
ಬೆಂಗಳೂರು: ಸರ್ಕಾರಗಳು ಹಾಗೂ ನಾಗರಿಕರಿಗೆ ಜಾಗತಿಕ ಮಟ್ಟದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆ ಆಧಾರಿತ ಸೇವೆಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿರುವ ‘ಬಿಎಲ್‌ಎಸ್ ಇಂಟರ್‌ನ್ಯಾಷನಲ್’ ಸಂಸ್ಥೆಯು, ಭಾರತದ ಅತ್ಯುತ್ತಮ ಕೆಲಸದ ಸ್ಥಳ ಎಂಬ ಹೆಗ್ಗಳಿಕೆಯ 'ಗ್ರೇಟ್ ಪ್ಲೇಸ್ ಟು ವರ್ಕ್' ಪ್ರತಿಷ್ಠಿತ ಪ್ರಮಾಣಪತ್ರವನ್ನು ತನ್ನದಾಗಿಸಿಕೊಂಡಿದೆ.
ಉದ್ಯೋಗಿಗಳಿಗೆ ಸೌಹಾರ್ದಯುತ ಕೆಲಸದ ವಾತಾವರಣ, ಸಮಾನ ಅವಕಾಶಗಳು ಹಾಗೂ ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವಲ್ಲಿ ಕಂಪನಿಯು ತೋರಿರುವ ಪೂರ್ಣ ಬದ್ಧತೆಗೆ ಈ ಜಾಗತಿಕ ಗೌರವವು ಸಾಕ್ಷಿಯಾಗಿದೆ.
'ಗ್ರೇಟ್ ಪ್ಲೇಸ್ ಟು ವರ್ಕ್' ಸಂಸ್ಥೆಯು ಉದ್ಯೋಗಿಗಳ ಪ್ರತ್ಯಕ್ಷ ಅನುಭವಗಳ ಆಧಾರದ ಮೇಲೆ ಸ್ವತಂತ್ರವಾಗಿ ನಡೆಸಿದ 'ಟ್ರಸ್ಟ್ ಇಂಡೆಕ್ಸ್' (Trust Index) ಸಮೀಕ್ಷೆಯಲ್ಲಿ ಬಿಎಲ್‌ಎಸ್ ಇಂಟರ್‌ನ್ಯಾಷನಲ್‌ನ ಶೇ. 93 ರಷ್ಟು ಉದ್ಯೋಗಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು.
ಈ ಪೈಕಿ ಶೇ. 95 ರಷ್ಟು ಉದ್ಯೋಗಿಗಳು, "ಬಿಎಲ್‌ಎಸ್ ಸಂಸ್ಥೆಯು ಅತ್ಯುತ್ತಮ ಕೆಲಸದ ವಾತಾವರಣವನ್ನು ಹೊಂದಿದೆ" ಎಂದು ಹೆಮ್ಮೆಯಿಂದ ದೃಢೀಕರಿಸಿದ್ದಾರೆ. ಕಚೇರಿಯ ಆಂತರಿಕ ಸಂಸ್ಕೃತಿ ಮತ್ತು ಆಡಳಿತ ಮಂಡಳಿಯ ಮೇಲಿರುವ ದೃಢವಾದ ವಿಶ್ವಾಸವನ್ನು ಈ ಅಂಕಿ-ಅಂಶಗಳು ಸ್ಪಷ್ಟಪಡಿಸುತ್ತವೆ. ಅಷ್ಟೇ ಅಲ್ಲದೆ, ಶೇ. 96 ರಷ್ಟು ಸಿಬ್ಬಂದಿ ತಾವು ಕಂಪನಿಗೆ ಸೇರಿದ ಮೊದಲ ದಿನವೇ ಅತ್ಯಂತ ಆತ್ಮೀಯ ಹಾಗೂ ಗೌರವಯುತ ಸ್ವಾಗತದ ಅನುಭವ ಪಡೆದಿದ್ದಾಗಿ ಹಂಚಿಕೊಂಡಿದ್ದಾರೆ.
ಈ ಐತಿಹಾಸಿಕ ಸಾಧನೆಯ ಕುರಿತು ಸಂತಸ ವ್ಯಕ್ತಪಡಿಸಿರುವ ಬಿಎಲ್‌ಎಸ್ ಇಂಟರ್‌ನ್ಯಾಷನಲ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಶಿಖರ್ ಅಗರ್ವಾಲ್:
"'ಗ್ರೇಟ್ ಪ್ಲೇಸ್ ಟು ವರ್ಕ್' ಮಾನ್ಯತೆ ಲಭಿಸಿರುವುದು ನಮ್ಮ ಸಂಸ್ಥೆಗೆ ಅತ್ಯಂತ ಹೆಮ್ಮೆಯ ವಿಚಾರ. ಪ್ರತೊಯೊಬ್ಬ ಉದ್ಯೋಗಿಗೂ ಸೂಕ್ತ ಗೌರವ, ಸಮಾನತೆ ಸಿಗುವಂತೆ ನೋಡಿಕೊಳ್ಳುವುದು ಮತ್ತು ತಮ್ಮ ಪೂರ್ಣ ಸಾಮರ್ಥ್ಯದೊಂದಿಗೆ ಕೆಲಸ ಮಾಡಲು ಪ್ರೇರೇಪಿಸುವ ಉತ್ತಮ ವಾತಾವರಣವನ್ನು ನಿರ್ಮಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಸಂಸ್ಥೆಯು ಹೆಜ್ಜೆಹೆಜ್ಜೆಯಾಗಿ ಜಾಗತಿಕವಾಗಿ ಬೆಳೆಯುತ್ತಿರುವಂತೆಯೇ, ನಮ್ಮ ಪ್ರತಿಯೊಬ್ಬ ಉದ್ಯೋಗಿಯ ವ್ಯಕ್ತಿಗತ ಹಾಗೂ ವೃತ್ತಿಪರ ಏಳಿಗೆಗೂ ನಾವು ಸದಾ ನಿಲ್ಲುತ್ತೇವೆ. ಈ ಮೈಲಿಗಲ್ಲು ನಮ್ಮ ಇಡೀ ತಂಡದ ನಿರಂತರ ಶ್ರಮ ಮತ್ತು ಒಗ್ಗಟ್ಟಿಗೆ ಸಿಕ್ಕ ಫಲವಾಗಿದೆ," ಎಂದು ಹರ್ಷ ವ್ಯಕ್ತಪಡಿಸಿದರು.
ತಂತ್ರಜ್ಞಾನ ಕ್ಷೇತ್ರವು ವೇಗವಾಗಿ ಬದಲಾಗುತ್ತಿರುವ ಪ್ರಸ್ತುತ ದಿನಗಳಲ್ಲಿ, ಬಿಎಲ್‌ಎಸ್ ಸಂಸ್ಥೆಯು ತನ್ನ ಉದ್ಯೋಗಿಗಳನ್ನು ಭವಿಷ್ಯದ ಸವಾಲುಗಳಿಗೆ ಸಜ್ಜುಗೊಳಿಸಲು ಕ್ರಾಂತಿಕಾರಿ ಹೆಜ್ಜೆಗಳನ್ನಿಟ್ಟಿದೆ. ಜಾಗತಿಕ ವ್ಯಾಪಾರ ರಂಗದ ಅಗತ್ಯಗಳಿಗೆ ತಕ್ಕಂತೆ ಸಿಬ್ಬಂದಿಯನ್ನು ಸಿದ್ಧಗೊಳಿಸಲು, ಕೃತಕ ಬುದ್ಧಿಮತ್ತೆ (AI) ಆಧಾರಿತ ವಿಶೇಷ ತರಬೇತಿಗಳು, ನಾಯಕತ್ವ ಗುಣಗಳ ಬೆಳೆಸುವ ಕಾರ್ಯಕ್ರಮಗಳು ಹಾಗೂ ನೂತನ ತಾಂತ್ರಿಕ ಕೌಶಲ್ಯಗಳನ್ನು ಕಲಿಯಲು ಕಂಪನಿಯು ನಿರಂತರ ಪ್ರೋತ್ಸಾಹ ನೀಡುತ್ತಿದೆ.
2005 ರಲ್ಲಿ ಸ್ಥಾಪಿತವಾದ ಬಿಎಲ್‌ಎಸ್ ಇಂಟರ್‌ನ್ಯಾಷನಲ್ ಸಂಸ್ಥೆಯು, ಪ್ರಪಂಚದಾದ್ಯಂತ ಸುಮಾರು 46 ದೇಶಗಳ ಸರ್ಕಾರಗಳೊಂದಿಗೆ ಸಹಭಾಗಿತ್ವ ಹೊಂದಿದ್ದು, ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ವೀಸಾ, ಪಾಸ್‌ಪೋರ್ಟ್, ರಾಯಭಾರ ಕಚೇರಿಗಳ ಸೇವೆಗಳು (Consular Services), ಬಯೋಮೆಟ್ರಿಕ್ ಮತ್ತು ಇ-ಆಡಳಿತ (e-Governance) ಸೇವೆಗಳನ್ನು ಒದಗಿಸುವಲ್ಲಿ ಸಂಸ್ಥೆಯು ಜಾಗತಿಕ ಮಟ್ಟದಲ್ಲಿ ಅಗ್ರಸ್ಥಾನದಲ್ಲಿದೆ.
ವಿಶ್ವದ 100 ಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಜಾಲವನ್ನು ವಿಸ್ತರಿಸಿಕೊಂಡಿರುವ ಈ ಬೃಹತ್ ಸಂಸ್ಥೆಯಲ್ಲಿ ಪ್ರಸ್ತುತ 60,000 ಕ್ಕೂ ಹೆಚ್ಚು ಉದ್ಯೋಗಿಗಳು ಹಾಗೂ ಸಹಯೋಗಿಗಳು ಕೆಲಸ ಮಾಡುತ್ತಿದ್ದಾರೆ. ವಿಶೇಷವೆಂದರೆ, ಈ ಕ್ಷೇತ್ರದಲ್ಲಿ ಭಾರತೀಯ ಷೇರುಪೇಟೆಯಲ್ಲಿ ನೋಂದಾಯಿತಗೊಂಡಿರುವ (Listed) ಏಕೈಕ ಕಂಪನಿ ಬಿಎಲ್‌ಎಸ್ ಇಂಟರ್‌ನ್ಯಾಷನಲ್ ಆಗಿದೆ.