Parliament Winter Session: 1 ದಿನ ಮೊದಲೇ ಚಳಿಗಾಲದ ಅಧಿವೇಶನ ಅಂತ್ಯ!

By Suvarna NewsFirst Published Dec 23, 2021, 2:00 AM IST
Highlights

* ರಾಜ್ಯಸಭೆ, ಲೋಕಸಭೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

* ಲೋಕಸಭೆ ಶೇ.82, ರಾಜ್ಯಸಭೆ ಶೇ.48ರಷ್ಟುಉತ್ಪಾದಕತೆ

* ಕೃಷಿ ಕಾಯ್ದೆಗಳ ಹಿಂಪಡೆತ ಸೇರಿ 10 ವಿಧೇಯಕಗಳು ಅಂಗೀಕಾರ

ನವದೆಹಲಿ(ಡಿ.23): ಬೆಲೆ ಏರಿಕೆ, ವಿಪಕ್ಷಗಳ ಗದ್ದಲ-ಕೋಲಾಹಲಕ್ಕೆ ಪದೇ-ಪದೇ ಮುಂದೂಡಿಕೆಯಾಗುತ್ತಿದ್ದ ಸಂಸತ್ತಿನ ಉಭಯ ಸದನಗಳ ಚಳಿಗಾಲದ ಅಧಿವೇಶನವು ಬುಧವಾರ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದೆ. ನ.29ರಿಂದ ಆರಂಭವಾಗಿದ್ದ ಸಂಸತ್ತಿನ ಅಧಿವೇಶನ ಡಿ.23ಕ್ಕೆ ಅಂತ್ಯವಾಗಬೇಕಿತ್ತು. ಆದರೆ ಒಂದು ದಿನ ಮೊದಲೇ ಮುಕ್ತಾಯಗೊಂಡಿದೆ.

ಲೋಕಸಭೆ ಕಲಾಪ ಶೇ.82ರಷ್ಟುಉತ್ಪಾದಕತೆ ಸಾಧಿಸಿದ್ದು, ತೃಪ್ತಿದಾಯಕ ಪ್ರದರ್ಶನ ನೀಡಿದೆ. ಆದರೆ ವಿಪಕ್ಷಗಳ 12 ಸಂಸದರ ಅಮಾನತು ವಿರೋಧಿಸಿ ಪ್ರತಿಭಟನೆಯಲ್ಲೇ ಮುಳುಗಿದ ರಾಜ್ಯಸಭೆ ಕಲಾಪವು ಕೇವಲ ಶೇ.48ರಷ್ಟುಉತ್ಪಾದಕೆ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಅಧಿವೇಶನದಲ್ಲಿ ಒಟ್ಟಾರೆ 12 ಹೊಸ ಮಸೂದೆಗಳನ್ನು ಮಂಡಿಸಲಾಗಿದೆ. ದೇಶಾದ್ಯಂತ ರೈತರ ಪ್ರತಿಭಟನೆಗಳಿಗೆ ಕಾರಣವಾಗಿದ್ದ ವಿವಾದಿತ 3 ಕೃಷಿ ಕಾಯ್ದೆಗಳ ಹಿಂಪಡೆತ, ಚುನಾವಣಾ ಕಾನೂನು ತಿದ್ದುಪಡಿ ಮಸೂದೆ ಸೇರಿದಂತೆ ಒಟ್ಟಾರೆ 10 ವಿಧೇಯಕಗಳನ್ನು ಅಂಗೀಕರಿಸಲಾಗಿದೆ.

ಸಭಾಪತಿ ಬೇಸರ:

ಘನತೆಗೆ ತಕ್ಕಂತೆ ರಾಜ್ಯಸಭೆ ಕಲಾಪ ಸರಿಯಾಗಿ ನಡೆಯಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಸಭಾಪತಿ ವೆಂಕಯ್ಯನಾಯ್ಡು ಅವರು, ‘ಈ ಸದನವನ್ನು ಉತ್ತಮವಾಗಿ ನಡೆಸಬಹುದಿತ್ತು ಎಂಬುದನ್ನು ಸದನದ ಸದಸ್ಯರು ಅರ್ಥೈಸಿಕೊಳ್ಳಬೇಕು. ಜತೆಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಈ ಬಗ್ಗೆ ಹೆಚ್ಚಿನ ವಿವರಣಾತ್ಮಕವಾಗಿ ಮಾತನಾಡಲು ನನಗೆ ಇಷ್ಟವಿಲ್ಲ’ ಎಂದರು.

ಲೋಕಸಭೆ ಕಲಾಪದ ಕೊನೇ ದಿನವಾದ ಬುಧವಾರ ಸದನದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಇನ್ನಿತರ ನಾಯಕರು ಹಾಜರಿದ್ದರು.

Close

click me!