
ಗಿರೀಶ್ ಲಿಂಗಣ್ಣ, ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
ಜುಲೈ 31ರ ಗುರುವಾರ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 12 ಗಂಟೆಗಳಿಗೂ ಹೆಚ್ಚು ಕಾಲ ಭಾರತದ ವಿರುದ್ಧ ವಾಗ್ದಾಳಿ ನಡೆಸಿದ್ದರಿಂದ, ಸೌತ್ ಬ್ಲಾಕ್‌ನಲ್ಲಿರುವ (ಭಾರತ ಸರ್ಕಾರದ ಮುಖ್ಯ ಕಚೇರಿ) ಅಧಿಕಾರಿಗಳು ಇದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂದೇ ತಿಳಿಯದೆ ಗೊಂದಲಕ್ಕೆ ಒಳಗಾದರು. ಡೊನಾಲ್ಡ್ ಟ್ರಂಪ್ ಆಗಸ್ಟ್ 1ರಿಂದ ಭಾರತೀಯ ಉತ್ಪನ್ನಗಳಿಗೆ ಅಮೆರಿಕಾದಲ್ಲಿ 25% ಆಮದು ಸುಂಕ ವಿಧಿಸಲಾಗುವುದು ಎಂದು ಘೋಷಿಸಿದರು. ಅದರೊಡನೆ, ಭಾರತ ರಷ್ಯಾದೊಡನೆ ವ್ಯವಹಾರ ನಡೆಸುತ್ತಿರುವುದಕ್ಕೆ ಭಾರತದ ಮೇಲೆ ದಂಡ ವಿಧಿಸುವುದಾಗಿಯೂ ಟ್ರಂಪ್ ಎಚ್ಚರಿಕೆ ನೀಡಿದರು.
ಭಾರತ ರಷ್ಯಾದೊಡನೆ ಆತ್ಮೀಯ ಬಾಂಧವ್ಯ ಹೊಂದಿರುವುದರ ಕುರಿತು ಅಧ್ಯಕ್ಷ ಟ್ರಂಪ್ ಕಟುವಾಗಿ ಮಾತನಾಡಿದ್ದಾರೆ. "ಭಾರತ ರಷ್ಯಾದೊಡನೆ ಸೇರಿಕೊಂಡು ಏನು ಮಾಡುತ್ತದೆ ಎಂಬ ಕುರಿತು ನಾವು ತಲೆಕೆಡಿಸಿಕೊಂಡಿಲ್ಲ. ಅವೆರಡೂ ದೇಶಗಳು ಬೇಕಾದರೆ ಈಗಾಗಲೇ ಸತ್ತಿರುವ ತಮ್ಮ ಆರ್ಥಿಕತೆಗಳನ್ನು ಪಾತಾಳಕ್ಕೆ ಒಯ್ಯಲಿ" ಎಂಬರ್ಥದಲ್ಲಿ ಟ್ರಂಪ್ ಮಾತನಾಡಿದ್ದಾರೆ.
ಬಹಳಷ್ಟು ಜನರಿಗೆ ಡೊನಾಲ್ಡ್ ಟ್ರಂಪ್ ಅವರ ಮಾತುಗಳು ಅವಮಾನಕರವಾಗಿ, ಅಗೌರವ ಪೂರ್ವಕವಾಗಿ ಕಂಡಿದೆ.
ಡೊನಾಲ್ಡ್ ಟ್ರಂಪ್ ತನ್ನ ಮೊದಲ ಅಧ್ಯಕ್ಷೀಯ ಅವಧಿಯಿಂದಲೂ ಭಾರತ ಅಮೆರಿಕನ್ ಉತ್ಪನ್ನಗಳ ಆಮದಿನ ಮೇಲೆ ಹೆಚ್ಚಿನ ಸುಂಕ ವಿಧಿಸುವುದರ ಕುರಿತು ದೂರುತ್ತಾ ಬಂದಿದ್ದರು. ಆ ಅವಧಿಯಲ್ಲಿ ಅವರು ಭಾರತವನ್ನು 'ಸುಂಕದ ರಾಜ' (ಟಾರಿಫ್ ಕಿಂಗ್) ಎಂದು ಟೀಕಿಸಿದ್ದರು. ಈಗ ಟ್ರಂಪ್ ಮತ್ತೆ ಭಾರತದ ವ್ಯಾಪಾರ ನಿಯಮಗಳನ್ನು ಟೀಕಿಸಲು ಆರಂಭಿಸಿದ್ದು, ಭಾರತದ ನಿಯಮಗಳು 'ಅತ್ಯಂತ ಕಷ್ಟಕರ ಮತ್ತು ಅಹಿತಕರ' ಎಂದಿದ್ದಾರೆ.
ಭಾರತ ಅಮೆರಿಕಾದ ಮಿತ್ರ ರಾಷ್ಟ್ರವೇ ಆಗಿದ್ದರೂ, ಉಭಯ ದೇಶಗಳ ನಡುವೆ ಕಳೆದ ವರ್ಷಗಳಲ್ಲಿ ಹೇಳಿಕೊಳ್ಳುವಂತಹ ವ್ಯಾಪಾರ ವ್ಯವಹಾರಗಳು ನಡೆದಿಲ್ಲ ಎಂದಿದ್ದಾರೆ. ಇದಕ್ಕೆ ಭಾರತದ ಅತ್ಯಂತ ಹೆಚ್ಚಿನ ಪ್ರಮಾಣದ ಆಮದು ಸುಂಕವೇ ಕಾರಣ ಎಂದು ಟ್ರಂಪ್ ಆರೋಪಿಸಿದ್ದು, ಇದು ಜಗತ್ತಿನಲ್ಲೇ ಅತ್ಯಧಿಕ ಪ್ರಮಾಣದ ಸುಂಕಗಳಲ್ಲಿ ಒಂದಾಗಿದೆ ಎಂದಿದ್ದಾರೆ. ಅದರೊಡನೆ, ಭಾರತ ಹಲವಾರು ಕಠಿಣ ನಿಯಮಗಳನ್ನು ಹೇರಿ, ಹಣಕಾಸಿನ ಉಪಸ್ಥಿತಿ ಇಲ್ಲದಿರುವಾಗಲೂ ವ್ಯಾಪಾರವನ್ನು ಇನ್ನಷ್ಟು ಕಷ್ಟಕರವಾಗಿಸುತ್ತದೆ ಎಂದಿದ್ದಾರೆ.
ಬಹಳಷ್ಟು ರಾಷ್ಟ್ರಗಳು ರಷ್ಯಾ ಉಕ್ರೇನ್ ಜೊತೆಗಿನ ಯುದ್ಧವನ್ನು ನಿಲ್ಲಿಸಬೇಕು ಎಂದು ಆಗ್ರಹಿಸುತ್ತಿವೆ. ಆದರೆ, ಈ ಸಂದರ್ಭದಲ್ಲೂ ಭಾರತ ಮಾತ್ರ ರಷ್ಯಾದೊಡನೆ ವ್ಯಾಪಾರದಲ್ಲಿ ನಿರತವಾಗಿದೆ ಎಂದು ಟ್ರಂಪ್ ಟೀಕಿಸಿದ್ದಾರೆ.
ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿರುವ ವಿಚಾರವೆಂದರೆ, ಟ್ರಂಪ್ ತಾನು ಪಾಕಿಸ್ತಾನದೊಡನೆ ವ್ಯಾಪಾರ ಒಪ್ಪಂದ ನಡೆಸುವುದಾಗಿ ಘೋಷಿಸಿರುವುದು. ಪಾಕಿಸ್ತಾನ ಹೊಂದಿರುವ ವಿಶಾಲ ತೈಲ ನಿಕ್ಷೇಪಗಳನ್ನು ಪರಿಶೀಲಿಸಿ, ಅದನ್ನು ಬಳಸಲು ಪಾಕಿಸ್ತಾನಕ್ಕೆ ಅಮೆರಿಕಾ ನೆರವಾಗಲಿದೆ ಎಂದು ಟ್ರಂಪ್ ಹೇಳಿದ್ದಾರೆ.
ಜುಲೈ 30ರಂದು ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಬರೆದುಕೊಂಡಿರುವ ಟ್ರಂಪ್, ಪಾಕಿಸ್ತಾನದ ಜೊತೆಗೆ ಸಹಭಾಗಿತ್ವ ಹೊಂದುವ ಸಲುವಾಗಿ ಅಮೆರಿಕಾ ಒಂದು ತೈಲ ಕಂಪನಿಯನ್ನು ಆರಿಸಲಿದೆ ಎಂದಿದ್ದಾರೆ. "ಯಾರಿಗೆ ಗೊತ್ತು? ಮುಂದೆ ಒಂದು ದಿನ ಪಾಕಿಸ್ತಾನ ತೈಲವನ್ನು ಭಾರತಕ್ಕೂ ಮಾರಾಟ ಮಾಡಬಹುದೇನೋ!" ಎಂದು ಟ್ರಂಪ್ ಹೇಳಿದ್ದಾರೆ.
ಟ್ರಂಪ್ ಮಾತುಗಳಿಗೆ ಭಾರತ ಸರ್ಕಾರ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ಟ್ರಂಪ್ ಇತರ ದೇಶಗಳೊಡನೆ ವ್ಯವಹಾರ ಮಾತುಕತೆ ನಡೆಸುವ ವಿಧಾನವೆಂದರೆ, ಮೊದಲಿಗೆ ಆ ದೇಶಗಳ ಮೇಲೆ ಅಪಾರ ಪ್ರಮಾಣದಲ್ಲಿ ಆಮದು ಸುಂಕ ಹೇರುವುದು. ಉದಾಹರಣೆಗೆ ಗಮನಿಸುವುದಾದರೆ, ಚೀನಾದ ಜೊತೆ ವ್ಯವಹರಿಸುವಾಗ, ಟ್ರಂಪ್ ಮೊದಲಿಗೆ ಚೀನಾದ ಉತ್ಪನ್ನಗಳ ಮೇಲೆ 145% ಆಮದು ಸುಂಕ ವಿಧಿಸಿದ್ದರು. ಬಳಿಕ, ಜಿನೀವಾದಲ್ಲಿ ನಡೆದ ಮಾತುಕತೆಗಳ ಬಳಿಕ, ಈ ಸುಂಕವನ್ನು 35%ಗೆ ಇಳಿಸಲಾಯಿತು.
ಮಾಧ್ಯಮ ವರದಿಗಳ ಪ್ರಕಾರ, ಡೊನಾಲ್ಡ್ ಟ್ರಂಪ್ ತಾನು ಭಾರತ - ಪಾಕಿಸ್ತಾನಗಳ ನಡುವಿನ ಉದ್ವಿಗ್ನತೆಯನ್ನು ಕಡಿಮೆಗೊಳಿಸಲು ನೆರವಾಗಿದ್ದೇನೆ ಎಂದು ಹೇಳಿಕೆ ನೀಡಿರುವುದನ್ನು ಭಾರತೀಯ ಅಧಿಕಾರಿಗಳು ಅಲ್ಲಗಳೆದಿದ್ದರ ಕುರಿತು ಟ್ರಂಪ್ ಅಸಮಾಧಾನಗೊಂಡಿದ್ದಾರೆ. ಅದರೊಡನೆ, ಜೂನ್ 17ರಂದು ಡೊನಾಲ್ಡ್ ಟ್ರಂಪ್ ಜೊತೆ ದೂರವಾಣಿ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿಯವರು ನಿಮ್ಮ ಹೇಳಿಕೆ ನಿಜವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಭಾರತ ಸರ್ಕಾರದ ಸಚಿವರು ಮತ್ತು ಅಧಿಕಾರಿಗಳು ಸಾರ್ವಜನಿಕವಾಗಿ ಹಲವಾರು ಬಾರಿ ಟ್ರಂಪ್ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಭಾರತ ಮತ್ತು ಅಮೆರಿಕಾಗಳ ನಡುವೆ ಗಟ್ಟಿಯಾಗಿರುವ ಆತ್ಮೀಯ ಬಾಂಧವ್ಯವನ್ನು ಟ್ರಂಪ್ ಇತ್ತೀಚೆಗೆ ನೀಡುತ್ತಿರುವ ಹೇಳಿಕೆಗಳು ಘಾಸಿಗೊಳಿಸಲಿವೆ ಎಂದು ನವದೆಹಲಿ ಭಾವಿಸಿದೆ. ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಭಾರತ - ಅಮೆರಿಕಾ ಸ್ನೇಹ 21ನೇ ಶತಮಾನವನ್ನು ರೂಪಿಸುವ ಬಾಂಧವ್ಯ ಎಂದು ಬಣ್ಣಿಸಿದ್ದರು.
ಶೀತಲ ಸಮರದ ಸಂದರ್ಭದಲ್ಲಿ, ಭಾರತ ಮತ್ತು ಅಮೆರಿಕಾಗಳ ನಡುವಿನ ಬಾಂಧವ್ಯ ಅಷ್ಟೊಂದು ದೃಢವಾಗಿರಲಿಲ್ಲ ಎಂದು ಅನುಭವಿ ಭಾರತೀಯ ರಾಜತಂತ್ರಜ್ಞರು ಸ್ಮರಿಸುತ್ತಾರೆ. ವಾಸ್ತವವಾಗಿ, 1998ರಲ್ಲಿ ಭಾರತ ರಾಜಸ್ತಾನದ ಪೋಖ್ರಾನ್‌ನಲ್ಲಿ ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸಿದ ಬಳಿಕ, ಅಮೆರಿಕಾ ಭಾರತದ ಮೇಲೆ ಬಹಳಷ್ಟು ನಿರ್ಬಂಧಗಳನ್ನು ಹೇರಿತ್ತು.
ಅಮೆರಿಕಾ ಅಧ್ಯಕ್ಷರಾಗಿದ್ದ ಜಾರ್ಜ್ ಡಬ್ಲ್ಯೂ ಬುಷ್ ಮತ್ತು ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಈ ವಿಚಾರದಿಂದ ಮುಂದುವರಿದು, 'ಕಾರ್ಯತಂತ್ರದ ಸಹಭಾಗಿತ್ವದಲ್ಲಿ ಮುನ್ನಡೆಯೋಣ' ಎಂಬ ಹೊಸ ಯೋಜನೆಯನ್ನು ರೂಪಿಸಿಕೊಂಡರು. ಆ ಬಳಿಕ, ಭಾರತ ಅಮೆರಿಕಾ ಸಂಬಂಧ ಸುಧಾರಿಸಲು ಆರಂಭವಾಯಿತು.
ಈ ಬೆಳವಣಿಗೆ, ಪ್ರಧಾನ ಮಂತ್ರಿ ಡಾ. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಭಾರತ - ಅಮೆರಿಕಾ ಪರಮಾಣು ಒಪ್ಪಂದ ರೂಪಿಸಲು ಬುನಾದಿ ಹಾಕಿಕೊಟ್ಟಿತು. ನಂತರ, ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ, ಅವರು ಕ್ವಾಡ್ ನಾಯಕರ ಸಮಾವೇಶ, ಮತ್ತು ಇತರ ಪ್ರಬಲ ರಕ್ಷಣಾ ಸಹಭಾಗಿತ್ವಗಳಲ್ಲಿ ಪಾಲ್ಗೊಳ್ಳುವ ಮೂಲಕ ಈ ಸಂಬಂಧವನ್ನು ಇನ್ನಷ್ಟು ಬಲಪಡಿಸಿದರು.
ಡೊನಾಲ್ಡ್ ಟ್ರಂಪ್ ತನ್ನ ಮೊದಲ ಅಧ್ಯಕ್ಷೀಯ ಅವಧಿಯಲ್ಲಿ, ಚೀನಾ ಜೊತೆ ಭಾರತದ 2017ರ ಡೋಕ್ಲಾಮ್ ಸಂಘರ್ಷ ಮತ್ತು 2020ರ ಪೂರ್ವ ಲಡಾಖ್ ಚಕಮಕಿಗಳಂತಹ ಎರಡು ಗಡಿ ಉದ್ವಿಗ್ನತೆಗಳಲ್ಲೂ ಭಾರತವನ್ನು ಬೆಂಬಲಿಸಿದ್ದರು. 2019ರ ಪುಲ್ವಾಮಾ ಭಯೋತ್ಪಾದಕ ದಾಳಿಯ ಬಳಿಕ ಟ್ರಂಪ್ ಪೂರ್ಣವಾಗಿ ಭಾರತವನ್ನು ಬೆಂಬಲಿಸಿದ್ದರು.
ಮಾಧ್ಯಮ ವರದಿಗಳ ಪ್ರಕಾರ, ಎಪ್ರಿಲ್ 22ರಂದು ಪಹಲ್ಗಾಮ್ ಭಯೋತ್ಪಾದನಾ ದಾಳಿಯ ಬಳಿಕ, ಜೆಡ್ಡಾದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ಮೊದಲು ದೂರವಾಣಿ ಕರೆ ಮಾಡಿ ಮಾತನಾಡಿದ ಜಾಗತಿಕ ನಾಯಕರಲ್ಲಿ ಟ್ರಂಪ್ ಸಹ ಒಬ್ಬರಾಗಿದ್ದರು. ರೆಸಿಸ್ಟೆನ್ಸ್ ಫ್ರಂಟ್ ಸಂಘಟನೆಯನ್ನು ಅಮೆರಿಕಾ ಸಹ ಭಯೋತ್ಪಾದನಾ ಸಂಘಟನೆ ಎಂದು ಘೋಷಿಸಿತ್ತು.
ಆದರೆ, ಪಾಕಿಸ್ತಾನ ಟ್ರಂಪ್ ಕುಟುಂಬದೊಡನೆ ಆತ್ಮೀಯತೆ ಸಾಧಿಸಿರುವುದು ಮತ್ತು ಕ್ರಿಪ್ಟೋ ಕರೆನ್ಸಿ ಉದ್ಯಮದಲ್ಲಿ ಹೂಡಿಕೆ ಮಾಡಿರುವುದು ಸಹ ಟ್ರಂಪ್ ಈಗ ಪಾಕಿಸ್ತಾನದ ಪರ ವಹಿಸಲು ಕಾರಣವಾಗಿರಬಹುದು ಎಂದು ಭಾರತ ಭಾವಿಸಿದೆ.
ಇತ್ತೀಚಿನ ತಿಂಗಳುಗಳಲ್ಲಿ, ಪಾಕಿಸ್ತಾನ ಡೊನಾಲ್ಡ್ ಟ್ರಂಪ್ ಅವರನ್ನು ಅಪಾರವಾಗಿ ಶ್ಲಾಘಿಸಿದ್ದು, ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಸಂಭಾವ್ಯ ಯುದ್ಧವನ್ನು ಟ್ರಂಪ್ ತಪ್ಪಿಸಿದ್ದಾರೆ ಎನ್ನುತ್ತಾ, ಅವರ ಹೆಸರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ಸೂಚಿಸಿತ್ತು. ಕೆಲವೊಂದು ವ್ಯಾಪಾರ ಒಪ್ಪಂದಗಳ ಜೊತೆಗೆ, ಈ ರೀತಿ ಟ್ರಂಪ್ ಅವರನ್ನು ಅತಿಯಾಗಿ ಹೊಗಳಿರುವುದೂ ಸಹ ಪಾಕಿಸ್ತಾನಕ್ಕೆ ವಾಷಿಂಗ್ಟನ್ ಡಿಸಿ ಜೊತೆ ಆತ್ಮೀಯವಾಗಲು ನೆರವಾಗಿರುವ ಸಾಧ್ಯತೆಗಳಿವೆ.
ಇನ್ನೂ ಹೆಚ್ಚಿನ ಆಶ್ಚರ್ಯ ಮೂಡಿಸಿದ ಬೆಳವಣಿಗೆ ಎಂದರೆ, ಟ್ರಂಪ್ ಪಾಕಿಸ್ತಾನದ ಸೇನಾ ಮುಖ್ಯಸ್ಥ, ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಅವರನ್ನು ಶ್ವೇತ ಭವನದಲ್ಲಿ ಮಧ್ಯಾಹ್ನದ ಭೋಜನಕ್ಕೆ ಆಮಂತ್ರಿಸಿದ್ದರು. ಈ ಭೇಟಿ ನಡೆದ ಕೆಲವೇ ದಿನಗಳಲ್ಲಿ, ಜೂನ್ ನಲ್ಲಿ ಅಮೆರಿಕಾ ಇರಾನಿನ ಪರಮಾಣು ನೆಲೆಗಳ ಮೇಲೆ ಬಂಕರ್ ಬಸ್ಟರ್ ಬಾಂಬ್‌ಗಳನ್ನು ಸುರಿದಿತ್ತು.
ಇತ್ತೀಚಿನ ತಿಂಗಳುಗಳಲ್ಲಿ ಅಮೆರಿಕಾ ಮತ್ತು ಪಾಕಿಸ್ತಾನಗಳ ಸ್ನೇಹ ಆಶ್ಚರ್ಯಕರವಾಗಿ ಬೆಳವಣಿಗೆ ಕಂಡಿದ್ದು, ಇದು ಭಾರತದ ಆತಂಕಕ್ಕೆ ಕಾರಣವಾಗಿದೆ. ಹಿಂದೆ ಪಾಕಿಸ್ತಾನ ಅಮೆರಿಕಾದಿಂದ ಎಫ್-16 ಯುದ್ಧ ವಿಮಾನಗಳನ್ನು ಖರೀದಿಸುವಂತಹ ಒಪ್ಪಂದಗಳನ್ನು ಮಾಡಿಕೊಂಡಿದ್ದು, ಅವೆರಡರ ನಡುವೆ ಆತ್ಮೀಯ ಬಾಂಧವ್ಯ ಇದ್ದದ್ದೂ ಸಹ ಭಾರತ ಮತ್ತು ಅಮೆರಿಕಾ ನಡುವೆ ಅಪನಂಬಿಕೆ ಮೂಡಿಸಲು ಕಾರಣವಾಗಿದ್ದವು ಎಂದು ಭಾರತೀಯ ರಾಜತಾಂತ್ರಿಕರು ಅಭಿಪ್ರಾಯ ಪಡುತ್ತಾರೆ.
ಈಗ ಪಾಕಿಸ್ತಾನ ಅಮೆರಿಕಾ ಜೊತೆಗೆ ತೈಲ ಒಪ್ಪಂದಕ್ಕೂ ಸಹಿ ಹಾಕಿದ್ದು, ಇದು ಪಾಕಿಸ್ತಾನಿ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅವರ ಅಮೆರಿಕಾ ಭೇಟಿಯ ವೇಳೆ ನಡೆದಿರಬಹುದಾದ ಮಾತುಕತೆಗಳು ಮೊದಲು ಅಂದುಕೊಂಡದ್ದಕ್ಕಿಂತಲೂ ಗಂಭೀರವಾಗಿದ್ದವು ಎಂದು ನವದೆಹಲಿ ಅಭಿಪ್ರಾಯ ಪಟ್ಟಿದೆ.
ಪಾಕಿಸ್ತಾನ ಬಹಳಷ್ಟು ಹಿಂದಿನಿಂದಲೂ ತನ್ನ ಕರಾವಳಿ ಪ್ರದೇಶಗಳಲ್ಲಿ ಅಪಾರ ಪ್ರಮಾಣದ ತೈಲ ನಿಕ್ಷೇಪಗಳಿವೆ ಎನ್ನುತ್ತಲೇ ಬಂದಿತ್ತು. ಆದರೆ, ಇಲ್ಲಿಯ ತನಕ ಈ ತೈಲವನ್ನು ಹೊರತರುವ ನಿಟ್ಟಿನಲ್ಲಿ ಯಾವುದೇ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಪಾಕಿಸ್ತಾನ ತನ್ನ ಇಂಧನ ಅವಶ್ಯಕತೆಗಳನ್ನು ಪೂರೈಸುವ ಸಲುವಾಗಿ, ಬಹುತೇಕ ತೈಲವನ್ನು ಮಧ್ಯ ಪೂರ್ವ ದೇಶಗಳಿಂದ ಖರೀದಿಸುತ್ತಿದೆ.
ಜುಲೈ 31ರ ಗುರುವಾರ, ಪಾಕಿಸ್ತಾನದ ಪ್ರಧಾನಿ ಶೆಹಬಾಜ಼್ ಶರೀಫ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ 'ಐತಿಹಾಸಿಕ' ವ್ಯಾಪಾರ ಒಪ್ಪಂದಕ್ಕಾಗಿ ಡೊನಾಲ್ಡ್ ಟ್ರಂಪ್ ಅವರಿಗೆ ಧನ್ಯವಾದ ಸಲ್ಲಿಸಿದ್ದರು. "ಪಾಕಿಸ್ತಾನ ಮತ್ತು ಅಮೆರಿಕಾಗಳ ನಡುವೆ ಮಹತ್ವದ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ನೇತೃತ್ವ ವಹಿಸಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನಾನು ಹೃತ್ಪೂರ್ವಕ ಧನ್ಯವಾದ ಸಲ್ಲಿಸುತ್ತೇನೆ. ಈ ಒಪ್ಪಂದವನ್ನು ನಿನ್ನೆ ರಾತ್ರಿ ವಾಷಿಂಗ್ಟನ್‌ನಲ್ಲಿ ಅಂತಿಮಗೊಳಿಸಲಾಯಿತು" ಎಂದು ಶರೀಫ್ ಹೇಳಿದ್ದಾರೆ. ಈ ಮಹತ್ವದ ಒಪ್ಪಂದ ಬೆಳೆಯುತ್ತಿರುವ ಪಾಕಿಸ್ತಾನ - ಅಮೆರಿಕಾ ಬಾಂಧವ್ಯವನ್ನು ಬಲಪಡಿಸಲು, ಮತ್ತು ಭವಿಷ್ಯದಲ್ಲಿ ದೀರ್ಘಾವಧಿಯ ಸಹಯೋಗ ಸಾಧಿಸಲು ನೆರವಾಗಲಿದೆ ಎಂದು ಶರೀಫ್ ಹೇಳಿದ್ದಾರೆ.
ವ್ಯಾಪಾರಕ್ಕೆ ಸಂಬಂಧಿಸಿದಂತೆ ಟ್ರಂಪ್ ನೀಡಿರುವ ಹೇಳಿಕೆಗಳನ್ನು ತಾನು ಗಮನಕ್ಕೆ ತೆಗೆದುಕೊಂಡಿರುವುದಾಗಿ ಭಾರತದ ವಾಣಿಜ್ಯ ಸಚಿವಾಲಯ ಹೇಳಿದ್ದು, ಇದರ ಅರ್ಥ ಏನಾಗಿರಬಹುದು ಎಂದು ತಾನು ತಿಳಿಯಲು ಪ್ರಯತ್ನ ನಡೆಸುತ್ತಿರುವುದಾಗಿ ತಿಳಿಸಿದೆ. ಭಾರತ ಸರ್ಕಾರ ನೀಡುವ ಪ್ರತಿಕ್ರಿಯೆ ಶಾಂತಿಯುತವಾಗಿ, ಸೂಕ್ತವಾಗಿ ಆಲೋಚಿಸಿರುವ ಪ್ರತಿಕ್ರಿಯೆ ಆಗಿರಬೇಕೇ ಹೊರತು, ಭಾವನಾತ್ಮಕ ಪ್ರತಿಕ್ರಿಯೆ ಆಗಿರಬಾರದು.
ಭಾರತ ಈಗ ಮೂರು ದೊಡ್ಡ ರಾಜತಾಂತ್ರಿಕ ಪ್ರಶ್ನೆಗಳನ್ನು ಎದುರಿಸುತ್ತಿದೆ. ಅವೆಂದರೆ:
ಅಮೆರಿಕಾ ಹೇರುತ್ತಿರುವ ಒತ್ತಡದ ವಿರುದ್ಧ ಭಾರತ ಎಲ್ಲಿಯ ತನಕ ತನ್ನ ನಿಲುವನ್ನು ಕಾಯ್ದುಕೊಳ್ಳಲು ಸಾಧ್ಯ?
ಭಾರತ ಟ್ರಂಪ್ ಜೊತೆ ಆತ್ಮೀಯರಾಗಿರುವ ಜನರ ಜೊತೆ ಉತ್ತಮ ಬಾಂಧವ್ಯ ಹೊಂದಲು ಸಾಧ್ಯವೇ?
ಟ್ರಂಪ್ ನೀಡಿರುವ ಇತ್ತೀಚಿನ ಹೇಳಿಕೆಗಳಿಂದ ಉಂಟಾಗಿರುವ ಅಪನಂಬಿಕೆಗಳು ದೀರ್ಘಾವಧಿಯಲ್ಲಿ ಭಾದಿಸದಂತೆ ಸರಿಪಡಿಸಲು ಸಾಧ್ಯವೇ?
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ