ಖಾಸಗಿ ವಲಯದ ಉದ್ಯೋಗದಲ್ಲಿ ಸ್ಥಳೀಯರಿಗೆ ಶೇ.75ರಷ್ಟು ಮೀಸಲಿಗೆ ಒಲವು| ಕಾಯ್ದೆ ಜಾರಿಗೆ ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಗಂಭೀರ ಚಿಂತನೆ
ಜೈಪುರ[ಸೆ.17]: ರಾಜ್ಯದ ಖಾಸಗಿ ವಲಯ ಉದ್ಯೋಗಳಲ್ಲಿ ಶೇ.75ರಷ್ಟನ್ನು ಸ್ಥಳೀಯರಿಗೇ ಮೀಸಲಿಡುವ ಕಾಯ್ದೆ ಜಾರಿಗೆ ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಶೀಘ್ರವೇ ಅದು ಈ ಕುರಿತು ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.
ಈ ಕುರಿತು ಹೇಳಿಕೆ ನೀಡಿರುವ ರಾಜಸ್ಥಾನ ಕೌಶಲ್ಯ ಮತ್ತು ಜೀವನೋಪಾಯ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಡಾ. ಸಮಿತ್ ಶರ್ಮಾ, ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಶೇ.75ರಷ್ಟುಮೀಸಲು ನೀಡುವ ಪ್ರಸ್ತಾಪ ಸದ್ಯಕ್ಕೆ ಪ್ರಾಥಮಿಕ ಹಂತದಲ್ಲಿದೆ. ಶೀಘ್ರವೇ ರಾಜ್ಯದ ವಿವಿಧ ಇಲಾಖಾ ಮುಖ್ಯಸ್ಥರು ಸಭೆ ಸೇರಿ ಪ್ರಸ್ತಾಪದ ಬಗ್ಗೆ ತಮ್ಮ ಅಭಿಪ್ರಾಯ ಸಲ್ಲಿಕೆ ಮಾಡಲಿದ್ದಾರೆ. ಬಳಿಕ ಈ ವಿಷಯದಲ್ಲಿ ಮುಂದುವರೆಯಲಾಗುವುದು ಎಂದು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಆಂಧ್ರಪ್ರದೇಶ ಸರ್ಕಾರ, ಸ್ಥಳೀಯರಿಗೆ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಶೆ.75ರಷ್ಟುಉದ್ಯೋಗ ನೀಡುವುದನ್ನು ಕಡ್ಡಾಯ ಮಾಡಿ ಕಾಯ್ದೆ ರೂಪಿಸಿತ್ತು. ಮಧ್ಯಪ್ರದೇಶ ಕೂಡಾ ಇದೇ ರೀತಿಯ ಕಾನೂನು ರೂಪಿಸುವ ಘೋಷಣೆ ಮಾಡಿತ್ತು.