ಕಳೆದ ಹದಿನೈದು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಜಲಪಾತ ಸೇರಿದಂತೆ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಜಲಪಾತದ ನೀರು ಹೆಚ್ಚಾಗಿ ಪ್ರವಾಸಿಗರು ಜೀವ ಉಳಿಸಿಕೊಳ್ಳಲು ಓಡಿ ಬರೋ ವಿಡಿಯೋ ವೈರಲ್ ಆಗುತ್ತಿದೆ.
ಚೆನ್ನೈ: ಶುಕ್ರವಾರ ಓಲ್ಡ್ ಕುರ್ಟಾಲಂ ಜಲಪಾತ 17 ವರ್ಷದ ವಿದ್ಯಾರ್ಥಿ ಜಲಪಾತದಲ್ಲಿ ಕೊಚ್ಚಿ ಹೋಗಿದ್ದಾನೆ. ತಮಿಳುನಾಡು ಭಾಗದಲ್ಲಿ ಕಳೆದೊಂದು ವಾರದಿಂದ ಉತ್ತಮ ಮಳೆಯಾಗುತ್ತಿದೆ. ಈ ಹಿನ್ನೆಲೆ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಜಲಪಾತಗಳಲ್ಲಿಯೂ ನೀರು ಇದ್ದಕ್ಕಿದ್ದಂತೆ ಹೆಚ್ಚಾಗುತ್ತಿದೆ. ಆದ್ದರಿಂದ ನದಿ ತೀರದ ಪ್ರದೇಶದ ಜನರಿಗೆ ಎಚ್ಚರಿಕೆ ಸಂದೇಶ ನೀಡಲಾಗುತ್ತಿದೆ. ಮೇ 17ರಂದು ಓಲ್ಡ್ ಕುರ್ಟಾಲಂ ಜಲಪಾತದಲ್ಲಿ ಹುಡುಗನೋರ್ವ ನೀರುಪಾಲಾಗಿದ್ದಾನೆ.
ಅಶ್ವಿನ್ ನೀರಿನಲ್ಲಿ ಕೊಚ್ಚಿ ಹೋದ ವಿದ್ಯಾರ್ಥಿ. ಪಳಯಂಕೊಟ್ಟೈ ಎನ್‌ಜಿಒ ಕಾಲೋನಿಯ ನಿವಾಸಿಯಾಗಿದ್ದ ಅಶ್ವಿನ್ ಪೋಷಕರೊಂದಿಗೆ ಕುರ್ಟಾಲಂ ಜಲಪಾತಕ್ಕೆ ಬಂದಿದ್ದನು. ಕುಟುಂಬಸ್ಥರ ಮುಂದೆಯೇ ಅಶ್ವಿನ್ ನೀರಿನಲ್ಲಿ ಹರಿದುಕೊಂಡು ಹೋಗಿದ್ದಾನೆ.
ಬಂಡೆಗಳ ನಡುವೆ ಸಿಲುಕಿತ್ತು ಮೃತದೇಹ
ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಸಿಬ್ಬಂದಿಯೊಂದಿಗೆ ತಕ್ಷಣ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯಾಚರಣೆ ನಡೆಸಲಾಯ್ತು. ಸಂಜೆ 5.30ರ ವೇಳೆ ಜಲಪಾತದ 500 ಮೀಟರ್ ದೂರದಲ್ಲಿ ಬಂಡೆಗಳ ನಡುವೆ ಸಿಲುಕಿದ್ದ ಅಶ್ವಿನ್ ಮೃತದೇಹವನ್ನು ಹೊರ ತೆಗೆಯಲಾಗಿದೆ. ಜಿಲ್ಲಾಧಿಕಾರಿ ಎ.ಕೆ.ಕಮಲ್ ಕಿಶೋರ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಸುರೇಶ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯ್ತು.
ಸಂಬಂಧಿಕರ ಜೊತೆ ಜಲಪಾತದ ಬಳಿ ಹುಡುಗ ಸ್ನಾನಕ್ಕೆ ಹೋಗಿದ್ದನು. ಈ ಸಮಯದಲ್ಲಿ ಜಲಪಾತದಲ್ಲಿ ದಿಢೀರ್ ಅಂತ ನೀರಿನ ಮಟ್ಟ ಏರಿಕೆಯಾಗಿದೆ. ಜಲಪಾತದ ನೀರು ಹೆಚ್ಚಾಗಿ ಜನನಿಬಿಡ ಪ್ರದೇಶದವರೆಗೂ ಬಂದಿದೆ.
ಕಿರುಚುತ್ತಾ ಹೊರಗೆ ಓಡಿ ಬಂದ ಪ್ರವಾಸಿಗರು
ಶುಕ್ರವಾರ ಮಧ್ಯಾಹ್ನ ಸುಮಾರು 2.30ರ ವೇಳೆಗೆ ಪ್ರವಾಸಿಗರ ಗುಂಪು ಹಳೆಯ ಕುರ್ಟಾಲಂ ಜಲಪಾತದ ಕೆಳ ಭಾಗದಲ್ಲಿ ಪ್ರವಾಸಿಗರು ಸ್ನಾನ ಮಾಡುತ್ತಿದ್ದರು. ಪಶ್ಚಿಮಘಟ್ಟಗಳಲ್ಲಿ ಮಳೆಯಾಗುತ್ತಿರೋದರಿಂದ ಕುರ್ಟಾಲಂ ಜಲಪಾತದಲ್ಲಿ ನೀರು ಹೆಚ್ಚಾಗಿದೆ. ಕೂಡಲೇ ಪ್ರವಾಸಿಗರು ಜೋರಾಗಿ ಕಿರುಚುತ್ತಾ ಹೊರಗೆ ಓಡಿ ಬಂದಿದ್ದಾರೆ.
ಸ್ಥಳದಲ್ಲಿದ್ದ ಪೊಲೀಸರು, ಸ್ಥಳೀಯರು ಜನರನ್ನು ರಕ್ಷಣೆ ಮಾಡಿದ್ದಾರೆ. ಎಲ್ಲ ಪ್ರವಾಸಿಗರನ್ನು ಸುರಕ್ಷಿತ ಸ್ಥಳಕ್ಕೆ ಕರೆತರಲಾಗಿದೆ. ಆದ್ರೂ 11ನೇ ಕ್ಲಾಸ್ ವಿದ್ಯಾರ್ಥಿಯೋರ್ವ ಜಲಪಾತದಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾನೆ. ನೀರು ಕಾರ್ ಪಾರ್ಕಿಂಗ್‌ವರೆಗೂ ಬಂದಿದೆ ಎಂದು ವರದಿಯಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ನೀರು ಹರಿದು ಬರುತ್ತಿರುವ ದೃಶ್ಯಗಳನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಮಿಂಚಿನ ವೇಗದಲ್ಲಿ ವೈರಲ್ ಆಗುತ್ತಿದೆ.
Flash flooding in Old Courtallam Falls in Tamil Nadu, India
pic.twitter.com/3ghxb9LkKd
ಹವಾಮಾನದಲ್ಲಿ ಬದಲಾವಣೆಯಿಂದಾಗಿ ಬೇಸಿಗೆಯಲ್ಲೂ ಕಳೆದೊಂದು ವಾರದಿಂದ ಮಳೆಯಾಗುತ್ತಿದೆ. ಜಲಾಪತಗಳಲ್ಲಿ ನೀರು ಹೆಚ್ಚಾಗುತ್ತಿದ್ದು, ಪ್ರವಾಸಿಗರ ಸಂಖ್ಯೆಯೂ ಏರಿಕೆಯಾಗುತ್ತಿದೆ. ಮನ್ನಾರ್, ಕನ್ಯಾಕುಮಾರಿ, ಕೊಡೈಕೆನಾಲ್ ಅಂತಹ ತಾಣಗಳು ಪ್ರವಾಸಿಗರನ್ನು ಸೆಳೆಯುತ್ತಿವೆ.
ರಾಜ್ಯದಲ್ಲಿ ಮಳೆಯೂ ಅಲರ್ಟ್
ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೇ 19 ಮತ್ತು ಮೇ 20 ರಂದು ಎರಡು ದಿನ ಯೆಲ್ಲೋ ಅಲರ್ಟ್ ಪ್ರಕಟಿಸಲಾಗಿದೆ. ಮುಂದಿನ 24 ಗಂಟೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಹಾಸನ, ಕೊಡಗು, ಮಂಡ್ಯ, ಮೈಸೂರು ಹಾಗೂ ಶಿವಮೊಗ್ಗ, ಮೇ 19ರಂದು ಉತ್ತರ ಕನ್ನಡ, ಮೇ 20ಕ್ಕೆ ದಕ್ಷಿಣ ಕನ್ನಡ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಮಂಡ್ಯ, ಮೈಸೂರು ಹಾಗೂ ತುಮಕೂರು, ಮೇ 21ಕ್ಕೆ ದಕ್ಷಿಣ ಕನ್ನಡ, ಉಡುಪಿ, ಹಾಸನ, ಮಂಡ್ಯ, ಮೈಸೂರು ಹಾಗೂ ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.