ಇರಾನ್ ಕಟ್ಟಿಹಾಕಲು 'ಭಾರತ-ಮಧ್ಯಪ್ರಾಚ್ಯ-ಯುರೋಪ್' ಆರ್ಥಿಕ ಕಾರಿಡಾರ್‌ಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಬೆಂಬಲ!

Published : Sep 24, 2026, 12:17 PM IST
India Middle East Europe Economic Corridor

ಸಾರಾಂಶ

ಇರಾನ್ ಉಗ್ರದಾಳಿಗಳನ್ನು ತಡೆಯಲು ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (IMEC) ಯೋಜನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲ ಸೂಚಿಸಿದ್ದಾರೆ. ಇದಕ್ಕೆ ವಿಶ್ವಸಂಸ್ಥೆಯಲ್ಲಿ ತಿರುಗೇಟು ನೀಡಿರುವ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್, ಅಮೆರಿಕದ ಭಯೋತ್ಪಾದನೆಯಿಂದ ರಕ್ಷಿಸಿಕೊಳ್ಳಲು ನಾವು ಯುದ್ಧಕ್ಕಿಳಿದಿದ್ದೇವೆ ಎಂದಿದ್ದಾರೆ.

ವಾಷಿಂಗ್ಟನ್‌: ಭಾರತವನ್ನು ಮಧ್ಯಪ್ರಾಚ್ಯ ಮತ್ತು ಯೂರೋಪ್‌ನೊಂದಿಗೆ ಸಂಪರ್ಕಿಸುವ ಪ್ರಸ್ತಾವಿತ ಕಾರಿಡಾರ್‌ ಯೋಜನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದು ವಾಣಿಜ್ಯ ನೌಕೆಗಳ ಮೇಲೆ ಇರಾನ್‌ನ ಉಗ್ರದಾಳಿಗಳನ್ನು ತಡೆಗಟ್ಟಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ, ಗಲ್ಫ್ ಸಹಕಾರ ಮಂಡಳಿಯೊಂದಿಗಿನ ಬಹುಪಕ್ಷೀಯ ಸಭೆಯನ್ನುದ್ದೇಶಿಸಿ ಮಾತನಾಡಿದ ಟ್ರಂಪ್‌, ‘ನೆರೆಯ ದೇಶಗಳ ವಾಣಿಜ್ಯ ನೌಕೆಗಳ ಮೇಲೆ ಇರಾನ್ ನಡೆಸಿದ ಉಗ್ರದಾಳಿಗಳು, ಮಧ್ಯಪ್ರಾಚ್ಯದ ಇಂಧನ ಮೂಲಸೌಕರ್ಯವನ್ನು ಇರಾನ್‌ನ ನಿಯಂತ್ರಣಾ ಕೇಂದ್ರಗಳಿಂದ ದೂರಕ್ಕೆ ಸ್ಥಳಾಂತರಿಸುವ ಅಗತ್ಯವನ್ನು ಎತ್ತಿ ತೋರಿಸಿವೆ. ಅದಕ್ಕಾಗಿಯೇ ‘ಭಾರತ-ಮಧ್ಯಪ್ರಾಚ್ಯ ಆರ್ಥಿಕ ಕಾರಿಡಾರ್’ ಅಥವಾ ಇನ್ನಾವುದೇ ವಿಧಾನದ ಮೂಲಕ ತೈಲವನ್ನು ಸಾಗಿಸುವುದನ್ನು ನಮ್ಮ ಸರ್ಕಾರ ಬಲವಾಗಿ ಬೆಂಬಲಿಸುತ್ತದೆ’ ಎಂದರು.

ಏನಿದು ಕಾರಿಡಾರ್‌?:

ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (ಐಎಂಇಸಿ) ಯೋಜನೆಗೆ 2023ರಲ್ಲಿ ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಚಾಲನೆ ನೀಡಲಾಯಿತು. ಭಾರತ, ಅಮೆರಿಕ, ಸೌದಿ ಅರೇಬಿಯಾ, ಯುಎಇ, ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಯುರೋಪಿಯನ್ ಒಕ್ಕೂಟವು ಈ ಕುರಿತ ಒಪ್ಪಂದಕ್ಕೆ ಸಹಿ ಹಾಕಿದವು. ಪ್ರಸ್ತಾವಿತ ಕಾರಿಡಾರ್, ಭಾರತವನ್ನು ಕೊಲ್ಲಿಯೊಂದಿಗೆ ಮತ್ತು ಕೊಲ್ಲಿಯನ್ನು ಯುರೋಪಿನೊಂದಿಗೆ ಸಂಪರ್ಕಿಸುವ 2 ಮಾರ್ಗಗಳನ್ನು ಒಳಗೊಂಡಿರುತ್ತದೆ.

ಇದು ಹಡಗು ಮತ್ತು ರೈಲು ಜಾಲವನ್ನು ಹಾಗೂ ಹೈಡ್ರೋಜನ್ ರಫ್ತಿಗಾಗಿ ಪೈಪ್‌ಲೈನ್‌ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ. ದಕ್ಷಿಣ ಏಷ್ಯಾ, ಮಧ್ಯಪ್ರಾಚ್ಯ ಹಾಗೂ ಯೂರೋಪ್‌ ಅನ್ನು ಸಂಪರ್ಕಿಸಿ, ವ್ಯಾಪಾರಿ ಮಾರ್ಗಗಳನ್ನು ಬಲಪಡಿಸುವುದು ಇದರ ಉದ್ದೇಶ. ಈ ಕಾರಿಡಾರ್ ಪೂರ್ಣಗೊಂಡರೆ, ಪ್ರಸ್ತುತ ಇರಾನ್ ಮತ್ತು ಅಮೆರಿಕದ ಜಟಾಪಟಿಗೆ ಕಾರಣವಾಗಿರುವ ಹೋರ್ಮುಜ್‌ ಜಲಸಂಧಿಯ ಅಗತ್ಯವಿಲ್ಲದೇ ಕೊಲ್ಲಿ ಜೊತೆ ಭಾರತಕ್ಕೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ.

ಆತ್ಮರಕ್ಷಣೆಗಾಗಿ ಯುದ್ಧ ಕಣಕ್ಕೆ ಇಳಿದಿದ್ದೇವೆ: ಇರಾನ್ ಅಧ್ಯಕ್ಷ

ವಿಶ್ವಸಂಸ್ಥೆ: ‘ಡೀಲ್‌ಗೆ ಬರದಿದ್ದರೆ ಇರಾನ್‌ ಅನ್ನು ನಿರ್ಮೂಲನೆ ಮಾಡುವೆ’ ಎಂದು 1 ದಿನದ ಹಿಂದೆ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ತಿರುಗೇಟು ನೀಡಿರುವ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್, ‘''ಯುದ್ಧಭೂಮಿಯಲ್ಲಿ ಶಾಂತಿ ಸಾಧ್ಯವಿಲ್ಲ’ ಎಂದಿದ್ದಾರೆ ಹಾಗೂ ‘ಅಮೆರಿಕದ ಭಯೋತ್ಪಾದನೆಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಯುದ್ಧಕ್ಕಿಳಿದಿದ್ದೇವೆ’ ಎಂದು ಕಿಡಿಕಾರಿದ್ದಾರೆ.

ಬುಧವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಪರೂಪದ ಯುದ್ಧಕಾಲದ ಭಾಷಣ ಮಾಡಿದ ಅವರು, ‘ನಮ್ಮ ಜನರು ಅಮೆರಿಕದಿಂದ ಭಯೋತ್ಪಾದನೆಗೆ ಬಲಿಯಾಗಿದ್ದಾರೆ. ಇತ್ತೀಚಿನ ಯುದ್ಧದ ಆರಂಭದಲ್ಲಿ 150ಕ್ಕೂ ಹೆಚ್ಚಿನ ಶಾಲಾ ಮಕ್ಕಳು ಮೃತರಾಗಿದ್ದೇ ಇದಕ್ಕೆ ಸಾಕ್ಷಿ’ ಎಂದು 150ಕ್ಕೂ ಹೆಚ್ಚು ಮೃತ ಶಾಲಾ ಮಕ್ಕಳ ಫೋಟೋಗಳನ್ನು ಹಾಗೂ ಮೃತ ಖಮೇನಿ ಫೋಟೋವನ್ನು ಎತ್ತಿ ಹಿಡಿದರು.

‘ನಾವು ನಮ್ಮನ್ನು ಮಾತ್ರ ರಕ್ಷಿಸಿಕೊಂಡಿದ್ದೇವೆ. ನಾವು ಭಯೋತ್ಪಾದಕರಲ್ಲ. ನಮ್ಮ ಮುಗ್ಧ ಜನರು ನಮ್ಮ ದೇಶದ ಮೇಲೆ ಹೇರಲ್ಪಟ್ಟ ಹೇಡಿತನದ ದಾಳಿಗಳು ಮತ್ತು ಆಕ್ರಮಣಗಳಿಗೆ ಗುರಿಯಾಗಿದ್ದಾರೆ. ಮತ್ತು ನಾವು ನಮ್ಮನ್ನು ಅತ್ಯಂತ ಬಲದಿಂದ ರಕ್ಷಿಸಿಕೊಂಡೆವು. ಅಮೆರಿಕ ಮತ್ತು ಇಸ್ರೇಲ್ ನಮ್ಮ ಮೇಲೆ ದಾಳಿ ಮಾಡಿದವು’ ಎಂದು ಗುಡುಗಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈಲು ಚಾರ್ಟ್ ರೆಡಿಯಾದರೂ ಸೀಟ್ ಕನ್ಫರ್ಮ್ ಆಗಲಿಲ್ವಾ? ಹೀಗೆ ಮಾಡಿ ಖಾಲಿ ಸೀಟ್ ನಿಮ್ಮದಾಗಿಸಿಕೊಳ್ಳಿ
ಅಯ್ಯೋ ವಿಧಿಯೇ ಎಷ್ಟು ಕ್ರೂರಿ ನೀನು... ಸಿಗದ ಮಗನ ಶವ; ಮರದ ಬೊಂಬೆಗೆ ಭಾವುಕ ವಿದಾಯ ಹೇಳಿದ ಅಮ್ಮ!