ಕೆಎಸ್ಸಾರ್ಟಿಸಿ ಕಂಡಕ್ಟರ್, ಡ್ರೈವರ್ ಭದ್ರತಾ ಕಾರ್ಯಕ್ಕೆ!\ ಗೃಹರಕ್ಷಕ ದಳದ ಭದ್ರತೆ ರದ್ದತಿಗೆ ನಿರ್ಧಾರ| ಆರ್ಥಿಕ ಸಂಕಷ್ಟದ ಕಾರಣ ಭದ್ರತಾ ಹೊರಗುತ್ತಿಗೆ ರದ್ದು
ಬೆಂಗಳೂರು(ಜೂ.23): ಕೊರೋನಾದಿಂದ ಆರ್ಥಿಕ ನಷ್ಟಕ್ಕೆ ಸಿಲುಕಿರುವ ಕೆಎಸ್‌ಆರ್‌ಟಿಸಿ ನಿಗಮ ಹಣ ಉಳಿಸಲು ನಿಗಮದ ಭದ್ರತಾ ಕೆಲಸಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡಿರುವ ಗೃಹರಕ್ಷಕ ದಳದ ಸಿಬ್ಬಂದಿಗಳ ಸೇವೆಯನ್ನು ರದ್ದುಗೊಳಿಸಲು ತೀರ್ಮಾನಿಸಿದೆ. ಈ ಹುದ್ದೆಗಳಿಗೆ ತಾತ್ಕಾಲಿಕವಾಗಿ ನಿಗಮದ ಚಾಲನಾ ಸಿಬ್ಬಂದಿಯನ್ನೇ (ಚಾಲಕ ಮತ್ತು ನಿರ್ವಾಹಕ) ಬಳಸಿಕೊಳ್ಳಲು ಮುಂದಾಗಿದೆ.
ಲಾಕ್‌ಡೌನ್ ಅವಧಿಯಲ್ಲಿ ಬಸ್ ಸಂಚಾರ ಇಲ್ಲದೆ ನಿಗಮದ ಆರ್ಥಿಕ ಸ್ಥಿತಿ ತೀವ್ರವಾಗಿ ಕುಸಿದಿದೆ. ಬಸ್ ಸೇವೆ ಆರಂಭವಾದರೂ ನಿರೀಕ್ಷಿತ ಪ್ರಮಾಣದಲ್ಲಿ ಪ್ರಯಾಣಿಕರು ಸಂಖ್ಯೆ ಏರಿಕೆಯಾಗುತ್ತಿಲ್ಲ. ಇಂತಹ ಸಂದಿಗ್ಧ ಸಂದರ್ಭದಲ್ಲಿ ನಿಗಮವು ಇದೀಗ ಆರ್ಥಿಕ ಮಿತವ್ಯಯಕ್ಕೆ ಮುಂದಾಗಿದ್ದು, ಮೊದಲಿಗೆ ಹೊರಗುತ್ತಿಗೆ ಅಡಿ ನೇಮಿಸಿಕೊಂಡಿದ್ದ ಗೃಹರಕ್ಷಕ ದಳದ ಸಿಬ್ಬಂದಿಯನ್ನು ಸೇವೆಯಿಂದ ಕೈಬಿಡಲು ತೀರ್ಮಾನಿಸಿದೆ. ಇದಕ್ಕೆ ಪೂರಕವಾಗಿ ನಿಗಮದ 13 ವಿಭಾಗಗಳ ವ್ಯಾಪ್ತಿಯಲ್ಲಿ ಖಾಲಿಯಿರುವ 135 ಭದ್ರತಾ ಸಿಬ್ಬಂದಿ ಹುದ್ದೆಗಳಿಗೆ ಚಾಲನಾ ಸಿಬ್ಬಂದಿ ನೇಮಿಸಲು ನಿರ್ಧರಿಸಿದೆ.
ಜೂ.27ರಂದು ಹಾಜರಾಗಬೇಕು:
ಚಾಲನಾ ಸಿಬ್ಬಂದಿಗಳನ್ನು ತಾತ್ಕಾಲಿಕವಾಗಿ ಭದ್ರತಾ ಕಾರ್ಯಗಳಿಗೆ ನೇಮಿಸುವ ಸಂಬಂಧ ವಿಭಾಗ ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ. ವಿಭಾಗ ನಿಯಂತ್ರಣಾಧಿಕಾರಿಗಳು ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಲು ಇಚ್ಛಿಸುವ ಚಾಲನಾ ಸಿಬ್ಬಂದಿ ಪಟ್ಟಿಸಿದ್ಧಪಡಿಸಿ ಜೂ.27ರೊಳಗೆ ಕೇಂದ್ರ ಸಮಿತಿಗೆ ಶಿಫಾರಸು ಮಾಡುವಂತೆ ಸೂಚಿಸಲಾಗಿದೆ.
ಪೇದೆ ಹುದ್ದೆಗೆ ಅಥವಾ ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಲು ಕೆಲವು ಮಾನದಂಡ ರೂಪಿಸಿದೆ. ಸಿಬ್ಬಂದಿ ವಯಸು 40 ವರ್ಷ ಮೀರಿರಬಾರದು. 163 ಸೆಂ.ಮೀ. ಎತ್ತರ, 55 ಕೆ.ಜಿ.ಗಿಂತ ಹೆಚ್ಚಿನ ತೂಕ ಇರಬೇಕು. ಯಾವುದೇ ಗಂಭೀರ ಕಾಯಿಲೆಗೆ ತುತ್ತಾಗಿರಬಾರದು. ಅಪರಾಧ ಪ್ರಕರಣದಲ್ಲೂ ಭಾಗಿಯಾಗಿರಬಾರದು ಎಂದು ತಿಳಿಸಲಾಗಿದೆ.