KKR ವಿರುದ್ಧ RCBಗೆ ಭರ್ಜರಿ ಗೆಲುವು, 3ನೇ ಸ್ಥಾನಕ್ಕೆ ಲಗ್ಗೆ ಇಟ್ಟ ಕೊಹ್ಲಿ ಬಾಯ್ಸ್!

By Suvarna NewsFirst Published Oct 12, 2020, 11:14 PM IST
Highlights

ಕೆಕೆಆರ್ ತಂಡಕ್ಕೆ ಸೋಲಿನ ಶಾಕ್ ನೀಡಿದ ಆರ್‌ಸಿಬಿ ಅಂಕಪಟ್ಟಿಯಲ್ಲಿ ಆಘಾತ ನೀಡಿದೆ. ಕೆಕೆಆರ್ ತಂಡವನ್ನು 4ನೇ ಸ್ಥಾನಕ್ಕೆ ತಳ್ಳಿದ  ಆರ್‌ಸಿಬಿ ಇದೀಗ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಲಗ್ಗೆ ಹಾಕಿದೆ. 

ಶಾರ್ಜಾ(ಅ.12): ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲಿಂಗ್‌ನಲ್ಲೂ ಮಿಂಚಿನ ದಾಳಿ ಸಂಘಟಿಸಿತು.  ಕೋಲ್ಕತಾ ನೈಟ್ ರೈಡರ್ಸ್  ತಂಡವನ್ನು 112 ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಆರ್‌ಸಿಬಿ 82 ರನ್ ಗೆಲುವು ದಾಖಲಿಸಿತು. 

195 ರನ್ ಟಾರ್ಗೆಟ್ ಪೆಡದ ಕೋಲ್ಕತಾ ನೈಟ್ ರೈಡರ್ಸ್‌ಗೆ ತಂಡದಲ್ಲಿ ಮಾಡಿದ ಬದಲಾವಣೆ ಕೈಗೂಡಲಿಲ್ಲ. ಆರಂಭಿಕ ಸುನಿಲ್ ನರೈನ್ ಬದಲು ಟಾಮ್ ಬ್ಯಾಂಟನ್ ತಂಡ ಸೇರಿಕೊಂಡರೂ ಉತ್ತಮ ಆರಂಭ ಸಿಗಲಿಲ್ಲ. ಟಾಮ್ ಬ್ಯಾಂಟನ್ 8 ರನ್ ಸಿಡಿಸಿ ನಿರ್ಗಮಿಸಿದರು. ಆದರೆ ಶುಭ್‌ಮನ್ ಗಿಲ್ ಹೋರಾಟ ಮುಂದುವರಿಸಿದರು.

ನಿತೀಶ್ ರಾಣಾ ಕೇವಲ 9 ರನ್ ಸಿಡಿಸಿ ಔಟಾದರೆ, ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಅಬ್ಬರಿಸಿದ ದಿನೇಶ್ ಕಾರ್ತಿಕ್ ಕೇವಲ 1 ರನ್ ಸಿಡಿಸಿ ಔಟಾದರು. 62 ರನ್‌ಗಳಿಸುವಷ್ಟರಲ್ಲೇ ಕೆಕೆಆರ್ ಪ್ರಮುಖ 4 ವಿಕೆಟ್ ಕಳೆದುಕೊಂಡಿತು.  ಇತ್ತ ಇಯಾನ್ ಮಾರ್ಗನ್ 8 ರನ್ ಸಿಡಿಸಿ ನಿರ್ಗಮಿಸಿದರು. 

ಕೆಕೆಆರ್ ತಂಡದ ಆತಂಕ ಹೆಚ್ಚಾಯಿತು. ಆ್ಯಂಡ್ರೆ ರಸೆಲ್ ಹಾಗೂ ರಾಹುಲ್ ತ್ರಿಪಾಠಿ ಮೇಲೆ ತಂಡವನ್ನು ದಡ ಸೇರಿಸುವ ಜವಾಬ್ದಾರಿ ಬಿದ್ದಿತು. ರೆಸೆಲ್ ಸ್ಫೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸಲು ಆರಂಭಿಸಿದರು. ಆದರೆ ರಸೆಲ್ ಆಟ 16 ರನ್‌ಗೆ ಅಂತ್ಯವಾಯಿತು. ರಾಹುಲ್ ತ್ರಿಪಾಠಿ 16 ರನ್ ಸಿಡಿಸಿ ಔಟಾದರು.

ಕಮಲೇಶ್ ನಾಗರಕೋಟಿ, ವರುಣ್ ಚಕ್ರವರ್ತಿ ಹಾಗೂ ಪ್ರಸಿದ್ಧ ಕೃಷ್ಣಗೆ ತಂಡವನ್ನು ಗೆಲುವಿನ ದಡ ಸೇರಿಸುವುದು ಅಸಾಧ್ಯವಾಯಿತು. ಕೆಕೆಆರ್ 9 ವಿಕೆಟ್ ನಷ್ಟಕ್ಕೆ 112ರನ್ ಸಿಡಿಸಿ ಸೋಲೊಪ್ಪಿಕೊಂಡಿತು. ಆರ್‌ಸಿಬಿ 82 ರನ್ ಗೆಲುವು ದಾಖಲಿಸಿತು. ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು.

click me!