ಸತ್ಯ ಹೇಳಿದ್ದಕ್ಕೆ ಎಸ್ಟಿ ನಾಯಕನ ವಜಾ: ಪ್ರಹ್ಲಾದ್ ಜೋಶಿ ಖಂಡನೆ

Kannadaprabha News   | Kannada Prabha
Published : Aug 13, 2025, 07:25 AM IST
Union Minister Pralhad Joshi (Photo/ANI)

ಸಾರಾಂಶ

ಕಾಂಗ್ರೆಸ್‌ನಿಂದ ರಾಜಣ್ಣ ಅವರನ್ನು ವಜಾಗೊಳಿಸಿರುವುದು ರಾಹುಲ್ ಗಾಂಧಿ ಅವರ ಅಹಂಕಾರಕ್ಕೆ ನಿದರ್ಶನ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ರಾಹುಲ್ ಗಾಂಧಿ ಅವರ 'ಮತಗಳ್ಳತನ' ಆರೋಪದ ಬಗ್ಗೆ ಸತ್ಯ ಹೇಳಿದ್ದಕ್ಕೆ ರಾಜಣ್ಣ ಅವರನ್ನು ಪಕ್ಷದಿಂದ ಹೊರದಬ್ಬಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ನವದೆಹಲಿ: ಸತ್ಯ ಹೇಳಿದ್ದಕ್ಕೆ ಕಾಂಗ್ರೆಸ್‌ ಪಕ್ಷ ಒಬ್ಬ ಎಸ್ಟಿ ನಾಯಕನನ್ನು ಕತ್ತು ಹಿಡಿದು ಹೊರ ದಬ್ಬಿದ್ದು, ಇದು ಅತ್ಯಂತ ಖಂಡನೀಯ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ನವದೆಹಲಿಯಲ್ಲಿ ಮಂಗಳವಾರ ಮಾದ್ಯಮದ ಜತೆ ಮಾತನಾಡಿದ ಸಚಿವರು, ಕರ್ನಾಟದಕಲ್ಲಿ ಕೆ.ಎನ್‌.ರಾಜಣ್ಣ ಎಸ್ಟಿ ಸಮುದಾಯದ ಒಬ್ಬ ಹಿರಿಯ ನಾಯಕರು. ರಾಹುಲ್‌ ಗಾಂಧಿ ಅವರ ‘ಮತಗಳ್ಳತನ’ ಆರೋಪ ಸಂಬಂಧ ರಾಜಣ್ಣ ಇರುವ ಸತ್ಯವನ್ನು ಹೇಳಿದ್ದರು. ಆ ಕಾರಣಕ್ಕೇ ಅವರನ್ನೀಗ ಹೊರ ದಬ್ಬಲಾಗಿದೆ ಎಂದು ವಿಷಾದಿಸಿದರು.

ಕಾಂಗ್ರೆಸ್‌ನಲ್ಲಿ ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿರುವುದು ರಾಹುಲ್‌ ಗಾಂಧಿ ಅಹಂಕಾರಕ್ಕೆ ನಿದರ್ಶನವಾಗಿದೆ ಎಂದು ಆರೋಪಿಸಿದ ಸಚಿವರು, ರಾಜಣ್ಣ ಮಾಡಿದ ತಪ್ಪೇನು? ಎಂಬ ಬಗ್ಗೆ ಇಡೀ ಕಾಂಗ್ರೆಸ್‌ ಪಕ್ಷ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ತಿವಿದರು.

ರಾಜಣ್ಣ ಹೇಳಿದ್ದು ಸರಿಯಾಗಿಯೇ ಇದೆ:

ರಾಹುಲ್‌ ಗಾಂಧಿ ಅವರ ಮತಗಳ್ಳತನ ಆರೋಪ ಕುರಿತಂತೆ ರಾಜಣ್ಣ ಸರಿಯಾಗಿಯೇ ಹೇಳಿದ್ದಾರೆ. "ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ತಯಾರಿ ನಡೆದಾಗ ನಮ್ಮ ಸರ್ಕಾರವೇ ಇತ್ತು. ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರಿಂದ ಹಿಡಿದು ಎಲ್ಲಾ ಅಧಿಕಾರ ವರ್ಗ ನಮ್ಮವರೇ ಇದ್ದರು ಮತ್ತು ಚುನಾವಣಾ ಆಯೋಗ ಕೊಟ್ಟ ಮತದಾರರ ಪಟ್ಟಿಯನ್ನು ನಾವು ನೋಡಿಕೊಳ್ಳಬೇಕಿತ್ತು" ಎಂದಿದ್ದಾರೆ. ಇದರಲ್ಲಿ ಅವರ ತಪ್ಪೇನಿದೆ? ಎಂದು ಪ್ರಶ್ನಿಸಿದರು.

ಪರಿಶಿಷ್ಟ ವಿರೋಧಿ ನಡೆ:

ಕೆ.ಎನ್‌.ರಾಜಣ್ಣ 72 ವರ್ಷದ ಹಿರಿಯರು ಮತ್ತು ಎಸ್ಟಿ ಸಮುದಾಯದ ಪ್ರಬಲ ರಾಜಕಾರಣಿ. ಇಂಥವರನ್ನು ವಜಾಗೊಳಿಸಿರುವುದು ಕಾಂಗ್ರೆಸ್‌ ಪಕ್ಷ ಪರಿಶಿಷ್ಟರನ್ನು, ಸತ್ಯವಂತರನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದಕ್ಕೆ ನಿದರ್ಶನ ಇದಾಗಿದೆ. ರಾಹುಲ್‌ ಗಾಂಧಿ ಅವರ ಅಹಂಕಾರದಿಂದಾಗಿ ರಾಜಣ್ಣ ಸತ್ಯ ಹೇಳಿದ್ದಕ್ಕೆ ಶಿಕ್ಷೆ ಅನುಭವಿಸುವಂತಾಗಿದೆ. ನಿಜಕ್ಕೂ ಇದು ದುರಂತ. ರಾಹುಲ್‌ ಗಾಂಧಿ ತಮ್ಮ ನಡೆ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಇನ್ನು ಡೋರ್‌ ನಂಬರ್‌ 35ರ ಒಂದೇ ಕೊಠಡಿಯ ಮನೆಯಿಂದ 80 ಜನ ಮತ ಚಲಾಯಿಸಿದ್ದಾರೆ ಎಂಬ ಆರೋಪವನ್ನು ರಾಹುಲ್‌ ಗಾಂಧಿ ಮಾಡಿದ್ದಾರೆ. ಆದರೆ, ಇವರಿಗೆ ವಾಸ್ತವದ ಅರಿವೇ ಇಲ್ಲ. ಸತ್ಯಾಂಶ ಏನೆಂಬುದನ್ನು ತಿಳಿಯುವ ಕನಿಷ್ಠ ಪ್ರಯತ್ನವನ್ನೂ ಮಾಡಿಲ್ಲ ಎಂದು ಟೀಕಿಸಿದರು.

ʼ35ʼ ಒಂದೇ ರೂಮ್‌ ಅಲ್ಲ:

ʼ35ʼರಲ್ಲಿ ಇರುವುದು ಒಂದೇ ಒಂದು ರೂಮ್‌ ಅಲ್ಲ. ಒಂದೇ ನಂಬರ್‌ನಲ್ಲಿ ಚಿಕ್ಕ ಚಿಕ್ಕ ಮನೆಗಳಿರುವ ಒಂದು ದೊಡ್ಡ ವಠಾರ. ಅಲ್ಲಿನ ವಿವಿಧ ಕುಟುಂಬಗಳಲ್ಲಿ 80 ಜನ ಮತದಾರರಿದ್ದರು. ಇದನ್ನು ಸ್ವತಃ ಆ ಕಟ್ಟಡದ ಮಾಲೀಕರೂ ಸ್ಪಷ್ಟಪಡಿಸಿದ್ದಾರೆ. ರಾಹುಲ್‌ ಗಾಂಧಿ ಇಂಥ ಸತ್ಯ ಸಂಗತಿ ಮರೆ ಮಾಚಿ ದೇಶದ ಜನರೆದುರು ಬರೀ ಸುಳ್ಳನ್ನೇ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India News Live: ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದೂ ಬರ್ಬರ ಹ*ತ್ಯೆ
ಕ್ರೀಡಾ ಕ್ಷೇತ್ರದಲ್ಲಿದ್ದ ಪಕ್ಷಪಾತಕ್ಕೆ ಹಿಂದೆಯೇ ಕಡಿವಾಣ : ಪ್ರಧಾನಿ ನರೇಂದ್ರ ಮೋದಿ