿದರೂ ಅದು ತಪ್ಪು ಸಂದೇಶ ರವಾನಿಸಿದಂತಾಗುತ್ತದೆ. ಉಪಚುನಾವಣೆಯಲ್ಲಿ ಸ್ಪರ್ಧಿಸುವುದು ಅಥವಾ ಬಿಡುವುದು ಆಯಾ ಅನರ್ಹ ಶಾಸಕರಿಗೆ ಬಿಟ್ಟವಿಚಾರ. ಆದರೆ, ನಾವಾಗಿಯೇ ಟಿಕೆಟ್‌ ನಿರಾಕರಿಸುವುದು ಸರಿಯಲ್ಲ ಎಂಬ ಉದ್ದೇಶವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಹೊಂದಿದ್ದಾರೆ.

ಉಭಯ ಸದನಗಳ ಪೈಕಿ ಒಂದಕ್ಕೆ  ಸದಸ್ಯರಾಗುವುದು ಅನಿವಾರ್ಯ

ಈಗಾಗಲೇ ಸವದಿ ಅವರು ಸಂಪುಟ ಸೇರಿ ಮೂರು ತಿಂಗಳು ಕಳೆದಿದೆ. ಇನ್ನು ಮೂರು ತಿಂಗಳೊಳಗಾಗಿ ಉಭಯ ಸದನಗಳ ಪೈಕಿ ಒಂದರ ಸದಸ್ಯರಾಗುವುದು ಅನಿವಾರ್ಯ. ಇಲ್ಲದಿದ್ದರೆ ಉಪಮುಖ್ಯಮಂತ್ರಿ ಸ್ಥಾನವನ್ನೇ ತೊರೆಯಬೇಕಾಗುತ್ತದೆ.

ಅಥಣಿಯಿಂದಲೇ ಸ್ಪರ್ಧಿಸುವ ಸಂಬಂಧ ಒತ್ತಡ ಮುಂದುವರೆಸಿರುವ ಲಕ್ಷ್ಮಣ ಸವದಿ ಅವರು ಕಳೆದ ವಾರ ಹುಬ್ಬಳ್ಳಿಯಲ್ಲಿ ನಡೆದ ಆ ಭಾಗದ ಉಪಚುನಾವಣೆ ಎದುರಾಗಿರುವ ಕ್ಷೇತ್ರಗಳ ಮುಖಂಡರ ಸಭೆಯಲ್ಲಿ ಮಹೇಶ್‌ ಕುಮಟಳ್ಳಿ ಅವರನ್ನು ಕಣದಿಂದ ಹಿಂದೆ ಸರಿಯುವಂತೆ ಮನವಿ ಮಾಡಿದ್ದಾರೆ. ಆದರೆ, ಕುಮಟಳ್ಳಿ ತಮ್ಮ ಪಟ್ಟು ಮುಂದುವರೆಸಿದ್ದಾರೆ. ಹೀಗಾಗಿ, ಮತ್ತೊಮ್ಮೆ ಸವದಿ ಮತ್ತು ಕುಮಟಳ್ಳಿ ಅವರನ್ನು ಮುಖಾಮುಖಿ ಕೂರಿಸಿ ಮಾತುಕತೆ ನಡೆಸುವ ಮೂಲಕ ನಿರ್ಣಯ ಕೈಗೊಳ್ಳಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಆದರೆ, ಕುಮಟಳ್ಳಿ ಪಟ್ಟು ಸಡಿಲಿಸದಿದ್ದರೆ ಸವದಿಗೆ ಸಂಕಷ್ಟಎದುರಾಗಬಹುದು.

ಆದರೆ, ಉಪಮುಖ್ಯಮಂತ್ರಿಯನ್ನಾಗಿ ಮಾಡುವಲ್ಲಿ ಕಾಳಜಿ ತೋರಿದ ವರಿಷ್ಠರು ಈಗ ಆ ಹುದ್ದೆಯಿಂದ ಕೆಳಗಿಳಿಯಲು ಬಿಡುತ್ತಾರಾ ಎಂಬುದು ಕುತೂಹಲಕರವಾಗಿದೆ. ಸದ್ಯದಲ್ಲಿ ವಿಧಾನಪರಿಷತ್ತಿನಲ್ಲಿ ಯಾವುದೇ ಸ್ಥಾನ ಖಾಲಿ ಇರದೇ ಇರುವುದರಿಂದ ಪಕ್ಷದ ಒಬ್ಬ ಸದಸ್ಯರ ರಾಜೀನಾಮೆ ಪಡೆದು ಆ ಸ್ಥಾನಕ್ಕೆ ಸವದಿ ಅವರನ್ನು ಕಳುಹಿಸಬೇಕಾಗುತ್ತದೆ. ಹೀಗಾಗಿ, ಈ ನಿರ್ಧಾರವನ್ನು ವರಿಷ್ಠರೇ ಕೈಗೊಳ್ಳಲಿ ಎಂಬ ನಿಲುವಿಗೆ ಯಡಿಯೂರಪ್ಪ ಬಂದಿದ್ದಾರೆ ಎನ್ನಲಾಗಿದೆ.

click me!