ಶಾರ್ಜಾ(ಅ.03): ಸ್ಫೋಟಕ ಬ್ಯಾಟಿಂಗ್ ಮೂಲಕ 228 ರನ್ ಸಿಡಿಸಿದ ಡೆಲ್ಲಿ ಕ್ಯಾಪಿಟಲ್ಸ್, ಬೌಲಿಂಗ್‌ನಲ್ಲೂ ಮಿಂಚಿನ ದಾಳಿ ಸಂಘಟಿಸಿತು. ಕೆಕೆಆರ್ ತಂಡವನ್ನು 210 ರನ್‌ಗಳಿಗೆ ಕಟ್ಟಿ ಹಾಕೋ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ 18 ರನ್ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು. ಮೊದಲ ಸ್ಥಾನದಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2ನೇ ಸ್ಥಾನ ಅಲಂಕರಿಸಿದೆ.
229 ರನ್ ಬೃಹತ್ ಟಾರ್ಗೆಟ್ ಅದೆಷ್ಟೇ ಘಟಾನುಘಟಿ ಬ್ಯಾಟ್ಸ್‌ಮನ್‌ಗಳಿದ್ದರೂ ಕಷ್ಟ. ಆದರೆ ಕೆಕೆಆರ್ ತಂಡ ಟ್ವಿ20 ಸ್ಪೆಷಲಿಸ್ಟ್ ಕ್ರಿಕೆಟಿಗರನ್ನು ಹೊಂದಿರುವ ತಂಡ ಹೀಗಾಗಿ ಅಸಾಧ್ಯವೇನಲ್ಲ. ಆದರೆ ಡೆಲ್ಲಿ ಅದ್ಬುತ ಬೌಲಿಂಗ್ ದಾಳಿ ಮೂಲಕ ಕೆಕೆಆರ್ ತಂಡಕ್ಕೆ ಅಬ್ಬರಿಸಲು ಅವಕಾಶ ನೀಡಲಿಲ್ಲ. ಸುನಿಲ್ ನರೈನ್ 3 ರನ್ ಸಿಡಿಸಿ ಔಟಾದರೆ, ಶುಭ್‌ಮನ್ ಗಿಲ್ 28 ರನ್ ಕಾಣಿಕೆ ನೀಡಿದರು.
ನಿತೀಶ್ ರಾಣ ಉತ್ತಮ ಹೋರಾಟ ನೀಡಿದರು. ರಾಣಾಗೆ ಆ್ಯಂಡ್ರೆ ರಸೆಲ್ ಕೊಂಚ ಸಾಥ್ ನೀಡಿದರು. ನಿತೀಶ್ ರಾಣಾ ಸ್ಫೋಟಕ ಬ್ಯಾಟಿಂಗ್ ಮೂಲಕ ಅರ್ಧಶತಕ ಸಿಡಿಸಿದರು. ಇತ್ತ ರಸೆಲ್13 ರನ್ ಸಿಡಿಸಿ ಔಟಾದರು. 35 ಎಸೆತದಲ್ಲಿ 58 ರನ್ ಸಿಡಿಸಿದ ನಿತೀಶ್ ರಾಣ ವಿಕೆಟ್ ಪತನಗೊಳ್ಳುತ್ತಿದ್ದಂತೆ ಕೆಕೆಆರ್ ಆತಂಕ ಮತ್ತಷ್ಟು ಹೆಚ್ಚಾಯಿತು.
ನಾಯಕ ದಿನೇಶ್ ಕಾರ್ತಿಕ್ ಕೇವಲ 6 ರನ್ ಸಿಡಿಸಿ ಔಟಾದರು. ಪ್ಯಾಟ್ ಕಮಿನ್ಸ್ 5 ರನ್ ಸಿಡಿಸಿ ಔಟಾದರು. ಆದರೆ ಇಯಾನ್ ಮಾರ್ಗನ್ ಹಾಗೂ ರಾಹುಲ್ ತ್ರಿಪಾಠಿ ಬಿರುಸಿನ ಹೊಡೆತ ಪಂದ್ಯ ತಿರುವು ಪಡೆಯಲು ಆರಂಭಿಸಿತು. ಇವರಿಬ್ಬರ ಜೊತೆಯಾಟದಿಂದ ಕೆಕೆಆರ್ ಗೆಲುವಿಗೆ ಅಂತಿಮ 12 ಎಸೆತದಲ್ಲಿ 31 ರನ್ ಅವಶ್ಯಕತೆ ಇತ್ತು.
ಕೇವಲ 18 ಎಸೆತದಲ್ಲಿ 1 ಬೌಂಡರಿ ಹಾಗೂ 5 ಸಿಕ್ಸರ್ ಮೂಲಕ 44 ರನ್ ಸಿಡಿಸಿದ ಇಯಾನ್ ಮಾರ್ಗನ್ ವಿಕೆಟ್ ಪತನಗೊಳ್ಳುತ್ತಿದ್ದಂತೆ ಕೆಕೆಆರ್ ತಂಡದಲ್ಲಿ ಚಿಗುರೊಡೆದಿದ್ದ ಗೆಲುವಿನ ಆಸೆಗೆ ಮತ್ತೆ ಬ್ರೇಕ್ ಬಿದ್ದಿತು. ಕೆಕೆಆರ್ ತಂಡದ ಚಿತ್ತ ಇದೀಗ ರಾಹುಲ್ ತ್ರಿಪಾಠಿಯತ್ತ ನೆಟ್ಟಿತು. 16 ಎಸೆತದಲ್ಲಿ 36 ರನ್ ಸಿಡಿಸಿ ರಾಹುಲ್ ತ್ರಿಪಾಠಿ ಔಟಾದರು.
ಕಮಲೇಶ್ ನಾಗರಕೋಟಿ ಹಾಗೂ ಶಿವಂ ಮಾವಿಯಿಂದ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಿಲ್ಲ. ಈ ಮೂಲಕ ಕೆಕೆಆರ್ ತಂಡ 8 ವಿಕೆಟ್ ನಷ್ಟಕ್ಕೆ 210 ರನ್ ಸಿಡಿಸಿತು. ಡೆಲ್ಲಿ ಕ್ಯಾಪಿಟಲ್ಸ್ 18 ರನ್ ಗೆಲುವು ಸಾಧಿಸಿತು. ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿತು.