ಕುಸೀತಿದೆ ಉತ್ತರದ ಶೃಂಗೇರಿ ‘ಜೋಶಿಮಠ’: 600 ಕುಟುಂಬ ಸ್ಥಳಾಂತರ

By Kannadaprabha NewsFirst Published Jan 8, 2023, 6:42 AM IST
Highlights

ಆದಿ ಜಗದ್ಗುರು ಶಂಕರಾಚಾರ್ಯರು ಸ್ಥಾಪಿಸಿರುವ ಜ್ಯೋತಿಷ್‌ಪೀಠ ಇರುವ, ‘ಉತ್ತರ ಭಾರತದ ಶೃಂಗೇರಿ’ ಎನ್ನಬಹುದಾದ ಉತ್ತರಾಖಂಡದ ಜೋಶಿಮಠಕ್ಕೆ ಭೂಸಮಾಧಿಯ ಭೀತಿ ಎದುರಾಗಿದೆ.

ಜೋಶಿಮಠ (ಜ.08): ಆದಿ ಜಗದ್ಗುರು ಶಂಕರಾಚಾರ್ಯರು ಸ್ಥಾಪಿಸಿರುವ ಜ್ಯೋತಿಷ್‌ಪೀಠ ಇರುವ, ‘ಉತ್ತರ ಭಾರತದ ಶೃಂಗೇರಿ’ ಎನ್ನಬಹುದಾದ ಉತ್ತರಾಖಂಡದ ಜೋಶಿಮಠಕ್ಕೆ ಭೂಸಮಾಧಿಯ ಭೀತಿ ಎದುರಾಗಿದೆ. ಕ್ಷಣ ಕ್ಷಣಕ್ಕೂ ಭೂಮಿಯಲ್ಲಿ ಬಿರುಕುಗಳು ಹೆಚ್ಚಾಗುತ್ತಿದ್ದು, ನಗರವನ್ನೇ ಭೂಮಿಯು ಆಪೋಶನವಾಗುವ ತೆಗೆದುಕೊಳ್ಳುವ ಭೀತಿ ಸೃಷ್ಟಿಯಾಗಿದೆ. ನಗರದ 20 ಸಾವಿರ ಜನರು ನಿತ್ಯ ಪ್ರಾಣಭೀತಿಯಲ್ಲಿ ಕಾಲ ನೂಕುತ್ತಿದ್ದಾರೆ. ಇದರ ಬೆನ್ನಲ್ಲೇ 600 ಕುಟುಂಬಗಳ ಸ್ಥಳಾಂತರಕ್ಕೆ ಸರ್ಕಾರ ಕ್ರಮ ಕೈಗೊಂಡಿದೆ. 

ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿರುವ ಭೂಕುಸಿತದಿಂದಾಗಿ ಜೋಶಿಮಠದ 600ಕ್ಕೂ ಹೆಚ್ಚು ಮನೆಗಳು, ಪ್ರಮುಖ ರಸ್ತೆಗಳು, ದೇವಾಲಯಗಳು ಹಾಗೂ ಕಟ್ಟಡಗಳಲ್ಲಿ ದೊಡ್ಡ ಪ್ರಮಾಣದ ಬಿರುಕು ಕಾಣಿಸಿಕೊಂಡಿವೆ. ಕಟ್ಟಡಗಳಲ್ಲಿ ಅಂತರ್ಜಲ ಉಕ್ಕೇರಿ ಜಿನುಗತೊಡಗಿದೆ. 8ನೇ ಶತಮಾನದಲ್ಲಿ ಶಂಕರಾಚಾರ್ಯರು ಸ್ಥಾಪಿಸಿರುವ ಚತುರಾಮ್ನಾಯ ಪೀಠಗಳಲ್ಲಿ ಒಂದಾದ ಅಥರ್ವಣ ವೇದಕ್ಕೆ ಸಂಬಂಧಿಸಿದ ಜ್ಯೋತಿಷ್‌ ಪೀಠ ಜೋಶಿಮಠದಲ್ಲಿದ್ದು, ಜ್ಯೋತಿರ್‌ ಮಠದ ದ್ವಾರದಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದು ಮಠಕ್ಕೆ ಆತಂಕ ಹೆಚ್ಚಿಸಿದೆ. ಇದಲ್ಲದೆ, ಬದರಿನಾಥ ದೇಗುಲದ ವಿಷ್ಣು ಮೂರ್ತಿಯನ್ನು ಚಳಿಗಾಲದಲ್ಲಿ ಜೋಶಿಮಠದ ನರಸಿಂಹ ಮಂದಿರದಲ್ಲಿ ಇಡಲಾಗುತ್ತದೆ. ಹೀಗಾಗಿ ವಿಷ್ಣು ಮೂರ್ತಿಯ ಸ್ಥಳಾಂತರಕ್ಕೂ ಆಗ್ರಹ ಕೇಳಿಬಂದಿದೆ.

ಉತ್ತರ ಭಾರತದಲ್ಲಿ ಮುಂದುವರೆದ ಮೈಕೊರೆವ ಚಳಿ: ದಿಲ್ಲಿಯಲ್ಲಿ 1.8 ಡಿಗ್ರಿ ಉಷ್ಣಾಂಶ

ದೇಗುಲ, ಮಠ, ಮನೆಗಳಲ್ಲಿ ಬಿರುಕು: ಜೋಶಿಮಠದ ಕಟ್ಟಡ ಮತ್ತು ದೇಗುಲಗಳಲ್ಲಿ ಬಿರುಕು ಕಾಣಿಸಿಕೊಳ್ಳುವ ಪ್ರಕರಣಗಳು ಮತ್ತಷ್ಟುಹೆಚ್ಚಿದ್ದು, ಶನಿವಾರ ಶಂಕರಾಚಾರ್ಯ ಮಾಧವ ಆಶ್ರಮ ದೇಗುಲದ ಶಿವಲಿಂಗದಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದು ಭಕ್ತರಲ್ಲಿ ಆತಂಕ ಹೆಚ್ಚಿಸಿದೆ. ಶುಕ್ರವಾರವಷ್ಟೇ ಭಗವತಿ ದೇಗುಲವು ಭೂಕುಸಿತದ ಪರಿಣಾಮಕ್ಕೆ ಒಳಗಾಗಿತ್ತು. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಇದರ ನಡುವೆ ಶಂಕಾರಾಚಾರ್ಯ ಸ್ಥಾಪಿತ ಜ್ಯೋತಿಷ್‌ ಪೀಠ ಇರುವ ಜ್ಯೋತಿರ್ಮಠದ ದ್ವಾರದ ಬಾಗಿಲಲ್ಲಿ ಬಿರುಕು ಕಾಣಿಸಿದೆ. ಜತೆಗೆ ಜ್ಯೋತಿರ್ಮಠದಲ್ಲಿ ಇರುವ ಲಕ್ಷ್ಮೇನಾರಾಯಣ ದೇಗುಲದ ಸಮುಚ್ಚಯದ ಕಟ್ಟಡ, ಲಕ್ಷ್ಮೇನಾರಾಯಣ ದೇಗುಲ, ಆಡಿಟೋರಿಯಂನಲ್ಲೂ ಬಿರುಕುಗಳಿವೆ. ಇದೇ ಜ್ಯೋತಿರ್ಮಠದ ಕಟ್ಟಡದಲ್ಲಿ ಜ್ಯೋತಿಷ್‌ ಪೀಠದ ಮೊದಲ ಗುರುಗಳಾದ ತೋಟಕಾಚಾರ್ಯ ಗುಹೆ, ತ್ರಿಪುರ ಸುಂದರಿ ರಾಜರಾಜೇಶ್ವರಿ ದೇಗುಲ ಮತ್ತು ಜ್ಯೋತಿಷ್‌ ಪೀಠದ ಶಂಕರಾಚಾರ‍್ಯ ಪೀಠಗಳಿವೆ.

ಸಿಎಂ ಪರಿಶೀಲನೆ: ಸತತ ಭೂಕುಸಿತದ ಕಾರಣ ನಗರದ ಜನರು ತುರ್ತಾಗಿ ತಮ್ಮನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡುವಂತೆ ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶನಿವಾರ ಸ್ವತಃ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಜ್ಞರೂ ಭೇಟಿ ನೀಡಿ ಸ್ಥಳಾಧ್ಯಯನ ನಡೆಸುತ್ತಿದ್ದಾರೆ. ತೀವ್ರ ಅಪಾಯ ಎದುರಿಸುತ್ತಿರುವ ನಗರದ 600 ಕುಟುಂಬಗಳನ್ನು ತಕ್ಷಣವೇ ಸ್ಥಳಾಂತರ ಮಾಡುವಂತೆ ಸಿಎಂ ಸೂಚಿಸಿದ್ದಾರೆ. ಯಾವುದೇ ಪರಿಸ್ಥಿತಿ ಎದುರಿಸಲು ಸದಾ ಕಾಲ ವೈದ್ಯಕೀಯ ಸೌಲಭ್ಯ, ವಿಪತ್ತು ನಿರ್ವಹಣಾ ತಂಡ ಮತ್ತು ತುರ್ತು ನೆರವಿಗೆ ಕಾಪ್ಟರ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಬೇಕು ಎಂದು ಸೂಚಿಸಿದ್ದಾರೆ. ಜೊತೆಗೆ ನಗರದಿಂದ ತೆರವಾಗುವ ಪ್ರತಿ ಕುಟುಂಬಕ್ಕೆ ಮುಂದಿನ 6 ತಿಂಗಳ ಕಾಲ ಬಾಡಿಗೆ ಭತ್ಯೆ ರೂಪದಲ್ಲಿ ತಲಾ 4000 ರು. ನೀಡಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.

ಏನಿದು ಜೋಶಿಮಠ?: ಜಗದ್ಗುರು ಆದಿ ಶಂಕರಾಚಾರ್ಯರು ಸನಾತನದ ಧರ್ಮ ಪ್ರಚಾರಕ್ಕಾಗಿ 8ನೇ ಶತಮಾನದಲ್ಲಿ ದೇಶದ ನಾಲ್ಕು ದಿಕ್ಕುಗಳಲ್ಲಿ ಸ್ಥಾಪಿಸಿದ ಪೀಠಗಳಲ್ಲೊಂದು. ಕರ್ನಾಟಕದ ಶೃಂಗೇರಿಯಲ್ಲಿರುವ ಶಾರದಾ ಪೀಠ, ಒಡಿಶಾದ ಗೋವರ್ಧನ ಮಠ, ಗುಜರಾತ್‌ನ ದ್ವಾರಕಾ ಪೀಠ ಹಾಗೂ ಹಿಮಾಲಯ ರಾಜ್ಯ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ಜ್ಯೋತಿರ್ಮಠ ಅಥವಾ ಜೋಶಿಮಠ ಆದಿ ಶಂಕರರು ಸ್ಥಾಪಿಸಿದ ನಾಲ್ಕು ಪೀಠಗಳು. 2021ರ ಭೀಕರ ಪ್ರವಾಹದ ನಂತರ ಜೋಶಿಮಠ ತೀವ್ರ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗುತ್ತಿದೆ.

Amazon Layoff: ಅಮೆಜಾನ್‌ನಿಂದ ಭಾರತದಲ್ಲೂ 1000 ನೌಕರರ ವಜಾ

ಬಿರುಕಿಗೆ ಕಾರಣ ಏನು?: ಜೋಶಿಮಠವು ಭೂಕಂಪ ಅಪಾಯ ಅತಿ ಹೆಚ್ಚಿರುವ ‘ವಿ’ ವಲಯದಲ್ಲಿದೆ. ಆದರೆ, ಅಭಿವೃದ್ಧಿ ಹೆಸರಲ್ಲಿ ರಸ್ತೆ ಅಗೆವ, ಬಂಡೆ ಸಿಡಿಸುವ ಕೆಲಸ ಹಲವು ವರ್ಷಗಳಿಂದ ನಡೆಯುತ್ತಿದೆ. ಜೋಶಿಮಠ ಪಕ್ಕದಲ್ಲೇ ಅಣೆಕಟ್ಟು, ಹೆದ್ದಾರಿ, ಸುರಂಗ ನಿರ್ಮಾಣ ಕಾಮಗಾರಿ ನಡೆದದ್ದು ಬಿರುಕು ಹೆಚ್ಚಾಗಲು ಕಾರಣ ಎನ್ನಲಾಗಿದೆ. ಮಿತಿ ಮೀರಿ ಕಾಮಗಾರಿ ನಡೆಸದಂತೆ 1976ರಲ್ಲೇ ನ್ಯಾ. ಮಿಶ್ರಾ ಸಮಿತಿ ಎಚ್ಚರಿಸಿತ್ತು. 2009-12ರ ನಡುವೆ ಜೋಶಿಮಠ ಸುತ್ತಮುತ್ತ 130ಕ್ಕೂ ಹೆಚ್ಚು ಭೂಕುಸಿತ ಸಂಭವಿಸಿದೆ. ಆದರೂ, ಸರ್ಕಾರಗಳು ಎಚ್ಚೆತ್ತುಕೊಂಡಿಲ್ಲ ಎಂಬ ಆರೋಪವಿದೆ.

click me!