ಕೃಷಿ ಕಾಯ್ದೆ ವಿರೋಧಿಸಿ ರೈತರ ಪ್ರತಿಭಟನೆ| ಕೃಷಿ ಕಾಯ್ದೆ ವಿರುದ್ಧ ಸಲ್ಲಿಸಲಾದ ವಿವಿಧ ಅರ್ಜಿಗಳುಕೇ ವಿಚಾರಣೆ ನಡೆಸಿದ ಸುಪ್ರೀಂ| ಈ ಕುರಿತಾಘಿ ಹೆಚ್ಚಿನ ಮಾಹಿತಿ ನೀಡಿ ಎಂದು ಕೇಂದ್ರಕ್ಕೆ ಆದೇಶಿಸಿದ ಕೋರ್ಟ್
ನವದೆಹಲಿ(ಜ.11): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆ ವಿರೋಧಿಸಿ ರೈತರು ರಾಷ್ಟ್ರ ರಾಜಧಾನಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ ಆರಂಭವಾಗಿ ಒಂದೂವರೆ ತಿಂಗಳಿಗೂ ಹೆಚ್ಚು ಸಮಯವಾಗಿದೆ. ಹೀಗಿರುವಾಗ ಕೃಷಿ ಕಾಯ್ದೆ ವಿರುದ್ಧ ಸಲ್ಲಿಸಲಾದ ವಿವಿಧ ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್ ವಾದ ಪ್ರತಿವಾದಗಳನ್ನು ಆಲಿಸಿ ಈ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸುವಂತೆ ಆದೇಶಿಸಿದೆ.
ಸುಪ್ರೀಂ ತೀರ್ಪಿನಲ್ಲೇನಿದೆ?
* ಕೃಷಿ ಕಾಯ್ದೆ ವಿರುದ್ಧ ಸಲ್ಲಿಸಲಾದ ವಿವಿಧ ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ಈ ಕಾನೂನನ್ನು ಜಾರಿಗೆ ತರುವುದನ್ನು ಕೇಂದ್ರ ಸರ್ಕಾರ ನಿಲ್ಲಿಸಬೇಕೆಂದು ತಿಳಿಸಿದೆ.
* ಜಾರಿ ಮಾಡುವುದನ್ನು ನೀವು ನಿಲ್ಲಿಸುತ್ತೀರೋ ಅಥವಾ ನಾವೇ ಮಧ್ಯ ಪ್ರವೇಶ ಮಾಡಿ ಕ್ರಮ ತೆಗೆದುಕೊಳ್ಳಬೇಕೋ ಎಂದು ಕೇಂದ್ರಕ್ಕೆ ಕೋರ್ಟ್ ಚಾಟಿ ಬೀಸಿದೆ.
* ನಾವು ಅನಗತ್ಯವಾಗಿ ಮಾತನಾಡಲು ಬಯಸುವುದಿಲ್ಲ. ಆದರೆ, ಕೇಂದ್ರದ ವರ್ತನೆಯಿಂದ ಬಹಳ ನಿರಾಸೆಯಾಗಿದೆ. ಅವರು ಯಾವ ರೀತಿಯ ಸಮಾಲೋಚನೆ ಪ್ರಕ್ರಿಯೆ ಅನುಸರಿಸುತ್ತಿದ್ದಾರೋ ಗೊತ್ತಿಲ್ಲ. ದಯವಿಟ್ಟು ಏನಾಗುತ್ತಿದೆ ಎಂದು ತಿಳಿಸಿ ಎಂದು ಕೇಂದ್ರಕ್ಕೆ ಆದೇಶಿಸಿದ ಮುಖ್ಯ ನಾಯಮೂರ್ತಿ ಎಸ್ ಎ ಬೋಬ್ಡೆ.
* ಸಮ್ಮತವಾದ ಪರಿಹಾರ ಸಿಗಬೇಕೆಂಬುದು ನಮ್ಮ ಉದ್ದೇಶ. ಕೃಷಿ ಕಾನೂನುಗಳನ್ನ ಸ್ಥಗಿತಗೊಳಿಸಬೇಕೆಂಬ ಸಲಹೆ ಬಗ್ಗೆ ಯಾಕೆ ಇನ್ನೂ ಪ್ರತಿಕ್ರಿಯೆ ಬಂದಿಲ್ಲ? ಕೇಂದ್ರ ಸರ್ಕಾರ ಈ ಕಾನೂನುಗಳ ಜಾರಿಯನ್ನು ನಿಲ್ಲಿಸಿದರೆ ಮಾತುಕತೆಗೆ ನಾವು ರೈತರನ್ನ ಒಪ್ಪಿಸುತ್ತೇವೆ.
* ಈ ಕಾನೂನು ಜಾರಿಗೆ ತರುವುದನ್ನು ನೀವು ನಿಲ್ಲಿಸುತ್ತೀರೋ ಅಥವಾ ನ್ಯಾಯಾಲಯವೇ ಈ ಕೆಲಸ ಮಾಡಬೇಕೋ ಎಂಬುದನ್ನು ನೀವು ತಿಳಿಸಿ ಎಂದ ಸುಪ್ರೀಂ
* ಸರ್ಕಾರದ ಪರವಾಗಿ ವಾದಿಸಿ ಅಟಾರ್ನಿ ಜನರಲ್ ಅವರು ನೂತನ ಕೃಷಿ ಕಾನೂನನ್ನ ಸ್ಥಗಿತಗೊಳಿಸುವುದು ಸಮಂಜಸ ಆಗುವುದಿಲ್ಲ ಎಂದು ಸರ್ಕಾರದ ನಿಲುವನ್ನು ತಿಳಿಸಿದ್ದಾರೆ.
ಇದೇ ವೇಳೆ, ರೈತರ ಪ್ರತಿಭಟನೆಯ ಸ್ಥಳವನ್ನು ಬದಲಿಸಬಹುದಾ ಎಂಬ ಸಲಹೆಯನ್ನು ಪ್ರತಿಭಟನಾಕಾರರಿಗೆ ಕೇಳಿತು. ನ್ಯಾಯಾಲಯವು ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿಲ್ಲ. ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಪ್ರತಿಭಟನೆಯ ಸ್ಥಳವನ್ನು ಬದಲಿಸಬಹುದಾ ಎಂದು ಕೇಳುತ್ತಿದ್ದೇವೆ ಎಂದು ಸುಪ್ರೀಂ ನ್ಯಾಯಪೀಠ ಸ್ಪಷ್ಟಪಡಿಸಿದೆ.