
209 ಬಿಯರ್ ಬಾಕ್ಸ್ ಮತ್ತು ಮದ್ಯ ಸಾಗಿಸುತ್ತಿದ್ದ ಪಿಕಪ್ ವಾಹನ ಪಲ್ಟಿಯಾಗಿದೆ. ವಿಷಯ ತಿಳಿದ ಕೂಡಲೇ ಸ್ಥಳೀಯ ಮದ್ಯಪ್ರಿಯರು ಪೊಲೀಸರು ಬರುವ ಮುನ್ನವೇ ಸ್ಥಳಕ್ಕೆ ದೌಡಾಯಿಸಿ ಬಾಟಲಿಗಳನ್ನ ಕೈಗೆತ್ತಿಕೊಂಡು ಪರರಾರಿ ಆಗಿದ್ದಾರೆ. ಈ ಘಟನೆ ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಖುಂಟ್‌ಪಾನಿ ಗ್ರಾಮದ ಬಳಿ ನಡೆದಿದೆ.
ಶುಕ್ರವಾರ ಸಂಜೆ ಚೈಬಾಸಾ-ಚಕ್ರಧರಪುರ ರಸ್ತೆಯ ಖುಂಟ್‌ಪಾನಿ ಗ್ರಾಮದ ಬಳಿ ಪಿಕಪ್ ಪಲ್ಟಿಯಾಗಿದೆ. ಪರಿಣಾಮ ವಾಹನದಲ್ಲಿದ್ದ 209 ಬಾಕ್ಸ್‌ಗಳು ರಸ್ತೆ ಮಧ್ಯೆ ಚೆಲ್ಲಾಪಿಯಲ್ಲಿಯಾಗಿ ಬಿದ್ದಿವೆ. ನೂರಾರು ಬಾಟಲಿಗಳು ಒಡೆದು ಮದ್ಯ ಚೆಲ್ಲಿ ಹೋಗಿದೆ. ಇನ್ನು, ಕೆಲವು ಬಾಟಲ್‌ಗಳು ಏನೂ ಆಗದೇ ರಸ್ತೆಯಲ್ಲಿ ಬಿದ್ದಿದ್ದವು. ಇದು ಅಲ್ಲಿದ್ದ ಮದ್ಯಪ್ರಿಯರನ್ನ ಆಕರ್ಷಿಸಿದೆ. ಅವುಗಳನ್ನ ಸಂಗ್ರಹಿಸಿಕೊಳ್ಳಲು ಧಾವಿಸಿದ್ದಾರೆ. ಅಷ್ಟೇ ಅಲ್ಲ.. ಮದ್ಯದ ಬಾಟಲಿ ರಸ್ತೆಯಲ್ಲಿ ಬಿದ್ದಿರುವ ವಿಚಾರ ಗ್ರಾಮದ ತುಂಬೆಲ್ಲಾ ಗೊತ್ತಾಗುತ್ತಿದ್ದಂತೆಯೇ ಮತ್ತಷ್ಟು ಜನ ಓಡೋಡಿ ಬಂದಿದ್ದಾರೆ. ಇದರಿಂದಾಗಿ ಅಲ್ಲಿ ಉದ್ವಿಗ್ನದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಅಂದ್ಹಾಗೆ ಅಪಘಾತ ಸಂಭವಿಸಿರೋದು ರಾಷ್ಟ್ರೀಯ ಹೆದ್ದಾರಿ 75E ನಲ್ಲಿ. ವರದಿಗಳ ಪ್ರಕಾರ.. ಪಿಕಪ್ ಟ್ರಕ್ ಚೈಬಾಸಾದ ತುಂಗ್ರಿಯಲ್ಲಿರುವ ಗೋದಾಮಿನಿಂದ ಮದ್ಯವನ್ನು ಸಾಗಿಸುತ್ತಿತ್ತು. ಚಕ್ರಧರಪುರ ಮತ್ತು ಮನೋಹರಪುರದ ಇಟ್ವಾರಿ ಬಜಾರ್ ಕಡೆಗೆ ಸರಕನ್ನು ಕೊಂಡೊಯ್ಯುತ್ತಿತ್ತು. ಖುಂಟ್ಪಾನಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮ ಮದ್ಯದ ಬಾಕ್ಸ್ ರಸ್ತೆಗೆ ಜಾರಿ ಬಿದ್ದಿವೆ. ಬೆನ್ನಲ್ಲೇ ಹಲವು ಸ್ಥಳೀಯ ಯುವಕರು ಪಲ್ಟಿಯಾದ ವಾಹನದ ಸುತ್ತ ದೌಡಾಯಿಸಿದ್ದಾರೆ.
ಕೆಲವು ಯುವಕರು ಮದ್ಯದ ಬಾಟಲಿಯನ್ನು ಎದ್ನೋ ಬಿದ್ನೋ ಎಂದು ಎತ್ತಿಕೊಂಡು ಓಡಿದ್ದಾರೆ. ನಂತರ ಯಾರೋ ಅದನ್ನು ಗಮನಿಸಿ ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮುಫಾಸಿಲ್ ಪೊಲೀಸ್ ಠಾಣೆಯ ಪೊಲೀಸರು ಅಲ್ಲಿನ ಪರಿಸ್ಥಿತಿಯನ್ನ ನಿಯಂತ್ರಣಕ್ಕೆ ತೆಗೆದುಕೊಂಡರು. ಪಲ್ಟಿಯಾದ ವಾಹವನವನ್ನು ರಸ್ತೆಯಿಂದ ತೆರವುಗೊಳಿಸಿ.. ರಸ್ತೆಯಲ್ಲಿ ಬಿದ್ದಿದ್ದ ಬಾಟಲಿಗಳನ್ನ ಸುರಕ್ಷಿತಗೊಳಿಸಿದರು. ನಂತರ ಒಡೆದು ಹೋಗಿದ್ದ ಬಾಟಲಿಗಳ ಪೀಸ್‌ಗಳಲ್ಲಿ ಕ್ಲೀನ್ ಮಾಡಿಸಿ ಸುಗಮ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಅಬಕಾರಿ ಇಲಾಖೆಯ ಅಧಿಕಾರಿಗಳು ನೀಡಿರುವ ಮಾಹಿತಿಗಳ ಪ್ರಕಾರ.. ಅದೊಂದು ದುರ್ಘಟನೆಯಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಅಪಘಾತದ ತೀವ್ರತೆಗೆ ನೂರಾರು ಬಾಟಲ್‌ಗಳು ಒಡೆದು ಹೋಗಿವೆ. ಪುಡಿಪುಡಿಯಾದ ಬಾಟಲ್‌ಗಳಲ್ಲಿ ಸುಮಾರು 8 ಲಕ್ಷ ಮೌಲ್ಯದ ಮದ್ಯ ಇತ್ತು ಎನ್ನಲಾಗುತ್ತಿದೆ. ವಾಹನದಲ್ಲಿದ್ದ ಎಲ್ಲ ಬಾಕ್ಸ್‌ಗಳಿಗೂ ಪರವಾನಗಿ ಇತ್ತು. ವಿಮಾ ಸೌಲಭ್ಯ ಇತ್ತೋ ಇಲ್ಲವೋ ಅನ್ನೋದನ್ನು ಪರಿಶೀಲಿಸಬೇಕಾಗಿದೆ. ಒಂದು ವೇಳೆ ವಿಮಾ ವ್ಯವಸ್ಥೆ ಇದ್ದರೆ.. ಆರ್ಥಿಕನಷ್ಟ ಮರುಪಡೆಯಲು ಸಹಾಯ ಮಾಡುತ್ತದೆ. ಇಲ್ಲದಿದ್ದರೆ ಯಾರು ಪರವಾನಗಿ ಹೊಂದಿರುತ್ತಾರೋ, ಅವರೇ ಆರ್ಥಿಕ ನಷ್ಟವನ್ನು ಭರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಇನ್ನು, ಪೊಲೀಸರು ಹಾನಿಗೊಳಗಾದ ಪಿಕಪ್ ಟ್ರಕ್ ಅನ್ನು ವಶಪಡಿಸಿಕೊಂಡಿದ್ದಾರೆ. ಅಪಘಾತದ ಬಗ್ಗೆ ತನಿಖೆ ಪ್ರಾರಂಭಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ