ಏಕರೂಪದ ಸಂಹಿತೆ ರೂಪಿಸಲು ರಾಜ್ಯಗಳಿಗೆ ಅಧಿಕಾರ: ಸುಪ್ರೀಂಕೋರ್ಟ್‌

By Kannadaprabha NewsFirst Published Jan 10, 2023, 8:30 AM IST
Highlights

ಏಕರೂಪ ಸಂಹಿತೆ ಸಮಿತಿ ರಚನೆ ಪ್ರಶ್ನಿಸಿದ್ದ ಪಿಐಎಲ್‌ ಅನ್ನು ಸುಪ್ರೀಂಕೋರ್ಟ್‌ ವಜಾ ಮಾಡಿದೆ. ರಾಜ್ಯಗಳಿಗೆ ಸಮಿತಿ ರಚನೆಗೆ ಅಧಿಕಾರವಿದೆ, ಕಾನೂನು ರಚನೆಗೆ 162ನೇ ವಿಧಿ ಅವಕಾಶ ನೀಡುತ್ತದೆ ಎಂದು ಅರ್ಜಿ ವಜಾ ಮಾಡಿದ ಸುಪ್ರೀಂಕೋರ್ಟ್‌ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. 

ನವದೆಹಲಿ: ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿ ಬಗ್ಗೆ ಅಧ್ಯಯನ ನಡೆಸಲು ಗುಜರಾತ್‌ ಹಾಗೂ ಉತ್ತರಾಖಂಡದ ಬಿಜೆಪಿ ಸರ್ಕಾರಗಳು ಸಮಿತಿ ರಚಿಸಿರುವ ಕ್ರಮ ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾ ಮಾಡಿದೆ. ಈ ಅರ್ಜಿಗಳು (ಪಿಐಎಲ್‌) ಪರಿಗಣನೆಗೆ ಅರ್ಹವಾಗಿಲ್ಲ ಎಂದು ಅಭಿಪ್ರಾಯಪಟ್ಟ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಹಾಗೂ ನ್ಯಾಯಮೂರ್ತಿ ಪಿ.ಎಸ್‌. ನರಸಿಂಹ ಅವರ ಪೀಠ, ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆಗೆ ಸ್ವೀಕರಿಸಲು ನಿರಾಕರಿಸಿದೆ. ಅನೂಪ್ ಬರನ್ವಾಲ್ ಎಂಬುವರು ಸಲ್ಲಿಸಿದ್ದ ಪಿಐಎಲ್‌ ತಿರಸ್ಕರಿಸಿದ ದೇಶದ ಉನ್ನತ ನ್ಯಾಯಾಲಯ, ರಾಜ್ಯಗಳಿಗೆ ಹಾಗೆ ಮಾಡಲು ಅಧಿಕಾರವಿದೆ ಎಂದೂ ಹೇಳಿದೆ.

‘ರಾಜ್ಯ ಸರ್ಕಾರಗಳು (State Governments) ಸ್ಥಾಪಿಸಿದ ಸಮಿತಿಗಳ (Committee) ಸಾಂವಿಧಾನಿಕ (Constitution) ಸಿಂಧುತ್ವವನ್ನು ಈ ಪಿಐಎಲ್‌ನಲ್ಲಿ (PIL) ಪ್ರಶ್ನಿಸಲಾಗಿದೆ. ಆದರೆ ಸಂವಿಧಾನದ 162ನೇ ವಿಧಿಯ (Article 162) ಅಡಿಯಲ್ಲಿ ರಾಜ್ಯಗಳು (States) ಸಮಿತಿಗಳನ್ನು ರಚಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಸಮಿತಿ ರಚಿಸಲು ಈ ವಿಧಿ ಅಧಿಕಾರ ನೀಡುತ್ತದೆ. ಅಲ್ಲದೆ, ಸಂವಿಧಾನದ 162ನೇ ವಿಧಿಯು ಕಾನೂನುಗಳನ್ನು (Law) ಮಾಡುವ ಅಧಿಕಾರವನ್ನೂ ರಾಜ್ಯಗಳಿಗೆ ನೀಡುತ್ತದೆ’ ಎಂಬ ಮಹತ್ವದ ಅಭಿಪ್ರಾಯವನ್ನೂ ಕೋರ್ಟ್ (Court) ವ್ಯಕ್ತಪಡಿಸಿದೆ.

ಇದನ್ನು ಓದಿ: ಏಕರೂಪ ವಿವಾಹ ವಯೋಮಿತಿ: ಕೇಂದ್ರದ ಅನಿಸಿಕೆ ಕೇಳಿದ ಸುಪ್ರೀಂಕೋರ್ಟ್‌

ಏನಿದು ಏಕರೂಪ ಸಂಹಿತೆ..?: (Uniform Civil Code)
ಪ್ರಸ್ತುತ ಆಯಾ ಧರ್ಮಗಳ ವೈಯಕ್ತಿಕ ಕಾನೂನುಗಳಿದ್ದು, ಇವು ಮದುವೆ, ವಿಚ್ಛೇದನ ಹಾಗೂ ಉತ್ತರಾಧಿಕಾರಗಳಿಗೆ ಪ್ರತ್ಯೇಕ ನಿಯಮ ಹೊಂದಿವೆ. ಆದರೆ ಎಲ್ಲ ಧರ್ಮಗಳಿಗೂ ಈ ವಿಷಯಗಳಲ್ಲಿ ಒಂದೇ ಕಾನೂನು ಇರಬೇಕು ಎಂಬುದು ಏಕರೂಪ ನಾಗರಿಕ ಸಂಹಿತೆಯ ಉದ್ದೇಶವಾಗಿದೆ. ಇದು ಬಿಜೆಪಿ ಪ್ರಣಾಳಿಕೆಯ ಪ್ರಮುಖ ಭಾಗವಾಗಿದೆ. ಉತ್ತರಾಖಂಡ ಮತ್ತು ಗುಜರಾತ್‌ ಎರಡೂ ಸರ್ಕಾರಗಳು ಸಂಹಿತೆ ಅನುಷ್ಠಾನದ ಬಗ್ಗೆ ಅಧ್ಯಯನ ನಡೆಸಲು ಸಮಿತಿಯನ್ನು ಇತ್ತೀಚೆಗೆ ರಚಿಸಿದ್ದವು.

ಸಂವಿಧಾನದ 162ನೇ ವಿಧಿಯಡಿ ಅಧಿಕಾರ
ಸಂವಿಧಾನದ 162ನೇ ವಿಧಿಯ ಅಡಿಯಲ್ಲಿ ರಾಜ್ಯಗಳು ಏಕರೂಪದ ನಾಗರಿಕ ಸಂಹಿತೆ ಜಾರಿ ಬಗ್ಗೆ ಅಧ್ಯಯನಕ್ಕೆ ಸಮಿತಿಗಳನ್ನು ರಚಿಸುವುದರಲ್ಲಿಯಾವುದೇ ತಪ್ಪಿಲ್ಲ. ಇದೇ ವಿಧಿಯಡಿ ರಾಜ್ಯಗಳಿಗೆ ಏಕರೂಪದ ನಾಗರಿಕ ಸಂಹಿತೆ  ಕಾನೂನುಗಳನ್ನು ಮಾಡುವ ಅಧಿಕಾರವೂ ಇದೆ ಎಂದು ಸುಪ್ರೀಂಕೋರ್ಟ್‌ ಹೇಳಿದೆ. 

ಇದನ್ನೂ ಓದಿ: ಏಕರೂಪ ವಿವಾಹ ಸಂಹಿತೆಗೆ ಕೇಂದ್ರ ಸರ್ಕಾರಕ್ಕೆ ಕೇರಳ ಹೈಕೋರ್ಟ್‌ ಸಲಹೆ

ಅಕ್ಟೋಬರ್ 2022 ರಲ್ಲಿ, ಗುಜರಾತ್ ಗೃಹ ಸಚಿವ ಹರ್ಷ ಸಂಘ್ವಿ ಅವರು ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೆ ತರಲು ಸಮಿತಿಯನ್ನು ರಚಿಸುವುದಾಗಿ ಘೋಷಿಸಿದ್ದರು. ಗುಜರಾತ್‌ ರಾಜ್ಯ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಇದೇ ರೀತಿ, ಮೇ 2022 ರಲ್ಲಿ, ಉತ್ತರಾಖಂಡ ಸರ್ಕಾರವು ರಾಜ್ಯದಲ್ಲಿ ಅದರ ಅನುಷ್ಠಾನವನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಿತ್ತು.

ಡಿಸೆಂಬರ್‌ ತಿಂಗಳಲ್ಲಿ, ಸುಪ್ರೀಂಕೋರ್ಟ್‌ ಏಕರೂಪ ನಾಗರಿಕ ಸಂಹಿತೆ ವಿವಾದ ಉಂಟಾಗಿರುವ ಬೆನ್ನಲ್ಲೇ ಏಕರೂಪ ವಿವಾಹ ವಯೋಮಿತಿ ಕುರಿತಾಗಿ ಕೇಂದ್ರ ಸರ್ಕಾರದ ಅಭಿಪ್ರಾಯ ಕೇಳಿ ಸುಪ್ರೀಂಕೋರ್ಟ್‌ ನೋಟಿಸ್‌ ಜಾರಿ ಮಾಡಿತ್ತು. ಎಲ್ಲಾ ಧರ್ಮದ ಪುರುಷ ಮತ್ತು ಮಹಿಳೆಯರ ಮದುವೆಯ ವಯಸ್ಸನ್ನು ಕನಿಷ್ಠ 18 ವರ್ಷಕ್ಕೆ ನಿಗದಿಪಡಿಸಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿ ಪಿ.ಎಸ್‌. ನರಸಿಂಹ ಅವರಿದ್ದ ಪೀಠ ಕೇಂದ್ರದ ಅಭಿಪ್ರಾಯ ಕೋರಿದೆ. ಅಲ್ಲದೆ ಅಪ್ರಾಪ್ತ ಮುಸ್ಲಿಂ ಬಾಲಕಿಯರ ವಿವಾಹವನ್ನು ಕಾನೂನಿನಡಿಯಲ್ಲಿ ಶಿಕ್ಷಾರ್ಹ ಅಪರಾಧ ಮಾಡುವ ಕುರಿತಾಗಿ ಕಾನೂನು ಆಯೋಗದ ಪ್ರತಿಕ್ರಿಯೆಯನ್ನು ಕೇಳಿತ್ತು.

ಇದನ್ನೂ ಓದಿ: ಸಂಸತ್ತಲ್ಲೂ ಈಗ ಏಕರೂಪ ನಾಗರಿಕ ಸಂಹಿತೆ ಬಗ್ಗೆ ಚರ್ಚೆ: ಖಾಸಗಿ ಮಸೂದೆ ಮಂಡಿಸಿದ ಬಿಜೆಪಿಗ

click me!