
ನ್ಯೂಯಾರ್ಕ್ (ಫೆ.5): ಅಮೇರಿಕನ್ ಮಾಧ್ಯಮ ಇತಿಹಾಸದಲ್ಲಿ ಅತ್ಯಂತ ವ್ಯಾಪಕವಾದ ನ್ಯೂಸ್ ರೂಮ್ ಕ್ಲೀನಿಂಗ್ ಎನ್ನುವಂತೆ ದಿ ವಾಷಿಂಗ್ಟನ್ ಪೋಸ್ಟ್ 300ಕ್ಕೂ ಹೆಚ್ಚು ಪತ್ರಕರ್ತರು ಹಾಗೂ ಸಿಬ್ಬಂದಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವಜಾ ಮಾಡಿದೆ. ಅಂದರೆ, ತನ್ನ ಸಂಪಾದಕೀಯ ಕಾರ್ಯಪಡೆಯ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಸಿಬ್ಬಂದಿಯನ್ನು ಪತ್ರಿಕೆ ವಜಾ ಮಾಡಿದೆ. ಇದರಲ್ಲಿ ವಾರ್ ಜೋನ್, ಜಾಗತಿಕ ರಾಜಧಾನಿ ಹಾಗೂ ವಿಶ್ವದ ಅತ್ಯಂತ ಸೂಕ್ಷ್ಮ ಪ್ರದೇಶದಿಂದ ಕೆಲಸ ಮಾಡುವ ಸಿಬ್ಬಂದಿಯಲ್ಲಿ ಆತಂಕ ಇನ್ನಷ್ಟು ಹೆಚ್ಚಾಗಿದೆ.
ವಾಷಿಂಗ್ಟನ್ ಪೋಸ್ಟ್‌ನ ವಿದೇಶಿ ಬ್ಯೂರೋಗಳು, ಸ್ಥಳೀಯ ರಿಪೋರ್ಟಿಂಗ್ ಟೀಮ್, ಸ್ಪೋರ್ಟ್ಸ್ ಡೆಸ್ಕ್ ಹಾಗೂ ವಾಣಿಜ್ಯ ವಿಭಾಗದಲ್ಲಿ ಪ್ರಮುಖ ವಜಾ ಪ್ರಕ್ರಿಯೆಗಳು ನಡೆದಿವೆ. ಇನ್ನು ಹೆಚ್ಚೂ ಕಡಿಮೆ ಸಂಪೂರ್ಣ ಇಂಟರ್‌ನ್ಯಾಷನಲ್ ರಿಪೋರ್ಟಿಂಗ್ ಟೀಮ್‌ಅನ್ನು ಪತ್ರಿಕೆ ವಜಾ ಮಾಡಿದೆ. ಹಾಲಿ ಹಾಗೂ ಮಾಜಿ ಪತ್ರಕರ್ತರು ಇದೊಂದು ಡಾರ್ಕ್ ಡೇ ಎಂದು ಕರೆದಿದ್ದಾರೆ. ಇದು ಕೇವಲ ದಿ ವಾಷಿಂಗ್ಟನ್ ಪೋಸ್ಟ್‌ಗೆ ಮಾತ್ರವಲ್ಲದೆ, ಜಾಗತಿಕ ಪತ್ರಿಕೋದ್ಯಮಕ್ಕೆ ಇದು ಕರಾಳ ದಿನ ಎಂದು ಬಣ್ಣಿಸಿದ್ದಾರೆ.
ವಜಾಗೊಂಡವರಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಪುತ್ರ ಮತ್ತು ದಿ ಪೋಸ್ಟ್‌ನ ಹಿರಿಯ ಅಂತರರಾಷ್ಟ್ರೀಯ ವ್ಯವಹಾರಗಳ ಅಂಕಣಕಾರ ಇಶಾನ್ ತರೂರ್ ಕೂಡ ಒಬ್ಬರು. ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ, ಇಶಾನ್ ತರೂರ್ "ಡೆಮಾಕ್ರಸಿ ಡೈಸ್ ಇನ್ ಡಾರ್ಕ್‌ನೆಸ್" ಎಂಬ ಪೋಸ್ಟರ್‌ನೊಂದಿಗೆ ನ್ಯೂಸ್ ರೂಮ್f ಚಿತ್ರದಂತೆ ಕಾಣುವದನ್ನು ಹಂಚಿಕೊಂಡಿದ್ದಾರೆ. ಅವರು ಪೋಸ್ಟ್‌ಗೆ "ಒಂದು ಕೆಟ್ಟ ದಿನ" ಎಂದು ಶೀರ್ಷಿಕೆ ನೀಡಿದ್ದಾರೆ. ಇಶಾನ್ ತರೂರ್ ಮಾಡಿರುವ ಪೋಸ್ಟ್‌ಅನ್ನು ಅವರ ತಂದೆ ಶಶಿ ತರೂರ್ ಕೂಡ ಎಕ್ಸ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ, 2017 ರಲ್ಲಿ ವ್ಯಾಪಕವಾಗಿ ಓದಲ್ಪಟ್ಟ ವರ್ಲ್ಡ್‌ವ್ಯೂ ಅಂಕಣವನ್ನು ಪ್ರಾರಂಭಿಸಿದ ಇಶಾನ್ ತರೂರ್, ಪ್ರಕಟಣೆಯ ಈ ಕ್ರಮದಿಂದ "ಹೃದಯ ಭಗ್ನವಾಗಿದೆ" ಎಂದು ಹೇಳುತ್ತಾ, ತಮ್ಮನ್ನು ವಜಾಗೊಳಿಸಿರುವ ವಿಚಾರವನ್ನು ದೃಢಪಡಿಸಿದರು.
"ಇಂದು ನನ್ನನ್ನು ದಿ ವಾಷಿಂಗ್ಟನ್ ಪೋಸ್ಟ್‌ನಿಂದ ವಜಾಗೊಳಿಸಲಾಗಿದೆ, ಜೊತೆಗೆ ಹೆಚ್ಚಿನ ಅಂತರರಾಷ್ಟ್ರೀಯ ಸಿಬ್ಬಂದಿ ಮತ್ತು ಇತರ ಅನೇಕ ಅದ್ಭುತ ಸಹೋದ್ಯೋಗಿಗಳು ವಜಾಗೊಂಡಿದ್ದಾರೆ. ನಮ್ಮ ನ್ಯೂಸ್ ರೂಮ್ ಮತ್ತು ವಿಶೇಷವಾಗಿ ಪೋಸ್ಟ್‌ಗೆ ಅಂತರರಾಷ್ಟ್ರೀಯವಾಗಿ ಸೇವೆ ಸಲ್ಲಿಸಿದ ಅಪ್ರತಿಮ ಪತ್ರಕರ್ತರಿಗಾಗಿ - ಸುಮಾರು 12 ವರ್ಷಗಳಿಂದ ನನ್ನ ಸ್ನೇಹಿತರು ಮತ್ತು ಸಹಯೋಗಿಗಳಾಗಿದ್ದ ಸಂಪಾದಕರು ಮತ್ತು ವರದಿಗಾರರಿಗಾಗಿ ನಾನು ಹೃದಯ ಭಗ್ನವಾಗಿದೆ. ಅವರೊಂದಿಗೆ ಕೆಲಸ ಮಾಡುವುದು ಗೌರವವಾಗಿದೆ" ಎಂದು ಅವರು ಬರೆದಿದ್ದಾರೆ.
ಉಕ್ರೇನ್ ವರದಿಗಾರ್ತಿ ಲಿಜ್ಜಿ ಜಾನ್ಸನ್ ಅವರನ್ನೂ ಪತ್ರಿಕೆ ಕೆಲಸದಿಂದ ತೆಗೆದುಹಾಕಿತು. ಅವರು X ನಲ್ಲಿ ಪೋಸ್ಟ್ ಮಾಡಿದ್ದು: "ಯುದ್ಧ ವಲಯದ ಮಧ್ಯದಲ್ಲಿ ವಾಷಿಂಗ್ಟನ್ ಪೋಸ್ಟ್ ನನ್ನನ್ನು ಕೆಲಸದಿಂದ ತೆಗೆದುಹಾಕಿತು. ನನಗೆ ಮಾತುಗಳೇ ಸಿಗುತ್ತಿಲ್ಲ. ನಾನು ಬೇಸರಗೊಂಡಿದ್ದೇನೆ." ಎಂದು ಬರೆದಿದ್ದಾೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ