ಯಾವ ರಾಜಕಾರಣಿಯೂ ಒತ್ತಡ ಹಾಕಿಲ್ಲ: ಮನು ಬಳಿಗಾರ

By Kannadaprabha NewsFirst Published Feb 5, 2020, 10:06 AM IST
Highlights

ಬಿಸಿಲ ನಗರಿ ಕಲಬುರಗಿಯಲ್ಲಿ ಇಂದಿನಿಂದ(ಫೆ.5) ಮೂರು ದಿನಗಳ ಕಾಲ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಬರೋಬ್ಬರಿ 33 ವರ್ಷಗಳ ಬಳಿಕ ಕಲಬುರಗಿಗೆ ಅಕ್ಷರ ಜಾತ್ರೆಯ ಆತಿಥ್ಯ ವಹಿಸಲು ಅವಕಾಶ ಲಭಿಸಿದೆ.  ಈ ಬಗ್ಗೆ ಕರ್ನಾಟಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ ಅವರು ಮನಬಿಚ್ಚಿ ಮಾತನಾಡಿದ್ದಾರೆ.
 

ರಾಜೇಶ್‌ ಶೆಟ್ಟಿ

ನಿಮ್ಮ ಅವಧಿಯಲ್ಲಿ ನಡೆಯುತ್ತಿರುವ ನಾಲ್ಕನೇ ಸಾಹಿತ್ಯ ಸಮ್ಮೇಳನ ಇದು. ಸಮ್ಮೇಳನ ಮತ್ತು ಪರಿಷತ್ತು ಎರಡನ್ನೂ ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದೀರಿ. ನಿಮ್ಮ ಯಶಸ್ಸಿನ ಗುಟ್ಟೇನು?

ನನಗೆ ಯಾವುದೇ ಪೂರ್ವಾಗ್ರಹಗಳಿಲ್ಲ. ಎಲ್ಲರನ್ನೂ ಸರಿ ಸಮಾನವಾಗಿ ಕಾಣುವಂತಹ, ಕನ್ನಡ ಅಭಿವೃದ್ಧಿಗೆ ಪೂರಕವಾಗುವಂತಹ ಅಂಶಗಳನ್ನು ಮಾತ್ರ ಪರಿಗಣಿಸುತ್ತೇನೆ. ಬೇರೆಯದೆಲ್ಲವೂ ಗೌಣ ನನಗೆ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ ಇದರ ಅಭಿವೃದ್ಧಿಗಾಗಿ ಮತ್ತು ರಕ್ಷಣೆಗೆ ಏನೇನು ಅವಶ್ಯ ಇದೆ, ಏನೇನು ಮಾಡಬೇಕು ಅದರ ಕಡೆಗೆ ಅಹರ್ನಿಶಿ ವಿಚಾರ ಮಾಡುತ್ತಿರುತ್ತೇನೆ. ಆದ್ದರಿಂದ ನನಗೆ ಕನ್ನಡದ ಕೆಲಸ ಯಾರು ಮಾಡುತ್ತಾರೆ ಅಂತ ಗೊತ್ತಿದೆ. ಅವರೇ ನನಗೆ ಆದ್ಯರು. ಕನ್ನಡ ಸಾಹಿತ್ಯ ಬೆಳೆಸುವ ಹೋರಾಟಗಾರರು, ಕಲಾವಿದರು ಕೂಡ ನನಗೆ ಮುಖ್ಯ. ಅಂಥವರನ್ನು ನಾನು ಗಮನಿಸುತ್ತಿರುತ್ತೇನೆ. ಬಹಳ ನಿಷ್ಠೆಯಿಂದ ಕನ್ನಡ ಪತ್ರಿಕೆಗಳನ್ನು ಓದುತ್ತೇನೆ. ಕನ್ನಡ ವಾಹಿನಿಗಳನ್ನು ನೋಡುತ್ತೇನೆ. ಹೀಗಾಗಿ ನಾನು ಯಾವಾಗಲೂ ಅಪ್‌ಡೇಟ್ ಇರುತ್ತೇನೆ. ಪ್ರತಿಭಾವಂತ ಯುವ ಕವಿಗಳು ಯಾರು, ಯಾರು ಚೆನ್ನಾಗಿ ಬರೆಯುತ್ತಾರೆ ಎಂಬುದು ನನಗೆ ಗೊತ್ತಿರುತ್ತದೆ. ಪತ್ರಿಕೆಗಳ ಸಾಪ್ತಾಹಿಕ ಪುರವಣಿಯನ್ನಂತೂ ನಾನು ಯಾವತ್ತೂ ಮಿಸ್ ಮಾಡಿಕೊಳ್ಳುವುದಿಲ್ಲ. ಅಲ್ಲೊಂದು ಒಳ್ಳೆಯ ಕಥೆ ಬಂದಿರುತ್ತದೆ, ಕವಿತೆ ಪ್ರಕಟವಾಗಿರುತ್ತದೆ ಅದನ್ನು ಓದುತ್ತೇನೆ. 

ಕನ್ನಡಮ್ಮನ ಸೇವೆ ಮಾಡಲು ಸುಯೋಗ ಸಿಕ್ಕಿದ್ದು ಪೂರ್ವ ಜನ್ಮದ ಪುಣ್ಯ: ಡಿಸಿ ಶರತ್

ಪುಸ್ತಕ ವಿಮರ್ಶೆಯನ್ನೂ ಓದದೇ ಬಿಡುವುದಿಲ್ಲ. ಇದರಿಂದ ಏನಾಗುತ್ತದೆ ಎಂದರೆ ಕನ್ನಡ ಸಾಹಿತ್ಯ ಲೋಕದಲ್ಲಿ ಏನೇನಾಗುತ್ತದೆ, ಯಾವ ಪುಸ್ತಕಗಳು ಪ್ರಕಟವಾಗಿದೆ ಎಂಬುದೆಲ್ಲಾ ಗೊತ್ತಾಗುತ್ತಿರುತ್ತದೆ. ಇದರ ಜತೆಗೆ ನನ್ನ ಸುತ್ತಮುತ್ತ ಇರುವವರೆಲ್ಲಾ ಸಾಹಿತಿಗಳು, ಹೋರಾಟಗಾರರು, ಕಲಾವಿದರು. ಆತ್ಮೀಯ ಸ್ನೇಹಿತರೆಲ್ಲಾ ಈ ರಂಗದಲ್ಲಿ ಇರುವುದರಿಂದ ಆಯಾಯ ರಂಗದ ಸಮಸ್ಯೆ, ವಿಚಾರಗಳು ನನ್ನನ್ನು ತುಂಬಾ ಬೇಗ ತಲುಪುತ್ತದೆ. ಉದಾಹರಣೆಗೆ ಹೇಳುವುದಾದರೆ ನನಗೆ ತರುಣರು ಬಂದು ಕನ್ನಡ ತಂತ್ರಾಂಶ ಅಭಿವೃದ್ಧಿ ಬಗ್ಗೆ ಹೇಳುತ್ತಾರೆ. ಅದಕ್ಕಾಗಿ ಕನ್ನಡ ತಂತ್ರಾಂಶ ಅಭಿವೃದ್ಧಿ ಬಗ್ಗೆ ಒಂದು ಗೋಷ್ಠಿ ಇಟ್ಟಿದ್ದೇವೆ. ಕನ್ನಡ ಉಳಿಸಿ ಬೆಳೆಸುವ ಬಗೆ ಹೇಗೆ ಅಂತ ಷಟ್ಟರ್‌ರಿಂದ ಒಂದು ವಿಶೇಷ ಉಪನ್ಯಾಸ ಇದೆ. ಅದು ಚಿಂತಿಸಬಲ್ಲ ಎಲ್ಲರಿಗೆ. ಆದರೆ ಕಂಪ್ಯೂಟರ್‌ದಾಗೆ ಕನ್ನಡ ಹೇಗೆ ಉಳಿಸಬೇಕು ಅನ್ನುವುದು ಯೋಚಿಸುವ, ಚಿಂತಿಸುವ ಕೆಲಸ ಮಹತ್ವವಾಗಿ ಆಗಬೇಕಾಗಿದೆ. ಬೇರೆ ಭಾಷೆಗಳಿಗೆ ಹೋಲಿಸಿದಾಗ ವಿಶೇಷವಾಗಿ ತಮಿಳಿಗೆ ಹೋಲಿಸಿದಾಗ ಡಿಜಿಟಲ್ ಜಗತ್ತಲ್ಲಿ ನಮ್ಮ ಪ್ರಗತಿ ಕಡಿಮೆ ಇದೆ ಅಂತ ಹೇಳುತ್ತಾರೆ ತರುಣರು. ಹಾಗಾಗಿ ಈ ಸಮ್ಮೇಳನದಲ್ಲಿ ನೀವು ಸಲಹೆ ಕೊಡಿ ಅಂತ ಒಂದು ಗೋಷ್ಠಿ ಆಯೋಜಿಸಿದ್ದೇವೆ. ಆ ಗೋಷ್ಠಿಯಲ್ಲಿ ೨೮ ವರ್ಷದ ಯುವಕನೂ ಮಾತನಾಡುತ್ತಾರೆ. ಹಿರಿಯರೂ ಉಪನ್ಯಾಸ ನೀಡುತ್ತಾರೆ. ತಂತ್ರಾಂಶದಲ್ಲಿ ಕನ್ನಡ ದಾಪುಗಾಲು ಹಾಕದೇ ಇದ್ದರೆ ಕನ್ನಡ ಹಿಂದುಳಿಯುತ್ತದೆ.

ಕಲಬುರಗಿ ಸಮ್ಮೇಳನದಲ್ಲಿ ಪ್ರಮುಖವಾಗಿ ಯಾವ ವಿಚಾರ ಚರ್ಚೆ ಮಾಡಲಾಗುತ್ತದೆ?

ಈ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ಹೆಸರು ಕೊಟ್ಟಿದ್ದಾರೆ. ಈ ಹಿಂದೆ ಹೈದರಾಬಾದ್ ಕರ್ನಾಟಕ ಎಂದು ಕರೆಯಲಾಗುತ್ತಿತ್ತು. ಹೆಸರು ಬದಲಾದ ಮೇಲೆ ಸಾಹಿತ್ಯಕ್ಕೆ, ಸಂಸ್ಕೃತಿಗೆ ಹೆಚ್ಚಿನ ಕೊಡುಗೆ ಸಿಕ್ಕಿದೆಯಾ, ಈ ಭಾಗದ ಅಭಿವೃದ್ಧಿ ಚಟುವಟಿಕೆಗಳು ವೇಗದಿಂದ ನಡೆಯುತ್ತಿದೆಯಾ ಅಂತ ವಿಚಾರ ಮಾಡಲು ಕಲ್ಯಾಣ ಕರ್ನಾಟ ಅಂದು-ಇಂದು-ಮುಂದು ಅಂತ ಒಂದು ಗೋಷ್ಠಿ ಇಟ್ಟಿದ್ದೇವೆ. ಇದರ ಬಗ್ಗೆ ಪ್ರಬುದ್ಧ ಮಾತುಕತೆ ನಡೆಯುತ್ತದೆ. ಅಲ್ಲಿಯ ಸಮಸ್ಯೆ ಬಗ್ಗೆ ಒತ್ತುಕೊಟ್ಟಿದ್ದೇವೆ. ಪ್ರಾದೇಶಿಕ ಸಮಸ್ಯೆಗಳ ಬಗ್ಗೆ ಜಿಜ್ಞಾಸೆ ನಡೆಯುತ್ತದೆ. ಜಾನಪದ, ಸ್ತ್ರೀವಾದಿ ಸಾಹಿತ್ಯ, ದಲಿತ ಬಂಡಾಯ, ಕೃಷಿ- ನೀರಾವರಿ, ಕನ್ನಡ ಉಳಿಸಿ ಬೆಳೆಸುವ ಬಗೆ, ಚಿತ್ರಕಲೆ, ಸಂಗೀತ ಹೀಗೆ ರಂಗಭೂಮಿ ಎಲ್ಲಾ ವಿಚಾರದ ಬಗ್ಗೆಯೂ ಗೋಷ್ಠಿಗಳಿವೆ. ಮೂರು ಕವಿಗೋಷ್ಠಿ ಆಯೋಜಿಸಲಾಗಿದೆ. ಪ್ರಾದೇಶಿಕ ಸಮಸ್ಯೆಗಳ ಜತೆಗೆ ಜಾಗತಿಕ ಮಟ್ಟದಲ್ಲಿ ಕನ್ನಡವನ್ನು ಹೇಗೆ ಬೆಳೆಸಬೇಕು ಅನ್ನುವ ವಿಚಾರಗೋಷ್ಠಿಗಳೂ ಇವೆ.

ಸಾಹಿತ್ಯ ಸಮ್ಮೇಳನ ಅಂದ್ರೆ ಕನ್ನಡ ಮನಸ್ಸುಗಳನ್ನು ಒಗ್ಗೂಡಿಸುವ ಪ್ರಯತ್ನ. ಅದು ಸಾಧ್ಯವಾಗದೇ ಇದ್ದಾಗ ಈ ಹಿಂದೆಯೂ ವಿರೋಧ ಎದುರಾಗಿತ್ತು. ಆದರೆ ಈ ಸಲ ಸ್ವಲ್ಪ ಜಾಸ್ತಿ ವಿರೋಧ ಎದುರಾಗಿದೆ. ಕಾರಣವೇನು? ಏನು ಪರಿಹಾರ?

ಬಹಳ ವರ್ಷಗಳ ನಂತರ ಅಂದ್ರೆ 33 ವರ್ಷಗಳ ನಂತರ ಇಲ್ಲಿ ಸಮ್ಮೇಳನ ನಡೆಯುತ್ತಿದೆ. ಸ್ಥಳೀಯರಿಗೆ ನಾವು ಇದರಲ್ಲಿ ಭಾಗವಹಿಸಬೇಕು ಅಂತ ಹೆಚ್ಚಿನ ಉಮೇದು ಬಂದುಬಿಟ್ಟಿದೆ. ಆದ್ದರಿಂದ ಪ್ರತಿಯೊಬ್ಬ ಲೇಖಕರೂ ನಾನು ಇದರಲ್ಲಿ ಭಾಗವಹಿಸಬೇಕು ಅಂತ ಬಯಸುತ್ತಿದ್ದಾರೆ. ಅದು ತಪ್ಪೇನಲ್ಲ. ಆದರೆ ಕೇಳುವುದು ಸ್ವಲ್ಪ ಜಾಸ್ತಿಯಾಗಿದೆ. ಹೆಚ್ಚಿನ ಪ್ರಾತಿನಿಧ್ಯ ಕೊಟ್ಟಿದ್ದೇವೆ. ಕೇಳಿದ್ದು ತುಸು ಜಾಸ್ತಿಯಾಗಿರುವುದರಿಂದ ಇದೆಲ್ಲಾಕೇಳಿಬರುವುದು ಅನಿವಾರ್ಯ.

ಕನ್ನಡ ಸಾಹಿತ್ಯ ಸಮ್ಮೇಳನ ಲಿಟರರಿ ಫೆಸ್ಟ್‌ ಆಗಬಾರದು: ಎಚ್. ಎಸ್.ವಿ

ಲಿಟ್ ಫೆಸ್ಟ್‌ಗಳ ಕಾಲ ಇದು. ಅತ್ಯಂತ ಸಾಂಪ್ರದಾಯಿಕವಾಗಿ ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ ಯುವ ಜನಾಂಗವನ್ನು ಸೆಳೆಯುವುದಕ್ಕೆ ವಿಶೇಷ ಪ್ರಯತ್ನ ಏನಾದರೂ ನಡೆದಿದೆಯೇ?

ಯುವಜನರಿಗಾಗಿಯೇ ಗೋಷ್ಠಿಗಳಿವೆ. ಕನ್ನಡ ನಾನು ನುಡಿ ಮತ್ತು ಯುವ ಕರ್ನಾಟಕ ಅಂತ ಯುವಕರಿಗಾಗಿಯೇ ಇರುವ ಗೋಷ್ಠಿ. ಡಾ. ಮೋಹನ್ ಆಳ್ವ ಅಧ್ಯಕ್ಷತೆಯಲ್ಲಿ ಆ ಗೋಷ್ಠಿ ನಡೆಯಲಿದೆ. ಅವರು ಯುವಕರಿಗೆ ಆಕರ್ಷಣೆ. ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ಅಂತ ಒಂದು ಗೋಷ್ಠಿ ಇದೆ. ಕನ್ನಡ ಭಾಷೆ- ಹೊಸ ತಂತ್ರಜ್ಞಾನ ಅಂತ ಮತ್ತೊಂದು ಗೋಷ್ಠಿ ಇದೆ. ಲೇಖಕ-ಓದುಗ ಅಂತ ಇನ್ನೊಂದು ಆಸಕ್ತಿಕರ ಗೋಷ್ಠಿ ಇದೆ. ಅಂದ್ರೆ ಓದುಗರನ್ನು ಹೆಚ್ಚಿಗೆ ಹೇಗೆ ಸೆಳೆಯಬೇಕು ಅನ್ನುವ ಗೋಷ್ಠಿ. ಉತ್ತಮ ಭಾಷಣಕಾರರನ್ನು ಹಾಕಿದ್ದೇವೆ. ಇದಲ್ಲದೇ ಯುವ ಕವಿಗಳಿಗೆ ಸಾಕಷ್ಟು ಪ್ರೋತ್ಸಾಹ ಕೊಟ್ಟಿದ್ದೇವೆ.

ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಸ್ಥಳೀಯ ಸಾಹಿತಿಗಳ ಪುಸ್ತಕ ಪ್ರಕಟಿಸುವುದನ್ನು ಸ್ಥಗಿತಗೊಳಿಸಲಾಗಿದೆ. ಈ ಕುರಿತು ವ್ಯಾಪಕ ಚರ್ಚೆ ನಡೆಯಿತು. ಯಾಕೆ ಹೀಗಾಯಿತು?

ಸ್ಥಳೀಯ ಸಾಹಿತಿಗಳ ಪುಸ್ತಕ ಪ್ರಕಟಣೆ ನಿಲ್ಲಿಸಿದ್ದು ನಾವಲ್ಲ. ಮೊದಲಿನ ಅಧ್ಯಕ್ಷರೇ ನಿಲ್ಲಿಸಿದ್ದಾರೆ. ಏಳೆಂಟು ವರ್ಷಗಳಿಂದ ಸ್ಥಳೀಯ ಪುಸ್ತಕ ಪ್ರಕಟಣೆ ಆಗುತ್ತಿಲ್ಲ. ಅದು ಸಕಾರಣವಾಗಿದೆ. ಒಂದೇ ಜಿಲ್ಲೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಪುಸ್ತಕ ಪ್ರಕಟಣೆ ಮಾಡುವಷ್ಟು ಸಾಹಿತಿಗಳು ಸಿಗುವುದು ಕಷ್ಟ. 2006ರಲ್ಲಿ ಬೀದರ್ನಲ್ಲಿ ನಡೆದ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಪ್ರಕಟವಾದ ಪುಸ್ತಕಗಳು ಪರಿಷತ್ತಿನ ಗೋಡೌನ್‌ನಲ್ಲಿ ಕೊಳೆಯುತ್ತಿವೆ. ಬಹುತೇಕ ಪುಸ್ತಕಗಳು ಅಲ್ಲೇ ಇವೆ. ಕೋಟ್ಯಂತರ ರೂಪಾಯಿ ಖರ್ಚು ನಷ್ಟವಾಗಿದೆ. ಸಾರ್ವಜನಿಕ ದುಡ್ಡು ಪೋಲಾಗಬಾರದು ಅನ್ನುವ ತತ್ವ ನಮ್ಮದು. ಅವು ಯಾರೂ ಓದಂಗಿಲ್ಲ. ಸ್ಥಳೀಯ ವಿಷಯಗಳನ್ನಿಟ್ಟುಕೊಂಡು ಪುಸ್ತಕ ಬರೆಯುವುದರಿಂದ ಇದಕ್ಕೆ ಹೊರಗೆ ಬೇಡಿಕೆ ಕಡಿಮೆ. ಆಮೇಲೆ ನಮ್ಮಲ್ಲಿ ಪುಸ್ತಕ ಪ್ರಕಟಣಾ ಸಮಿತಿ ಇದೆ. ಸಾಹಿತಿಗಳಿಗೆ ಆ ಸಮಿತಿಗೆ ಕರಡು ಪ್ರತಿ ಸಲ್ಲಿಸಬೇಕು. ಇಲ್ಲಿಯವರೆಗೆ ಆ ಭಾಗದ ಯಾವ ಸಾಹಿತಿಗಳೂ ಪುಸ್ತಕ ಕೊಟ್ಟಿಲ್ಲ. ಸುಮ್ಮನೆ ಕೇಳುತ್ತಾರಷ್ಟೇ. ಕೊಟ್ಟರೆ ಸಮಿತಿ ಮುಂದೆ ಇಟ್ಟು ಯೋಗ್ಯವಿದ್ದರೆ ಮುಂದಿನ ದಿನಗಳಲ್ಲಿ ಪ್ರಕಟಣೆ ಮಾಡಬಹುದು. ಇನ್ನು ಯಾರಾದರೂ ಪುಸ್ತಕ ಪ್ರಕಟಿಸಿದ್ದರೆ ಬಿಡುಗಡೆ ಮಾಡಬಹುದು. ಅದಕ್ಕೆ ಅವಕಾಶ ಇದೆ.

ಕಲಬುರಗಿ 85ನೇ ಕನ್ನಡ ಸಾಹಿತ್ಯ ಸಮ್ಮೇಳನ: ಆಕಾಶವಾಣಿ ನೇರ ಪ್ರಸಾರ

ಪ್ರಭುತ್ವದ ಮೇಲಿನ ವಿರೋಧವೂ ಸಮ್ಮೇಳನ ವಿರೋಧಿಯಾಗಿ ಕಾಣಿಸುತ್ತಿದೆ ಅಂತನ್ನಿಸಿದೆಯಾ?

ನನಗೇನೂ ಹಾಗನ್ನಿಸಿಲ್ಲ. ಸಾಹಿತ್ಯ ಸಮ್ಮೇಳನ ಪೋಷಣೆ ಮಾಡುವುದು ಸರ್ಕಾರ. ಪರಿಷತ್ತು ಸ್ಥಾಪನೆ ಮಾಡಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್. ಪ್ರಭುತ್ವವೇ ಇದನ್ನು ಸ್ಥಾಪನೆ ಮಾಡಿದೆ. ಪೋಷಣೆ ಕೂಡ ಮಾಡಿದೆ. ಆದರೆ ಪರಿಷತ್ತು ಯಾವತ್ತೂ ತನ್ನ ಸ್ವಾತಂತ್ರ್ಯವನ್ನು ಕಾಪಾಡಿಕೊಂಡು ಬಂದಿದೆ. ಈಗಲೂ ಪರಿಷತ್ತಿನ ಸ್ವಾತಂತ್ರ್ಯಕ್ಕೆ ಯಾವುದೇ ಧಕ್ಕೆ ಆಗಿಲ್ಲ. ಯಾವ ರಾಜಕಾರಣಿಗಳೂ ನನ್ನ ಅವಧಿಯಲ್ಲಂತೂ ಯಾವ ವಿಷಯಕ್ಕೂ ಒತ್ತಡ ಹಾಕಿಲ್ಲ.

click me!